ಯಾವುದೇ ದೇಶ ಪಾಕಿಸ್ತಾನವನ್ನು ದೂಷಿಸಿಲ್ಲ, ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ಮಣಿಶಂಕರ್ ಅಯ್ಯರ್

ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ನಿಯೋಗ ರಚಿಸಿ ಎಲ್ಲಾ ದೇಶಗಳಿಗೂ ಪಾಕ್ ಬಗ್ಗೆ ಏನೇ ಹೇಳಿಬಂದರೂ ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಿಲ್ಲ ಎಂದು ಕಾಂಗ್ರೆಸ್​ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ಅಂದು ಪ್ರಧಾನಿ ಮೋದಿ ಹೇಳಿದಂತೆ ಕಾಂಗ್ರೆಸ್​​ನ ರಿಮೋಟ್ ಪಾಕಿಸ್ತಾನದಲ್ಲಿದ್ದಂತೆ ಗೋಚರಿಸುತ್ತಿರುವುದಂತೂ ಹೌದು

ಯಾವುದೇ ದೇಶ ಪಾಕಿಸ್ತಾನವನ್ನು ದೂಷಿಸಿಲ್ಲ, ಮತ್ತೆ ಪಾಕ್ ಪರ ಬ್ಯಾಟ್ ಬೀಸಿದ ಮಣಿಶಂಕರ್ ಅಯ್ಯರ್
ಮಣಿಶಂಕರ್ ಅಯ್ಯರ್-ಶಶಿ ತರೂರ್

Updated on: Aug 03, 2025 | 10:36 AM

ನವದೆಹಲಿ, ಆಗಸ್ಟ್​ 03: ಕಾಂಗ್ರೆಸ್​​(Congress)ನವರದ್ದು ಅದೇ ಸ್ವರ, ಮತ್ತದೇ ಹಾಡು. ಆಪರೇಷನ್ ಸಿಂಧೂರ್ ಬಳಿಕ ಸೇನೆಯನ್ನು ಪ್ರಶಂಸಿಸುವ ಬದಲು ಪುರಾವೆ ಕೇಳುತ್ತಾ ಬೇರೆ ದೇಶಗಳ ಕಣ್ಣಲ್ಲಿ ಭಾರತವನ್ನು ಕೀಳಾಗಿಸುವ ತಂತ್ರ ಹೂಡಿದಂತಿದೆ. ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಮತ್ತೊಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ನಿಯೋಗ ರಚಿಸಿ ಎಲ್ಲಾ ದೇಶಗಳಿಗೂ ಪಾಕ್ ಬಗ್ಗೆ ಏನೇ ಹೇಳಿಬಂದರೂ ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಿಲ್ಲ ಎಂದು  ಅಯ್ಯರ್ ಹೇಳಿದ್ದಾರೆ.

ಅಂದು ಪ್ರಧಾನಿ ಮೋದಿ ಹೇಳಿದಂತೆ ಕಾಂಗ್ರೆಸ್​​ನ ರಿಮೋಟ್ ಪಾಕಿಸ್ತಾನದಲ್ಲಿದ್ದಂತೆ ಗೋಚರಿಸುತ್ತಿರುವುದಂತೂ ಹೌದು. ಅಂದು ಪಿ ಚಿದಂಬರಂ ಆಯ್ತು ಇದೀಗ ಇನ್ನೊಬ್ಬ ಕಾಂಗ್ರೆಸ್ ನಾಯಕರ ಆಪರೇಷನ್ ಸಿಂಧೂರ್ ಬಗ್ಗೆ ಪುರಾವೆ ಕೇಳಿದ್ದಾರೆ.

ಪಹಲ್ಗಾಮ್ ದಾಳಿಯ ನಂತರ ಪಾಕಿಸ್ತಾನದ ಪಾತ್ರವನ್ನು ಬಹಿರಂಗಪಡಿಸಲು 33 ದೇಶಗಳಿಗೆ ಭೇಟಿ ನೀಡಿದ ಭಾರತೀಯ ನಿಯೋಗದಲ್ಲಿ ಕೇಂದ್ರ ಸರ್ಕಾರ ತರೂರ್ ಅವರನ್ನು ಸೇರಿಸಿಕೊಂಡಿದೆ. ಈ ಭೇಟಿ ನಂತರ, ಯಾವುದೇ ದೇಶವು ಪಾಕಿಸ್ತಾನವನ್ನು ದೂಷಿಸಲಿಲ್ಲ ಎಂದು ಮಣಿಶಂಕರ್ ಅಯ್ಯರ್ ಹೇಳಿದ್ದಾರೆ. ತರೂರ್ ಮತ್ತು ಇತರ ಸಂಸದರು ಭೇಟಿ ನೀಡಿದ 33 ದೇಶಗಳಲ್ಲಿ, ಪಹಲ್ಗಾಮ್ ದಾಳಿಗೆ ಪಾಕಿಸ್ತಾನವನ್ನು ಯಾರೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ಅತ್ತ ಉಗ್ರರ ಪುರಾವೆ ಕೇಳುತ್ತಿರುವ ಕಾಂಗ್ರೆಸ್ ನಾಯಕ, ಇತ್ತ ಪಾಕ್​​ನಿಂದಲೇ ಉಗ್ರರು ಬಂದಿದ್ದಾರೆ ಎನ್ನುತ್ತಿರುವ ರಾಹುಲ್

ತರೂರ್ ಆಯ್ಕೆಯ ಬಗ್ಗೆ ಅಯ್ಯರ್ ಪ್ರಶ್ನೆ
ಪಹಲ್ಗಾಮ್ ದಾಳಿ ಹಿಂದೆ ಪಾಕಿಸ್ತಾನವಿದೆ ಎಂದು ನಾವು ಮಾತ್ರ ಹೇಳುತ್ತಿದ್ದೇವೆ, ಆದರೆ ಯಾರೂ ನಮ್ಮನ್ನು ನಂಬಲಿಲ್ಲ. ಜಗತ್ತನ್ನು ಮನವೊಲಿಸುವ ಯಾವುದೇ ಪುರಾವೆಗಳನ್ನು ನಾವು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ ಎಂದು ಅಯ್ಯರ್ ಹೇಳಿದ್ದಾರೆ. ಶಶಿ ತರೂರ್ ವಿಶ್ವಸಂಸ್ಥೆಯಲ್ಲಿ ಹಿರಿಯ ಹುದ್ದೆಗಳನ್ನು ಅಲಂಕರಿಸಿದ್ದಾರೆ ಮತ್ತು ನಂತರ ಭಾರತೀಯ ರಾಜಕೀಯಕ್ಕೆ ಸೇರಿದ್ದಾರೆ. ಆದರೆ ಕಾಂಗ್ರೆಸ್ ಶಿಫಾರಸು ಇಲ್ಲದೆ ಕೇಂದ್ರವು ಅವರನ್ನು ಏಕೆ ಆಯ್ಕೆ ಮಾಡಿದೆ ಎಂದು ಅಯ್ಯರ್ ಪ್ರಶ್ನಿಸಿದರು.

ಇಸ್ರೇಲ್ ಮಾತ್ರ ಒಪ್ಪಿಕೊಂಡಿತ್ತು
ಜಗತ್ತಿನ ಎಲ್ಲಾ ದೇಶಗಳು ಭಯೋತ್ಪಾದನೆಯನ್ನು ಖಂಡಿಸುತ್ತವೆ, ಆದರೆ ಪಾಕಿಸ್ತಾನದ ಹೆಸರನ್ನು ಹೇಳಿಲ್ಲ. ತರೂರ್ ಮತ್ತು ಅವರ ಸಹಚರರು ಎಷ್ಟೇ ಸುತ್ತಾಡಿದರೂ, ಇಸ್ರೇಲ್ ಹೊರತುಪಡಿಸಿ ಯಾರೂ ಪಾಕಿಸ್ತಾನವನ್ನು ದೂಷಿಸಲಿಲ್ಲ ಎಂದು ಅಯ್ಯರ್ ಹೇಳಿದರು.

ಅಮೆರಿಕದಂತಹ ದೇಶಗಳು ನೀಡುವ ಸುಳ್ಳು ಹೇಳಿಕೆಗಳ ಬಗ್ಗೆಯೂ ಭಾರತ ಸರ್ಕಾರ ಮೌನವಾಗಿದೆ ಎಂದು ಅವರು ಆರೋಪಿಸಿದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಅಮೆರಿಕ ಕದನ ವಿರಾಮ ತಂದಿದೆ ಎಂದು ಟ್ರಂಪ್ ಹಲವು ಬಾರಿ ಹೇಳಿದ್ದಾರೆ, ಆದರೆ ನಮ್ಮ ಸರ್ಕಾರಕ್ಕೆ ಸತ್ಯ ಹೇಳುವ ಧೈರ್ಯವಿಲ್ಲ ಎಂದು ಅಯ್ಯರ್ ಹೇಳಿದರು.

ಅಯ್ಯರ್ ವಿರುದ್ಧ ಬಿಜೆಪಿ ತಿರುಗೇಟು
ಮಣಿಶಂಕರ್ ಅಯ್ಯರ್ ಹೇಳಿಕೆಯಿಂದ ರಾಜಕೀಯ ಬಿಸಿಯಾಗಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಪ್ರತಿಪಕ್ಷಗಳು ಆಪರೇಷನ್ ಸಿಂಧೂರ್ ಬಗ್ಗೆ ಪ್ರಶ್ನೆಗಳನ್ನು ಎತ್ತುವ ಬದಲು ಸೇನೆಯ ಶೌರ್ಯಕ್ಕೆ ನಮಸ್ಕರಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಅದು ಭಯೋತ್ಪಾದನೆಯ ಬಗ್ಗೆ ಮೃದುವಾಗಿತ್ತು ಮತ್ತು ಮತ ಬ್ಯಾಂಕ್‌ಗಾಗಿ ಕೇಸರಿ ಭಯೋತ್ಪಾದನೆಯಂತಹ ಕಥೆಗಳನ್ನು ಸೃಷ್ಟಿಸಿತು ಎಂದು ಅವರು ಹೇಳಿದರು. ಆಪರೇಷನ್ ಸಿಂಧೂರ್ ಬಗ್ಗೆ ಸಂಸತ್ತಿನಲ್ಲಿ 16 ಗಂಟೆಗಳ ಕಾಲ ಚರ್ಚಿಸಲಾಯಿತು ಮತ್ತು ಕಾಂಗ್ರೆಸ್ ಉತ್ತರಿಸುವ ಸ್ಥಿತಿಯಲ್ಲಿರಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ಪಾಕಿಸ್ತಾನಿಯರು ಭಾರತದ ಅತಿ ದೊಡ್ಡ ಆಸ್ತಿ ಎಂದಿದ್ದ ಅಯ್ಯರ್
ಪಾಕಿಸ್ತಾನದ ನೆಲದಲ್ಲಿ ನಿಂತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಹಾಗೂ ಹಿಂದುತ್ವವನ್ನು ಟೀಕಿಸುವ ಮೂಲಕ ಮತ್ತೆ ವಿವಾದ ಹುಟ್ಟುಹಾಕಿದ್ದರು. ನಿಮ್ಮ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡುವ ಧೈರ್ಯ ಇದೆ. ಆದರೆ ಎದುರು ಬದಿರು ಕುಳಿತು ಮಾತನಾಡುವ ಧೈರ್ಯ ಇಲ್ಲ ಎಂದು ಅವರು ಪಾಕಿಸ್ತಾನದ ಬಳಿ ಹೇಳಿದ್ದರು. ಪಾಕಿಸ್ತಾನವು ಭಾರತದ ಅತಿ ದೊಡ್ಡ ಆಸ್ತಿ ಎಂದು ಹೇಳಿರುವುದಾಗಿ ಪಾಕಿಸ್ತಾನದ ಡಾನ್ ವರದಿ ಮಾಡಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ