ಸಚಿವ ರವಿಶಂಕರ್ ಪ್ರಸಾದ್, ಶಶಿ ತರೂರ್ ಖಾತೆಯನ್ನು ಲಾಕ್ ಮಾಡಿದ್ದಕ್ಕೆ ಟ್ವಿಟರ್ ಬಳಿ ವಿವರಣೆ ಕೇಳಿದ ಸಂಸದೀಯ ಸ್ಥಾಯಿ ಸಮಿತಿ
Twitter: ರವಿ ಶಂಕರ್ ಪ್ರಸಾದ್ ಅವರು ಯುಎಸ್ನ ಕಾಪಿರೈಟ್ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಟ್ವಿಟರ್ ಅವರ ವೈಯಕ್ತಿಕ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿತ್ತು. ಹಾಗೇ ಶಶಿ ತರೂರ್ ಟ್ವಿಟರ್ ಅಕೌಂಟ್ ಕೂಡ ಇದೇ ಕಾರಣಕ್ಕೆ ನಿರ್ಬಂಧವಾಗಿತ್ತು.
ನಾಲ್ಕು ದಿನಗಳ ಹಿಂದೆ (ಜೂ.26) ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿ ಶಂಕರ್ ಪ್ರಸಾದ್ ಮತ್ತು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ವೈಯಕ್ತಿಕ ಟ್ವಿಟರ್ ಖಾತೆಯನ್ನು ಯಾವ ಆಧಾರದ ಮೇಲೆ ಸ್ಥಗಿತಗೊಳಿಸಿದ್ದೀರಿ..ಸರಿಯಾದ ವಿವರಣೆ ಕೊಡಿ ಎಂದು ಮಾಹಿತಿ-ತಂತ್ರಜ್ಞಾನಕ್ಕೆ ಸಂಬಂಧಪಟ್ಟ ಸಂಸದೀಯ ಸ್ಥಾಯಿ ಸಮಿತಿ ಟ್ವಿಟರ್ನ್ನು ಕೇಳಿದೆ. ಈ ಬಗ್ಗೆ 48ಗಂಟೆಯೊಳಗೆ ಲಿಖಿತವಾಗಿ ವಿವರಣೆ ನೀಡುವಂತೆ ಟ್ವಿಟರ್ಗೆ ಸೂಚನೆ ನೀಡಿ ಎಂದು ಶಶಿ ತರೂರ್ ನೇತೃತ್ವದ ಸಂಸದೀಯ ಸ್ಥಾಯಿ ಸಮಿತಿ ಲೋಕಸಭಾ ಸಚಿವಾಲಯಕ್ಕೆ ಹೇಳಿದೆ ಎನ್ನಲಾಗಿದೆ. ನಿನ್ನೆ ಸಮಿತಿ ನಡೆಸಿದ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದ್ದು, ಅದರಲ್ಲಿ ಫೇಸ್ಬುಕ್ ಮತ್ತು ಗೂಗಲ್ ಪ್ರತಿನಿಧಿಗಳೂ ಇದ್ದರು ಎಂದು ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಟ್ವಿಟರ್ ರವಿಶಂಕರ್ ಪ್ರಸಾದ್ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದಂತೆ ಫೇಸ್ಬುಕ್ ಕೂಡ ಇದೇ ಕ್ರಮ ವಹಿಸಬಹುದೇ ಎಂದು ಸ್ಥಾಯಿ ಸಮಿತಿ ಸದಸ್ಯರು ಕೇಳಿದ್ದಕ್ಕೆ ಪ್ರತಿಕ್ರಿಯಿಸಿದ ಫೇಸ್ಬುಕ್ ಪ್ರತಿನಿಧಿ, ನಾವು ಖಂಡಿತ ಹಾಗೆಲ್ಲ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ ಇವರಿಬ್ಬರ ಟ್ವಿಟರ್ ಅಕೌಂಟ್ ಲಾಕ್ ಮಾಡಿದ್ದಕ್ಕೆ ಇನ್ನೆರಡು ದಿನಗಳಲ್ಲಿ ವಿವರಣೆ ನೀಡಬೇಕು ಎಂದು ಸಂಸದೀಯ ಸಮಿತಿ ಟ್ವಿಟರ್ಗೆ ಸೂಚಿಸಿದೆ.
ರವಿ ಶಂಕರ್ ಪ್ರಸಾದ್ ಅವರು ಯುಎಸ್ನ ಕಾಪಿರೈಟ್ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಟ್ವಿಟರ್ ಅವರ ವೈಯಕ್ತಿಕ ಖಾತೆಯನ್ನು ತಾತ್ಕಾಲಿಕವಾಗಿ ಲಾಕ್ ಮಾಡಿತ್ತು. ಹಾಗೇ ಶಶಿ ತರೂರ್ ಟ್ವಿಟರ್ ಅಕೌಂಟ್ ಕೂಡ ಇದೇ ಕಾರಣಕ್ಕೆ ನಿರ್ಬಂಧವಾಗಿತ್ತು. ಈ ಬಗ್ಗೆ ಶಶಿ ತರೂರ್ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಟ್ವಿಟರ್ ಭಾರತದಲ್ಲಿ ಕಾರ್ಯನಿರ್ವಹಿಸುವಾಗ ಅದರ ನಿಯಮಗಳು, ಕಾರ್ಯವಿಧಾನಗಳು ಹೇಗಿರಬೇಕು ಎಂಬುದನ್ನು ಅದರ ಬಳಿಯೇ ಕೇಳಬೇಕು ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು.
ಒಟ್ಟಾರೆ ಕೇಂದ್ರ ಸರ್ಕಾರ ಮತ್ತು ಟ್ವಿಟರ್ ನಡುವೆ ಒಂದಲ್ಲ ಒಂದು ಕಾರಣಕ್ಕೆ ಸಂಘರ್ಷ ಏರ್ಪಡುತ್ತಲೇ ಇದೆ. ಭಾರತದ ಭೂಪಟವನ್ನು ತಪ್ಪಾಗಿ ತೋರಿಸಿದ ಟ್ವಿಟರ್ ಇಂಡಿಯಾಕ್ಕೆ ಇದೀಗ ಕೇಂದ್ರ ಸರ್ಕಾರ ನೋಟಿಸ್ ನೀಡಿದೆ. ಟ್ವಿಟರ್ ಇಂಡಿಯಾದ ಮುಖ್ಯಸ್ಥ ಮನೀಶ್ ಮಹೇಶ್ವರಿ ವಿರುದ್ಧ ಉತ್ತರ ಪ್ರದೇಶದಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: Petrol Price Today: ಇಂದು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಬದಲಾವಣೆಗಳಿಲ್ಲ! ಪ್ರಮುಖ ನಗರಗಳಲ್ಲಿನ ಇಂಧನ ದರ ವಿವರ ಗಮನಿಸಿ
Parliamentary Standing Committee asked Twitter to explain why locked profile of Ravi Shankar Prasad