ನವೆಂಬರ್ 2022 ರಲ್ಲಿ ಅಂದಿನ ಮುಖ್ಯಮಂತ್ರಿ ಕೆ ಚಂದ್ರಶೇಖರ್ರಾವ್ ಅವರು ತಮ್ಮ ಅಧಿಪತ್ಯದ ಅಂದಿನ ತೆಲಂಗಾಣ ರಾಷ್ಟ್ರ ಸಮಿತಿ ರಾಜಕೀಯ ಪಕ್ಷವನ್ನು ಭಾರತ ರಾಷ್ಟ್ರ ಸಮಿತಿ ಎಂದು ಬದಲಾಯಿಸಿದರು. ಹೆಸರು ಬದಲಾಯಿಸುವ ವೇಳೆ ಕಾರ್ಯಕರ್ತರಲ್ಲಿ ಅ ಬಗ್ಗೆ ವಿಭಿನ್ನ ವಾದಗಳು, ಅಸಮಾಧಾನ ಕೇಳಿ ಬಂದವು. ಜನರ ಭಾವನೆಗಳಿಂದ ಪಕ್ಷ ದೂರವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಆದರೂ ಮಹಾರಾಷ್ಟ್ರ, ಕರ್ನಾಟಕ, ಮಧ್ಯಪ್ರದೇಶ ಮತ್ತು ದೆಹಲಿಯಂತಹ ರಾಜ್ಯಗಳಲ್ಲಿ ಪಕ್ಷವನ್ನು ವಿಸ್ತರಿಸಲು ಪಕ್ಷದ ನಾಯಕತ್ವವು ಪಕ್ಷದ ಹೆಸರನ್ನು ಬದಲಾಯಿಸುವ ಕಾರ್ಯತಂತ್ರವನ್ನು ಅಳವಡಿಸಿಕೊಂಡಿತು.
ತೆಲಂಗಾಣ ರಾಷ್ಟ್ರ ಸಮಿತಿ ಎಂಬ ಹೆಸರಿದ್ದರೆ ಬೇರೆ ರಾಜ್ಯಗಳಲ್ಲಿ ಪಕ್ಷ ಪ್ರವೇಶ ಮಾಡುವುದು ಅಸಾಧ್ಯ ಎಂದು ಪಕ್ಷದ ನಾಯಕತ್ವ ಅಂದು ಭಾವಿಸಿತು. ತೆಲಂಗಾಣ ಹೆಸರು ತೆಗೆದು ಭರತ್ ಹೆಸರನ್ನು ಪಕ್ಷಕ್ಕೆ ಸೇರಿಸಿದರು. ಇದರಿಂದ 2022-23 ರಲ್ಲಿ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಗಳನ್ನು ನಡೆಸಲಾಯಿತು ಮತ್ತು ನಾಂದೇಡ್, ನಾಗ್ಪುರ ಮತ್ತು ಸೋಲಾಪುರದಲ್ಲಿ ಪಕ್ಷದ ಕಚೇರಿಗಳನ್ನು ತೆರೆಯಲಾಯಿತು. ದೇಶದ ರಾಜಧಾನಿ ದೆಹಲಿಯಲ್ಲಿ ಪಕ್ಷದ ಕೇಂದ್ರ ಕಚೇರಿಯನ್ನೂ ನಿರ್ಮಿಸಲಾಯಿತು.
ಇದನ್ನೂ ಓದಿ: ಬೆಂಗಳೂರು ಸೇರಿ ಕರ್ನಾಟಕದ ವಿವಿಧ ಕಡೆಯಿಂದ ಅಯೋಧ್ಯೆಗೆ 11 ವಿಶೇಷ ರೈಲು
ಏತನ್ಮಧ್ಯೆ, ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರ ಸಮಿತಿಯು ಸೋತಿದೆ. ಕಳೆದೊಂದು ವಾರದಿಂದ ಸಂಸತ್ ಚುನಾವಣೆ ಹಿನ್ನೆಲೆಯಲ್ಲಿ ಸಂಸದೀಯ ಕ್ಷೇತ್ರಗಳ ಸದಸ್ಯರಿಗಾಗಿ ಪರಿಶೀಲನಾ ಸಭೆ ನಡೆಸಲಾಗುತ್ತಿದೆ. ಸೋಲಿನ ಪೋಸ್ಟ್ಮಾರ್ಟಂ ಚಿಂತನಾ ಸಭೆ ನಡೆಸುವುದರ ಜತೆಗೆ ಮುಂಬರುವ ಚುನಾವಣೆಯತ್ತ ಗಮನ ಹರಿಸಲು ಸಭೆ ನಡೆಸಲಾಗುತ್ತಿದೆ. ಆದರೆ, ಪಕ್ಷದ ಹೆಸರು ಬದಲಿಸಿದ್ದರಿಂದಲೇ ಸಮಸ್ಯೆಗಳು ಉದ್ಭವಿಸಿ, ಸೋಲಿಗೆ ಸೋಪಾನವಾಯಿತು ಎಂದು ಬಹುತೇಕ ಕಾರ್ಯಕರ್ತರು ತಮ್ಮ ಖಡಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಮಾಜಿ ಸಚಿವರಾದ ಕೆ.ಟಿ. ರಾವ್, ಹರೀಶ್ ರಾವ್ ಅವರ ಸಮ್ಮುಖದಲ್ಲಿ ಕಾರ್ಯಕರ್ತರು, ಸ್ಥಳೀಯ ಮುಖಂಡರು ಮತ್ತೊಮ್ಮೆ ತೆಲಂಗಾಣ ರಾಷ್ಟ್ರ ಸಮಿತಿ ಎಂದು ಪಕ್ಷದ ಹೆಸರನ್ನು ಬದಲಾಯಿಸಿದರೆ ಯಶಸ್ವಿಯಾಗುತ್ತೇವೆ ಎಂದು ಬಹಿರಂಗವಾಗಿ ಹೇಳಿದರು. ತೆಲಂಗಾಣ ಪದವನ್ನು ಪಕ್ಷದಿಂದ ತೆಗೆದ ನಂತರ ಜನರ ಭಾವನೆಯೂ ಕೈತಪ್ಪಿದಂತಾಗಿದೆ ಎಂದು ಹಲವರು ವಿಶ್ಲೇಷಿಸಿದ್ದಾರೆ. ಇವನ್ನೆಲ್ಲ ಪಕ್ಷದ ಹಿರಿಯ ನಾಯಕರ ಗಮನಕ್ಕೆ ತರುವುದಾಗಿ ಸಭೆಯಲ್ಲಿ ಭಾಗವಹಿಸಿದ್ದ ಇತರೆ ನಾಯಕರು ಭರವಸೆ ನೀಡಿದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ