Tv9 Digital Live | ಪೊಲೀಸ್ ಇಲಾಖೆ ಮೇಲೆ ರಾಜಕಾರಣಿಗಳ ಹಿಡಿತ ತಪ್ಪಬೇಕಿದೆ

| Updated By: guruganesh bhat

Updated on: Mar 23, 2021 | 7:41 PM

ಮುಂಬಯಿ ಪೊಲೀಸ್ ನಿರ್ದೇಶಕ ಪರಮ್​ವೀರ್​ ಸಿಂಗ್ ಮಹಾರಾಷ್ಟ್ರದ ಗೃಹ ಸಚಿವರ ಮೇಲೆ ಮಾಡಿದ ಆರೋಪದ ನಂತರ ಪೊಲೀಸ್ ಇಲಾಖೆಯ ಸುಧಾರಣೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ ಈ ಕುರಿತಾಗಿ ಟಿವಿ9 ಕನ್ನಡ ಡಿಜಿಟಲ್ ಚರ್ಚೆ ನಡೆಸಿದೆ.

Tv9 Digital Live | ಪೊಲೀಸ್ ಇಲಾಖೆ ಮೇಲೆ ರಾಜಕಾರಣಿಗಳ ಹಿಡಿತ ತಪ್ಪಬೇಕಿದೆ
ಆ್ಯಂಕರ್​ ಹರಿಪ್ರಸಾದ್ ಮತ್ತು ಮಾಜಿ ಪೊಲೀಸ್ ಕಮಿಷನರ್ ಹಾಗೂ ನಿವೃತ್ತ ಡಿಜಿಪಿ​ ರಾಘವೇಂದ್ರ ಔರಾದ್ಕರ್
Follow us on

ಮುಂಬೈ ಪೊಲೀಸ್ ನಿರ್ದೇಶಕ ಪರಮ್​ವೀರ್ ಸಿಂಗ್ ಮಹಾರಾಷ್ಟ್ರದ ಗೃಹ ಸಚಿವರ ಮೇಲೆ ಮಾಡಿದ ಆರೋಪದ ನಂತರ ಪೊಲೀಸ್ ಇಲಾಖೆಯ ಸುಧಾರಣೆ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಈ ಕುರಿತಾಗಿ ಇಂದು (ಮಾರ್ಚ್ 23) ಟಿವಿ9 ಕನ್ನಡ ಡಿಜಿಟಲ್ ಚರ್ಚೆ ನಡೆಸಿತು. ಚರ್ಚೆಯಲ್ಲಿ ಬೆಂಗಳೂರು ನಗರದ ಮಾಜಿ ಪೊಲೀಸ್ ಕಮಿಷನರ್ ಹಾಗೂ ನಿವೃತ್ತ ಡಿಜಿಪಿ ರಾಘವೇಂದ್ರ ಔರಾದ್ಕರ್ ಮತ್ತು ಹಿರಿಯ ವಕೀಲ ಜಿ.ಆರ್.ಮೋಹನ್ ಪಾಲ್ಗೊಂಡಿದ್ದರು. ಆ್ಯಂಕರ್​ ಹರಿಪ್ರಸಾದ್ ಚರ್ಚೆ ನಡೆಸಿಕೊಟ್ಟರು.

‘ಪೊಲೀಸ್​ ವ್ಯವಸ್ಥೆಯ ಸುಧಾರಣೆಯ ಚರ್ಚೆ ಇಂದು ನಿನ್ನೆಯದಲ್ಲ’ ಎಂದೇ ಮಾತು ಶುರು ಮಾಡಿದರು ಪೊಲೀಸ್ ಆಯುಕ್ತರೂ ಆಗಿದ್ದ ನಿವೃತ್ತ ಡಿಜಿಪಿ​ ರಾಘವೇಂದ್ರ ಔರಾದ್ಕರ್. ವ್ಯವಸ್ಥೆಯ ಅಥವಾ ಸುಧಾರಣೆಯ ಬಗ್ಗೆ ನಮ್ಮ ದೇಶದಲ್ಲಿ 2006ರಿಂದ ಚರ್ಚೆಯಾಗುತ್ತಿದೆ. ಪೊಲೀಸರ ಮೇಲೆ ಇರುವ ರಾಜಕೀಯ ಹಿಡಿತ ಕಡಿಮೆಯಾಗಬೇಕು. ನಮ್ಮ ಸಂವಿಧಾನಕ್ಕೆ ಬದ್ಧರಾಗಿ, ಸ್ವತಂತ್ರವಾಗಿ ಪೊಲೀಸರು ಕಾರ್ಯನಿರ್ವಹಿಸಬೇಕು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಬೇಕು. ಯಾವುದೇ ಕಾನೂನನ್ನು ಹಿಂಪಡೆಯುವ ಅಧಿಕಾರ ಸರ್ಕಾರಕ್ಕಿದೆ. ಸರ್ಕಾರ ನಿಯಂತ್ರಣ ಇದ್ದೇ ಇರುತ್ತದೆ. ಭಾರತೀಯ ಪೊಲೀಸ್ ಸೇವೆಯಲ್ಲಿರುವ ಐಪಿಎಸ್​ ಅಧಿಕಾರಿಗಳು ಸಂವಿಧಾನವನ್ನು ಎತ್ತಿ ಹಿಡಿಯುವಲ್ಲಿ ತಪ್ಪು ಮಾಡುತ್ತಿದ್ದಾರೆ ಎಂಬ ಭಾವನೆ ಎಲ್ಲರಿಗೂ ಬರುತ್ತಿದೆ. ಎಲ್ಲರಿಗೂ ಮೌಲ್ಯಾಧಾರಿತ ನಡತೆ ಬೇಕು’ ಎಂದು ಪ್ರತಿಪಾದಿಸಿದರು.

ಮುಂಬೈನ ಹಿಂದಿನ ಪೊಲೀಸ್​ ಕಮಿಷನರ್​ ಮಾಡಿರುವ ಆರೋಪ ನಿಷ್ಪಕ್ಷಪಾತವಾದದ್ದು. ಅವರು ಅದೆಷ್ಟೋ ರಾಜಕೀಯ ಒತ್ತಡದ ನಡುವೆ ಕೆಲಸ ಮಾಡಿದ್ದಾರೆ. ಆದರೆ ಸ್ಥಾನಪಲ್ಲಟದ ನಂತರ ಆಪಾದನೆ ಮಾಡುತ್ತೇನೆ ಎಂಬುದು ನನ್ನ ಪ್ರಕಾರ ಸರಿಯಲ್ಲ. ಅಧಿಕಾರದಲ್ಲಿದ್ದಾಗಲೇ ಈ ಕುರಿತಾಗಿ ಮಾತನಾಡಬೇಕಿತ್ತು. ಆಗಲೇ ಸಂಬಂಧಿಸಿದವರಿಗೆ ಲಿಖಿತ ರೂಪದಲ್ಲಿ ದೂರು ನೀಡಿದ್ದರೆ ಸರಿಯಾದ ಮಾರ್ಗವಾಗಿತ್ತು ಎಂದು ಹೇಳಿದರು.

‘ನೆಲದ ಕಾನೂನುಗಳನ್ನು ಪಾಲಿಸುವುದು ಐಎಎಸ್​, ಐಪಿಎಸ್​ ಅಧಿಕಾರಿಗಳ ಜವಾಬ್ದಾರಿ ಕೂಡಾ ಹೌದು. ಯಾವುದೇ ವ್ಯವಸ್ಥೆಯಲ್ಲಿ ಪೊಲೀಸ್​ ಅಧಿಕಾರಿಗಳಿಗೆ ಪೂರ್ಣ ಪ್ರಮಾಣದ ಸ್ವಾತಂತ್ರ್ಯ ಕೊಡುವುದೂ, ಸಾರ್ವಭೌಮುಖರಾಗಿ ನಡೆದುಕೊಳ್ಳುವುದು ಸರಿಯಲ್ಲ. ಪೊಲೀಸ್​ ಅಧಿಕಾರಿಗಳೂ ಮನುಷ್ಯರೇ. ಅವರ ಸೇವೆಗೆ ಸೇರಿವಾಗ ಮಾಡಿರುವ ಪ್ರಮಾಣದ ಹಾಗೆಯೇ ನಿಯಮ ಪಾಲಿಸಬೇಕು. ವರ್ಗಾವಣೆ ಎಂಬ ಭೂತವನ್ನು ಯಾವ ರೀತಿ ನಾವು ಹೋಗಲಾಡಿಸಬೇಕು ಎಂಬುದು ದೊಡ್ಡ ಪ್ರಶ್ನೆ ಆಗಿದೆ. ಪೊಲೀಸ್​ ವ್ಯವಸ್ಥೆಯ ಸುಧಾರಣೆಯಲ್ಲಿ, ವರ್ಗಾವಣೆ ವಿಷಯದಲ್ಲಿ ರಾಜಕೀಯ ಮಧ್ಯಂತರ ನಿಲ್ಲಿಸಬೇಕಾಗಿದೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ’ ಎಂದು ಅಭಿಪ್ರಾಯ ಹಂಚಿಕೊಂಡರು.

ಮಹಾರಾಷ್ಟ್ರ ಸರ್ಕಾರದ ಗೃಹಮಂತ್ರಿಯನ್ನು ಲಂಚದ ಆರೋಪದಿಂದ ರಕ್ಷಿಸುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡುತ್ತಿರುವ ಕುರಿತು ವಕೀಲ ಜಿ.ಆರ್​.ಮೋಹನ್ ಮಾತನಾಡಿದರು. ಪರಮ್​ವೀರ್​ ಸಿಂಗ್​ ಮಾಡಿರುವ ಆಪಾದನೆ ಸರಿಯಾಗಿದೆ. ಐಎಎಸ್​, ಐಪಿಎಸ್​ ಅಧಿಕಾರಿಗಳ ಮೇಲೆ ಅಧಿಕಾರ ಚಲಾಯಿಸುವುದು ತಪ್ಪು. ಮೌಲ್ಯಗಳು ಕುಸಿಯುತ್ತಿವೆ. ಅವುಗಳನ್ನು ಮೇಲೆತ್ತುವ ಕೆಲಸವಾಗಬೇಕಿದೆ. ರಾಜಕೀಯ ಕೈವಾಡ ನಡೆಯುತ್ತಿರುವುದು ಗಂಭೀರ ವಿಷಯ. ಪೊಲೀಸ್​ ಅಧಿಕಾರಿಯೂ ಸಂವಿಧಾನಬದ್ಧವಾಗಿ ಕೆಲಸ ನಿರ್ವಹಿಸಬೇಕು. ತಮ್ಮ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ಮುಂಬೈ ಪೊಲೀಸ್ ಕಮಿಷನರ್ ಹುದ್ದೆಯಿಂದ ವರ್ಗಾವಣೆ ಪ್ರಶ್ನಿಸಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಪರಮ್​ವೀರ್ ಸಿಂಗ್

ಇದನ್ನೂ ಓದಿ: ಗೃಹ ಸಚಿವ ಅನಿಲ್ ದೇಶ್​ಮುಖ್ ಪ್ರತಿ ತಿಂಗಳು 100 ಕೋಟಿ ಸಂಗ್ರಹಿಸಲು ಸಚಿನ್ ವಾಜೆ ಮೇಲೆ ಒತ್ತಡ ಹೇರಿದ್ದರು; ಉದ್ಧವ್ ಠಾಕ್ರೆಗೆ ಪತ್ರ ಬರೆದ ಪರಮ್​ವೀರ್ ಸಿಂಗ್

Published On - 6:07 pm, Tue, 23 March 21