Petrol Price: ಪೆಟ್ರೋಲ್ ದರ ಮತ್ತೂ ಹೆಚ್ಚಬಹುದು, ಇದು ನನ್ನನ್ನು ಧರ್ಮಸಂಕಟಕ್ಕೆ ನೂಕಿದೆ: ನಿರ್ಮಲಾ ಸೀತಾರಾಮನ್​

|

Updated on: Feb 20, 2021 | 10:06 PM

Petrol Rate: ಕೇಂದ್ರ ಬಜೆಟ್​ ಕುರಿತು ಚರ್ಚೆ ಮಾಡಲು ಚೆನ್ನೈನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಭಾಗಿಯಾಗಿದ್ದರು. ಕಾರ್ಯಕ್ರಮ ಪೂರ್ಣಗೊಂಡ ನಂತರದಲ್ಲಿ ಮಾಧ್ಯಮದ ಜತೆ ಮಾತನಾಡಿದರು.

Petrol Price: ಪೆಟ್ರೋಲ್ ದರ ಮತ್ತೂ ಹೆಚ್ಚಬಹುದು, ಇದು ನನ್ನನ್ನು ಧರ್ಮಸಂಕಟಕ್ಕೆ ನೂಕಿದೆ: ನಿರ್ಮಲಾ ಸೀತಾರಾಮನ್​
ನಿರ್ಮಲಾ ಸೀತಾರಾಮನ್​
Follow us on

ನವದೆಹಲಿ: ಪೆಟ್ರೋಲ್​ ಬೆಲೆ ಹಲವು ರಾಜ್ಯಗಳಲ್ಲಿ ಈಗಾಗಲೇ 100 ರೂಪಾಯಿಯ ಗಡಿ ದಾಟಿದೆ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಪೆಟ್ರೋಲ್​ ದರ 100 ರೂಪಾಯಿ ಗಡಿ ಸಮೀಪಿಸುತ್ತಿದೆ. ಇದರಿಂದ ದಿನ ನಿತ್ಯ ಬಳಕೆ ವಸ್ತುಗಳ ಬೆಲೆಯಲ್ಲಿ ಭಾರೀ ಏರಿಕೆ ಕಾಣುತ್ತಿದ್ದು, ಜನಸಾಮಾನ್ಯರು ತತ್ತರಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಈ ಬಗ್ಗೆ ಇದೇ ಮೊದಲ ಬಾರಿಗೆ ಮೌನ ಮುರಿದಿದ್ದು, ಈ ಪರಿಸ್ಥಿತಿ ನನ್ನನ್ನು ಧರ್ಮ ಸಂಕಟಕ್ಕೆ ನೂಕಿದೆ ಎಂದು ಹೇಳಿದ್ದಾರೆ.

ಕೇಂದ್ರ ಬಜೆಟ್​ ಕುರಿತು ಚರ್ಚೆ ಮಾಡಲು ಚೆನ್ನೈನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನಿರ್ಮಲಾ ಭಾಗಿಯಾಗಿದ್ದರು. ಕಾರ್ಯಕ್ರಮ ಪೂರ್ಣಗೊಂಡ ನಂತರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ಪೆಟ್ರೋಲ್​ ದರ ಏರುತ್ತಿರುವುದು ತುಂಬಾ ದುಃಖಕರ ವಿಷಯ. ಬೆಲೆ ಕಡಿಮೆ ಮಾಡುವುದನ್ನು ಹೊರತುಪಡಿಸಿ ಯಾವುದೇ ಉತ್ತರವೂ ಜನರಿಗೆ ಸಮಾಧಾನ ತರುವುದಿಲ್ಲ ಎಂದಿದ್ದಾರೆ.

ಪೆಟ್ರೋಲ್​ ಬೆಲೆ ವಿಚಾರದಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇಬ್ಬರೂ ಸೇರಿ ಮಾತುಕತೆ ನಡೆಸಬೇಕು. ತೈಲ ಉತ್ಪಾದನೆ ಮುಂದಿನ ದಿನಗಳಲ್ಲಿ ಕಡಿಮೆ ಆಗಬಹುದು ಎನ್ನುವ ಎಚ್ಚರಿಕೆಯನ್ನು ಒಪೆಕ್​  (
Organization Of The Petroleum Exporting Countries) ರಾಷ್ಟ್ರಗಳು ನೀಡಿವೆ. ಇದರಿಂದ ತೈಲದರ ಮತ್ತೂ ಜಾಸ್ತಿ ಆಗಬಹುದು ಎಂದು ನಿರ್ಮಲಾ ಆತಂಕ ಹೊರ ಹಾಕಿದರು.

ತೈಲ ಕಂಪೆನಿಗಳು ಬೆಲೆಗಳನ್ನು ಕಡಿತಗೊಳಿಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತವೆ. ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಕಂಪನಿಗಳು, ಅದನ್ನು ಪರಿಷ್ಕರಿಸಿ, ವಿತರಿಸುವ ಕಾರ್ಯವನ್ನು ಅವೇ ಮಾಡುತ್ತವೆ. ಇದರ ಮೇಲೆ ಸರ್ಕಾರಕ್ಕೆ ಯಾವುದೇ ನಿಯಂತ್ರಣವಿಲ್ಲ ಎಂದು ಹೇಳುವ ಮೂಲಕ ಪೆಟ್ರೋಲ್​ ದರ ಏರಿಕೆಗೂ ಸರ್ಕಾರಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಒತ್ತಿ ಹೇಳಿದರು.

ಪೆಟ್ರೋಲ್​ಅನ್ನು ಜಿಎಸ್​ಟಿ ಅಡಿಯಲ್ಲಿ ತರುವ ಬಗ್ಗೆ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಪೆಟ್ರೋಲ್​ಅನ್ನು ಈವರೆಗೆ ಜಿಎಸ್​ಟಿ ಅಡಿಯಲ್ಲಿ ತಂದಿಲ್ಲ. ಈ ಬಗ್ಗೆ ಮಾತನಾಡಿರುವ ಅವರು, ಪೆಟ್ರೋಲ್​ ಅನ್ನು ಜಿಎಸ್​​ಟಿ ಅಡಿ ತರಲು ಜಿಎಸ್​ಟಿ ಕೌನ್ಸಿಲ್​ನಲ್ಲಿ ಸಮಗ್ರ ಚರ್ಚೆ ಮತ್ತು ರಾಜ್ಯಗಳ ನಡುವೆ ಸಮಾಲೋಚನೆ ನಡೆಸುವ ಅಗತ್ಯವಿದೆ. ಇದಕ್ಕಾಗಿ, ಸಂಸತ್ತಿನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ಇದನ್ನೂ ಓದಿ:  ಪೆಟ್ರೋಲ್​, ಡೀಸೆಲ್​ ವಾಹನ ಬದಲು ಎಲೆಕ್ಟ್ರಿಕ್​ ವಾಹನ ಬಳಸಿದರೆ ಭಾರಿ ಹಣ ಉಳಿತಾಯ ಆಗುತ್ತೆ: ನಿತಿನ್​ ಗಡ್ಕರಿ

Petrol Diesel Price | ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಾಯ್ತು… ಈಗ ಹಣ್ಣು-ತರಕಾರಿ ಬೆಲೆಯೂ ಏರುತ್ತಿದೆ!