ಮಹದಾಯಿ, ಕೃಷ್ಣಾ ನದಿಗಳ ನೀರು ಬಳಕೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್​ಗೆ ಪಿಐಎಲ್ ಸಲ್ಲಿಕೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 24, 2022 | 3:07 PM

ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ವಿಧಾನ ಪರಿಷತ್​ನ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮನವಿ ಸಲ್ಲಿಸಿದ್ದಾರೆ. ಮಹದಾಯಿಯಿಂದ ಕುಡಿಯುವ ನೀರಿಗೆ 5.5 ಟಿಎಂಸಿ ಹಂಚಿಕೆ ಮಾಡಲಾಗಿದೆ.

ಮಹದಾಯಿ, ಕೃಷ್ಣಾ ನದಿಗಳ ನೀರು ಬಳಕೆಗೆ ಅನುಮತಿ ಕೋರಿ ಸುಪ್ರೀಂಕೋರ್ಟ್​ಗೆ ಪಿಐಎಲ್ ಸಲ್ಲಿಕೆ
ಕೃಷ್ಣಾ ನದಿ ಮತ್ತು ಸುಪ್ರೀಂಕೋರ್ಟ್
Follow us on

ದೆಹಲಿ: ಮಹದಾಯಿ ಮತ್ತು ಕೃಷ್ಣಾ ನದಿಗಳ ನೀರು (Mahadayi and Krishna River) ಬಳಕೆ ಹಾಗೂ ಹಂಚಿಕೆಗೆ ಅನುಮತಿ ಕೋರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಸುಪ್ರೀಂಕೋರ್ಟ್​ಗೆ ಗುರುವಾರ ಸಲ್ಲಕೆಯಾಗಿವೆ. ರೈತಸೇನೆಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ವೀರೇಶ್ ಸೊಬರದಮಠ ಮಹದಾಯಿ ನೀರು ಬಳಕೆಗೆ ಅನುಮತಿ ನೀಡಲು ವಿನಂತಿಸಿದ್ದಾರೆ. ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ವಿಧಾನ ಪರಿಷತ್​ನ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮನವಿ ಸಲ್ಲಿಸಿದ್ದಾರೆ. ಮಹದಾಯಿಯಿಂದ ಕುಡಿಯುವ ನೀರಿಗೆ 5.5 ಟಿಎಂಸಿ ಹಂಚಿಕೆ ಮಾಡಲಾಗಿದೆ. ಈ ನೀರು ಬಳಕೆಗೆ ರಾಜ್ಯ ಸರ್ಕಾರ ಸೂಕ್ತ ಯೋಜನೆ ರೂಪಿಸಬೇಕು. ಗೆಜೆಟ್ ನೋಟಿಫಿಕೇಷನ್ ಆದರೂ ಯೋಜನೆ ರೂಪಿಸಲು ಕೇಂದ್ರ ಜಲ ಆಯೋಗ ಅನುಮತಿ ನೀಡುತ್ತಿಲ್ಲ. ನ್ಯಾಯಾಧಿಕರಣದ ಆದೇಶದಂತೆ ನೀರು ಬಳಕೆಗೆ ಯೋಜನೆ ರೂಪಿಸಲು ನಿರ್ದೇಶನ ನೀಡಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಮಾಡಿದ್ದಾರೆ.

ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಮನವಿ ಸಲ್ಲಿಸಿರುವ ವಿಧಾನ ಪರಿಷತ್​ನ ಮಾಜಿ ವಿಪಕ್ಷ ನಾಯಕ ಎಸ್.ಆರ್.ಪಾಟೀಲ್​ ಗೆಜೆಟ್ ನೋಟಿಫಿಕೇಷನ್​ಗೆ ನಿರ್ದೇಶನ ನೀಡಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮೂಲಕ ಮನವಿ ಮಾಡಿದ್ದಾರೆ. ಕೃಷ್ಣಾ ನ್ಯಾಯಾಧಿಕರಣವು ಈ ಸಂಬಂಧ ಆದೇಶ ನೀಡಿ 12 ವರ್ಷಗಳು ಕಳೆದಿವೆ. ಇದುವರೆಗೂ ಕೇಂದ್ರ ಸರ್ಕಾರ ನೋಟಿಫಿಕೇಷನ್​ ಹೊರಡಿಸಿಲ್ಲ. ಇದರಿಂದ ಉತ್ತರ ಕರ್ನಾಟಕದ 7 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.

ನ್ಯಾಯಪೀಠ ರಚನೆಗೆ ಮನವಿ

ಕೃಷ್ಣಾ ನದಿ ನೀರು ಹಂಚಿಕೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಶೀಘ್ರವೇ ನ್ಯಾಯಪೀಠ ರಚಿಸಬೇಕು ಎಂದು ಕರ್ನಾಟಕ ಸರ್ಕಾರವು ಶುಕ್ರವಾರ (ಫೆ.18) ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಕೃಷ್ಣಾ ಜಲವಿವಾದ ನ್ಯಾಯಮಂಡಳಿ ನೀಡಿರುವ ಐ ತೀರ್ಪಿನ ವಿರುದ್ಧ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಇನ್ನೂ ಬಾಕಿಯಿದೆ. ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಹಾಗೂ ಎ.ಎಸ್‌.ಬೋಪಣ್ಣ ಅವರು ಕಳೆದ ಜನವರಿಯಲ್ಲಿ ವಿಚಾರಣೆಯಿಂದ ಹಿಂದಕ್ಕೆ ಸರಿದಿದ್ದರು.

ಕನ್ನಡಿಗರ ಬಗ್ಗೆ ಕೇಂದ್ರ ಜಲ ಆಯೋಗದ ಮಲತಾಯಿ ಧೋರಣೆ: ಎಚ್​ಡಿಕೆ ಆಕ್ಷೇಪ

ನದಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದ ಪ್ರತಿನಿಧಿಯ ಉಪಸ್ಥಿತಿಯಲ್ಲೇ 242 ಟಿಎಂಸಿ ನೀರನ್ನು ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಿಗೆ ಕರ್ನಾಟಕವನ್ನು ಜಲಾನಯನ ಪ್ರದೇಶವನ್ನಾಗಿ ಹೊಂದಿರುವ ನದಿಗಳ ನೀರನ್ನು ಹಂಚಿಕೆ ಮಾಡಲಾಯಿತು. ಇದರಲ್ಲಿ ಕರ್ನಾಟಕಕ್ಕೆ ಕನಿಷ್ಠ ಒಂದು ಕ್ಯುಸೆಕ್‌ ಸಹ ಹಂಚಿಕೆ ಆಗಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಮೇಕೆದಾಟು ಪಾದಯಾತ್ರೆಗೆ ಹೊರಟಿರುವ ಕಾಂಗ್ರೆಸ್‌ ನಾಯಕರಿಗೆ ಹಾಗೂ ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಈ ವಿಷಯ ಅರ್ಥವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ನಿತ್ಯವೂ ಬೃಹತಾಕಾರದ‌ ಮೊಸಳೆಗಳು ಪ್ರತ್ತಕ್ಷ, ಹೆಚ್ಚಾಯ್ತು ಜನರಲ್ಲಿ ಆತಂಕ

ಇದನ್ನೂ ಓದಿ: ಆಂಧ್ರಪ್ರದೇಶ-ತೆಲಂಗಾಣ ಕೃಷ್ಣಾ ನದಿ ನೀರು ಹಂಚಿಕೆ ವಿವಾದ; ನಾನಂತೂ ವಿಚಾರಣೆ ಮಾಡುವುದೇ ಇಲ್ಲ ಎಂದ ಸುಪ್ರೀಂಕೋರ್ಟ್​ ಸಿಜೆಐ

Published On - 3:07 pm, Thu, 24 February 22