ಕೋವಿಡ್ ವಿರುದ್ಧ ಸಮರ: ಪ್ರಧಾನಿ ಮೋದಿ ಮತ್ತು ಸಿಡಿಎಸ್ ರಾವತ್ ನಡುವೆ ಸಶಸ್ತ್ರ ದಳಗಳ ಸಿದ್ಧತೆ ಬಗ್ಗೆ ಚರ್ಚೆ
ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿರುವ ಮತ್ತು ಸೇವಾವಧಿಗೆ ಮುನ್ನವೇ ರಿಟೈರ್ ಆಗಿರುವ ಸಶಸ್ತ್ರ ದಳಗಳ ವೈದ್ಯಕೀಯ ಸಿಬ್ಬಂದಿಯನ್ನು ಅವರೀಗ ನೆಲೆಸಿರುವ ಇಲ್ಲವೇ ಹತ್ತಿರದ ಸ್ಥಳಗಳಲ್ಲಿರುವ ಕೊವಿಡ್ ಕೇರ್ ಸೆಂಟರ್ಗಳಲ್ಲಿ ಕಾರ್ಯನಿರ್ವಹಿಸಲು ವಾಪಸ್ಸು ಕರೆಸಲಾಗಿದೆಯೆಂದು ಸಿಡಿಎಸ್ ಪ್ರಧಾನಿಗಳಿಗೆ ಹೇಳಿದರು.
ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಸೋಮವಾರದಂದು ರಕ್ಷಣಾ ದಳಗಳ ಮುಖ್ಯಸ್ಥ (ಸಿಡಿಎಸ್) ಬಿಪಿನ್ ರಾವತ್ ಅವರನ್ನು ಭೇಟಿಯಾಗಿ ಕೊವಿಡ್-19 ಪಿಡುಗು ದೇಶದಲ್ಲಿ ಸೃಷ್ಟಿಸಿರುವ ಹಾಹಾಕಾರದ ಹಿನ್ನೆಲೆಯಲ್ಲಿ ರಕ್ಷಣಾ ದಳಗಳು ಮಾಡಿಕೊಂಡಿರುವ ಸಿದ್ಧತೆ ಮತ್ತು ನಡೆಸುತ್ತಿರುವ ಕಾರ್ಯಾಚರಣೆ ಬಗ್ಗೆ ಪರಿಶೀಲನೆ ನಡೆಸಿದರು.
ಎರಡು ವರ್ಷಗಳ ಹಿಂದೆ ನಿವೃತ್ತಿ ಹೊಂದಿರುವ ಮತ್ತು ಸೇವಾವಧಿಗೆ ಮುನ್ನವೇ ರಿಟೈರ್ ಆಗಿರುವ ಸಶಸ್ತ್ರ ದಳಗಳ ವೈದ್ಯಕೀಯ ಸಿಬ್ಬಂದಿಯನ್ನು ಅವರೀಗ ನೆಲೆಸಿರುವ ಇಲ್ಲವೇ ಹತ್ತಿರದ ಸ್ಥಳಗಳಲ್ಲಿರುವ ಕೊವಿಡ್ ಕೇರ್ ಸೆಂಟರ್ಗಳಲ್ಲಿ ಕಾರ್ಯನಿರ್ವಹಿಸಲು ವಾಪಸ್ಸು ಕರೆಸಲಾಗಿದೆಯೆಂದು ಸಿಡಿಎಸ್ ಪ್ರಧಾನಿಗಳಿಗೆ ಹೇಳಿದರು. ‘ಎರಡು ವರ್ಷಗಳಿಗಿಂತ ಮೊದಲು ನಿವೃತ್ತಿ ಹೊಂದಿರುವ ವೈದ್ಯಾಧಿಕಾರಿಗಳಿಗೂ ವೈದ್ಯಕೀಯ ಸೇವೆಗಳ ತುರ್ತು ಸಹಾಯವಾಣಿಗಳ ಮೂಲಕ ಸಲಹೆಗಳನ್ನು ನೀಡಿ ಸೇವೆ ಒದಗಿಸುವಂತೆ ಮನವಿ ಮಾಡಲಾಗಿದೆ,’ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
ಸ್ಟಾಫ್ ನೇಮಕಾತಿಯ ಮೇಲಿರುವ ಮೂರು ಸೇನೆಗಳ ಎಲ್ಲಾ ವೈದ್ಯಾಧಿಕಾರಿಗಳಿಗೆ ಕಮಾಂಡ್ ಹೆಡ್ಕ್ವಾರ್ಟರ್ಸ್, ಕಾರ್ಪ್ಸ್ ಹೆಡ್ಕ್ವಾರ್ಟರ್ಸ್, ವಿಭಾಗೀಯ ಹೆಡ್ಕ್ವಾರ್ಟರ್ಸ್ ಮತ್ತು ನೌಕಾ ಹಾಗೂ ವಾಯುದಳಕ್ಕೆ ಸಂಬಂಧಿಸಿದ ಆಸ್ಪತ್ರೆಗಳಿಗೆ ನಿಯೋಜಿಸಲಾಗುವುದೆಂದು ಪ್ರಧಾನ ಮಂತ್ರಿಗಳಿಗೆ ಈ ಸಂದರ್ಭದಲ್ಲಿ ತಿಳಿಸಲಾಯಿತು.
ವೈದ್ಯರೊಂದಿಗೆ ಭಾರಿ ಪ್ರಮಾಣದಲ್ಲಿ ನರ್ಸಿಂಗ್ ಸಿಬ್ಬಂದಿಯನ್ನು ಸಹ ಕೊವಿಡ್ ಆಸ್ಪತ್ರೆಗಳಲ್ಲಿ ಕೆಲಸ ಮಾಡಲು ರವಾನಿಸಲಾಗಿದೆ ಹಾಗೂ ರಕ್ಷಣಾ ದಳಗಳ ಬೇರೆ ಬೇರೆ ವಿಭಾಗಗಳಲ್ಲಿ ಲಭ್ಯವಿರುವ ಆಮ್ಲಜನಕದ ಸಿಲಿಂಡರ್ಗಳನ್ನು ಬಿಡುಗಡೆ ಮಾಡಲಾಗುವುದೆಮದು ರಾವತ್ ಅವರು ಪ್ರಧಾನಿಗಳ ಗಮನಕ್ಕೆ ತಂದರು. ಸಾಕಷ್ಟು ದೊಡ್ಡ ಪ್ರಮಾಣದಲ್ಲಿರುವ ಸೇನೆಯ ಎಲ್ಲ ವೈದ್ಯಕೀಯ ಸೌಲಭ್ಯಗಳನ್ನು ನಾಗರಿಕರಿಗೆ ಒದಗಿಸಲಾಗುವುದೆಂದು ಸಿಡಿಎಸ್ ಪ್ರಧಾನಿ ಮೋದಿಯವರಿಗೆ ತಿಳಿಸಿದರು.
ಭಾರತ ಮತ್ತು ಬೇರೆ ದೇಶಗಳಿಂದ ಆಕ್ಸಿಜನ್ ಸಿಲಿಂಡರ್ಗಳು ಮತ್ತು ಇತರ ವೈದ್ಯಕೀಯ ಸಲಕರಣೆಗಳನ್ನು ಅಗತ್ಯವಿರುವ ಸ್ಥಳಗಳಿಗೆ ತಲುಪಿಸುತ್ತಿರುವ ಭಾರತೀಯ ವಾಯು ಸೇನೆಯ ಕಾರ್ಯಾಚರಣೆಯನ್ನು ಸಹ ಪ್ರಧಾನಿಗಳು ಪರಿಶೀಲಿಸಿದರು.
ಕೇಂದ್ರೀಯ ಮತ್ತು ರಾಜ್ಯ ಸೈನಿಕರ ಕ್ಷೇಮಾಭಿವೃದ್ಧಿ ಸಂಸ್ಥೆಗಳು ಹಿರಿಯ ಸೇನಾನಿಗಳ ಸೆಲ್ಗಳಲ್ಲಿ ನಿಯುಕ್ತಿಗೊಂಡಿರುವ ಅಧಿಕಾರಿಗಳಿಗೆ ನಿವೃತ್ತ ಯೋಧರ ಸೇವೆಯನ್ನು ಬಳಸಿಕೊಂಡು ತೀರ ಕುಗ್ರಾಮದಂಥ ಪ್ರದೇಶಗಳಲ್ಲೂ ವೈದ್ಯಕೀಯ ನೆರವು ಸಿಗುವಂತಾಗುವದನ್ನು ಖಾತರಿಪಡಿಸಿಕೊಳ್ಳುವಂತೆ ನಿರ್ದೇಶಿಸುವ ಕುರಿತು ಸಿಡಿಎಸ್ ಅವರೊಂದಿಗೆ ಪ್ರಧಾನಿಗಳು ಚರ್ಚಿಸಿದರು.
ಇದನ್ನೂ ಓದಿ: karnataka Covid Curfew: ರಾಜ್ಯದಲ್ಲಿ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ ಸಿಎಂ ಯಡಿಯೂರಪ್ಪ
ಇದನ್ನೂ ಓದಿ: ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ?
Published On - 7:28 pm, Mon, 26 April 21