ದೆಹಲಿ: ಪಂಜಾಬ್ ರೈತರ ದೆಹಲಿ ಚಲೋ ಚಳವಳಿ ಕುರಿತು ಚರ್ಚೆಯಾಗದಂತೆ ತಡೆಯಲೆಂದೇ ಚಳಿಗಾಲದ ಸಂಸತ್ ಅಧಿವೇಶನವನ್ನು ರದ್ದುಗೊಳಿಸಲಾಗಿದೆ ಎಂದು ಶಿವಸೇನಾ ಸಂಸದ ಸಂಜಯ್ ರಾವುತ್ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.
ಶಿವಸೇನೆಯ ಮುಖವಾಣಿ ಸಾಮ್ನಾದ ತಮ್ಮ ವಾರದ ಅಂಕಣ ‘ರೋಖ್ ತೋಕ್’ನಲ್ಲಿ ಈ ಕುರಿತು ಬರೆದಿರುವ ಅವರು, ನೂತನ ಕೃಷಿ ಕಾಯ್ದೆಗಳ ಕುರಿತು ಚರ್ಚಿಸುವ ಆಸಕ್ತಿಯೇ ಕೇಂದ್ರ ಸರ್ಕಾರಕ್ಕಿಲ್ಲ. ಚಳಿಗಾಲದ ಅಧಿವೇಶನದಲ್ಲಿ ವಿಪಕ್ಷಗಳು ತರಾಟೆಗೆ ತೆಗೆದುಕೊಳ್ಳುವ ಸಂಭವವಿರುವುದರಿಂದ ಸರ್ಕಾರ ಅಧಿವೇಶನವನ್ನು ರದ್ದುಗೊಳಿಸಿದೆ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿರುವ ಸಮಯದಲ್ಲೇ ಸೆಂಟ್ರಲ್ ವಿಸ್ಟಾ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಹಣ ಖರ್ಚು ಮಾಡುವ ಅವಶ್ಯಕತೆಯಿರಲಿಲ್ಲ ಎಂದು ಅವರು ಬರೆದಿದ್ದಾರೆ.
ಚಳವಳಿ ಹಿಂದೆ ರಾಜಕೀಯ ಕೈವಾಡ
ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ರಾಜ್ಯ ಸಚಿವ ವಿ.ಕೆ.ಸಿಂಗ್, ದೆಹಲಿ ಚಲೋ ಚಳವಳಿಯ ಹಿಂದೆ ರಾಜಕೀಯ ಹುನ್ನಾರವಿದೆ ಎಂದಿದ್ದಾರೆ. ನೈಜ ರೈತರು ಕಳೆದ ಆರು ತಿಂಗಳಲ್ಲಿ ಕೃಷಿ ಕಾಯ್ದೆಗಳಲ್ಲಿ ಕೈಗೊಂಡ ಸುಧಾರಣೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ರೈತರಲ್ಲಿ ಕೃಷಿ ಕಾಯ್ದೆಗಳ ಕುರಿತು ತಪ್ಪು ಮಾಹಿತಿ ಬಿತ್ತಲಾಗುತ್ತಿದೆ. ಕಾಂಗ್ರೆಸ್, ಆಪ್ ಸೇರಿದಂತೆ ವಿಪಕ್ಷಗಳು ಚಳವಳಿಯನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿವೆ ಎಂದು ಅವರು ಹೇಳಿದ್ದಾರೆ.
ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮುಂದುವರೆಯಲಿದೆ. ಅಲ್ಲದೇ, ಗುತ್ತಿಗೆ ಕೃಷಿಯಿಂದ ದೇಶದ ರೈತರಿಗೆ ಪ್ರಯೋಜನವಾಗಲಿದೆ ಎಂದು ಅವರು ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದಾರೆ.
18 ರೈತರಿಗೆ ಶ್ರದ್ಧಾಂಜಲಿ ಸಲ್ಲಿಕೆ
ಶಹೀದ್ ದಿವಸ್ ನಿಮಿತ್ತ ಚಳವಳಿಯಲ್ಲಿ ಮೃತಪಟ್ಟ 18 ರೈತರಿಗೆ ರೈತ ಒಕ್ಕೂಟಗಳು ಶ್ರದ್ಧಾಂಜಲಿ ಸಲ್ಲಿಸಿದವು. ಅಮೇರಿಕಾ ಮೂಲದ ಸರ್ಕಾರೇತರ ಸಂಸ್ಥೆಯೊಂದು ಚಳವಳಿ ನಿರತ ರೈತರಿಗೆ ಶೌಚಾಲಯ, ಗೀಸರ್ ಮತ್ತು ಟೆಂಟ್ಗಳನ್ನು ಕೊಡುಗೆಯಾಗಿ ನೀಡಿದೆ. ಹಿಂದ್ ಮಜ್ದೂರ್ ಕಿಸಾನ್ ಸಮಿತಿಯ ರೈತರು ಚಳವಳಿ ಸೇರಲು ಮೀರತ್ನಿಂದ ಟ್ರ್ಯಾಕ್ಟರ್ಗಳಲ್ಲಿ ಹೊರಟಿದ್ದಾರೆ. ಗಾಝಿಯಾಬಾದ್ ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಸೇರಲು ಹೊರಟ ಅವರ ಟ್ರ್ಯಾಕ್ಟರ್ ಮೆರವಣಿಗೆಯನ್ನು ಟ್ವಿಟರ್ನಲ್ಲಿ ಹಲವರು ಹಂಚಿಕೊಂಡಿದ್ದರು.
ಇದನ್ನೂ ಓದಿ: Delhi Chalo ಚಳವಳಿಯಲ್ಲಿ ಜೀವತೆತ್ತ 20ಕ್ಕೂ ಹೆಚ್ಚು ರೈತರ ಸಾವಿಗೆ ಏನು ಕಾರಣ?