ದೆಹಲಿ: ಪೆಗಾಸಸ್ ಸ್ಪೈವೇರ್ ಮೂಲಕ ತಮ್ಮ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂಬ ಅನುಮಾನ ಇರುವವರು ತಮ್ಮನ್ನು ಜನವರಿ 7ರ ಮಧ್ಯಾಹ್ನದ ಒಳಗೆ ಸಂಪರ್ಕಿಸಬೇಕು ಎಂದು ಸುಪ್ರೀಂಕೋರ್ಟ್ ರಚಿಸಿರುವ ಸಮಿತಿಯು ಸೂಚಿಸಿದೆ. ತಮ್ಮ ಮೊಬೈಲ್ಗೆ ಪೆಗಾಸಸ್ ಸ್ಪೈವೇರ್ ಬಂದಿದೆ ಎಂದು ಅನುಮಾನಿಸಲು ಸಮರ್ಪಕ ಕಾರಣಗಳು ಇರುವ ಭಾರತದ ಯಾವುದೇ ನಾಗರಿಕ ಸಮಿತಿಯ ಎದುರು ತನ್ನ ಅಹವಾಲು ಸಲ್ಲಿಸಬಹುದು ಎಂದು ಸಮಿತಿಯು ಸೂಚಿಸಿದೆ. ನಿಮ್ಮ ಮೊಬೈಲ್ ಪರಿಶೀಲಿಸಲು ತಾಂತ್ರಿಕ ಸಮಿತಿಗೆ ಅವಕಾಶ ಕೊಡುತ್ತೀರಾ ಎಂಬುದನ್ನು ಸ್ಪಷ್ಟವಾಗಿ ತಿಳಿಸಬೇಕು ಎಂದು ಮೂವರು ಸದಸ್ಯರ ಸಮಿತಿಯು ಕೆಲ ಪ್ರಮುಖ ದಿನ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತಿನಲ್ಲಿ ಸ್ಪಷ್ಟಪಡಿಸಿದೆ. ಜನರು ನೀಡುವ ಕಾರಣಗಳು ಪರಿಶೀಲನೆಗೆ ಅರ್ಹ ಎನಿಸಿದರೆ ಸಮಿತಿಯು ಫೋನ್ಗಳನ್ನು ತಪಾಸಣೆಗೆ ನೀಡುವಂತೆ ವಿನಂತಿಸಬಹುದು
ಸಮಿತಿಯು ಅರ್ಜಿದಾರರು ಮತ್ತು ಅವರ ವಕೀಲರಿಗೆ ಪೆಗಾಸಸ್ ಸ್ಪೈವೇರ್ನಿಂದ ಕಣ್ಗಾವಲು ಇರಿಸಲಾಗಿದೆ ಎಂಬ ಅನುಮಾನವಿದ್ದರೆ ಅವರ ಸಾಧನಗಳನ್ನು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಸಮಿತಿಗೆ ಒಪ್ಪಿಸಬೇಕು ಎಂದು ಸಮಿತಿಯು ಈ ಹಿಂದೆ, ನವೆಂಬರ್ 30ರಂದು ತಿಳಿಸಿತ್ತು.
ಸಮಿತಿಯಲ್ಲಿ ಗಾಂಧಿನಗರ ನ್ಯಾಷನಲ್ ಫೊರೆನ್ಸಿಕ್ ಸೈನ್ಸಸ್ ಯೂನಿವರ್ಸಿಟಿಯ ಡೀನ್ ಡಾ.ನವೀನ್ ಕುಮಾರ್ ಚೌಧರಿ, ಕೇರಳದ ಅಮೃತ ವಿಶ್ವ ವಿದ್ಯಾಪೀಠದ ಡಾ.ಪಿ.ಪ್ರಭಾಕರನ್, ಐಐಟಿ ಬಾಂಬೆಯ ಪ್ರಾಧ್ಯಾಪಕ ಡಾ.ಅಶ್ವಿನ್ ಅನಿಲ್ ಗುಮಾಸ್ತೆ ಈ ಸಮಿತಿಯಲ್ಲಿದ್ದಾರೆ. ಈ ಸಮಿತಿಯ ಕಾರ್ಯಚಟುವಟಿಕೆಗಳನ್ನು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶ ನ್ಯಾಯಮೂರ್ತಿ ಆರ್.ವಿ.ರವೀಂದ್ರನ್ ಪರಿಶೀಲಿಸುತ್ತಿದ್ದಾರೆ.
ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಅಧಿಕಾರಿಗಳು ಹಾಗೂ ಕೆಲ ಕೇಂದ್ರ ಸಚಿವರ ಮೇಲೆ ಕಣ್ಗಾವಲು ಇರಿಸಲಲು ಪೆಗಾಸಸ್ ಬಳಕೆಯಾಗುತ್ತಿದೆ ಎಂದು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದವು. ಕೆಲ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರು ಈ ಸಂಬಂಧ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರು. ಅಕ್ಟೋಬರ್ 27ರಂದು ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರಿದ್ದ ತ್ರಿಸದಸ್ಯ ನ್ಯಾಯಪೀಠವು ಮೂವರು ಸದಸ್ಯರಿರುವ ತಾಂತ್ರಿಕ ಸಮಿತಿ ಸಮತಿ ರಚಿಸಿತ್ತು. ಈ ಸಮಿತಿಯ ಕಾರ್ಯನಿರ್ವಹಣೆಯ ಉಸ್ತುವಾರಿ ಗಮನಿಸುವಂತೆ ನ್ಯಾಯಮೂರ್ತಿ ರವೀಂದ್ರನ್ ಅವರಿಗೆ ಸೂಚಿಸಿತ್ತು.
ಇದನ್ನೂ ಓದಿ: Pegasus Spyware: ದೇಶಕ್ಕಿಂತ ಪ್ರಧಾನಿ ಮೋದಿ ದೊಡ್ಡವರೇನಲ್ಲ’; ಪೆಗಾಸಸ್ ಕುರಿತ ಸುಪ್ರೀಂ ತೀರ್ಪಿನ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ
ಇದನ್ನೂ ಓದಿ: ಪೆಗಾಸಸ್ ತಂತ್ರಾಂಶ ಗೂಢಚಾರಿಕೆ ಪ್ರಕರಣ: ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಹಿನ್ನಡೆ