Pandora Papers ಪಂಡೋರಾ ಪೇಪರ್ಸ್: ಬಿವಿಐ ಸಂಸ್ಥೆಗಳ ಜಾಲದೊಂದಿಗೆ ದಿವಾಳಿಯಾದ ಕೋಟ್ಯಾಧಿಪತಿ ಬಿಆರ್ ಶೆಟ್ಟಿ

| Updated By: ರಶ್ಮಿ ಕಲ್ಲಕಟ್ಟ

Updated on: Oct 07, 2021 | 1:48 PM

BR Shetty: ಪಂಡೋರಾ ಪೇಪರ್ಸ್ ಬಿಆರ್  ಶೆಟ್ಟಿಯವರು ಜೆರ್ಸಿ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸಂಕೀರ್ಣವಾದ ಸಾಗರೋತ್ತರ ಕಂಪನಿ ಜಾಲವನ್ನು ಸ್ಥಾಪಿಸಿದರು ಎಂದು ತೋರಿಸುತ್ತದೆ. ಅಂದ ಹಾಗೆ 2013ರಲ್ಲಿ ಈ ಕಂಪನಿಗಳು ಅವರ ಪ್ರಮುಖ ಕಂಪನಿಯಾದ ಟ್ರಾವೆಲೆಕ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಶಾಖೆಗಳ ಷೇರುಗಳನ್ನು ಹೊಂದಿವೆ. ಟ್ರಾವೆಲೆಕ್ಸ್ ಪ್ರಧಾನ ಕಚೇರಿ ಯುಕೆಯಲ್ಲಿದೆ.

Pandora Papers ಪಂಡೋರಾ ಪೇಪರ್ಸ್: ಬಿವಿಐ ಸಂಸ್ಥೆಗಳ ಜಾಲದೊಂದಿಗೆ ದಿವಾಳಿಯಾದ ಕೋಟ್ಯಾಧಿಪತಿ ಬಿಆರ್ ಶೆಟ್ಟಿ
ಬಿ.ಆರ್.ಶೆಟ್ಟಿ
Follow us on

ವಿಶ್ವವ್ಯಾಪಿ ಆರೋಗ್ಯ ಮತ್ತು ಆತಿಥ್ಯ ಸಾಮ್ರಾಜ್ಯವನ್ನು ಸ್ಥಾಪಿಸಲು 1970 ರ ದಶಕದಲ್ಲಿ ಕರ್ನಾಟಕದಿಂದ ಗಲ್ಫ್‌ಗೆ ವಲಸೆ ಹೋದ ಬಾವಗುತ್ತು ರಘುರಾಮ್ ಶೆಟ್ಟಿ(Bavaguthu Raghuram Shetty) ಎರಡು ವರ್ಷಗಳ ಹಿಂದೆವರೆಗೂ ಶ್ರೀಮಂತ ಭಾರತೀಯರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು.  315 ಕೋಟಿ ಡಾಲರ್ ನಿವ್ವಳ ಮೌಲ್ಯದೊಂದಿಗೆ ಬಿಆರ್ ಶೆಟ್ಟಿ(BR Shetty) ಫೋರ್ಬ್ಸ್ ನ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ ಸ್ಥಾನಪಡೆದಿದ್ದರು. ಇಂದು ಅವರು ಪ್ರಯಾಣ ನಿಷೇಧವನ್ನು ಎದುರಿಸುತ್ತಿದ್ದಾರೆ. ಕರ್ನಾಟಕ ಹೈಕೋರ್ಟ್ ನಿಂದ ದೋಷಾರೋಪಣೆಗೊಂಡಿದ್ದು, ಇವರ ಸ್ವತ್ತುಗಳ ಬಗ್ಗೆ ಕೇಳಿ ಬಂದಿರುವ ಆರೋಪದ ಬಗ್ಗೆ ತಮ್ಮ ವಾದವನ್ನು ಮಂಡಿಸುವಂತೆ ತಿಳಿಸಲಾಗಿದೆ. ಇದು ಮಡ್ಡಿ ವಾಟರ್ಸ್ ಹೂಡಿಕೆಯ ಸಂಸ್ಥೆಯಿಂದ 2020 ರ ವರದಿಯ ನಂತರ, ಅವರ ಹೆಚ್ಚಿನ ಸಾಲಗಳನ್ನು ಹೈಲೈಟ್ ಮಾಡಿದೆ. ಅದು ಇಂದು  660 ಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ. ಯುಎಇಯಲ್ಲಿರುವ ಅವರ ಆಸ್ತಿಗಳು ಮತ್ತು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿರುವ ಅವರ ಕಂಪನಿಗಳು ಸ್ಥಗಿತಗೊಂಡಿವೆ, ಶೆಟ್ಟಿ ಬೆಂಗಳೂರಿಗೆ ಮರಳಿದ್ದುಭಾರತೀಯ ಬ್ಯಾಂಕ್‌ಗಳಿಗೆ ಸಾಲಗಳನ್ನು ಮರುಪಾವತಿಸದಿರುವ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ದಿ ಇಂಡಿಯನ್ ಎಕ್ಸ್​​ಪ್ರೆಸ್ ವರದಿ ಮಾಡಿದೆ.

ಅವರು ಜಾಮೀನುದಾರರಾಗಿದ್ದ ಸಾಲಗಳು ಬ್ಯಾಂಕ್ ಆಫ್ ಬರೋಡಾದಲ್ಲಿ 2,000 ಕೋಟಿ ರೂ. ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ ನಲ್ಲಿ800 ಕೋಟಿ ರೂ. ಇವೆ. ನವೆಂಬರ್ 14, 2020 ರಂದು ಶೆಟ್ಟಿ ಅವರಿಗೆ ಬೆಂಗಳೂರಿನಿಂದ ಯುಎಇಗೆ ಮರಳಲು ಅನುಮತಿ ನಿರಾಕರಿಸಲಾಯಿತು.

ಒಂದು ಕಾಲದಲ್ಲಿ ರೋಲ್ಸ್ ರಾಯ್ಸ್, ಖಾಸಗಿ ಜೆಟ್‌ಗಳು ಮತ್ತು ವಿಹಾರ ನೌಕೆಗಳಿಗೆ ಹೆಸರುವಾಸಿಯಾಗಿದ್ದ ಶೆಟ್ಟಿ ಈಗ ಸಾಲಗಾರರು ಮತ್ತು ಬ್ಯಾಂಕುಗಳಿಂದ ತನ್ನ ಸಂಪೂರ್ಣ ಆಸ್ತಿ, ಹಿಡುವಳಿ ಮತ್ತು ಹೂಡಿಕೆಗಳ ಸಂಪೂರ್ಣ ಪಟ್ಟಿಯನ್ನು ಘೋಷಿಸಲು ತೀವ್ರ ಒತ್ತಡದಲ್ಲಿದ್ದಾರೆ.

ಈ ವರ್ಷ ಏಪ್ರಿಲ್‌ನಲ್ಲಿ ಕರ್ನಾಟಕ ಹೈಕೋರ್ಟ್ ” ಪ್ರೈಮಾ ಫೇಸಿ ಪ್ರಕಾರ ಶೆಟ್ಟಿಯವರು ತಮ್ಮ ಇತರ ಆಸ್ತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ. ಪ್ರತಿವಾದಿಗಳು ತಮ್ಮ ಆಸ್ತಿಯನ್ನು ವಿಲೇವಾರಿ ಮಾಡಬಹುದು, ಆದ್ದರಿಂದ ಅವರ ವಿರುದ್ಧ ಅಥವಾ ಅವರ ನಿಯಂತ್ರಣದಲ್ಲಿರುವ ಘಟಕಗಳು/ಕಂಪನಿಗಳ ವಿರುದ್ಧ ತೀರ್ಪು ಬರುವ ವೇಳೆಗೆ ಅದು ಕಣ್ಮರೆಯಾಗುತ್ತದೆ ಎಂದಿದೆ.

ಆದರೆ ಈಗ ಪಂಡೋರಾ ಪೇಪರ್ಸ್(Pandora Papers)  ಶೆಟ್ಟಿಯವರು ಜೆರ್ಸಿ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸಂಕೀರ್ಣವಾದ ಸಾಗರೋತ್ತರ ಕಂಪನಿ ಜಾಲವನ್ನು ಸ್ಥಾಪಿಸಿದರು ಎಂದು ತೋರಿಸುತ್ತದೆ. ಅಂದ ಹಾಗೆ 2013ರಲ್ಲಿ ಈ ಕಂಪನಿಗಳು ಅವರ ಪ್ರಮುಖ ಕಂಪನಿಯಾದ ಟ್ರಾವೆಲೆಕ್ಸ್ ಹೋಲ್ಡಿಂಗ್ಸ್ ಲಿಮಿಟೆಡ್‌ನ ಶಾಖೆಗಳ ಷೇರುಗಳನ್ನು ಹೊಂದಿವೆ. ಟ್ರಾವೆಲೆಕ್ಸ್ ಪ್ರಧಾನ ಕಚೇರಿ ಯುಕೆಯಲ್ಲಿದೆ.

ಅಕ್ಟೋಬರ್ 2017 ರವರೆಗೆ ಅಪ್ಡೇಟ್ ಮಾಡಲಾದ ರಹಸ್ಯ ದತ್ತಾಂಶದಲ್ಲಿನ “ಕಾರ್ಪೊರೇಟ್ ಚಾರ್ಟ್”, ಟ್ರಾವೆಲೆಕ್ಸ್ ಯುಎಸ್ ಮತ್ತು ಯುಕೆ ಹೊರತುಪಡಿಸಿ ಸ್ವಿಟ್ಜರ್ಲೆಂಡ್, ಪನಾಮ, ಬ್ರೆಜಿಲ್, ಚೀನಾ ಮತ್ತು ಜಪಾನ್ ಸೇರಿದಂತೆ 81 ಪ್ರತ್ಯೇಕ ಕಂಪನಿಗಳನ್ನು ಹೊಂದಿದೆ ಎಂದು ತೋರಿಸುತ್ತದೆ.

ಟ್ರೈಡೆಂಟ್ ಟ್ರಸ್ಟ್ ಪೇಪರ್ಸ್ (Trident Trust papers) ಬಿವಿಐ ಕಂಪನಿ, ಬ್ರೇವ್ ಸಿಟಿ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್ ಇಂಕ್ ಅನ್ನು  50,000ಡಾಲರ್  ಅಧಿಕೃತ ಬಂಡವಾಳದಲ್ಲಿ ಆಗಸ್ಟ್ 2013 ರಲ್ಲಿ ಸ್ಥಾಪಿಸಲಾಯಿತು ಮತ್ತು ಶೆಟ್ಟಿ ಅದರ ನಿರ್ದೇಶಕರಾಗಿದ್ದಾರೆ ಎಂದು ತೋರಿಸುತ್ತಿವೆ.  ಶೆಟ್ಟಿಯವರ ಇತರ ಬಿವಿಐ ಕಂಪನಿಗಳಿಗೂ ಅದರ ಷೇರುಗಳನ್ನು ಹಂಚಲಾಯಿತು.

ಶೆಟ್ಟಿಯವರಿಗೆ 2013 ರಲ್ಲಿ ಬ್ರೇವ್ ಸಿಟಿ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್‌ನ ನಿರ್ದೇಶಕರಾಗಿ ನೀಡಲಾದ ವ್ಯಾಪಕ ಅಧಿಕಾರಗಳಲ್ಲಿ ಬ್ಯಾಂಕ್ ಖಾತೆಗಳನ್ನು ತೆರೆಯುವ ಮತ್ತು ಮುಚ್ಚುವ ಅಧಿಕಾರಗಳು, ಯಾರಿಂದಲಾದರೂ ಎಲ್ಲಾ ಹಣದ ಸಂಗ್ರಹ ಸೇರಿದಂತೆ ಯಾವುದೇ ವ್ಯವಹಾರವನ್ನು ನಿರ್ವಹಿಸುವ ಮತ್ತು ಎಲ್ಲಾ ದಾಖಲೆಗಳಿಗೆ ಸಹಿ ಮಾಡುವುದು ಸೇರಿದಂತೆ ಸರ್ಕಾರಿ ಅಧಿಕಾರಿಗಳು/ ಮುಕ್ತ ವಲಯದ ಅಧಿಕಾರಿಗಳೊಂದಿಗೆ ವ್ಯವಹರಿಸುವ ಅಧಿಕಾರಗಳನ್ನು ನೀಡಲಾಯಿತು.

ಟ್ರೈಡೆಂಟ್ ಟ್ರಸ್ಟ್ ದತ್ತಾಂಶವು ಶೆಟ್ಟಿಯ ಕುಟುಂಬದ ಹಲವಾರು ಸದಸ್ಯರು ಸಾಗರೋತ್ತರದ ಕಂಪನಿಗಳ ಷೇರುದಾರರಲ್ಲಿ ಇದ್ದಾರೆ ಎಂದು ತೋರಿಸುತ್ತದೆ.  ಶೆಟ್ಟಿಯವರ ಪತ್ನಿ ಚಂದ್ರಕುಮಾರಿ ರಘುರಾಮ್ ಶೆಟ್ಟಿ ಅವರು ಬಿಆರ್ ಎಸ್ ಇನ್ವೆಸ್ಟ್ಮೆಂಟ್ಸ್ ನ ಅರ್ಧದಷ್ಟು (ತಲಾ  1ಡಾಲರ್  ಮೌಲ್ಯದ 25,000 ಷೇರುಗಳನ್ನು) ಹೊಂದಿದ್ದಾರೆ ಮತ್ತು ಅವರ ಮಗ ಬಿನಯ್ ಶೆಟ್ಟಿ ಟ್ರಾವೆಲೆಕ್ಸ್ ಹೋಲ್ಡಿಂಗ್ಸ್ ಲಿಮಿಟೆಡ್ ನ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ. ಅವರ ಸಹೋದರ ಬಾವಗುತ್ತು ಸಚ್ಚಿನಾನಂದ ಶೆಟ್ಟಿಯವರು ಎಸ್‌ಎಫ್‌ಜಿ ಇಂಕ್‌ನ ನಿರ್ದೇಶಕರಾಗಿ ನಾಮನಿರ್ದೇಶನಗೊಂಡರು. 2013 ರಲ್ಲಿ ಬಿವಿಐನಲ್ಲಿ ಸಂಯೋಜಿತವಾದ ಮತ್ತೊಂದು ಕಂಪನಿ ಎಸ್‌ಎಫ್‌ಜಿ ಇಂಕ್‌  50,000 ಡಾಲರ್  ಅಧಿಕೃತ ಬಂಡವಾಳದೊಂದಿಗೆ ಆರಂಭವಾಗಿತ್ತು.

ತನ್ನ ಸಹೋದರನ ಕಾಯಿಲೆಗೊಳಗಾದ ಶೆಟ್ಟಿ ಕಳೆದ ವರ್ಷ ಭಾರತಕ್ಕೆ ಪ್ರಯಾಣಿಸಿದ್ದರು. ಸಚಿನಾನಂದ ಮಾರ್ಚ್ 2020 ರಲ್ಲಿ ನಿಧನರಾದರು ಮತ್ತು ಅದರ ನಂತರ, ಭಾರತೀಯ ಬ್ಯಾಂಕುಗಳು ಶೆಟ್ಟಿ ವಿರುದ್ಧ ಮರುಪಡೆಯುವಿಕೆ ಪ್ರಕರಣಗಳನ್ನು ದಾಖಲಿಸಿದವು. ಅವರ ಹೆಸರಿನಲ್ಲಿ ಹೊರಡಿಸಲಾಗಿರುವ ಲುಕ್ ಔಟ್ ನೋಟಿಸ್ ನಿಂದಾಗಿ ಬೆಂಗಳೂರಿನಿಂದ ಹೊರಗೆ ಪ್ರಯಾಣಿಸಲು ಅವರಿಗೆ ಅನುಮತಿ ನೀಡಿಲ್ಲ.

ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಶೆಟ್ಟಿಯ ಸೋದರಳಿಯ ಶಿಶಿರ್ ಶೆಟ್ಟಿ “ಈ ವಿಷಯವು ಅನೇಕ ನ್ಯಾಯವ್ಯಾಪ್ತಿಯಲ್ಲಿರುವುದರಿಂದ ಈ ಸಮಯದಲ್ಲಿ ಡಾ ಶೆಟ್ಟಿ ಅವರು ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pandora Papers ಗಣ್ಯ ವ್ಯಕ್ತಿಗಳ ಹಣಕಾಸು ವ್ಯವಹಾರದ ರಹಸ್ಯ ದಾಖಲೆ ಸೋರಿಕೆ; ಏನಿದು ಪಂಡೋರಾ ಪೇಪರ್ಸ್?

ಇದನ್ನೂ ಓದಿ: Pandora Papers: ಪಂಡೋರಾ ಪೇಪರ್ಸ್​ನಲ್ಲಿ ರಾಜರು, ಪ್ರಧಾನಿಗಳು, ರಾಷ್ಟ್ರಾಧ್ಯಕ್ಷರು, ಸಿನಿತಾರೆಗಳು, ಪಾಪ್​ ತಾರೆ, ಕ್ರೀಡಾ ದಂತಕಥೆ