ಲಖಿಂಪುರ ಖೇರಿ ಹಿಂಸಾಚಾರದ ಸ್ಥಿತಿ ವರದಿ ನಾಳೆಯೊಳಗೆ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ

Lakhimpur Kheri violence: ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿರುವ ಮೃತ ರೈತ ಲವಪ್ರೀತ್​ ಸಿಂಗ್​ರ ತಾಯಿಗೆ ನೀಡಲಾಗಿರುವ ವೈದ್ಯಕೀಯ ನೆರವಿನ ಬಗ್ಗೆಯೂ ಮಾಹಿತಿ ನೀಡಲು ಸುಪ್ರೀಂಕೋರ್ಟ್ ಯುಪಿ ಸರ್ಕಾರಕ್ಕೆ ಹೇಳಿದೆ.

ಲಖಿಂಪುರ ಖೇರಿ ಹಿಂಸಾಚಾರದ ಸ್ಥಿತಿ ವರದಿ ನಾಳೆಯೊಳಗೆ ಸಲ್ಲಿಸುವಂತೆ ಯುಪಿ ಸರ್ಕಾರಕ್ಕೆ ಸುಪ್ರೀಂಕೋರ್ಟ್​ ಸೂಚನೆ
ಸುಪ್ರೀಂಕೋರ್ಟ್​
Follow us
TV9 Web
| Updated By: Lakshmi Hegde

Updated on:Oct 07, 2021 | 1:27 PM

ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ಕಾರು ಹರಿದು, ಬಳಿಕ ಉಂಟಾದ ಹಿಂಸಾಚಾರ (Lakhimpur Kheri violence)ಕ್ಕೆ ಸಂಬಂಧಪಟ್ಟಂತೆ ನಾಳೆಯೊಳಗೆ (ಅಕ್ಟೋಬರ್​ 8)  ಘಟನೆಯ ಸ್ಥಿತಿ ವರದಿ (Status Report) ಸಲ್ಲಿಸುವಂತೆ ಸುಪ್ರೀಂಕೋರ್ಟ್​ ಇಂದು ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ. ಈ ಹಿಂಸಾಚಾರದಲ್ಲಿ ಒಟ್ಟು 8 ಮಂದಿ ಮೃತಪಟ್ಟಿದ್ದು, ಅದರಲ್ಲಿ ನಾಲ್ವರು ರೈತರೇ ಆಗಿದ್ದಾರೆ. ಪ್ರಕರಣದ ವಿಚಾರಣೆ ಇಂದು ನಡೆಸಿರುವ ಸುಪ್ರೀಂಕೋರ್ಟ್​, ನಾಳೆಯೊಳಗೆ ಕೋರ್ಟ್​ಗೆ ಘಟನೆಯ ಸ್ಥಿತಿ ವರದಿ ಸಲ್ಲಿಸಬೇಕು. ಅದರಲ್ಲಿ ಪ್ರಕರಣದ ಆರೋಪಿಗಳ ಬಗ್ಗೆ ವಿವರ ಇರಬೇಕು. ಒಂದೊಮ್ಮೆ ಆರೋಪಿಗಳನ್ನು ಬಂಧಿಸಿದ್ದರೆ ಅದರ ಉಲ್ಲೇಖವೂ ಇರಬೇಕು. ಅದರ ಜತೆ, ಘಟನೆಯಿಂದ ಮಾನಸಿಕವಾಗಿ ಆಘಾತಕ್ಕೆ ಒಳಗಾಗಿರುವ ಮೃತ ರೈತ ಲವಪ್ರೀತ್​ ಸಿಂಗ್​ರ ತಾಯಿಗೆ ನೀಡಲಾಗಿರುವ ವೈದ್ಯಕೀಯ ನೆರವಿನ ಬಗ್ಗೆಯೂ ಸಮಗ್ರ ಮಾಹಿತಿ ಇರಬೇಕು ಎಂದು ಹೇಳಿದೆ. ಹಾಗೇ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರದ ಪ್ರಕರಣವನ್ನು ಸುಪ್ರೀಂಕೋರ್ಟ್​ ಸುಮೊಟೊ ವಿಚಾರಚಣೆಗೆ ಕೈಗೆತ್ತಿಕೊಂಡಿತ್ತು. ಇಂದು ಮುಖ್ಯನ್ಯಾಯಮೂರ್ತಿ ಎನ್​.ವಿ.ರಮಣ ನೇತೃತ್ವದ ನ್ಯಾ.ಸೂರ್ಯಕಾಂತ್​, ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ವಿಚಾರಣೆ ನಡೆಸಿತ್ತು. ಲಖಿಂಪುರ ಖೇರಿಯಲ್ಲಿ ಹಿಂಸಾಚಾರ ನಡೆದ ಪ್ರಕರಣದ ಬಗ್ಗೆ ಸುಮೊಟೊ ದಾಖಲಿಸಿಕೊಳ್ಳಬೇಕು ಎಂದು ಇಬ್ಬರು ವಕೀಲರು ಸಿಜೆಐ ಎನ್​. ವಿ.ರಮಣ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಒಬ್ಬರಾದ ಶಿವಕುಮಾರ್​ ತ್ರಿಪಾಠಿ ಅವರಿಗೆ ವಾದ ಮಂಡಿಸಲು ಸುಪ್ರೀಂಕೋರ್ಟ್​ ಇಂದು ಅವಕಾಶ ಮಾಡಿಕೊಟ್ಟಿತ್ತು.

ತಮ್ಮ ವಾದವನ್ನು ನ್ಯಾಯಾಲಯದ ಎದುರು ಮಂಡಿಸಿದ ತ್ರಿಪಾಠಿ, ಲಖಿಂಪುರ ಖೇರಿಯ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿಲ್ಲ. ಪ್ರಜಾಪ್ರಭುತ್ವದ ಹಕ್ಕು ರಕ್ಷಣೆ ಮಾಡಲಿಲ್ಲ. ಆರೋಪಿಗಳ ವಿರುದ್ಧ ಕೂಡಲೇ ಎಫ್​ಐಆರ್​ ದಾಖಲು ಮಾಡಬೇಕು ಎಂದು ಹೇಳಿದ್ದರು. ಅದಕ್ಕೆ ಪ್ರತಿಯಾಗಿ ಸುಪ್ರೀಂಕೋರ್ಟ್​ ಪೀಠ, ಈಗಾಗಲೇ ಎಫ್​ಐಆರ್​ ದಾಖಲಾಗಿದ್ದು ನಮ್ಮ ಗಮನಕ್ಕೆ ಬಂದಿದೆ ಎಂದೂ ಹೇಳಿದೆ.  ಇನ್ನು ಉತ್ತರಪ್ರದೇಶ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಗರಿಮಾ ಪ್ರಶಾದ್​, ಲಖಿಂಪುರದಲ್ಲಿ ಏನು ನಡೆಯಿತೋ ಅದು ನಿಜಕ್ಕೂ ದುರ್ದೈವ. ಈ ಸಂಬಂಧ ತನಿಖೆ ನಡೆಸಲು ಎಸ್​ಐಟಿ ರಚನೆಯಾಗಿದೆ. ಅಷ್ಟೇ ಅಲ್ಲ, ನಿವೃತ್ತ ನ್ಯಾಯಾಧೀಶರೊಬ್ಬರು ತನಿಖೆ ನಡೆಸಲಿದ್ದಾರೆ. ಇನ್ನುಳಿದಂತೆ ಎಲ್ಲ ಸೂಕ್ತ ಕ್ರಮಗಳನ್ನೂ ಕೈಗೊಳ್ಳಲಾಗುವುದು ಎಂದು ಕೋರ್ಟ್​ಗೆ ಹೇಳಿದ್ದಾರೆ.

ವಿಚಾರಣೆ ವೇಳೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಸೂರ್ಯಕಾಂತ್​, ನಮಗೆ ಬಂದ ಮಾಹಿತಿಯ ಪ್ರಕಾರ ಲೆಖಿಂಪುರ ಖೇರಿಯಲ್ಲಿ ಮೃತಪಟ್ಟ 8 ಮಂದಿಯಲ್ಲಿ ನಾಲ್ವರು ರೈತರು, ಒಬ್ಬ ಪತ್ರಕರ್ತ ಎಂದು ಹೇಳಲಾಗಿದೆ. ಆದರೆ ನಮಗೆ ಆರೋಪಿ ಯಾರು? ಯಾರ್ಯಾರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಎಫ್​ಐಆರ್ ದಾಖಲಾದವರನ್ನು ಬಂಧಿಸಲಾಗಿದೆಯಾ? ಎಂಬಿತ್ಯಾದಿ ಸಮಗ್ರ ವಿವರಗಳು ನಮಗೆ ಗೊತ್ತಾಗಬೇಕು. ಈ ಎಲ್ಲ ಅಂಶಗಳನ್ನೂ ಸ್ಥಿತಿ ವರದಿಯಲ್ಲಿ ಸಲ್ಲಿಸಿ ಎಂದು ಹೇಳಿದ್ದಾರೆ.  ಇನ್ನು ಮೃತ ರೈತ ಲವಪ್ರೀತ್ ಸಿಂಗ್ ತಾಯಿಯ ಬಗೆಗಿನ ಉಲ್ಲೇಖವನ್ನು ಸಿಜೆಐ ಎನ್​.ವಿ.ರಮಣ ಮಾಡಿದ್ದಾರೆ. ಲವಪ್ರೀತ್​ ಸಿಂಗ್​ ಸಾವಿನ ಸುದ್ದಿಯಿಂದ ಅವರು ತೀವ್ರವಾಗಿ ಶಾಕ್​ಗೆ ಒಳಗಾಗಿದ್ದಾರೆ ಎಂದು ಕೇಳಲ್ಪಟ್ಟಿದ್ದೇವೆ. ಅಸ್ವಸ್ಥರಾದ ಅವರಿಗೆ ಸೂಕ್ತ ವೈದ್ಯಕೀಯ ನೆರವು ಸಿಕ್ಕಿದೆಯಾ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Lakhimpur Kheri Violence: ಲಖಿಂಪುರ ಖೇರಿ ಹತ್ಯೆ ಸ್ಥಳದಲ್ಲಿ ನನ್ನ ಮಗ ಇದ್ದುದು ನಿಜವಾದರೆ ರಾಜೀನಾಮೆ ನೀಡುತ್ತೇನೆ; ಸಚಿವ ಅಜಯ್ ಮಿಶ್ರಾ

Lakhimpur Kheri violence ಲಖಿಂಪುರ್ ಖೇರಿ ಹಿಂಸಾಚಾರದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರದಿಂದ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇಮಕ

Published On - 12:53 pm, Thu, 7 October 21