ಚಿತ್ರದುರ್ಗದಲ್ಲಿ ನೂರು ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ; ಜಿಲ್ಲಾಡಳಿತದ ಜತೆ ಕೈ ಜೊಡಿಸಿದ ವೇದಾಂತ ಮೈನ್ಸ್ ಸಂಸ್ಥೆ
ಕೆಲವೇ ದಿನಗಳಲ್ಲಿ ಸುಸಜ್ಜಿತ ನೂರು ಹಾಸಿಗೆಗಳ ಆಸ್ಪತ್ರೆ ತಲೆಎತ್ತಲಿದೆ. ಆರು ತಿಂಗಳ ಕಾಲ ನಿರ್ವಹಣೆಯನ್ನೂ ವೇದಾಂತ ಸಂಸ್ಥೆಯೇ ಮಾಡಲಿದೆ. ವೈದ್ಯಕೀಯ ಸಿಬ್ಬಂದಿ ಮಾತ್ರ ಸರ್ಕಾರದಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದ್ದಾರೆ.
ಚಿತ್ರದುರ್ಗ: ಕೊರೊನಾ ಎರಡನೇ ಅಲೆಯಿಂದಾಗಿ ಇಡೀ ದೇಶವೇ ನಲುಗಿ ಹೋಗಿದೆ. ಸೋಂಕಿತರ ಸಂಖ್ಯೆ ಕೂಡ ಹೆಚ್ಚಾಗಿದ್ದು, ಸಾವಿನ ಸಂಖ್ಯೆಯಲ್ಲಿ ಕೂಡ ಏರಿಕೆ ಕಂಡುಬಂದಿದೆ. ಹೀಗಿರುವಾಗಲೇ ಕೋಟೆನಾಡು ಚಿತ್ರದುರ್ಗದಲ್ಲೂ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಳ ಆಗುತ್ತಲೇ ಸಾಗಿದೆ. ಇದರಿಂದ ರೋಗಿಗಳಿಗೆ ಬೆಡ್ ಸಿಗದ ದುಸ್ಥಿತಿ ನಿರ್ಮಾಣವಾಗಿದೆ. ಇದೇ ವೇಳೆ ವೇದಾಂತ ಮೈನ್ಸ್ ಸಂಸ್ಥೆ ನೂರು ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಜನರ ನೆರವಿಗೆ ದಾವಿಸಿದೆ.
ಜಿಲ್ಲಾಸ್ಪತ್ರೆಯ ಆವರಣದಲ್ಲಿ ಟೆಂಟ್ ಮಾದರಿಯ ಸುಸಜ್ಜಿತ ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ ಭರದ ಸಿದ್ಧತೆ ನಡೆದಿದೆ. ವೇದಾಂತ ಗಣಿ ಸಂಸ್ಥೆ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾಗಿದ್ದು, ಸಾಮಾಜಿಕ ಹೊಣೆಗಾರಿಕೆ ನಿಧಿ ಬಳಸಿ ನೆರವಿನ ಹಸ್ತ ಚಾಚಿದೆ. ಅಂದುಕೊಂಡಂತೆ ಆದರೆ ಕೆಲವೇ ದಿನಗಳಲ್ಲಿ ಸುಸಜ್ಜಿತ ನೂರು ಹಾಸಿಗೆಗಳ ಆಸ್ಪತ್ರೆ ತಲೆಎತ್ತಲಿದೆ. ಆರು ತಿಂಗಳ ಕಾಲ ನಿರ್ವಹಣೆಯನ್ನೂ ವೇದಾಂತ ಸಂಸ್ಥೆಯೇ ಮಾಡಲಿದೆ. ವೈದ್ಯಕೀಯ ಸಿಬ್ಬಂದಿ ಮಾತ್ರ ಸರ್ಕಾರದಿಂದ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ ಹೇಳಿದ್ದಾರೆ.
25ಸಾವಿರ ಚದರ ಅಡಿಯಲ್ಲಿ ಸುಸಜ್ಜಿತ ಟೆಂಟ್ ಆಸ್ಪತ್ರೆ ನಿರ್ಮಾಣ ಆಗಲಿದೆ. ಕೊವಿಡ್ ಪೀಡಿತರ ಚಿಕಿತ್ಸೆಗಾಗಿ ಸುಮಾರು 20ಕ್ಕೂ ಹೆಚ್ಚು ಆಕ್ಸಿಜನ್ ಬೆಡ್, ವೆಂಟಿಲೆಟರ್ ವ್ಯವಸ್ಥೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ಅಗತ್ಯ ವೈದ್ಯಕೀಯ ಉಪಕರಣಗಳು ಇರಲಿವೆ. ಕೊವಿಡ್ ರೋಗಿಗಳ ಚಿಕಿತ್ಸೆಗೆ ಸುಸಜ್ಜಿತ ಆಸ್ಪತ್ರೆ ನಿರ್ಮಾಣವಾದರೆ ಬೆಡ್ ಸಮಸ್ಯೆ ಸ್ವಲ್ಪಮಟ್ಟಿಗೆ ಬಗೆಹರಿಯಲಿದೆ ಎಂದು ಡಿಹೆಚ್ಓ ಡಾ.ಪಾಲಾಕ್ಷ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೇದಾಂತ ಗಣಿ ಸಂಸ್ಥೆ ಸಾಮಾಜಿಕ ಹೊಣೆಗಾರಿಕೆ ಅರಿತು ಕೊವಿಡ್ ಸಂದರ್ಭದಲ್ಲಿ ಸಮುದಾಯದ ಸೇವೆಗೆ ಹೆಜ್ಜೆ ಇಟ್ಟಿದೆ. ಈಗಾಗಲೇ ವೇದಾಂತ ಸಂಸ್ಥೆಯ ಮುಖ್ಯಸ್ಥರು ಜಿಲ್ಲಾಡಳಿತದ ಜತೆ ಚರ್ಚೆ ನಡೆಸಿ ಆಸ್ಪತ್ರೆ ನಿರ್ಮಾಣಕ್ಕೆ ತೀರ್ಮಾನಿಸಿದ್ದಾರೆ. ಆದಷ್ಟು ಬೇಗ ಆಸ್ಪತ್ರೆ ನಿರ್ಮಾಣವಾಗಿ ಜನಸೇವೆಗೆ ಲಭಿಸಲಿ ಎಂಬುವುದು ನಮ್ಮ ಆಶಯ.
ಇದನ್ನೂ ಓದಿ:
ಕೊವಿಡ್ ಲಸಿಕೆ ಪಡೆದ ನಂತರವೂ ಆಸ್ಪತ್ರೆಯ ಏಳು ಸಿಬ್ಬಂದಿಗಳಲ್ಲಿ ಒಬ್ಬರಿಗೆ ಕೊರೊನಾ ಸೋಂಕು ತಗಲುತ್ತದೆ: ಅಧ್ಯಯನ ವರದಿ