Fact Check | ‘ಪಾಕ್ ಪತ್ರಕರ್ತ ಮೋದಿಯನ್ನು ವರ್ಣಿಸಿದ ರೀತಿ’ ಶೀರ್ಷಿಕೆಯ ವೈರಲ್ ವಿಡಿಯೊದ ಸತ್ಯಾಸತ್ಯತೆ ಏನು?
'ಪಾಕಿಸ್ತಾನದ ಪತ್ರಕರ್ತ ಮೋದಿಯವರನ್ನು ವರ್ಣಿಸಿದ ರೀತಿ' ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವಿಡಿಯೊದ ಫ್ಯಾಕ್ಟ್ ಚೆಕ್ ಇಲ್ಲಿದೆ.
ಬೆಂಗಳೂರು: ‘ಪಾಕಿಸ್ತಾನದ ಪತ್ರಕರ್ತ ಮೋದಿಯವರನ್ನು ವರ್ಣಿಸಿದ ರೀತಿ’ ಎಂಬ ಶೀರ್ಷಿಕೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗಿದೆ. 56 ಸೆಕೆಂಡ್ ಅವಧಿಯ ಈ ವಿಡಿಯೊ ತುಣುಕಿನಲ್ಲಿ ಹೇಳುವ ಮಾತು ಹೀಗಿದೆ.
‘5 ವರ್ಷಗಳ ಹಿಂದೆ ಯಾರೂ ತಿರುಗಿ ನೋಡದ, 10 ರಾಜ್ಯಗಳಲ್ಲಿ ಸೀಟು ಗೆಲ್ಲದೇ ಇದ್ದ ಪಕ್ಷವಾಗಿತ್ತು ಬಿಜೆಪಿ. ಆದರೆ ಒಬ್ಬ ವ್ಯಕ್ತಿ ಮುಂದೆ ಬಂದದ್ದೇ ಇಡೀ ದೃಶ್ಯ ಬದಲಾಗಿ ಬಿಟ್ಟಿತು. ಆ ವ್ಯಕ್ತಿ 5 ವರ್ಷಗಳಲ್ಲಿ ವಿಶ್ರಾಂತಿ ತೆಗೆದುಕೊಂಡಿಲ್ಲ. ಆತನನ್ನು ಯಾವ ಕಾಯಿಲೆಯೂ ಮುಟ್ಟಿಲ್ಲ. ಮೋದಿಯವರಿಗೆ ಶೀತ ಅಥವಾ ಕೆಮ್ಮು ಬಂದಿಲ್ಲ. ದೇಶದ ಬಗ್ಗೆ ಕನಸುಗಳನ್ನಿಟ್ಟುಕೊಂಡವರಿಗೆ ಯಾವ ರೋಗವೂ ಬಾಧಿಸುವುದಿಲ್ಲ’
ಆದರೆ ಈ ವಿಡಿಯೊದಲ್ಲಿ ಮಾತನಾಡುತ್ತಿರುವ ವ್ಯಕ್ತಿ ಪಾಕ್ ಪತ್ರಕರ್ತನಲ್ಲ. ಇಲ್ಲಿರುವ ವ್ಯಕ್ತಿ ಸ್ಫೂರ್ತಿದಾಯಕ ಮಾತುಗಾರ ಎಂದು ವಿಡಿಯೊ ಬಗ್ಗೆ ಫ್ಯಾಕ್ಟ್ ಚೆಕ್ ಮಾಡಿದ ಬೂಮ್ ಲೈವ್ ವರದಿ ಮಾಡಿದೆ.
ಫ್ಯಾಕ್ಟ್ ಚೆಕ್ ವಿಡಿಯೊದ ಶೀರ್ಷಿಕೆಯನ್ನು ಫೇಸ್ಬುಕ್ ನಲ್ಲಿ ಸರ್ಚ್ ಮಾಡಿದಾಗ ನವೆಂಬರ್ ತಿಂಗಳಿನಿಂದಲೇ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ವಿಡಿಯೊದಲ್ಲಿರುವ ವ್ಯಕ್ತಿ ಪಾಕಿಸ್ತಾನದ ಪತ್ರಕರ್ತ ಅಲ್ಲ. ಅಲ್ಲಿ ಮಾತನಾಡುತ್ತಿರುವ ವ್ಯಕ್ತಿ ಭಾರತದ ಸ್ಪೂರ್ತಿದಾಯಕ ಮಾತುಗಾರ (motivational speaker ) ಹರ್ಷ್ವರ್ಧನ್ ಜೈನ್.
ಈ ವಿಡಿಯೊದಲ್ಲಿನ ಕೆಲವು ಚಿತ್ರಗಳನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ವಿಡಿಯೊದಲ್ಲಿರುವುದು ಹರ್ಷ್ವರ್ಧನ್ ಜೈನ್ ಎಂಬುದು ತಿಳಿದು ಬಂದಿದೆ. ಯುಟ್ಯೂಬ್ ನಲ್ಲಿ ‘Harshvardhan Jain’, ‘Harshvardhan Jain Motivational Speaker’ ಎಂದು ಹುಡುಕಿದಾಗ ವೈರಲ್ ಆಗಿರುವ ವಿಡಿಯೊದ ಪೂರ್ತಿ ವಿಡಿಯೊ ಸಿಕ್ಕಿದೆ. ಹರ್ಷ್ವರ್ಧನ್ ಜೈನ್ 2020 ಆಗಸ್ಟ್ 14ರಂದು ಈ ವಿಡಿಯೊವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಿದ್ದರು.
‘Field Test: Must pass the exam’ ಎಂಬ ವಿಡಿಯೊದಲ್ಲಿ 1:41 ನಿಮಿಷಗಳ ನಂತರ ಹರ್ಷ್ವರ್ಧನ್ ಹೇಳುವ ಮಾತುಗಳೇ ಈ ವೈರಲ್ ಆಗಿರುವುದು.
ಬೂಮ್ ತಂಡವು ಹರ್ಷ್ವರ್ಧನ್ ಜೈನ್ ಅವರ ತಂಡದ ತ್ರಿಲೋಕ್ ಶರ್ಮಾ ಎಂಬವರಲ್ಲಿ ಮಾತನಾಡಿದ್ದು, ವೈರಲ್ ವಿಡಿಯೊದಲ್ಲಿರುವುದು ಹರ್ಷ್ವರ್ಧನ್ ಜೈನ್ ಎಂದು ಅವರು ದೃಢೀಕರಿಸಿದ್ದಾರೆ. ಜೈನ್ ಅವರ ತಂಡದಲ್ಲಿ ವಿತರಕರಾಗಿರುವ ತ್ರಿಲೋಕ್ ಶರ್ಮಾ ಅವರು ನೀಡಿದ ಮಾಹಿತಿಯಂತೆ, ಜೈನ್ ಅವರು ರಾಜಸ್ಥಾನದ ಜೈಪುರ ಮೂಲದವರು. ಅವರು ಸ್ಫೂರ್ತಿದಾಯಕ ಮಾತುಗಾರ, ತರಬೇತುದಾರ, ವ್ಯವಹಾರ ನಿರ್ವಹಣೆ ಸಲಹೆಹಾರ ಮತ್ತು ಲೀಡರ್ ಶಿಪ್ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
Fact Check: ಅದಾನಿ ಪತ್ನಿಗೆ ನಮಸ್ಕಾರ ಮಾಡಿದ್ರಾ ಪ್ರಧಾನಿ ನರೇಂದ್ರ ಮೋದಿ?
Published On - 7:25 pm, Sun, 20 December 20