ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ(Nupur Sharma) ಅವರಿಗೆ ಸುಪ್ರೀಂಕೋರ್ಟ್ (Supreme Court) ಮಧ್ಯಂತರ ಆದೇಶವನ್ನು ನೀಡಿದೆ, ಪ್ರವಾದಿ ಮೊಹಮ್ಮದ್ (prophet muhammad) ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳ ಮೇಲೆ ದಾಖಲಾದ ಎಫ್‌ಐಆರ್‌ಗಳು ಮತ್ತು ಮುಂದಕ್ಕೆ ದಾಖಲಾಗಬಹುದಾದ ದೂರುಗಳಲ್ಲಿ ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಎಂದು ನಿರ್ದೇಶಿಸಿದೆ. ಶರ್ಮಾ ಅವರು ತನ್ನ ವಿರುದ್ಧ ದಾಖಲಾಗಿರುವ ಎಲ್ಲ 9 ಎಫ್‌ಐಆರ್‌ಗಳನ್ನ ಒಟ್ಟು ಮಾಡಬೇಕು ಮತ್ತು ಬಂಧನದಿಂದ ರಕ್ಷಣೆ ನೀಡಬೇಕು ಎಂದು ಮನವಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ಜೆಪಿ ವರ್ದಿವಾಲಾ, ನಾವು ಅದನ್ನು ಸ್ವಲ್ಪ ಮಟ್ಟಿಗೆ ಪರಿಗಣಿಸುತ್ತೇವೆ, ಎಲ್ಲ ನ್ಯಾಯಾಲಯಕ್ಕೆ ಹೋಗಬೇಕೆಂದು ನಾವು ಬಯಸುವುದಿಲ್ಲ ಎಂದಿದ್ದಾರೆ. ಎಫ್‌ಐಆರ್‌ಗಳನ್ನು ಒಟ್ಟುಗೂಡಿಸಲು ಆಕೆ ಮಾಡಿದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯ ಕೆಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಕಳುಹಿಸಿದೆ. ಈ ಪ್ರಕರಣದ ವಿಚಾರಣೆ ಆಗಸ್ಟ್ 10ರಂದು ನಡೆಯಲಿದೆ. ದೆಹಲಿ, ಮಹಾರಾಷ್ಟ್ರ, ತೆಲಂಗಾಣ, ಪಶ್ಚಿಮ ಬಂಗಾಳ, ಕರ್ನಾಟಕ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ರಾಜ್ಯಗಳು ಪ್ರತಿಕ್ರಿಯಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಆಕೆಯ ಜೀವಕ್ಕೆ ಬೆದರಿಕೆ ಇದ್ದು ಬೆದರಿಕೆಗಳು ಜಾಸ್ತಿಯಾಗುತ್ತಿವೆ. ಹಾಗಾಗಿ ಆಕೆಗೆ ಬೇರೆ ಯಾವುದೇ ಕಾನೂನು ಆಶ್ರಯ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ನೂಪುರ್ ಶರ್ಮಾ ಅವರ ವಕೀಲರು ಹೇಳಿದ್ದಾರೆ.
ಸುದ್ದಿವಾಹಿನಿಯೊಂದರ ಚರ್ಚೆ ವೇಳೆ ಪ್ರವಾದಿ ಮೊಹಮ್ಮದ್ ಬಗ್ಗೆ ನೂಪುರ್ ಶರ್ಮಾ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು ಇದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹೇಳಿಕೆ ಖಂಡಿಸಿ ದೇಶದಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದ್ದು, ವಿದೇಶ ರಾಷ್ಟ್ರಗಳೂ ಶರ್ಮಾ ಹೇಳಿಕೆಯನ್ನು ಖಂಡಿಸಿದ್ದವು.