Corona Virus: ಮಹಾರಾಷ್ಟ್ರದಲ್ಲಿ ಮತ್ತೆ ಚುರುಕುಗೊಂಡ ಕೊರೊನಾ: ಲಾಕ್ಡೌನ್ ಸೂಚನೆ ನೀಡಿದ ಮುಂಬೈ ಮೇಯರ್
ನೀವು ಕೊವಿಡ್ ನಿಯಮ ಪಾಲನೆ ಮಾಡದೆ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಲಾಕ್ಡೌನ್ ಘೋಷಣೆ ಮಾಡಬೇಕಾಗುತ್ತದೆ ಎನ್ನುವ ಎಚ್ಚರಿಕೆ ನೀಡಲಾಗಿದೆ.
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿದೆ ಎನ್ನುವಾಗಲೇ ಮತ್ತೆ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚಾಗಿದೆ. ಆದಾಗ್ಯೂ, ಜನರು ಕೊರೊನಾ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ. ಪರಿಸ್ಥಿತಿ ಹೀಗೆ ಮುಂದುವರಿದರೆ ಮುಂಬೈನಲ್ಲಿ ಮತ್ತೆ ಲಾಕ್ಡೌನ್ ಘೋಷಣೆ ಮಾಡಬೇಕಾಗುತ್ತದೆ ಎಂದು ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಸಾಕಷ್ಟು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸೂಚಿಸಲಾಗಿದೆ. ಕೊವಿಡ್ ನಿಯಮದನ್ವಯ, ಮಾಸ್ಕ್ ಹಾಕುವುದು ಕಡ್ಡಾಯವಾದರೆ, ಗುಂಪು ಸೇರುವುದರ ಮೇಲೆ ನಿಷೇಧ ಹೇರಲಾಗಿದೆ. ಆದಾಗ್ಯೂ, ಜನರು ನಿಯಮವನ್ನು ಪಾಲನೆ ಮಾಡುತ್ತಿಲ್ಲ. ಹೀಗಾಗಿ, ಕಟ್ಟುನಿಟ್ಟಾಗಿ ಕೊರೊನಾ ನಿಯಮ ಪಾಲನೆ ಸೂಚಿಸಲಾಗಿದೆ.
ನೀವು ಕೊವಿಡ್ ನಿಯಮ ಪಾಲನೆ ಮಾಡದೆ ಕೊರೊನಾ ಕೇಸ್ಗಳ ಸಂಖ್ಯೆ ಹೆಚ್ಚುತ್ತಾ ಹೋದರೆ ಲಾಕ್ಡೌನ್ ಘೋಷಣೆ ಮಾಡಬೇಕಾಗುತ್ತದೆ. ಇದನ್ನು ತಪ್ಪಿಸಬೇಕಾದರೆ ನೀವು ನಿಯಮ ಪಾಲನೆ ಮಾಡಿ ಎಂದು ಕಿಶೋರಿ ಹೇಳಿದ್ದಾರೆ.
ಮುಂಬೈನಲ್ಲಿ ಕೊರೊನಾ ಮಿತಿಮೀರಿ ಏರಿಕೆ ಕಾಣುತ್ತಿದ್ದು, ಪರಿಸ್ಥಿತಿ ತುಂಬಾನೇ ಗಂಭೀರವಾಗಿದೆ. ನಾವು ಅದಕ್ಕೆ ಬೇಕಿರುವ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಶೀಘ್ರವೇ ಕೊರೊನಾ ನಿಯಂತ್ರಣಕ್ಕೆ ಬರುವ ವಿಶ್ವಾಸವಿದೆ. ಇದಕ್ಕೆ ಜನರ ಸಹಕಾರ ಕೂಡ ಅಗತ್ಯ ಎಂದು ಕಿಶೋರಿ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ದೇಶದಲ್ಲಿ ಕಾಲಿಟ್ಟಾಗಿನಿಂದಲೂ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿವೆ. ಶುಕ್ರವಾರ ಮಹಾರಾಷ್ಟ್ರದಲ್ಲಿ, 6,112 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. 44 ಜನರು ಮೃತಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಸಾಕಷ್ಟು ರೂಪಾಂತರಿ ವೈರಸ್ಗಳು ಕೂಡ ಪತ್ತೆ ಆಗಿವೆ.
ಕೊರೊನಾ ಪ್ರಕರಣಗಳ ಸಂಖ್ಯೆ ಇತ್ತೀಚೆಗೆ ನಿಧಾನವಾಗಿ ಕಡಿಮೆ ಆಗುತ್ತಾ ಬಂದಿತ್ತು. ಆದರೆ, ಈಗ ಮತ್ತೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೇರಳ, ಮಹಾರಾಷ್ಟ್ರ, ಪಂಜಾಬ್, ಛತ್ತೀಸ್ಗಢ ಹಾಗೂ ಮಧ್ಯಪ್ರದೇಶದಲ್ಲಿ ಕೊರೊನಾ ಕೇಸ್ ಹೆಚ್ಚುತ್ತಿದೆ.
ಇದನ್ನೂ ಓದಿ: ಕರ್ನಾಟಕಕ್ಕೆ ಕೊರೊನಾ ‘ಮಹಾ‘ತಂಕ, ಅಪಾಯದಿಂದ ಪಾರಾಗಲು ಹೊಸ ನಿಯಮಾವಳಿ ಜಾರಿ