Explainer: ಬಯೋ ಬಬಲ್‌ನಲ್ಲಿ ಇದ್ದರೂ ಐಪಿಎಲ್ ಕ್ರಿಕೆಟಿಗರನ್ನು ಕಾಡುತ್ತಿದೆ ಕೊವಿಡ್19 ಆತಂಕ! ಕಾರಣವೇನು?
ಫ್ರಾಂಚೈಸಿ ಅಧಿಕಾರಿಯೊಬ್ಬರ ಪ್ರಕಾರ, ತಂಡದಲ್ಲಿ ಆಫ್-ದಿ-ಫೀಲ್ಡ್ ಸಂಭಾಷಣೆಗಳ ಬಹುತೇಕ ಭಾಗ ಹೊರಗಿನ ಪರಿಸ್ಥಿತಿಯ ಸುತ್ತ ಸುತ್ತುತ್ತದೆ. ತಂಡದಲ್ಲಿ ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳ ಹತ್ತಿರದ ಸಂಬಂಧಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಭಾರತ ತಂಡದ ಹೆಸರಾಂತ ಬೌಲರ್, ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಐಪಿಎಲ್ 2021 ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸುವ ತೀರ್ಮಾನ ಕೈಗೊಂಡಿದ್ದಾರೆ. ತಮ್ಮ ಕುಟುಂಬಕ್ಕೆ ಕೊವಿಡ್-19 ವಿರುದ್ಧ ಹೋರಾಡಲು ನೈತಿಕ ಸ್ಥೈರ್ಯ ನೀಡುವ ಉದ್ದೇಶದಿಂದ ಅವರು ಐಪಿಎಲ್ ಟೂರ್ನಿಯಿಂದ ಅರ್ಧಕ್ಕೆ ಹಿಂತಿರುಗುವ ನಿರ್ಧಾರ ಮಾಡಿದ್ದಾರೆ. ಜೊತೆಗೆ, ಮೂವರು ಆಸ್ಟ್ರೇಲಿಯಾ ಕ್ರಿಕೆಟಿಗರು ಕೂಡ ಐಪಿಎಲ್ ಟೂರ್ನಿಯಿಂದ ಖಾಸಗಿ ಕಾರಣಗಳನ್ನು ನೀಡಿ ಹೊರನಡೆದಿದ್ದಾರೆ. ಓರ್ವ ಇಂಗ್ಲೆಂಡ್ ಕ್ರಿಕೆಟಿಗ ಬಬಲ್ ಫ್ಯಾಟಿಗ್ ಕಾರಣ ನೀಡಿ ಆಟದಿಂದ ಹಿಂದೆ ಸರಿದಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದ ನಂತರ, ಹಿರಿಯ ಆಫ್ ಸ್ಪಿನ್ನರ್ ಟ್ವೀಟ್ ಮಾಡಿದ್ದಾರೆ. ನಾನು ಈ ವರ್ಷದ ಐಪಿಎಲ್‌ಗೆ ನಾಳೆಯಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ನನ್ನ ಕುಟುಂಬವು ಕೊವಿಡ್ ವಿರುದ್ಧ ಹೋರಾಡುತ್ತಿದೆ. ಮತ್ತು ಈ ಕಠಿಣ ಸಮಯದಲ್ಲಿ ನಾನು ಅವರನ್ನು ಬೆಂಬಲಿಸಲು ಬಯಸುತ್ತೇನೆ. ವಿಚಾರಗಳು ಅಂದುಕೊಂಡಂತೆ ಆದರೆ ಮತ್ತೆ ಆಟಕ್ಕೆ ಮರಳಬೇಕೆಂದು ನಿರೀಕ್ಷಿಸುತ್ತೇನೆ. ಧನ್ಯವಾದಗಳು ಡೆಲ್ಹಿ ಕ್ಯಾಪಿಟಲ್ಸ್ ಎಂದು ಟ್ವೀಟ್ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಅಶ್ವಿನ್ ಪತ್ನಿ ಪ್ರೀತಿ ವೈರಸ್ ತಮ್ಮ ಮನೆ ಬಾಗಿಲಿಗೆ ತಲುಪಿದೆ ಎಂದು ತಿಳಿಸಿದ್ದರು.
ಫ್ರಾಂಚೈಸಿ ಅಧಿಕಾರಿಯೊಬ್ಬರ ಪ್ರಕಾರ, ತಂಡದಲ್ಲಿ ಆಫ್-ದಿ-ಫೀಲ್ಡ್ ಸಂಭಾಷಣೆಗಳ ಬಹುತೇಕ ಭಾಗ ಹೊರಗಿನ ಪರಿಸ್ಥಿತಿಯ ಸುತ್ತ ಸುತ್ತುತ್ತದೆ. ತಂಡದಲ್ಲಿ ಆಟಗಾರರು ಅಥವಾ ಸಹಾಯಕ ಸಿಬ್ಬಂದಿಗಳ ಹತ್ತಿರದ ಸಂಬಂಧಿಗಳು ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಈ ಸನ್ನಿವೇಶವನ್ನು ನಿಭಾಯಿಸುವುದು ಸುಲಭವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಯೋ ಬಬಲ್ ಬದುಕು ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಲಿವಿಂಗ್‌ಸ್ಟನ್ ಬಯೋ ಬಬಲ್‌ನ ಆಯಾಸವನ್ನು ಉಲ್ಲೇಖಿಸಿ ಮನೆಗೆ ಮರಳಿದ್ದಾರೆ. ಲಿವಿಂಗ್‌ಸ್ಟನ್ ನಿರ್ಧಾರವನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಗೌರವಿಸುತ್ತೇವೆ. ನಾವು ಎಲ್ಲಾ ರೀತಿಯಲ್ಲಿ ಅವರಿಗೆ ಬೆಂಬಲ ನೀಡುತ್ತೇವೆ ಎಂದು ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿಕೊಂಡಿದೆ. ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರು ಕೂಡ ಈ ಬಯೋ ಬಬಲ್ ಬದುಕು ಎಷ್ಟು ಮಾನಸಿಕ ಒತ್ತಡ ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ. ಬಯೋ ಬಬಲ್ ಆಯಾಸ ಉಲ್ಲೇಖಿಸಿ ಹಲವು ಇಂಗ್ಲೆಂಡ್ ಆಟಗಾರರು ಟೂರ್ನಿಯಿಂದ ಹೊರಗುಳಿದಿದ್ದರು.
ಶನಿವಾರ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ಹೆಡ್ ಕೋಚ್ ರಿಕಿ ಪಾಂಟಿಂಗ್, ಬಯೋ ಬಬಲ್‌ನ ಒಳಗಿರುವ ಜನರು ಬಹುಶಃ ಅತ್ಯುತ್ತಮ ರಕ್ಷಣೆ ಹೊಂದಿರುವವರಾಗಿದ್ದಾರೆ ಎಂದಿದ್ದಾರೆ. ಅದರ ಜೊತೆಗೆ, ಆದರೆ ಬಯೋ ಬಬಲ್‌ನ ಹೊರಗೆ ಏನಾಗುತ್ತಿದೆ ಎಂಬುದು ಕೂಡ ಮುಖ್ಯ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸಹಿತ ಹಲವು ದೇಶಗಳು ಭಾರತಕ್ಕೆ ವಿಮಾನ ಹಾರಾಟ ಸಂಖ್ಯೆಯನ್ನು ಕಡಿಮೆ ಮಾಡಿವೆ. ಇದರಿಂದ ಹಲವು ಕ್ರಿಕೆಟಿಗರು ಐಪಿಎಲ್ ಮುಗಿಸಿ ಮನೆಗೆ ಮರಳುವ ಬಗ್ಗೆ ಗೊಂದಲಕ್ಕೀಡಾಗಿದ್ದಾರೆ ಎಂದು ಹೇಳಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ ಸಹ ಕೋಚ್ ಡೇವಿಡ್ ಹಸ್ಸಿ, ಆಟಗಾರರು ಹೇಗೆ ಒತ್ತಡ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಯಾರೆಲ್ಲಾ ಐಪಿಎಲ್‌ನಿಂದ ಅರ್ಧಕ್ಕೆ ಮರಳಿದ್ದಾರೆ? ಸದ್ಯದ ಮಟ್ಟಿಗೆ ಐದು ಆಟಗಾರರು ಐಪಿಎಲ್‌ನಿಂದ ವಾಪಸ್ ಆಗಿದ್ದಾರೆ. ಡೆಲ್ಲಿ ತಂಡದ ಆರ್. ಅಶ್ವಿನ್, ರಾಜಸ್ಥಾನ್ ರಾಯಲ್ಸ್ ತಂಡದ ಸೀಮರ್ ಆಂಡ್ರ್ಯೂ ಟೈ ಮತ್ತು ತಂಡದ ಸಹ ಆಟಗಾರ ಲಿಯಾಮ್ ಲಿವಿಂಗ್ಸ್ಟನ್ ಮನೆಗೆ ಮರಳಿದ್ದಾರೆ. ಸೋಮವಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್ ಹ್ಯಾಂಡಲ್ ಮೂಲಕ ಲೆಗ್ ಸ್ಪಿನ್ನರ್ ಆಡಮ್ ಜಂಪಾ ಮತ್ತು ಆಲ್‌ರೌಂಡರ್ ಕೇನ್ ರಿಚರ್ಡ್‌ಸನ್ ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ ಎಂದು ತಿಳಿಸಿದ್ದಾರೆ.
ಚೆನ್ನೈ ಮತ್ತು ಮುಂಬೈನ ಕ್ರಿಕೆಟ್ ಗ್ರೌಂಡ್ ಪಂದ್ಯಗಳ ಬಳಿಕ ಮುಂದಿನ ಪಂದ್ಯಗಳಿಗಾಗಿ ತಂಡಗಳು ದೆಹಲಿ, ಅಹಮದಾಬಾದ್, ಬೆಂಗಳೂರು, ಕೋಲ್ಕತ್ತಾಗೆ ಹೊರಡಲಿವೆ. ಬುಧವಾರದ ಪಂದ್ಯ ದೆಹಲಿಯಲ್ಲಿ ನಡೆಯಲಿದೆ. ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಡುವೆ ಐಪಿಎಲ್ ಹೀಗೆ ನಡೆಯುತ್ತಿದೆ, ಆಟಗಾರರು ಬಯೋ ಬಬಲ್‌ನಲ್ಲೂ ಒಂದಷ್ಟು ಒತ್ತಡಗಳನ್ನು ಅನುಭವಿಸುತ್ತಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ಕೊಹ್ಲಿ ನಿರ್ಧಾರಗಳೇ ಆರ್ಸಿಬಿ ಸೋಲಿಗೆ ಕಾರಣ | 5 ತಪ್ಪು ನಿರ್ಧಾರಗಳಿಂದ ಸೋಲು ಕಂಡ ಆರ್ಸಿಬಿ
Published On - 5:18 pm, Mon, 26 April 21