ದೆಹಲಿ: ಫೈಜರ್ ಸಂಸ್ಥೆ 12 ವರ್ಷದೊಳಗಿನ ಮಕ್ಕಳ ಮೇಲೆ ಕೊವಿಡ್ ಲಸಿಕೆ ಪ್ರಯೋಗವನ್ನು ಶುರುಮಾಡಿದೆ. 2022ರ ವೇಳೆಗೆ 12 ವರ್ಷದ ಒಳಗಿನ ಮಕ್ಕಳಿಗೆ ಕೊವಿಡ್ ಲಸಿಕೆ ನೀಡುವ ಭರವಸೆಯಲ್ಲಿ ಫೈಜರ್ ಸಂಸ್ಥೆ ಪ್ರಯೋಗಕ್ಕೆ ಮುಂದಾಗಿದೆ. ಕಳೆದ ಬುಧವಾರ ಮಕ್ಕಳ ಮೇಲೆ ಮೊದಲ ಲಸಿಕೆ ಪ್ರಯೋಗ ಮಾಡಲಾಗಿದೆ.
ಅಮೆರಿಕದಲ್ಲಿ ಬುಧವಾರ ಬೆಳಿಗ್ಗೆ ಸರಿಸುಮಾರು 66 ಮಿಲಿಯನ್ ಡೋಸ್ ಲಸಿಕೆ ನೀಡಲಾಗಿದೆ. ಹಾಗೂ 16 ಮತ್ತು 17 ವರ್ಷ ವಯಸ್ಸಿನವರಿಗೆ ಫೈಜರ್ -ಬಯೋಎನ್ಟೆಕ್ ಲಸಿಕೆಗಳನ್ನು ಮಾತ್ರ ನೀಡಲಾಗುತ್ತಿದೆ. 18 ವರ್ಷ ಹಾಗೂ ಮೇಲ್ಪಟ್ಟವರಿಗೆ ಮಾಡೆರ್ನಾ ಲಸಿಕೆ, 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಯಾವ ಲಸಿಕೆ ನೀಡಬೇಕು ಎಂಬುದು ಇನ್ನು ನಿರ್ಧಾರವಾಗಿಲ್ಲ ಎಂದು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಆ್ಯಂಡ್ ಪ್ರಿವೆನ್ಷನ್ ತಿಳಿಸಿದೆ.
ಇದೀಗ ಪ್ರಾರಂಭದಲ್ಲಿ 10, 20 ಹಾಗೂ 30 ಮೈಕ್ರೋ ಗ್ರಾಂನಷ್ಟು ಫೈಜರ್ – ಬಯೋಎನ್ಟೆಕ್ ಲಸಿಕೆಗಳನ್ನು ನೀಡಲು ನಿರ್ಧಾರ ಮಾಡಲಾಗಿದೆ. 144 ಜನರ ಮೇಲೆ ಈಗಾಗಲೇ ಲಸಿಕೆ ಪ್ರಯೋಗ ನಡೆದಿದೆ. ಮುಂಬರುವ ದಿನಗಳಲ್ಲಿ 4,000 ಕ್ಕೂ ಹೆಚ್ಚು ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ನಂತರ ಪ್ರಯೋಗದ ದತ್ತಾಂಶವನ್ನು ಕಂಪನಿಗಳು ಸಂಗ್ರಹಿಸಲಿವೆ. ಆನಂತರವಷ್ಟೇ ಸಾರ್ವಜನಿಕವಾಗಿ ಮಕ್ಕಳಿಗೆ ಲಸಿಕೆ ನೀಡಬೇಕೋ ಅಥವಾ ಬೇಡವೋ ಎಂಬುದು ನಿರ್ಧಾರವಾಗಲಿದೆ.
ಇದನ್ನೂ ಓದಿ: Covid 19 Vaccination: ಏಪ್ರಿಲ್ 1ರಿಂದಲೇ 45 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ; ಕೇಂದ್ರ ಸರ್ಕಾರದಿಂದ ಘೋಷಣೆ