ಶ್ರೀನಗರ: ಕೊರೊನಾ ಸೋಂಕು ಭಾರತದ ಯಾವ ರಾಜ್ಯವನ್ನೂ ಬಿಟ್ಟಿಲ್ಲ. ಒಂದೊಂದೇ ರಾಜ್ಯಗಳಾಗಿ ಲಾಕ್ಡೌನ್, ಕರ್ಫ್ಯೂದಂತಹ ಕಠಿಣ ನಿಯಮಗಳನ್ನು ಹೇರುತ್ತಿವೆ. ಈ ಮಧ್ಯೆ ಜಮ್ಮು ಕಾಶ್ಮೀರದ ಲೆಫ್ಟಿನಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಕೊವಿಡ್ 19 ಸೋಂಕಿತರಿಗೆ ಕೆಲವು ವಿಶೇಷ ಸಹಾಯವನ್ನು ನೀಡುವುದಾಗಿ ಘೋಷಿಸಿದ್ದಾರೆ.
ಅದರಲ್ಲಿ ಮುಖ್ಯವಾಗಿ, ಯಾವುದಾದರೂ ಒಬ್ಬನೇ ದುಡಿಯುತ್ತಿದ್ದು, ಆತನೇನಾದರೂ ಕೊರೊನಾದಿಂದ ಮೃತಪಟ್ಟರೆ, ಆ ಮನೆಯ ಹಿರಿಯ ನಾಗರಿಕರಿಗೆ ವಿಶೇಷ ಪಿಂಚಣಿ ನೀಡುವುದಾಗಿ ಲೆಫ್ಟಿನೆಂಟ್ ಗವರ್ನರ್ ತಿಳಿಸಿದ್ದಾರೆ. ಅಷ್ಟೇ ಅಲ್ಲ, ಕೊವಿಡ್ 19ನಿಂದ ಪಾಲಕರನ್ನು ಕಳೆದುಕೊಳ್ಳುವ ಮಕ್ಕಳಿಗೆ ಸರ್ಕಾರದಿಂದ ಸ್ಕಾಲರ್ಶಿಪ್ ಕೊಡುವುದಾಗಿಯೂ ಘೋಷಿಸಿದ್ದಾರೆ.
ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಅದೆಷ್ಟೋ ದಿನಗೂಲಿ ನೌಕರರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ. ಹಾಗಾಗಿ ಕಟ್ಟಡ ನಿರ್ಮಾಣ ಕಾರ್ಮಿಕರು ಸೇರಿ ಎಲ್ಲ ರೀತಿಯ ದಿನಗೂಲಿ ನೌಕರರಿಗೆ ತಿಂಗಳಿಗೆ ಸರ್ಕಾರದಿಂದ 1000 ರೂಪಾಯಿ ನೀಡಲಾಗುವುದು. ಮುಂದಿನ ಎರಡು ತಿಂಗಳ ಕಾಲ ಈ ಹಣ ನೀಡುತ್ತೇವೆ ಎಂದು ಮನೋಜ್ ಸಿನ್ಹಾ ಹೇಳಿದ್ದಾರೆ.
ಇನ್ನು ಸ್ವಉದ್ಯಮ ಮಾಡುವವರಿಗೆ ಹಣಕಾಸು ನೆರವು ನೀಡಲಾಗುವುದು. ಸರ್ಕಾರದಿಂದ ಇರುವ ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಲು ಜನರು ಮುಂದಾಗಬೇಕು ಎಂದೂ ಅವರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವ ಪೂರ್ವ ಲೆಫ್ಟಿನೆಂಟ್ ಗವರ್ನರ್ ಸಿನ್ಹಾ ಅವರು, ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಪ್ರೆಸಿಡೆಂಟ್ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕ ಗುಲಾಮ್ ನಬಿ ಅಜಾದ್ ಸೇರಿ ಹಲವು ರಾಜಕೀಯ ಮುಖಂಡರೊಂದಿಗೆ ಚರ್ಚೆ ನಡೆಸಿದ್ದಾರೆ.
ಜಮ್ಮು-ಕಾಶ್ಮೀರದಲ್ಲಿ ಆಮ್ಲಜನಕ ಲಭ್ಯತೆ ಮಟ್ಟವನ್ನೂ ಹೆಚ್ಚಿಸಲಾಗಿದೆ. ಮೊದಲು ಕೇವಲ 17 ಆಮ್ಲಜನಕ ಪ್ಲಾಂಟ್ಗಳಿದ್ದವು. ಆರು ತಿಂಗಳಲ್ಲಿ 44ಕ್ಕೆ ಏರಿಸಲಾಗಿದೆ. ಕೊರೊನಾ ಪ್ರಸರಣ ಸರಪಳಿ ಬ್ರೇಕ್ ಮಾಡಲು ನಾವು ಎಲ್ಲ ರೀತಿಯ ಕ್ರಮಗಳನ್ನೂ ಕೈಗೊಂಡಿದ್ದೇವೆ. ಅದರಲ್ಲಿ ಖಂಡಿತ ಯಶಸ್ವಿ ಆಗುತ್ತೇವೆ ಎನ್ನುತ್ತಾರೆ ಸಿನ್ಹಾ. ಅಮೂಲ್ಯವಾದ ಜೀವಗಳನ್ನು ರಕ್ಷಿಸಲು ನಾವೆಲ್ಲ ಒಟ್ಟಾಗಬೇಕು. ಪರಸ್ಪರ ಸಹಕಾರ ತುಂಬ ಮುಖ್ಯ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ನೂರು ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ; ಜಿಲ್ಲಾಡಳಿತದ ಜತೆ ಕೈ ಜೊಡಿಸಿದ ವೇದಾಂತ ಮೈನ್ಸ್ ಸಂಸ್ಥೆ
‘ಸರಿಗಮಪ’ ಸುಬ್ರಮಣಿ ಪತ್ನಿ ಸಾವಿನ ಕೇಸ್ಗೆ ಟ್ವಿಸ್ಟ್; ಕೊರೊನಾ ಅಲ್ಲ, ಆತ್ಮಹತ್ಯೆಯಿಂದ ನಿಧನ?