ವಾಟ್ಸ್ಯಾಪ್ ಗುಂಪಿನ ಸದಸ್ಯನ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಗ್ರೂಪ್ ಅಡ್ಮಿನ್ ಹೊಣೆಗಾರನಲ್ಲ: ಬಾಂಬೆ ಹೈಕೋರ್ಟ್
ಅರ್ಜುನಿ ಮೊರ್ಗನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಪ್ರಶ್ನಿಸಿ ಕಿಶೋರ್ ಚಿಂತಾಮನ್ ತರೋನೆ (33) ಹೆಸರಿನ ವ್ಯಕ್ತಿಯು ತನ್ನ ವಕೀಲ ರಾಜೇಂದ್ರ ಎಮ್ ಡಾಗಾ ಅವರ ಮೂಲಕ ಸಲ್ಲಿಸಿದ ಕ್ರಿಮಿನಲ್ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆಡ್ ಆ ಹಕ್ ಮತ್ತು ನ್ಯಾಯಮೂರ್ತಿ ಅಮಿತ್ ಎ ಬೊರ್ಕರ್ ಅವರನ್ನೊಳಗೊಂಡ ಪೀಠವು ಸದರಿ ಚಾರ್ಜ್ಶೀಟ್ ರದ್ದುಪಡಿಸಿತು
ಮುಂಬೈ: ವಾಟ್ಸ್ಯಾಪ್ ಗ್ರೂಪ್ ಒಂದರ ಸದಸ್ಯನೊಬ್ಬ ಆಕ್ಷೇಪಾರ್ಹ ವಿಷಯದ ಪೋಸ್ಟ್ ಹಾಕಿದರೆ ಅದಕ್ಕೆ ಗ್ರೂಪ್ ಅಡ್ಮಿನ್ ಹೊಣೆಗಾರನಾಗುವುದಿಲ್ಲವಾದರೂ, ಅಡ್ಮಿನ್ ಮತ್ತು ಅಂಥ ಸದಸ್ಯನ ನಡುವೆ ‘ಸಮಾನ ಉದ್ದೇಶ’ ಇದ್ದರೆ ಅಥವಾ ಅದು ‘ಅವರಿಬ್ಬರ ನಡುವೆ ಪೂರ್ವ ನಿಯೋಜಿತವಾಗಿದ್ದರೆ’ ಅಡ್ಮಿನ್ ಹೊಣೆಗಾರನಾಗುತ್ತಾನೆ ಎಂದು ಬಾಂಬೆ ಹೈಕೋರ್ಟ್ನ ನಾಗ್ಪುರ ಪೀಠ ಇತ್ತೀಚಿಗೆ ಹೇಳಿದೆ. ಜುಲೈ 2016ರಲ್ಲಿ, ಒಂದು ವಾಟ್ಸ್ಯಾಪ್ ಗ್ರೂಪ್ನ ಅಡ್ಮಿನ್ ಆಗಿದ್ದ 33 ವರ್ಷದ ವ್ಯಕ್ತಿಯೊಬ್ಬನ ವಿರುದ್ಧ ಗುಂಪಿನ ಸದಸ್ಯನೊಬ್ಬ ಅದೇ ಗುಂಪಿನ ಮಹಿಳೆಯೊಬ್ಬರನ್ನು ಕುರಿತು ಅಶ್ಲೀಲ ಪೋಸ್ಟ್ಗಳನ್ನೂ ಮಾಡಿದಾಗ್ಯೂ ಅವನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಒಂದು ಎಫ್ಐಆರ್ ಮತ್ತು ಗೊಂಡಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ಗೆ ಸಲ್ಲಿಸಲಾಗಿದ್ದ ಚಾರ್ಜ್ಶೀಟನ್ನು ನಾಗ್ಪುರ ಪೀಠವು ತಳ್ಳಿಹಾಕಿತು.
ತನ್ನ ವಿರುದ್ಧ ಅರ್ಜುನಿ ಮೊರ್ಗನಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎಫ್ಐಆರ್ ಅನ್ನು ಪ್ರಶ್ನಿಸಿ ಕಿಶೋರ್ ಚಿಂತಾಮನ್ ತರೋನೆ (33) ಹೆಸರಿನ ವ್ಯಕ್ತಿಯು ತನ್ನ ವಕೀಲ ರಾಜೇಂದ್ರ ಎಂ.ಡಾಗಾ ಅವರ ಮೂಲಕ ಸಲ್ಲಿಸಿದ ಕ್ರಿಮಿನಲ್ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆಡ್ ಆ ಹಕ್ ಮತ್ತು ನ್ಯಾಯಮೂರ್ತಿ ಅಮಿತ್ ಎ ಬೊರ್ಕರ್ ಅವರನ್ನೊಳಗೊಂಡ ಪೀಠವು ಸದರಿ ಚಾರ್ಜ್ಶೀಟ್ ರದ್ದುಪಡಿಸಿತು.
ವಾಟ್ಸ್ಯಾಪ್ ಗ್ರೂಪ್ನ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ಗ್ರಹಿಕೆಗೆ ತಂದುಕೊಂಡ ಪೀಠವು ಗ್ರೂಪ್ ಅಡ್ಮಿನ್ ಪಾತ್ರದ ಬಗ್ಗೆ ಈ ಆಭಿಪ್ರಾಯ ತಳೆಯಿತು: ‘ಒಂದು ಗ್ರೂಪನ್ನು ರಚಿಸಿದ ನಂತರ ಗ್ರೂಪಿನ ಅಡ್ಮಿನ್ನ ಕೆಲಸ ಗುಂಪಿಗೆ ಹೊಸ ಸದಸ್ಯರನ್ನು ಸೇರಿಸುವ ಮತ್ತು ಗುಂಪಿನಿಂದ ಯಾವುದಾದರೂ ಸದಸ್ಯನನ್ನು ತೆಗೆಯುವುದನ್ನು ಬಿಟ್ಟರೆ ಉಳಿದ ಸದಸ್ಯರಿಗಿಂತ ಭಿನ್ನವಾಗೇನೂ ಇರುವುದಿಲ್ಲ. ಅಡ್ಮಿನ್ಗೆ ಯಾವುದೇ ಸದಸ್ಯನ ಸಂದೇಶವನ್ನು ಪೋಸ್ಟ್ ಮಾಡುವ ಮೊದಲು ಅದನ್ನು ನಿಯಂತ್ರಿಸುವ, ತಿದ್ದುವ ಅಥವಾ ಸೆನ್ಸಾರ್ ಮಾಡುವ ಅಧಿಕಾರ ಇರುವುದಿಲ್ಲ. ಆದರೆ ಗ್ರೂಪಿನ ಸದಸ್ಯನೊಬ್ಬ ಆಕ್ಷೇಪಣಾರ್ಹ ಪೋಸ್ಟ್ಗಳನ್ನು ಮಾಡಿದರೆ ಅಂಥ ಸದಸ್ಯನ ವಿರುದ್ದ ಸಂಬಂಧಪಟ್ಟ ಕಾನೂನಿನನ್ವಯ ಕ್ರಮ ತೆಗೆದುಕೊಳ್ಳಬಹದಾಗಿದೆ’.
‘ಗ್ರೂಪ್ ಸದಸ್ಯರ ಪೋಸ್ಟ್ಗಳಿಗೆ ಸಂಬಂಧಿಸಿದಂತೆ ಅಡ್ಮಿನ್ನ ಹೊಣೆಗಾರಿಕೆ ಕುರಿತು ಮತ್ತಷ್ಟು ವಿವರವಾಗಿ ತನ್ನ ತೀರ್ಪಿನಲ್ಲಿ ತಿಳಿಸಿರುವ ಪೀಠವು, ‘ಅಡ್ಮಿನ್ನನ್ನು ತಪ್ಪಿತಸ್ಥ ಎಂದು ಪರಿಗಣಿಸಲಿ ಕಾನೂನಿನಲ್ಲಿ ಯಾವುದೇ ಆಸ್ಪದವಿಲ್ಲದಿರುವ ಹಿನ್ನೆಲೆಯಲ್ಲಿ ಅವನನ್ನು ಬೇರೆ ಸದಸ್ಯನ ಆಕ್ಷೇಪಾರ್ಹ ಪೋಸ್ಟ್ಗಳಿಗೆ ಹೊಣೆಗಾರನಾಗಿ ಮಾಡಲಾಗದು. ಒಂದು ಪಕ್ಷ ಅಂಥ ಸದಸ್ಯ ಮತ್ತು ಅಡ್ಮಿನ್ ಒಂದೇ ಉದ್ದೇಶ ಹೊಂದಿದವರಾಗಿದ್ದರೆ, ಅಥವಾ ಅವರ ನಡವೆ ಪೂರ್ವ ನಿಯೋಜಿತ ಒಡಂಬಡಿಕೆಯಾಗಿದ್ದರೆ, ಆಗ ಅವರಿಬ್ಬರೂ ಹೊಣೆಗಾರರಾಗುತ್ತಾರೆ ಮತ್ತು ಇಬ್ಬರ ವಿರುದ್ಧವೂ ಕ್ರಮ ಜರುಗಿಸಬಹುದಾಗಿದೆ’ ಎಂದು ಹೇಳಿದೆ.
‘ಗ್ರೂಪ್ ಅಡ್ಮಿನ್ ಅಂದ ಮಾತ್ರಕ್ಕೆ ತಪ್ಪಿತಸ್ಥ ಸದಸ್ಯನೊಂದಿಗೆ ಅವನ ಸಮಾನ ಉದ್ದೇಶ ಹೊಂದಿದ್ದಾನೆ ಎಂದು ಹೇಳಲಾಗದು. ಒಬ್ಬ ವ್ಯಕ್ತಿ ವಾಟ್ಸ್ಯಾಪ್ನಲ್ಲಿ ಗ್ರೂಪ್ ರಚಿಸುವಾಗ ಸದಸ್ಯನನ್ನಾಗಿ ಮಾಡಿಕೊಳ್ಳುವ ವ್ಯಕ್ತಿಯೊಬ್ಬನ ಕ್ರಿಮಿನಲ್ ಹಿನ್ನೆಲೆ ಬಗ್ಗೆ ಜ್ಞಾನ ಹೊಂದಿರುವುದಿಲ್ಲ’ ಎಂದು ಪೀಠವು ಹೇಳಿದೆ.
ಸದರಿ ಪ್ರಕರಣದ ತೀರ್ಪನ್ನು ಬರೆದಿರುವ ನ್ಯಾಯಮೂರ್ತಿ ಬೊರ್ಕರ್ ಅವರು, ‘ಈ ಪ್ರಕರಣದಲ್ಲಿ ಲಭ್ಯವಾಗಿರುವ ಸತ್ಯಾಂಶಗಳ ಆಧಾರದಲ್ಲಿ ನಮ್ಮ ಅಭಿಪ್ರಾಯವೇನೆಂದರೆ, ಸದಸ್ಯನೊಬ್ಬ ಲೈಂಗಿಕ ಲೇಪದ ಕಾಮೆಂಟ್ಗಳನ್ನು ಮಾಡಿದಾಗ್ಯೂ ಆವನನ್ನು ಗುಂಪಿನಿಂದ ತೆಗೆದುಹಾಕದಿರುವುದು ಇಲ್ಲವೇ ಅವನಿಂದ ಕ್ಷಮಾಪಣೆ ಕೇಳದಿರುವುದು ಅಡ್ಮಿನ್ನನ್ನು ತಪ್ಪಿತಸ್ಥನ ಸ್ಥಾನದಲ್ಲಿ ನಿಲ್ಲಿಸುವುದಿಲ್ಲ,’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಮಹಾರಾಷ್ಟ್ರ
ಇದನ್ನೂ ಓದಿ: Explainer: ಬಯೋ ಬಬಲ್‌ನಲ್ಲಿ ಇದ್ದರೂ ಐಪಿಎಲ್ ಕ್ರಿಕೆಟಿಗರನ್ನು ಕಾಡುತ್ತಿದೆ ಕೊವಿಡ್19 ಆತಂಕ! ಕಾರಣವೇನು?
Published On - 5:33 pm, Mon, 26 April 21