Pegasus Spyware: ‘ದೇಶಕ್ಕಿಂತ ಪ್ರಧಾನಿ ಮೋದಿ ದೊಡ್ಡವರೇನಲ್ಲ’; ಪೆಗಾಸಸ್ ಕುರಿತ ಸುಪ್ರೀಂ ತೀರ್ಪಿನ ಬೆನ್ನಲ್ಲೇ ರಾಹುಲ್ ಗಾಂಧಿ ವಾಗ್ದಾಳಿ
Rahul Gandhi: ಪೆಗಾಸಸ್ ತಂತ್ರಾಂಶವನ್ನು ಭಾರತಕ್ಕೆ ತಂದಿದ್ದು ಯಾರು?, ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದ್ದು ಯಾರು?, ಯಾರ್ಯಾರ ಮೇಲೆ ಪೆಗಾಸಸ್ ತಂತ್ರಾಂಶ ಬಳಸಲಾಗಿದೆ?, ಪೆಗಾಸಸ್ ಡಾಟಾ ಬೇರೆ ದೇಶಗಳ ಬಳಿಯೂ ಇದೆಯಾ?, ಡಾಟಾವನ್ನು ಪ್ರಧಾನಿ, ಗೃಹ ಸಚಿವರಿಗೆ ನೀಡಲಾಗುತ್ತಿತ್ತಾ? ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ನವದೆಹಲಿ: ಪೆಗಾಸಸ್ ಗೂಢಚರ್ಯೆ (Pegasus Spyware) ತನಿಖೆಗೆ ಸುಪ್ರೀಂ ಕೋರ್ಟ್ ಸಮಿತಿ ರಚನೆ ಮಾಡಿರುವುದನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಸ್ವಾಗತಿಸಿದ್ದಾರೆ. ಕೇಂದ್ರ ಸರ್ಕಾರ ತನ್ನದೇ ಜನರ ವಿರುದ್ಧ ಗೂಢಚರ್ಯೆ ನಡೆಸಿದೆ. ರಾಜಕಾರಣಿಗಳು, ನ್ಯಾಯಾಧೀಶರ ವಿರುದ್ಧ ಬೇಹುಗಾರಿಕೆ ನಡೆಸಲಾಗಿದೆ. ಈ ಬಗ್ಗೆ ಸಂಸತ್‌ನಲ್ಲಿ ಕಾಂಗ್ರೆಸ್ ಪಕ್ಷ ಹೋರಾಟ ಮಾಡಿತ್ತು. ಪ್ರಧಾನ ಮಂತ್ರಿ ಹಾಗೂ ಗೃಹ ಸಚಿವರ ಗಮನಕ್ಕೆ ಬಾರದೆ ಬೇಹುಗಾರಿಕೆ ನಡೆದಿರಲು ಸಾಧ್ಯವೇ ಇಲ್ಲ. ಈ ಪ್ರಕರಣವನ್ನು ಸುಪ್ರೀಂಕೋರ್ಟ್ (Supreme Court) ಗಂಭೀರವಾಗಿ ಪರಿಗಣಿಸಿದೆ. ಆದರೆ, ಸರ್ಕಾರಕ್ಕೆ ನಾವು ಕೇಳಿದ ಕೆಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ ಎಂದು ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.
ಪೆಗಾಸಸ್ ತಂತ್ರಾಂಶವನ್ನು ಭಾರತಕ್ಕೆ ತಂದಿದ್ದು ಯಾರು?, ಪೆಗಾಸಸ್ ತಂತ್ರಾಂಶವನ್ನು ಖರೀದಿಸಿದ್ದು ಯಾರು?, ಯಾರ್ಯಾರ ಮೇಲೆ ಪೆಗಾಸಸ್ ತಂತ್ರಾಂಶ ಬಳಸಲಾಗಿದೆ?, ಪೆಗಾಸಸ್ ಡಾಟಾ ಬೇರೆ ದೇಶಗಳ ಬಳಿಯೂ ಇದೆಯಾ?, ಡಾಟಾವನ್ನು ಪ್ರಧಾನಿ, ಗೃಹ ಸಚಿವರಿಗೆ ನೀಡಲಾಗುತ್ತಿತ್ತಾ? ಎಂದು ಪೆಗಾಸಸ್ ಬಗ್ಗೆ ಹಿಂದಿನ ಅಧಿವೇಶನದಲ್ಲಿಯೇ ಪ್ರಶ್ನಿಸಿದ್ದೆವು. ಪೆಗಾಸಸ್ ಪ್ರಕರಣ ಪ್ರಜಾಪ್ರಭುತ್ವದ ಮೇಲಿನ ಹಲ್ಲೆಯಾಗಿದೆ. ಸಂಸತ್‌ನಲ್ಲಿ ನಾವು ಈ ವಿಷಯವನ್ನು ಮತ್ತೆ ಪ್ರಸ್ತಾಪಿಸುತ್ತೇವೆ. ಪ್ರಧಾನಮಂತ್ರಿ ಈ ದೇಶಕ್ಕಿಂತ ದೊಡ್ಡವರಲ್ಲ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದಾರೆ.
ಪೆಗಾಸಸ್ ಬೇಹುಗಾರಿಕೆ ಹಗರಣದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಬೇಕು. ಇದು ನಮ್ಮ ಪ್ರಜಾತಂತ್ರದ ಮೇಲೆ ನಡೆದ ದಾಳಿಯಾಗಿದೆ. ಪ್ರಮುಖರ ದಾಖಲೆಗಳು ಬೇರೆ ದೇಶಗಳಿಗೂ ಸಿಕ್ಕಿದೆಯಾ? ಅಥವಾ ಕೇವಲ ಕೇಂದ್ರ ಸರಕಾರದ ಬಳಿ ಮಾತ್ರ ದಾಖಲೆಗಳು ಇವೆಯಾ? ಎಂಬುದನ್ನು ಸರ್ಕಾರ ಖಚಿತಪಡಿಸಬೇಕು. ಬ್ಲಾಕ್ ಮೇಲ್ ಮಾಡಲು ಸರಕಾರವೇ ಪೆಗಾಸಿಸ್ ಬಳಸಿದೆ. ಈ ಬಗ್ಗೆ ಮತ್ತೆ ಸಂಸತ್‌ನಲ್ಲಿ ಹೋರಾಟ ಮಾಡುತ್ತೇವೆ. ಪ್ರಧಾನಿ ಅಥವಾ ಗೃಹ ಸಚಿವರೇ ಬೇಹುಗಾರಿಕೆ ಮಾಡಲು ಆದೇಶ ನೀಡಿರಬೇಕು. ಇವರಿಬ್ಬರು ಅಲ್ಲದೆ ಬೇರೆಯವರು ಆದೇಶ ನೀಡಲು ಸಾಧ್ಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಕಾನೂನುಬಾಹಿರವಾಗಿ ಈ ಕೆಲಸ ಮಾಡಿದ್ದಾರೆ. ಪ್ರಧಾನಿಯವರಿಂದ ಕ್ರಿಮಿನಲ್ ಆಕ್ಟ್ ಆಗಿದೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.
Live: My interaction with the press regarding the threat to national privacy by GOI’s Pegasus spying. https://t.co/dRiBrQynWk
— Rahul Gandhi (@RahulGandhi) October 27, 2021
ಪೆಗಾಸಸ್ ತಂತ್ರಾಂಶ ಬಳಸಿ ಬೇಹುಗಾರಿಕೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸೂಚಿಸಿ ಸುಪ್ರೀಂ ಕೋರ್ಟ್ ಇಂದು ತಜ್ಞರ ಸಮಿತಿಯನ್ನು ರಚಿಸಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ನೇತೃತ್ವದಲ್ಲಿ ಸಮಿತಿ ತನಿಖೆ ನಡೆಸಲಿದೆ. ಈ ಪ್ರಕರಣದ ವಿರುದ್ಧದ ಅರ್ಜಿಯನ್ನು ತಿರಸ್ಕರಿಸಬೇಕೆಂಬ ಕೇಂದ್ರ ಸರ್ಕಾರದ ವಾದವನ್ನು ನಾವು ಒಪ್ಪುವುದಿಲ್ಲ. ಸಮಿತಿ ರಚಿಸುವ ಮನವಿಗೆ ಒಪ್ಪಿಗೆ ಕೊಟ್ಟಿದ್ದೇವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಸರ್ಕಾರ ಪ್ರತಿಯೊಬ್ಬ ಭಾರತೀಯನಿಗೂ ಖಾಸಗಿತನದ ರಕ್ಷಣೆ ನೀಡಬೇಕು. ನಾವು ಮಾಹಿತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಈ ತೀರ್ಪಿನಲ್ಲಿ ನಾವು ಖಾಸಗಿತನದ ಹಕ್ಕಿನ ಬಗ್ಗೆ ಚರ್ಚಿಸಿದ್ದೇವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರಿ ಪರಿಣಾಮ ಬೀರುತ್ತದೆ. ಶಾಸನದ ಮಾನ್ಯತೆ ಇಲ್ಲದೇ ಖಾಸಗಿತನದ ಹಕ್ಕಿನಲ್ಲಿ ಮೂಗು ತೂರಿಸುವಿಕೆಗೆ ಅವಕಾಶವಿಲ್ಲ. ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ಪ್ರಕರಣದಲ್ಲಿ ಕಾನೂನನ್ನು ಎತ್ತಿ ಹಿಡಿಯುವುದೇ ನಮ್ಮ ಉದ್ದೇಶ ಎಂದು ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಏನಿದು ಘಟನೆ?:
ಪೆಗಾಸಸ್ ಎಂಬ ಇಸ್ರೇಲ್ ಮೂಲದ ಬೇಹುಗಾರಿಕೆ ತಂತ್ರಜ್ಞಾನವನ್ನು ಬಳಸಿ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್ ಫೋನ್ ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬ ವಿಸ್ತೃತ ಸರಣಿ ವರದಿಗಳನ್ನು ‘ದಿ ವೈರ್’ ಪ್ರಕಟಿಸಿತ್ತು. ದಿ ವೈರ್ ಜೊತೆಗೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಈ ಮಾಹಿತಿಯು ಬಹಿರಂಗವಾಗಿದ್ದು, ಪೆಗಾಸಸ್ ಸ್ಪೈ ವೇರ್ ಬಳಸಿಕೊಂಡು ಅಪರಿಚಿತ ಏಜೆನ್ಸಿಯೊಂದು ಯಶಸ್ವಿಯಾಗಿ ಹ್ಯಾಕ್ ಮಾಡಿದೆ ಎಂದು ವರದಿ ತಿಳಿಸಿತ್ತು.
ಬಹಿರಂಗಗೊಂಡ ಫೋನ್ ಸಂಖ್ಯೆಗಳಲ್ಲಿ ಕೆಲವು ಫೋನ್ ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಒಳಪಡಿಸಿದ ಸಂದರ್ಭದಲ್ಲಿ ಪೆಗಾಸಸ್ ಸ್ಪೈ ವೇರ್ ಅಳವಡಿಕೆಗೊಂಡಿರುವುದಾಗಿ ತಿಳಿದು ಬಂದಿತ್ತು. ಪರೀಕ್ಷೆಗೆ ಬಳಸಿದ 37 ಫೋನ್ ಗಳಲ್ಲಿ 10 ಫೋನ್ ಗಳು ಭಾರತದ್ದಾಗಿದ್ದವು ಎಂದು ವರದಿ ತಿಳಿಸಿತ್ತು. ಪೆಗಾಸಸ್ ಅನ್ನು ಮಾರಾಟ ಮಾಡುವ ಇಸ್ರೇಲ್ ಮೂಲದ ಎನ್‌ಎಸ್‌ಒ ಗ್ರೂಪ್ ತನ್ನ ಗ್ರಾಹಕರ ಕುರಿತು ಮಾಹಿತಿ ನೀಡಲು ನಿರಾಕರಿಸಿತ್ತು. ಆ ಡೇಟಾಬೇಸ್‌ನಲ್ಲಿರುವವರ ಸಂಖ್ಯೆಯಲ್ಲಿ 40 ಕ್ಕೂ ಹೆಚ್ಚು ಪತ್ರಕರ್ತರು, ಮೂರು ಪ್ರಮುಖ ಪ್ರತಿಪಕ್ಷಗಳ ನಾಯಕರು, ಒಬ್ಬ ಸಾಂವಿಧಾನಿಕ ಪ್ರಾಧಿಕಾರದ ಹುದ್ದೆಯಲ್ಲಿರುವವರು, ನರೇಂದ್ರ ಮೋದಿ ಸರ್ಕಾರದಲ್ಲಿ ಸೇವೆ ಸಲ್ಲಿಸುತ್ತಿರುವ ಇಬ್ಬರು ಮಂತ್ರಿಗಳು, ಭದ್ರತಾ ಸಂಸ್ಥೆಗಳ ಪ್ರಸ್ತುತ ಮತ್ತು ಮಾಜಿ ಮುಖ್ಯಸ್ಥರು ಹಾಗೂ ಅಧಿಕಾರಿಗಳು, ಹಲವಾರು ಉದ್ಯಮಿಗಳು ಸೇರಿದ್ದಾರೆಂದು ಬಹಿರಂಗಗೊಂಡಿತ್ತು. ಅನಧಿಕೃತವಾಗಿ ಫೋನ್ ಕದ್ದಾಲಿಕೆ ಮಾಡಲು ಕೇಂದ್ರ ಸರ್ಕಾರ ಪೆಗಾಸಸ್ ಅನ್ನು ಬಳಸಿಕೊಳ್ಳುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ಕೇಂದ್ರ ಸರ್ಕಾರ ನಿರಾಕರಿಸಿತ್ತು.
ಇದನ್ನೂ ಓದಿ: ಪೆಗಾಸಸ್ ತಂತ್ರಾಂಶ ಗೂಢಚಾರಿಕೆ ಪ್ರಕರಣ: ತನಿಖೆಗೆ ತಜ್ಞರ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರಕ್ಕೆ ಹಿನ್ನಡೆ
Pegasus Spyware: ಪೆಗಾಸಸ್ ಬೇಹುಗಾರಿಕೆ ಪ್ರಕರಣ; ಸುಪ್ರೀಂ ಕೋರ್ಟ್ನಿಂದ ನಾಳೆ ತೀರ್ಪು ಪ್ರಕಟ
Published On - 6:57 pm, Wed, 27 October 21