ಮಹಾರಾಷ್ಟ್ರದ ರಾಜ್ಯಪಾಲರು ಕೇಂದ್ರ ಸರ್ಕಾರ ಅಮೆಜಾನ್ ಮೂಲಕ ಕಳುಹಿಸಿದ ಪಾರ್ಸೆಲ್: ಉದ್ಧವ್ ಠಾಕ್ರೆ

| Updated By: ರಶ್ಮಿ ಕಲ್ಲಕಟ್ಟ

Updated on: Nov 24, 2022 | 9:38 PM

ರಾಜ್ಯಪಾಲರು ಯಾರು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ನನ್ನ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಆದರೆ ವೃದ್ಧಾಶ್ರಮದಲ್ಲೂ ಅವಕಾಶ ಸಿಗದವರನ್ನು ಈಗ ರಾಜ್ಯಪಾಲರನ್ನಾಗಿ ಮಾಡಲಾಗಿದೆ ಎಂದಿದ್ದಾರೆ ಠಾಕ್ರೆ

ಮಹಾರಾಷ್ಟ್ರದ ರಾಜ್ಯಪಾಲರು ಕೇಂದ್ರ ಸರ್ಕಾರ ಅಮೆಜಾನ್ ಮೂಲಕ ಕಳುಹಿಸಿದ ಪಾರ್ಸೆಲ್: ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
Follow us on

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ (Bhagat Singh Koshyari) ಅವರನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಉದ್ಧವ್ ಠಾಕ್ರೆ (Uddhav Thackeray)  ಒತ್ತಾಯಿಸಿದ್ದಾರೆ. ಶಿವಾಜಿಯ ಬಗ್ಗೆ ಹೇಳಿಕೆ ನೀಡಿ ವಿವಾದಕ್ಕೊಳಗಾಗಿರುವ ಕೊಶ್ಯಾರಿ ಬಗ್ಗೆ ಪ್ರತಿಕ್ರಿಯಿಸಿದ ಠಾಕ್ರೆ, ಅವರು”ಅಮೆಜಾನ್ ಮೂಲಕ ಮಹಾರಾಷ್ಟ್ರಕ್ಕೆ ಕಳುಹಿಸಲಾದ ಪಾರ್ಸೆಲ್” ಎಂದಿದ್ದಾರೆ. ಕೊಶ್ಯಾರಿ ಅವರನ್ನು ತೆಗೆದುಹಾಕದಿದ್ದರೆ  ಪಕ್ಷದ ಬೇಧವಿಲ್ಲದೆ ಪ್ರತಿಭಟನೆ ನಡೆಸುವುದಾಗಿ ಮಹಾರಾಷ್ಟ್ರದ (Maharashtra)ಮಾಜಿ ಸಿಎಂ ಬೆದರಿಕೆ ಹಾಕಿದ್ದಾರೆ.ಈ ಗವರ್ನರ್ ಅನ್ನು ಅಮೆಜಾನ್ ಮೂಲಕ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಕಳುಹಿಸಿದೆ, ಅವರು ಎರಡರಿಂದ ಐದು ದಿನಗಳಲ್ಲಿ ಅವರನ್ನು ಹಿಂದಕ್ಕೆ ತೆಗೆದುಕೊಳ್ಳದಿದ್ದರೆ, ರಾಜ್ಯಾದ್ಯಂತ ಪ್ರತಿಭಟನೆ ಅಥವಾ ಬಂದ್ ಅನ್ನು ಆಯೋಜಿಸಲಾಗುವುದು ಎಂದು ಮಾಧ್ಯಮದವರಲ್ಲಿ ಮಾತನಾಡಿದ ಠಾಕ್ರೆ ಹೇಳಿದ್ದಾರೆ.ನೀವು ಇಲ್ಲಿಗೆ ಕಳುಹಿಸಿದ ಮಾದರಿಯನ್ನು ತೆಗೆದುಕೊಂಡು ಹೋಗುವಂತೆ ನಾವು ಕೇಂದ್ರ ಸರ್ಕಾರವನ್ನು ವಿನಂತಿಸುತ್ತೇವೆ. ಬೇಕಾದರೆ ಅವರನ್ನು ವೃದ್ಧಾಶ್ರಮದಲ್ಲಿ ಇರಿಸಿ, ನಮಗೆ ರಾಜ್ಯಕ್ಕೆ ಅಗತ್ಯವಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. ಮರಾಠಾ ಐಕಾನ್ ಛತ್ರಪತಿ ಶಿವಾಜಿ ಕುರಿತು ರಾಜ್ಯಪಾಲ ಕೊಶ್ಯಾರಿ ಅವರ ಹೇಳಿಕೆಗಳಿಗೆ ಮಹಾರಾಷ್ಟ್ರದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಆಡಳಿತಾರೂಢ ಏಕನಾಥ್ ಶಿಂಧೆ ಸೇನೆ ಮತ್ತು ಅದರ ಮಿತ್ರಪಕ್ಷ ಬಿಜೆಪಿಯ ನಾಯಕರು ಕೂಡ ಕೊಶ್ಯಾರಿ ಹೇಳಿಕೆ ಖಂಡಿಸಿದ್ದಾರೆ.

ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಈ ಹೇಳಿಕೆ ನೀಡಿದ್ದಾರೆ. ಮೊದಲು, ನಿಮ್ಮ ಐಕಾನ್ ಯಾರು ಎಂದು ಕೇಳಿದಾಗ, ಉತ್ತರ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಅಂತಿದ್ದರು. ಮಹಾರಾಷ್ಟ್ರದಲ್ಲಿ, ನೀವು ಬೇರೆಡೆ ನೋಡಬೇಕಾಗಿಲ್ಲ. ಇಲ್ಲಿ ಅನೇಕ ಐಕಾನ್‌ಗಳಿದ್ದಾರೆ. ಹಿಂದಿನ ದಿನಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಐಕಾನ್ ಆಗಿದ್ದರು.,ಈಗ ಬಿಆರ್ ಅಂಬೇಡ್ಕರ್ ಮತ್ತು ನಿತಿನ್ ಗಡ್ಕರಿ ಇದ್ದಾರೆ ಎಂದು ಕೊಶ್ಯಾರಿ ಕಳೆದ ಶನಿವಾರ ಹೇಳಿದ್ದರು. ನಂತರ ಗಡ್ಕರಿ”ಶಿವಾಜಿ ಮಹಾರಾಜ್ ನಮ್ಮ ದೇವರು… ನಾವು ಅವರನ್ನು ನಮ್ಮ ಹೆತ್ತವರಿಗಿಂತ ಹೆಚ್ಚು ಗೌರವಿಸುತ್ತೇವೆ ಎಂದುಹೇಳಿದ್ದಾರೆ.

ರಾಜ್ಯಪಾಲರ ಮೇಲಿನ ತೀವ್ರ ದಾಳಿಯಲ್ಲಿ ಠಾಕ್ರೆ, ಕೊಶಾರಿ ವೃದ್ಧಾಶ್ರಮಕ್ಕೆ ಸೇರಿದವರು. ಅವರ ಮಾತುಗಳು ಬಾಯ್ತಪ್ಪಿನಿಂದ ಆದದ್ದು ಎಂದು ಅರ್ಥೈಸಲು ಸಾಧ್ಯವಿಲ್ಲ ಎಂದು ಹೇಳಿದರು. “ರಾಷ್ಟ್ರಪತಿ ರಾಜ್ಯಪಾಲರನ್ನು ಆಯ್ಕೆ ಮಾಡುತ್ತಾರೆ. ರಾಜ್ಯಪಾಲರು ಪಕ್ಷಪಾತರಹಿತರಾಗಿರಬೇಕು, ಇದು ನಮಗೆಲ್ಲರಿಗೂ ಅನಿಸುತ್ತದೆ. ಆದರೆ ಈಗ, ಕೇಂದ್ರ ಸರ್ಕಾರದ ಅಜೆಂಡಾವನ್ನು ರಾಜ್ಯಪಾಲರು ಪಸರಿಸುತ್ತಿದ್ದಾರೆ. ಆದ್ದರಿಂದ ಅವರ ಹೇಳಿಕೆಯನ್ನು ಎಲ್ಲಾ ಗಂಭೀರತೆಯಿಂದ ತೆಗೆದುಕೊಳ್ಳಬೇಕು. ನಾನು ಅವರನ್ನು ರಾಜ್ಯಪಾಲರು ಎಂದು ಕರೆಯುವುದನ್ನು ನಿಲ್ಲಿಸಿದೆ ಎಂದು ಠಾಕ್ರೆ ಹೇಳಿದ್ದಾರೆ.

ರಾಜ್ಯಪಾಲರು ಯಾರು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ನನ್ನ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಆದರೆ ವೃದ್ಧಾಶ್ರಮದಲ್ಲೂ ಅವಕಾಶ ಸಿಗದವರನ್ನು ಈಗ ರಾಜ್ಯಪಾಲರನ್ನಾಗಿ ಮಾಡಲಾಗಿದೆ ಎಂದಿದ್ದಾರೆ ಠಾಕ್ರೆ. ಗುಜರಾತಿಗಳು ಮತ್ತು ರಾಜಸ್ಥಾನಿಗಳಿಲ್ಲದೆ ಮುಂಬೈ ಆರ್ಥಿಕ ರಾಜಧಾನಿಯಾಗುವುದಿಲ್ಲ ಎಂಬ ಅವರ ಟೀಕೆಗಳ ಕುರಿತು ಠಾಕ್ರೆ ಈ ಹಿಂದೆ ಗವರ್ನರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕೆಲವು ತಿಂಗಳ ಹಿಂದೆ ನಾವು ಇಲ್ಲಿ ಭೇಟಿಯಾದಾಗ, ರಾಜ್ಯಪಾಲರು ಮುಂಬೈ ಮತ್ತು ಥಾಣೆ ಜನರನ್ನು ಅವಮಾನಿಸಿದ್ದಾರೆ. ಆಗ ನಾನು ಅವರಿಗೆ ಕೊಲ್ಹಾಪುರಿ ಚಪ್ಪಲ್ ತೋರಿಸಬೇಕು ಎಂದು ಹೇಳಿದೆ. ಈಗ ರಾಜ್ಯಪಾಲರು ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸಿದ್ದಾರೆ. ಇದರ ಹಿಂದೆ ಯಾರಿದ್ದಾರೆಂದು ನಮಗೆ ತಿಳಿಯಬೇಕು ಎಂದು ಠಾಕ್ರೆ ಹೇಳಿದ್ದಾರೆ.

ಇನ್ನು ಮೂರ್ನಾಲ್ಕು ದಿನಗಳಲ್ಲಿ ರಾಜ್ಯಪಾಲರನ್ನು ಕೆಳಗಿಳಿಸದಿದ್ದರೆ ಮೂರ್ನಾಲ್ಕು ದಿನ ಕಾಯುತ್ತೇವೆ, ಏನೂ ಆಗದಿದ್ದರೆ ರಾಜ್ಯವನ್ನು ಪ್ರೀತಿಸುವ ಎಲ್ಲರೂ ಒಗ್ಗೂಡಿ ನಮ್ಮನ್ನು ಅವಮಾನಿಸಿದರೆ ಏನಾಗುತ್ತದೆ ಎಂಬುದನ್ನು ತೋರಿಸಬೇಕು. ಎಲ್ಲಾ ಪಕ್ಷಗಳ ಜನರು ಒಗ್ಗೂಡುವಂತೆ ಮನವಿ ಮಾಡುತ್ತೇನೆ, ಮುಂದಿನ ದಿನಗಳಲ್ಲಿ ನಾನು ಸಮಾನ ಮನಸ್ಕರನ್ನು ಭೇಟಿ ಮಾಡುತ್ತೇನೆ, ಎಲ್ಲಾ ಪಕ್ಷಗಳು ಒಗ್ಗೂಡಿದರೆ, ನಾವು ರಾಜ್ಯವ್ಯಾಪಿ ಏನಾದರೂ ಮಾಡಬೇಕು, ಹಿಂಸಾತ್ಮಕವಾಗಿ ಏನನ್ನೂ ಮಾಡಬಾರದು ಎಂದು ಅವರು ಹೇಳಿದರು. ರಾಜ್ಯಪಾಲರ ಹೇಳಿಕೆಗಳ ಬಗ್ಗೆ ಏಕನಾಥ್ ಶಿಂಧೆ ಮತ್ತು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ “ಮೌನ” ವಹಿಸಿರುವುದೇಕೆ ಎಂದು ಠಾಕ್ರೆ ಪ್ರಶ್ನಿಸಿದ್ದಾರೆ.

“ಛತ್ರಪತಿ ಶಿವಾಜಿ ಮಹಾರಾಜರನ್ನು ಅವಮಾನಿಸುವವರು ಸಾವರ್ಕರ್ ವಿಚಾರವನ್ನು ನಮಗೆ ಹೇಳಬಾರದು. ಆಗಲೂ ನಾವು ರಾಹುಲ್ ಗಾಂಧಿಯನ್ನು ವಿರೋಧಿಸಿದ್ದೆವು. ಆದರೆ ಸಾವರ್ಕರ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದವರು ಈಗ ಮೌನವಾಗಿದ್ದಾರೆ. ಅದು ಏಕೆ?” ಎಂದು ಠಾಕ್ರೆ ಕೇಳಿದ್ದಾರೆ.