Corona Virus: ಕರ್ನಾಟಕಕ್ಕೆ ಕೊರೊನಾ ‘ಮಹಾ‘ತಂಕ, ಅಪಾಯದಿಂದ ಪಾರಾಗಲು ಹೊಸ ನಿಯಮಾವಳಿ ಜಾರಿ

Corona Virus Mutation: ಮಹಾರಾಷ್ಟ್ರದಲ್ಲಿ ಕಳೆದ ವಾರ ದಿನಕ್ಕೆ 350ರಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಇದೀಗ 645ರಷ್ಟಾಗಿದೆ. ಈ ಕಾರಣಗಳಿಂದಾಗಿ ರಾಜ್ಯವನ್ನು ಕೊರೊನಾ ಎರಡನೇ ಅಲೆಯ ಹೊಡೆತದಿಂದ ರಕ್ಷಿಸಿಕೊಳ್ಳಲು ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

  • TV9 Web Team
  • Published On - 19:07 PM, 20 Feb 2021
Corona Virus: ಕರ್ನಾಟಕಕ್ಕೆ ಕೊರೊನಾ ‘ಮಹಾ‘ತಂಕ, ಅಪಾಯದಿಂದ ಪಾರಾಗಲು ಹೊಸ ನಿಯಮಾವಳಿ ಜಾರಿ
ಡಾ.ಕೆ.ಸುಧಾಕರ್​

ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು (Corona Virus) ಮತ್ತೆ ತಾರಕಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಹೊಸ ನಿಯಮಾವಳಿಗಳನ್ನು ಘೋಷಿಸಿದೆ. ಮಹಾರಾಷ್ಟ್ರದ ನಾಗ್ಪುರ ಮತ್ತು ಅಮರಾವತಿ ಸೇರಿದಂತೆ ಕೆಲ ಪ್ರಾಂತ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏಕಾಏಕಿ ಏರುತ್ತಿರುವುದು ಆತಂಕ ಮೂಡಿಸಿದ್ದು, ಕಳೆದ ವಾರ ದಿನಕ್ಕೆ 350ರಷ್ಟು ದಾಖಲಾಗುತ್ತಿದ್ದ ಪ್ರಕರಣಗಳು ಇದೀಗ 645ರಷ್ಟಾಗಿದೆ. ಈ ಕಾರಣಗಳಿಂದಾಗಿ ರಾಜ್ಯವನ್ನು ಕೊರೊನಾ ಎರಡನೇ ಅಲೆಯ ಹೊಡೆತದಿಂದ ರಕ್ಷಿಸಿಕೊಳ್ಳಲು ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ. ಈ ಸಂಬಂಧ ಕರ್ನಾಟಕ ಆರೋಗ್ಯ ಇಲಾಖೆ ಇಂದು ಹೊರಡಿಸಿರುವ ಸುತ್ತೋಲೆಯಲ್ಲಿ ಒಂದಷ್ಟು ಅಂಶಗಳನ್ನು ಸೇರಿಸಲಾಗಿದ್ದು, ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ.

ಅಂತೆಯೇ, ಹಾಸ್ಟೆಲ್​, ಪಿಜಿ, ಶಿಕ್ಷಣ ಸಂಸ್ಥೆ, ವಸತಿ ಸಮುಚ್ಛಯ ಅಥವಾ ಇನ್ನಾವುದೇ ಸಂಸ್ಥೆಗಳಲ್ಲಿ ಐದಕ್ಕಿಂತ ಹೆಚ್ಚು ಜನ ಸೋಂಕಿತರಾದಲ್ಲಿ ಆ ಕಟ್ಟಡವನ್ನು ಕಂಟೈನ್ಮೆಂಟ್​ ವಲಯ ಎಂದು ಗುರುತಿಸಿ ಸೋಂಕಿತರ ಮೇಲೆ ನಿಗಾ ವಹಿಸಲು ಸೂಚಿಸಲಾಗಿದೆ ಹಾಗೂ ಸೋಂಕಿತರು 7 ದಿನಗಳ ನಂತರ ಮರುಪರೀಕ್ಷೆಗೆ ಒಳಪಡಬೇಕೆಂದು ಹೇಳಲಾಗಿದೆ. ಇದರ ಜವಾಬ್ದಾರಿಯನ್ನು ಸ್ಥಳೀಯ ಆರೋಗ್ಯ ಅಧಿಕಾರಿಗಳಿಗೆ ನೀಡಲಾಗಿದ್ದು, ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್​, ಸ್ಯಾನಿಟೈಸರ್​ ಬಳಕೆ ಮಾಡುವುದು, ಕೊರೊನಾ ನಿಯಂತ್ರಣಾ ಸಂಬಂಧಿತ ನಿಯಮಗಳನ್ನು ಪಾಲಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆದೇಶಿಸಲಾಗಿದೆ.

ಇನ್ನು ಹೊರರಾಜ್ಯಗಳಿಂದ ಬರುವವರು ಪ್ರಯಾಣ ಸಂದರ್ಭದಲ್ಲಿ ಕನಿಷ್ಠ 72 ತಾಸಿನ ಒಳಗಾಗಿ ತೆಗೆದ ಕೊರೊನಾ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಿದೆ. ಖಾಸಗಿ ವಾಹನಗಳಲ್ಲಿ ಬರುವವರಿಗೆ ಟೋಲ್​ ಗೇಟ್​ ಅಥವಾ ಗಡಿ ಪ್ರದೇಶದ ಭಾಗದಲ್ಲಿ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಕಳೆದ 2 ವಾರದ ಅವಧಿಯಲ್ಲಿ ಕರ್ನಾಟಕಕ್ಕೆ ಬಂದಿರುವವರು ಸಹ ಕೊರೊನಾ ಪರೀಕ್ಷೆಗೆ ಒಳಗಾಗುವಂತೆ ಸೂಚಿಸಲಾಗಿದೆ.

ಶಾಲಾ, ಕಾಲೇಜುಗಳಲ್ಲಿ ತರಗತಿ ಅವಧಿಯಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಎಲ್ಲಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಹೇಳಲಾಗಿದ್ದು, ಹಾಸ್ಟೆಲ್​ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಹೊರಗಿನವರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲು ಸೂಚನೆ ನೀಡಲಾಗಿದೆ. ಒಂದುವೇಳೆ ಯಾವುದೇ ಸಂದರ್ಭದಲ್ಲಿ ಕೊರೊನಾ ಸೋಂಕಿತರ ಪ್ರಮಾಣದಲ್ಲಿ ಏರಿಕೆ ಕಂಡರೂ ಸಂಬಂಧಿತ ಸಂಸ್ಥೆಗಳ ಮುಖ್ಯಸ್ಥರನ್ನೇ ಹೊಣೆಗಾರರನ್ನಾಗಿಸಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಲಾಗಿದೆ.

ಇದನ್ನೂ ಓದಿ: ರೂಪಾಂತರಿ ಕೊರೊನಾ ವೈರಾಣು ಆತಂಕ, ಹೊರರಾಜ್ಯದಿಂದ ಬರುವವರ ಬಗ್ಗೆ ಇರಲಿ ಎಚ್ಚರ

ಇದನ್ನೂ ಓದಿ: ಕರ್ನಾಟಕದಲ್ಲಿ ಲಾಕ್​ಡೌನ್​ ಮಾಡುವ ಚಿಂತನೆ ಇಲ್ಲ; ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ