ಆಂಧ್ರಪ್ರದೇಶದ ಏಲೂರು ಪಟ್ಟಣದಲ್ಲಿ ನಿಗೂಢ ಕಾಯಿಲೆ; 227 ಮಂದಿ ಅಸ್ವಸ್ಥ
ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡಿದ್ದು 227 ಮಂದಿ ಅಸ್ವಸ್ಥರಾಗಿದ್ದಾರೆ.
ಏಲೂರು (ಆಂಧ್ರ ಪ್ರದೇಶ): ಇಲ್ಲಿನ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ನಿಗೂಢ ಕಾಯಿಲೆಯೊಂದು ಕಾಣಿಸಿಕೊಂಡಿದ್ದು 227 ಮಂದಿ ಅಸ್ವಸ್ಥರಾಗಿದ್ದಾರೆ. ಜನರು ಅಸ್ವಸ್ಥರಾಗಲು ಕಲುಷಿತ ನೀರು ಸೇವನೆ ಅಥವಾ ವೈರಲ್ ಮೆದುಳು ಜ್ವರವೂ ಆಗಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏಲೂರು ಪಟ್ಟಣದಲ್ಲಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ. ಶನಿವಾರ ರಾತ್ರಿಯಿಂದ ಭಾನುವಾರ ಬೆಳಗ್ಗೆವರೆಗೆ 140 ಮಂದಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಮರಳಿದ್ದಾರೆ. ವಾಕರಿಕೆ ಮತ್ತು ಪ್ರಜ್ಞೆ ತಪ್ಪುವುದು ರೋಗ ಲಕ್ಷಣಗಳಾಗಿವೆ. ಆದರೆ ಇದಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ ಎಂದು ಎಲೂರು ಸರ್ಕಾರಿ ಆಸ್ಪತ್ರೆ ಸುಪರಿಟೆಂಡೆಂಟ್ ಡಾ. ಮೋಹನ್ ಅವರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರೋಗ ಪತ್ತೆ ಹಚ್ಚುವುದಕ್ಕಾಗಿ ರೋಗಿಗಳ ರಕ್ತದ ಮಾದರಿ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಮುತ್ಯಾಲ ರಾಜು ಹೇಳಿದ್ದಾರೆ.
Situation is under control at local govt hospitals in Eluru, West Godavari district, where patients were admitted with complaints of giddiness & epilepsy. All medical help has been provided to patients & everyone is safe: Andhra Pradesh Dy CM & Health Minister Alla Kali Krishna https://t.co/6Qi6KfbDmr
— ANI (@ANI) December 6, 2020
10 ದಿನಗಳ ಹಿಂದೆ ಏಲೂರು ಪಟ್ಟಣದ ಅಶೋಕ್ ನಗರ್ ಮತ್ತು ಆರುಂಧತ್ಪೇಟ್ನಲ್ಲಿರುವ ನಾಲ್ಕು ವಸತಿ ಸಮುಚ್ಛಯಗಳ ಜನರು ಕಲುಷಿತ ನೀರು ಸೇವಿಸಿ ಅಸ್ವಸ್ಥರಾಗಿದ್ದರು. ಏಲೂರು ಪಟ್ಟಣದಲ್ಲಿರುವ ವೈದ್ಯರಿಗೆ ಸಹಾಯ ಮಾಡಲು ಮತ್ತು ರೋಗದ ಮೂಲ ಪತ್ತೆ ಹಚ್ಚಲು ವೈದ್ಯರ ತಂಡವೊಂದು ವಿಜಯವಾಡದಿಂದ ಹೊರಟಿದೆ ಎಂದು ಆರೋಗ್ಯ ಸಚಿವ ಎ. ಕಾಳಿ ಕೃಷ್ಣ ಶ್ರೀನಿವಾಸ್ ಹೇಳಿದ್ದಾರೆ.
ಮಕ್ಕಳು ಹೆಚ್ಚಾಗಿ ಅಸ್ವಸ್ಥರಾಗುತ್ತಿದ್ದಾರೆ. ದಿಢೀರನೆ ವಾಂತಿಯಾಗಿ ಕಣ್ಣು ಉರಿ ಕಾಣಿಸಿಕೊಳ್ಳುತ್ತದೆ. ಕೆಲವೊಬ್ಬರು ಪ್ರಜ್ಞೆ ತಪ್ಪಿ ಬೀಳುತ್ತಾರೆ. ಶನಿವಾರ ಕೆಲವರು ಆಸ್ಪತ್ರೆಗೆ ದಾಖಲಾದಾಗ ಚಿಂತಾಜನಕ ಸ್ಥಿತಿಯಲ್ಲಿದ್ದರು. ಈಗ ಎಲ್ಲರೂ ಚೇತರಿಸಿಕೊಂಡಿದ್ದಾರೆ ಎಂದು ಏಲೂರು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಹೇಳಿದ್ದಾರೆ. ಈಗಾಗಲೇ ಆಸ್ಪತ್ರೆಯಲ್ಲಿ ಹೆಚ್ಚುವರಿ 100 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ.