ಭಾರತಕ್ಕೆ ಆಮ್ಲಜನಕ, ವೆಂಟಿಲೇಟರ್ ಮತ್ತು ಪಿಪಿಇ ಕಿಟ್ ಕಳಿಸಿಕೊಡಲಿದೆ ಆಸ್ಟ್ರೇಲಿಯಾ
ಕೊವಿಡ್ ಪ್ರಕರಣಗಳು ದೇಶದಲ್ಲಿ ಹೆಚ್ಚುತ್ತಿರುವ ಕಾರಣದಿಂದಾಗಿ ಹೋರಾಡುತ್ತಿರುವ ದೇಶಕ್ಕೆ ಅಸ್ಟ್ರೇಲಿಯಾವು ಆಮ್ಲಜನಕ, ವೆಂಟಿಲೇಡರ್ ಮತ್ತು ವೈಯ್ಯಕ್ತಿಕ ರಕ್ಷಣಾ ಸಾಧನಗಳನ್ನು ಭಾರತಕ್ಕೆ ಕಳುಹಿಸುತ್ತದೆ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ತಿಳಿಸಿದ್ದಾರೆ.
ಭಾರತದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹೊತ್ತಲ್ಲೇ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಕಾಡುತ್ತಿದೆ. ಹೀಗಿರುವಾಗ ಆಸ್ಟ್ರೇಲಿಯಾವು ಆಮ್ಲಜನಕ, ವೆಂಟಿಲೇಟರ್ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು (ಪಿಪಿಇ ಕಿಟ್) ಭಾರತಕ್ಕೆ ಕಳುಹಿಸಲಿದೆ ಎಂದು ಆರೋಗ್ಯ ಸಚಿವ ಗ್ರೆಗ್ ಹಂಟ್ ಸೋಮವಾರ ತಿಳಿಸಿದ್ದಾರೆ. ‘ಭಾರತ ಅಕ್ಷರಶಃ ಆಮ್ಲಜನಕ ಸಂಗ್ರಹಣೆಗೆ ಹೋರಾಡುತ್ತಿದೆ ಎಂದು ಅಲ್ಲಿನ ಆರೋಗ್ಯ ಸಚಿವರು ಹೇಳಿದ್ದಾರೆ. ನಾವು ರಾಷ್ಟ್ರೀಯ ವೈದ್ಯಕೀಯ ಸಂಗ್ರಹಕ್ಕೆ ಸಹಾಯ ಮಾಡಲು ಮುಂದಾದಾಗ ಅವರ ವಿನಂತಿಯು ಆಮ್ಲಜನಕ ಪೂರೈಕೆಗೆ ಸಂಬಂಧಿಸಿದ ಸಹಾಯವಾಗಿದೆ ಎಂದು ಅವರು ಹೇಳಿದ್ದಾರೆ. ತಕ್ಷಣದ ನೆರವು ಎಂಬಂತೆ ಆಸ್ಟ್ರೇಲಿಯಾ ಭಾರತಕ್ಕೆ ಆಮ್ಲಜನಕ, ವೆಂಟಿಲೇಟರ್ ಮತ್ತು ವೈಯಕ್ತಿಕ ರಕ್ಷಣಾ ಸಾಧನಗಳನ್ನು ಕಳುಹಿಸಿಕೊಡುವುದರ ಬಗ್ಗೆ ಮಂಗಳವಾರ ನಿರ್ಧಾರ ಪ್ರಕಟಿಸಲಿದೆ ಎಂದು ಎಬಿಸಿ (Australian Broadcasting Corporation ) ವಾಹಿನಿ ವರದಿ ಮಾಡಿದೆ
ಭಾರತಕ್ಕೆ ಯಾವುದೇ ಸಹಾಯದ ಬಗ್ಗೆ ಚರ್ಚಿಸಲು ಸಚಿವ ಸಂಪುಟದ ರಾಷ್ಟ್ರೀಯ ಭದ್ರತಾ ಸಮಿತಿ ಮಂಗಳವಾರ ಸಭೆ ಸೇರಲಿದ್ದು, ಆಸ್ಟ್ರೇಲಿಯಾಕ್ಕೆ ಹರಡುವ ಸೋಂಕುಗಳ ಅಪಾಯವನ್ನು ಕಡಿಮೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತಾಗಿ ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ. ದೇಶದಲ್ಲಿ ಭಾರೀ ಪ್ರಮಾಣದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಭಾರತದಿಂದ ಎಲ್ಲಾ ವಿಮಾನ ಹಾರಾಟಗಳನ್ನು ನಿಷೇಧಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
ಈ ಕ್ರಮವು ಪ್ರಸ್ತುತ ಭಾರತದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆಡುತ್ತಿರುವ ಆಸ್ಟ್ರೇಲಿಯಾದ ಕ್ರಿಕೆಟಿಗರು ಸೇರಿದಂತೆ ಸಾವಿರಾರು ಜನರ ಮೇಲೆ ಪರಿಣಾಮ ಬೀರಬಹುದು. ಕಳೆದ ಕೆಲವು ದಿನಗಳಲ್ಲಿ 3,00,000 ಕ್ಕೂ ಹೆಚ್ಚು ಹೊಸ ಪ್ರಕರಣಗಳು ವರದಿಯಾಗುತ್ತಿರುವ ಭಾರತವು ಸಾಂಕ್ರಾಮಿಕ ರೋಗದ ಎರಡನೇ ಅಲೆಯೊಂದಿಗೆ ಹೋರಾಡುತ್ತಿದೆ. ಆಸ್ಪತ್ರೆಗಳು ಆಮ್ಲಜನಕದ ಕೊರತೆ ಮತ್ತು ಹಾಸಿಗೆ ವ್ಯವಸ್ಥೆ ಕೊರತೆಯಿಂದ ತತ್ತರಿಸಿ ಹೋಗಿದೆ. ಸೋಮವಾರ ಭಾರತದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 28 ಲಕ್ಷ ದಾಟಿ ಹೋಗಿದೆ. ಒಂದು ದಿನದಲ್ಲಿ 3,52,991 ಮಂದಿಗೆಕೊರೊನಾ ದೃಢಪಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಸ್ ವಿರುದ್ಧವೂ ಕೊವ್ಯಾಕ್ಸಿನ್ ಲಸಿಕೆ ಪರಿಣಾಮಕಾರಿ: ಐಸಿಎಂಆರ್