ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ನಿರಂತರವಾಗಿ ಏರುತ್ತಲೇ ಇದ್ದವು. ಇದರಿಂದಾಗಿ ದೇಶದ ಅನೇಕ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ತಲುಪಿದೆ. ಸತತವಾಗಿ ಎರಡು ದಿನಗಳಿಂದ ಬೆಲೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಹಾಗೆಯೇ ಇಂದು ಬುಧವಾರ ಕೂಡಾ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ, ಸುಂಕ ಇಳಿಕೆ ಸಾಧ್ಯತೆ ಕಂಡು ಬರುವ ನಿರೀಕ್ಷೆ ಇದೆ. ಮಾರ್ಚ್ ತಿಂಗಳ ಮಧ್ಯಭಾಗದಲ್ಲಿ ತೈಲೋತ್ಪನ್ನಗಳ ಮೇಲಿನ ತೆರಿಗೆ, ಸುಂಕ ಇಳಿಕೆಯ ಪರಿಗಣನೆಗೆ ಯೋಚನೆ ಕೈಗೆತ್ತಿಕೊಳ್ಳವ ಸಾಧ್ಯತೆ ಇದೆ. ಪೆಟ್ರೋಲ್, ಡೀಸೆಲ್ ಮೇಲೆ ಶೇಕಡಾ 60 ರಷ್ಟು ತೆರಿಗೆ , ಅಬಕಾರಿ ಸುಂಕ ವಿಧಿಸಲಾಗಿದೆ. ಕಳೆದೊಂದು ವರ್ಷದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಎರಡು ಬಾರಿ ತೆರಿಗೆ, ಸುಂಕ ಹೆಚ್ಚಳ ಮಾಡಲಾಗಿದೆ. ಈ ಕುರಿತಂತೆ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಬಗ್ಗೆ ಕೇಂದ್ರದಿಂದ ತೈಲ ಕಂಪನಿ, ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬರುತ್ತಿದೆ.
ಕೇಂದ್ರ ಸರ್ಕಾರದ ಆದಾಯ ಸಂಗ್ರಹಕ್ಕೆ ಹೊಡೆತ ಬೀಳದಂತೆ ತೆರಿಗೆ, ಸುಂಕ ಕಡಿತಗೊಳಿಸಲು ನಿರ್ಧರಿಸಲಾಗುತ್ತದೆ. ಸದ್ಯದಲ್ಲೇ ಒಪೆಕ್ ಪ್ಲಸ್ ರಾಷ್ಟ್ರಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಹೆಚ್ಚಿನ ತೈಲ ಉತ್ಪಾದನೆಯ ನಿರ್ಬಂಧ ತೆರವು ಸಾಧ್ಯತೆ ಇದೆ. ಹೆಚ್ಚಿನ ತೈಲ ಉತ್ಪಾದನೆಯಾದರೇ ಕಚ್ಚಾ ತೈಲದ ಬೆಲೆ ಕುಸಿತದ ನಿರೀಕ್ಷೆ ಇದೆ. ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಮೋದಿ ಜನಪ್ರಿಯತೆಗೂ ಕುತ್ತು ಬಂದಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮೂಲಕ ಪಂಚ ರಾಜ್ಯ ಚುನಾವಣೆಯಲ್ಲಿ ಬಿಜೆಪಿಯತ್ತ ಜನರ ಆಕ್ರೋಶ ಕಡಿಮೆಯಾಗುತ್ತೆ ಎಂಬ ಅಲೋಚನೆಗಳಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಮತ್ತು ರೂಪಾಯಿ ಮತ್ತು ಡಾಲರ್ ವ್ಯತ್ಯಾಸವನ್ನು ಅವಲಂಬಿಸಿರುತ್ತದೆ. ಕಚ್ಚಾ ತೈಲದ ಬೆಲೆಯ ಆಧಾರದ ಮೇಲೆ ಪೆಟ್ರೋಲ್‌ನ ಮೂಲ ಬೆಲೆಯನ್ನು ನಿಗದಿಪಡಿಸಲಾಗುತ್ತದೆ.
ಇಂದು ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 94.22 ರೂಪಾಯಿಗೆ ಮಾರಾಟವಾಗುತ್ತಿದೆ. ದೇಶದ ವಿವಿಧ ನಗರಗಳಲ್ಲಿ ಇಂಧನ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಸ್ಥಿರತೆ ಕಾಪಾಡಿಕೊಂಡು ದೆಹಲಿಯಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 91.17 ರೂಪಾಯಿ ಮತ್ತು ಡೀಸೆಲ್ ಅನ್ನು ಲೀಟರ್‌ಗೆ 81.47 ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ಶನಿವಾರ ಪೆಟ್ರೋಲ್ ಅನ್ನು 24 ಪೈಸೆ ಮತ್ತು ಡೀಸೆಲ್ ಅನ್ನು 15 ಪೈಸೆ ಹೆಚ್ಚಿಸಿದ ನಂತರ ಇದೇ ದರದಲ್ಲಿ ಇಂಧನ ಮಾರಾಟವಾಗುತ್ತಿದೆ. ಮುಂಬೈನಲ್ಲಿ ಪೆಟ್ರೋಲ್ ಲೀಟರ್‌ಗೆ 97.57 ರೂ. ಮತ್ತು ಡೀಸೆಲ್ ಲೀಟರ್‌ಗೆ 88.60 ರೂಪಾಯಿಗೆ ಮಾರಾಟವಾಗುತ್ತಿದೆ.
ಇನ್ನು, ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 91.35 ರೂಪಾಯಿಗೆ ಮತ್ತು ಡೀಸೆಲ್ ಬೆಲೆ ಶನಿವಾರ ಲೀಟರ್‌ಗೆ 84.20 ರಿಂದ 84.35 ರೂಪಾಯಿಗೆ ಏರಿದೆ. ಚೆನ್ನೈನಲ್ಲಿ ಪೆಟ್ರೋಲ್ ಪ್ರತಿ ಲೀಟರಿಗೆ 93.11 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರಿಗೆ 86.45 ರೂಪಾಯಿಗೆ ಗ್ರಾಹಕರು ಕೊಳ್ಳುತ್ತಿದ್ದಾರೆ.
ದೇಶದ ವಿವಿಧ ನಗರದಲ್ಲಿ ಪ್ರತಿ ಲೀಟ್ರ್ ಪೆಟ್ರೋಲ್ ದರ
ಆಗ್ರಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 89.07 ರೂಪಾಯಿಗೆ ಮಾರಾಟವಾಗುತ್ತಿದೆ. ಅಹಮದಾಬಾದ್ನಲ್ಲಿ 88.31 ರೂಪಾಯಿಗೆ ಗ್ರಾಹಕರು ಪೆಟ್ರೋಲ್ ಕೊಂಡು ಕೊಳ್ಳುತ್ತಿದ್ದಾರೆ. ಬೆಂಗಳೂರು 94.22 ರೂಪಾಯಿ, ಭೂಪಾಲ್ನಲ್ಲಿ 99.21 ರೂಪಾಯಿ, ಚೆನ್ನೈನಲ್ಲಿ 93.11 ರೂಪಾಯಿ, ದೆಹಲಿಯಲ್ಲಿ 91.17 ರೂಪಾಯಿ, ಹೈದರಾಬಾದ್ನಲ್ಲಿ 94.79 ರೂಪಾಯಿಗೆ ಪೆಟ್ರೋಲ್ ಮಾರಾಟವಾಗುತ್ತಿದೆ. ಇನ್ನು, ಉಳಿದ ನಗರಗಳಾದ ಇಂದೋರ್ನಲ್ಲಿ 99.30 ರೂಪಾಯಿ, ಜೈಪುರದಲ್ಲಿ 97.72 ರೂಪಾಯಿ, ಜಮ್ಮುನಲ್ಲಿ 91.00 ರೂಪಾಯಿ, ಲಕ್ನೊದಲ್ಲಿ 89.31 ರೂಪಾಯಿ, ಮಂಗಳೂರಿನಲ್ಲಿ 93.46 ರೂಪಾಯಿ, ಮೈಸೂರಿನಲ್ಲಿ 93.83 ರೂಪಾಯಿ ಹಾಗೂ ಪಾಟ್ನಾದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 93.48 ರೂಪಾಯಿ ಇದೆ.
ಇದನ್ನೂ ಓದಿ: Petrol Diesel Price | ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ದರ ಪ್ರತಿ ಲೀಟರಿಗೆ 94.22 ರೂಪಾಯಿ
ಇದನ್ನೂ ಓದಿ: Petrol Diesel Price | ಪೆಟ್ರೋಲ್ ದರ ನರ್ವಸ್ ನೈಂಟೀಸ್ನಲ್ಲಿ.. ಶತಕ ಗ್ಯಾರೆಂಟಿ ಎಂದು ಗ್ರಾಹಕರು ಕಂಗಾಲು!
Published On - 9:44 am, Wed, 3 March 21