ಅನರ್ಹರ ಪಾಲಾಯ್ತು ಕಿಸಾನ್ ಸಮ್ಮಾನ್ ನಿಧಿಯ 3,000 ಕೋಟಿ ರೂಪಾಯಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jul 20, 2021 | 8:40 PM

ದೇಶದಲ್ಲಿ ಹೀಗೆ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಹಣ ಅನರ್ಹರ ಪಾಲಾಗಿದೆ. ಇಂಥವರಿಂದ ಹಣ ವಸೂಲು ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ಅನರ್ಹರ ಪಾಲಾಯ್ತು ಕಿಸಾನ್ ಸಮ್ಮಾನ್ ನಿಧಿಯ 3,000 ಕೋಟಿ ರೂಪಾಯಿ
ಪ್ರಾತಿನಿಧಿಕ ಚಿತ್ರ
Follow us on

ಕೇಂದ್ರ ಸರ್ಕಾರವು ಕೃಷಿ ಚಟುವಟಿಕೆಗೆ ಸಹಾಯವಾಗಲೆಂದು ರೈತರಿಗೆ ವರ್ಷಕ್ಕೆ 6 ಸಾವಿರ ರೂಪಾಯಿ ಹಣವನ್ನು ಪಿಎಂ-ಕಿಸಾನ್ ಸಮ್ಮಾನ್ ನಿಧಿ ಮೂಲಕ ನೀಡುತ್ತಿದೆ. ಆದರೆ, ಈ ಹಣದ ಸ್ವಲ್ಪ ಪಾಲು ಅನರ್ಹ ರೈತರ ಪಾಲಾಗಿದೆ. ದೇಶದಲ್ಲಿ ಹೀಗೆ ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಹಣ ಅನರ್ಹರ ಪಾಲಾಗಿದೆ. ಇಂಥವರಿಂದ ಹಣ ವಸೂಲು ಮಾಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ತಿಳಿಸಿದೆ.

ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬ ಉದ್ದೇಶದಿಂದ ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಇಂಥ ಯೋಜನೆಗಳ ಪೈಕಿ ಪಿಎಂ-ಕಿಸಾನ್ ಸಮ್ಮಾನ್ ನಿಧಿ ಸಹ ಒಂದು. ಈ ಯೋಜನೆಯ ಮೂಲಕ ರೈತರಿಗೆ ನೇರವಾಗಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ವರ್ಗಾಯಿಸಿ ಹಣಕಾಸಿನ ನೆರವು ನೀಡಲಾಗುತ್ತದೆ. ರೈತರು ಬಿತ್ತನೆ ಸಮಯದಲ್ಲಿ ಹಣಕ್ಕಾಗಿ ಪರದಾಡುವುದನ್ನು ತಪ್ಪಿಸಲು ವರ್ಷಕ್ಕೆ 6 ಸಾವಿರ ರೂಪಾಯಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಕೇಂದ್ರ ಸರ್ಕಾರವೇ ವರ್ಗಾಯಿಸುತ್ತಿದೆ. ಸರ್ಕಾರದ ಇಲಾಖೆಯಿಂದ ಅಧಿಕಾರಿಗಳ ಮೂಲಕ ರೈತರಿಗೆ ಹಣ ನೀಡಿದರೇ, ಅಧಿಕಾರಿಗಳೇ ನುಂಗಿ ನೀರು ಕುಡಿಯುತ್ತಾರೆ. ಈ ಹಣ ಪಡೆಯಲು ಕೂಡ ರೈತರು ಅಧಿಕಾರಿಗಳಿಗೆ ಲಂಚ ನೀಡಬೇಕಾಗುತ್ತೆ. ಅಧಿಕಾರಿಗಳ ಲಂಚಬಾಕತನಕ್ಕೆ ಬ್ರೇಕ್ ಹಾಕಲು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಕೇಂದ್ರ ಸರ್ಕಾರವೇ ವರ್ಗಾಯಿಸುತ್ತಿದೆ.

ಆದರೆ, ಇದರಲ್ಲೂ ಈಗ ಗೋಲ್​ಮಾಲ್ ನಡೆದಿದೆ. ಅನರ್ಹರು ಕೂಡ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಪಡೆದಿರುವುದು ಬೆಳಕಿಗೆ ಬಂದಿದೆ. ಕೇಂದ್ರ ಸರ್ಕಾರ ನೀಡಿದ ಹಣದಲ್ಲಿ ಒಂದೆರೆಡು ಕೋಟಿಯಲ್ಲ, ಬರೋಬ್ಬರಿ 3 ಸಾವಿರ ಕೋಟಿ ರೂಪಾಯಿ ಹಣ ಅನರ್ಹರ ಪಾಲಾಗಿದೆ. ಮೋದಿ ಸರ್ಕಾರವು ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರ ನಡೆಯುವುದನ್ನು ತಡೆಯಲು ನಾನಾ ಕ್ರಮ ಕೈಗೊಂಡಿದೆ. ಆದರೂ, ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಹಣ ಅನರ್ಹರ ಪಾಲಾಗುವುದನ್ನು ತಪ್ಪಿಸಲು ಸಾಧ್ಯವಾಗಿಲ್ಲ ಎನ್ನುವುದು ವಿಪರ್ಯಾಸ. ಈ ವಿಚಾರವನ್ನು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಒಪ್ಪಿಕೊಂಡಿದೆ.

ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಫಲಾನುಭವಿಗಳಾಗಲು 5 ಎಕರೆಗಿಂತ ಕಡಿಮೆ ಜಮೀನು ಹೊಂದಿರಬೇಕು. ರೈತರು ಆದಾಯ ತೆರಿಗೆ ಪಾವತಿದಾರರಾಗಿರಬಾರದು ಎಂಬ ಷರತ್ತುಗಳಿವೆ. ರೈತರ ಜಮೀನಿನ ಪಹಣಿ, ಬ್ಯಾಂಕ್ ಖಾತೆಯ ವಿವರ, ಆಧಾರ್ ಕಾರ್ಡ್ ಸಂಖ್ಯೆಯ ವಿವರವನ್ನು ಸಲ್ಲಿಸಿ ಯೋಜನೆಗೆ ನೋಂದಣಿ ಮಾಡಿಕೊಳ್ಳಬೇಕು. ಬಡ ರೈತರಿಗೆ ಮಾತ್ರ ಕೇಂದ್ರ ಸರ್ಕಾರದ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಹಣ ಸಿಗಲಿ ಎಂಬ ಉದ್ದೇಶದಿಂದ ಆದಾಯ ತೆರಿಗೆ ಪಾವತಿಸುವ ರೈತರನ್ನು ಯೋಜನೆಯಿಂದ ಹೊರಗಿಡಲಾಗಿದೆ. ಆದರೆ, ಆದಾಯ ತೆರಿಗೆ ಪಾವತಿದಾರರು ಕೂಡ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ಪಡೆದಿರುವುದು ಪರಿಶೀಲನೆ ವೇಳೆ ಪತ್ತೆಯಾಗಿದೆ.

ಇಂಥ 42.16 ಲಕ್ಷ ಅನರ್ಹ ರೈತರು ₹ 2,992 ಕೋಟಿ ಮೊತ್ತವನ್ನು ಕಿಸಾನ್ ಸಮ್ಮಾನ್ ನಿಧಿಯಿಂದ ಪಡೆದುಕೊಂಡಿದ್ದಾರೆ ಎಂದು ಕೇಂದ್ರ ಕೃಷಿ ಹಾಗೂ ರೈತರ ಕಲ್ಯಾಣ ಖಾತೆ ಮಂತ್ರಿ ನರೇಂದ್ರ ಸಿಂಗ್ ತೋಮರ್ ಮಂಗಳವಾರ ಸಂಸತ್ತಿನಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ತಿಳಿಸಿದರು. ಈ ಹಣವನ್ನು ಅನರ್ಹ ರೈತರಿಂದ ವಸೂಲಿ ಮಾಡುವ ಪ್ರಕ್ರಿಯೆ ಕೂಡ ಆರಂಭವಾಗಿದೆ. ಗರಿಷ್ಠ ಸಂಖ್ಯೆಯ ಅನರ್ಹ ರೈತರು, ಅಂದರೆ 8.35 ಲಕ್ಷ ಮಂದಿ ಅಸ್ಸಾಂ ರಾಜ್ಯದಲ್ಲಿದ್ದಾರೆ. ತಮಿಳುನಾಡಿನಲ್ಲಿ 7.22 ಲಕ್ಷ, ಪಂಜಾಬ್​ನಲ್ಲಿ 5.62 ಲಕ್ಷ, ಮಹಾರಾಷ್ಟ್ರದಲ್ಲಿ 4.45 ಲಕ್ಷ, ಉತ್ತರ ಪ್ರದೇಶದಲ್ಲಿ 2.65 ಲಕ್ಷ, ಗುಜರಾತ್​ನಲ್ಲಿ 2.36 ಲಕ್ಷ ಅನರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗಿದೆ.

ಅಸ್ಸಾಂನಲ್ಲಿ ಅನರ್ಹ ರೈತರ ಬ್ಯಾಂಕ್ ಖಾತೆಗೆ ₹ 554 ಕೋಟಿ, ಪಂಜಾಬ್‌ನಲ್ಲಿ ₹ 437 ಕೋಟಿ, ಮಹಾರಾಷ್ಟ್ರದಲ್ಲಿ ₹ 358 ಕೋಟಿ, ತಮಿಳುನಾಡಿನಲ್ಲಿ ₹ 340 ಕೋಟಿ, ಉತ್ತರ ಪ್ರದೇಶದಲ್ಲಿ ₹ 258 ಕೋಟಿ, ಗುಜರಾತ್​ನಲ್ಲಿ ₹ 220 ಕೋಟಿ ಅನರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಿದೆ ಎಂದು ಕೇಂದ್ರ ಕೃಷಿ ಇಲಾಖೆಯು ಮಂಗಳವಾರ ಸಂಸತ್ತಿಗೆ ತಿಳಿಸಿದೆ. ಕರ್ನಾಟಕದ 2,03,819 ಮಂದಿ ಅನರ್ಹ ರೈತರು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ಪಡೆದಿದ್ದಾರೆ ಎಂದು ಕಳೆದ ಫೆಬ್ರವರಿಯ ಬಜೆಟ್ ಅಧಿವೇಶನದಲ್ಲೇ ಕೇಂದ್ರ ಸರ್ಕಾರ ಹೇಳಿತ್ತು.

ಅನರ್ಹರಿಂದ ಹಣ ವಸೂಲಿಗೆ ಕ್ರಮ
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳ ದಾಖಲೆಗಳನ್ನು ನಿರಂತರವಾಗಿ ಪರಿಶೀಲನೆ ನಡೆಸಲಾಗುತ್ತೆ. ಆಧಾರ್, ಪಿಎಫ್ಎಂಎಸ್‌ ಮತ್ತು ಆದಾಯ ತೆರಿಗೆ ಇಲಾಖೆಯ ಡಾಟಾಬೇಸ್ ಮೂಲಕವೂ ಪರಿಶೀಲನೆ ನಡೆಸಲಾಗುತ್ತದೆ. ಈ ವೇಳೆ ಆದಾಯ ತೆರಿಗೆ ಪಾವತಿದಾರರ ಬ್ಯಾಂಕ್ ಖಾತೆಗೂ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಹಣ ವರ್ಗಾವಣೆ ಆಗಿರುವುದು ಪತ್ತೆಯಾಗಿದೆ ಎಂದು ಕೇಂದ್ರದ ಕೃಷಿ ಖಾತೆ ಸಚಿವ ನರೇಂದ್ರ ಸಿಂಗ್ ತೋಮರ್ ಸಂಸತ್ತಿಗೆ.

ಪಿಎಂ ಕಿಸಾನ್ ನಿಧಿಯ ಹಣ ದುರ್ಬಳಕೆ ಆಗದಂತೆ ಕೆಲವೊಂದು ವಿಶೇಷ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅರ್ಹ ರೈತರಿಗೆ ಹಣ ತಲುಪಿಸಲು ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗುತ್ತಿದೆ ಎಂದು ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ. ಈಗಾಗಲೇ ಬಹಳಷ್ಟು ರಾಜ್ಯ ಸರ್ಕಾರಗಳು ಅನರ್ಹ ರೈತರಿಗೆ ಹಣ ವಾಪಸ್ ನೀಡಲು ನೋಟೀಸ್ ನೀಡಿವೆ. ಅನರ್ಹ ರೈತರಿಂದ ಹಣವನ್ನು ವಾಪಸ್ ವಸೂಲು ಮಾಡಲು, ಆದಾಯ ತೆರಿಗೆ ಪಾವತಿದಾರರನ್ನು ಗುರುತಿಸಲು ರಾಜ್ಯಗಳಿಗೆ ಮಾರ್ಗಸೂಚಿಗಳನ್ನು ನೀಡಲಾಗಿದೆ. ರೈತರನ್ನು ಪಿಎಂ ಕಿಸಾನ್ ಸಮ್ಮಾನ್ ನಿಧಿಗೆ ನೋಂದಾಣಿ ಮಾಡುವಾಗಲೇ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಜೊತೆಗೆ ಪಿಎಂ-ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಗಳನ್ನು ಭೌತಿಕವಾಗಿಯೂ ಪರಿಶೀಲನೆ ನಡೆಸಲು ರಾಜ್ಯಗಳಿಗೆ ಸೂಚಿಸಲಾಗಿದೆ ಎಂದು ತೋಮರ್ ಹೇಳಿದ್ದಾರೆ.

(PM Kisan Samman Scheme Centre to recover rs 3000 crore from 42 lakh farmers)

ಇದನ್ನೂ ಓದಿ: PM KISAN Scheme: ರೈತರ ಖಾತೆಗೆ ಬಂತು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಹಣ, ಚೆಕ್ ಮಾಡುವುದು ಹೇಗೆ?

ಇದನ್ನೂ ಓದಿ: ಕರ್ನಾಟಕದಲ್ಲಿ ಮೊದಲ ಕಿಸಾನ್ ರೈಲಿಗೆ ಚಾಲನೆ; ನನಸಾಯಿತು ಕೋಲಾರ, ಚಿಕ್ಕಬಳ್ಳಾಪುರ ರೈತರ ಬಹುದಿನಗಳ ಕನಸು