Corona Virus: ರೂಪಾಂತರಿ ಕೊರೊನಾ ವೈರಾಣು ಆತಂಕ, ಹೊರರಾಜ್ಯದಿಂದ ಬರುವವರ ಬಗ್ಗೆ ಇರಲಿ ಎಚ್ಚರ
Corona Virus Mutation: ಕೇರಳ ಮತ್ತು ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ಕಾಣಿಸಿಕೊಂಡಿದ್ದು, ಹೊಸ ತಳಿ ವೈರಾಣುವಿನ ಸಂಖ್ಯೆ ನಿಧಾನಕ್ಕೆ ಏರುತ್ತಲೇ ಇದೆ. ಅದನ್ನು ನಿಯಂತ್ರಿಸುವ ಸಲುವಾಗಿ ಮಹಾರಾಷ್ಟ್ರ ನೈಟ್ ಕರ್ಫ್ಯೂ ಮತ್ತು ಕೊವಿಡ್ ನಿಯಾಮವಳಿಗಳ ಮೊರೆ ಹೋಗಿದೆ.
ಕೊರೊನಾ ಸೋಂಕಿನ (Corona Virus) ಬಗ್ಗೆ ಜನರಿಗೆ ಭಯ, ಆತಂಕ ಕೊಂಚ ಕಡಿಮೆಯಾಗಿದೆ. ಲಸಿಕೆ ಬಂದ ಮೇಲಂತೂ ಕೊರೊನಾಕ್ಕೆ ಕ್ಯಾರೇ ಎನ್ನದೇ ತಿರುಗಾಡುತ್ತಿದ್ದಾರೆ. ಸರ್ಕಾರ ಲಸಿಕೆ ವಿತರಣೆ ಆರಂಭಿಸಿದ ಮೇಲೆಯಂತೂ ಕೊರೊನಾ ನಿಯಮಗಳ ಪಾಲನೆ ಬಗೆಗಿದ್ದ ಗಂಭೀರತೆ ಬಹುತೇಕ ಹೊರಟೇಹೋಗಿದೆ. ಆದರೆ, ಇದೀಗ ಜನ ಮೈಮರೆತಿರುವ ಸಂದರ್ಭದಲ್ಲೇ ಕೊರೊನಾ ತನ್ನ ಎರಡನೇ ಸುತ್ತಿನ ಆಟಕ್ಕೆ ಸಿದ್ಧವಾದಂತಿದೆ. ಈಗಾಗಲೇ ಬೇರೆ ಬೇರೆ ದೇಶಗಳಿಂದ ಬಂದ ರೂಪಾಂತರಿ ಕೊರೊನಾ ವೈರಾಣು ಹರಡುವ ಬಗ್ಗೆ ಆತಂಕ ಶುರುವಾಗಿದೆ. ಅದರ ಮಧ್ಯೆಯೇ ಕರ್ನಾಟಕದ ನೆರೆಹೊರೆಯ ರಾಜ್ಯಗಳಲ್ಲೂ ಕೊರೊನಾ ಸೋಂಕು ಮತ್ತೆ ಏರುಗತಿಯಲ್ಲಿ ಸಾಗುವ ಸೂಚನೆ ನೀಡಿದೆ. ಹೀಗಾಗಿ ನಾವು ಎಚ್ಚೆತ್ತುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಇಂತಹ ಸಂದರ್ಭದಲ್ಲಿ ಕೇರಳ, ತಮಿಳುನಾಡು, ಮಹಾರಾಷ್ಟ್ರ ಸೇರಿದಂತೆ ಬೇರೆ ರಾಜ್ಯಗಳಿಂದ ಬರುತ್ತಿರುವವರ ಬಗ್ಗೆ ಅಧಿಕಾರಿಗಳು ಎಷ್ಟು ನಿಗಾ ವಹಿಸಿದ್ದಾರೆ. ಯಾವ ರೀತಿ ಪರೀಕ್ಷೆ ಮಾಡುತ್ತಿದ್ದಾರೆ ಎಂದು ಟಿವಿ9 ಕನ್ನಡ ರಿಯಾಲಿಟಿ ಚೆಕ್ ನಡೆಸಿದಾಗ ಬೆಚ್ಚಿಬೀಳಿಸುವ ಕೆಲ ಅಂಶಗಳು ಪತ್ತೆಯಾಗಿವೆ.
ಕಳೆದ ವರ್ಷ ಇದೇ ಸಂದರ್ಭದಲ್ಲಿ ಕರ್ನಾಟಕ ಹಾಗೂ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೊನಾ ಆರಂಭವಾಗುವ ಸೂಚನೆ ಸಿಕ್ಕು ಭಯದ ವಾತಾವರಣ ನಿರ್ಮಾಣವಾಗಿತ್ತು. ನಂತರ ಸರ್ಕಾರ ಎಚ್ಚರಿಕೆಯ ಮಾತುಗಳನ್ನಾಡುತ್ತಿದ್ದರೂ ಅದನ್ನು ಜನ ಅನುಸರಿಸುವ ಮುನ್ನವೇ ನೆರೆಹೊರೆಯ ರಾಜ್ಯದಲ್ಲಿದ್ದ ಸೋಂಕು ಕರ್ನಾಟಕಕ್ಕೆ ಕಾಲಿಟ್ಟು ಭೀಕರತೆಯನ್ನು ಪರಿಚಯಿಸಿತ್ತು. ಇದೀಗ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ರೂಪಾಂತರಿ ಕೊರೊನಾ ಕಾಣಿಸಿಕೊಂಡಿದ್ದು, ಹೊಸ ತಳಿ ವೈರಾಣುವಿನ ಸಂಖ್ಯೆ ನಿಧಾನಕ್ಕೆ ಏರುತ್ತಲೇ ಇದೆ. ಅದನ್ನು ನಿಯಂತ್ರಿಸುವ ಸಲುವಾಗಿ ಮಹಾರಾಷ್ಟ್ರ ನೈಟ್ ಕರ್ಫ್ಯೂ ಮತ್ತು ಕೊವಿಡ್ ನಿಯಾಮವಳಿಗಳ ಮೊರೆ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ನಾವು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ.
ಆದರೆ, ಈ ಬಗ್ಗೆ ಟಿವಿ9 ರಿಯಾಲಿಟಿ ಚೆಕ್ ನಡೆಸಿದಾಗ ಬೇರೆಡೆಯಿಂದ ಬರುತ್ತಿರುವ ಜನರ ಬಗ್ಗೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬಂದಿದೆ. ಬೆಳಗಾವಿ, ಮೈಸೂರು, ಬೆಂಗಳೂರು ಹೀಗೆ ರಾಜ್ಯದ ಗಡಿಭಾಗಗಳ ಜಿಲ್ಲೆಗಳಿಗೆ ಹೊರ ರಾಜ್ಯದಿಂದ ಆಗಮಿಸುತ್ತಿರುವ ಪ್ರಯಾಣಿಕರ ತಪಾಸಣೆಯ ಬಗ್ಗೆ ಯಾರೂ ಗಂಭೀರ ಕ್ರಮ ಕೈಗೊಂಡಿಲ್ಲ. ಬಸ್ ನಿಲ್ದಾಣಗಳಲ್ಲಿ ಶಾಸ್ತ್ರಕ್ಕೆ ಟೆಸ್ಟ್ ಮಾಡಲಾಗುತ್ತಿದೆಯಾದರೂ ಮಾರ್ಗ ಮಧ್ಯೆ ಇಳಿದುಹೋಗುವವರ ಬಗ್ಗೆಯಾಗಲೀ. ಹೊಟೇಲ್ಗಳಿಗೆ ಹೋದಾಗ ಅಲ್ಲಿ ಕೊರೊನಾ ತಗುಲುವ ಬಗ್ಗೆ ಎಚ್ಚರಿಕೆಯನ್ನಾಗಲೀ ವಹಿಸಲಾಗುತ್ತಿಲ್ಲ ಎನ್ನುವುದು ಆತಂಕಕಾರಿ ಸಂಗತಿ.
ಒಂದುವೇಳೆ ಪರರಾಜ್ಯದ ಸೋಂಕು ಕರ್ನಾಟಕಕ್ಕೆ ಕಾಲಿಟ್ಟು ಹಬ್ಬಲಾರಂಭಿಸಿದರೆ ಅದನ್ನು ತಡೆಗಟ್ಟುವುದು ಖಂಡಿತವಾಗಿಯೂ ಸವಾಲಾಗಲಿದೆ. ಅಷ್ಟೇ ಅಲ್ಲದೇ ಕೇರಳ, ಮಹಾರಾಷ್ಟ್ರ ರಾಜ್ಯಗಳು ಕರ್ಫ್ಯೂ, ಲಾಕ್ಡೌನ್ ಕುರಿತು ಮಾತನಾಡುತ್ತಿರುವಾಗ ಕರ್ನಾಟಕ ತೀವ್ರ ನಿಗಾವಹಿಸಲೇಬೇಕಿದೆ. ಬಿಬಿಎಂಪಿ ಕೂಡಾ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರದೇ ಈಗಿಂದೀಗಲೇ ಎಚ್ಚೆತ್ತುಕೊಳ್ಳಬೇಕಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಲಾಕ್ಡೌನ್ ಮಾಡುವ ಚಿಂತನೆ ಇಲ್ಲ; ಸಚಿವ ಡಾ.ಕೆ. ಸುಧಾಕರ್ ಸ್ಪಷ್ಟನೆ