ಭೋಪಾಲ್: ಪ್ರಧಾನಿ ನರೇಂದ್ರ ಮೋದಿ ಇಂದು ಮಧ್ಯ ಪ್ರದೇಶದ ರೈತರ ಜೊತೆ ವರ್ಚುವಲ್ ಸಂವಾದ ನಡೆಸಲಿದ್ದಾರೆ. ಬೆಳೆ ಹಾನಿಗೊಳಗಾದ 35 ಲಕ್ಷ ರೈತ ಕುಟುಂಬಗಳಿಗೆ ಮಧ್ಯ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದ 1660 ಕೋಟಿ ಹಣ ವಿತರಿಸಿ ಅವರು ಸಂವಾದ ನಡೆಸಲಿದ್ದಾರೆ. ನೂತನ ಕೃಷಿ ಕಾಯ್ದೆಗಳ ಕುರಿತು 23ನೇ ದಿನಕ್ಕೂ ಮುಂದುವರೆದಿರುವ ದೆಹಲಿ ಚಲೋ ಹಿನ್ನೆಲೆಯಲ್ಲಿ ಈ ಸಂವಾದ ಮಹತ್ವ ಪಡೆದಿದೆ.
ಗ್ರಾಮ ಪಂಚಾಯತಿ ಹಂತದಿಂದಲೂ ರೈತ ಸಮುದಾಯವನ್ನು ಈ ಸಂವಾದದ ಮೂಲಕ ತಲುಪುವ ಗುರಿಯನ್ನು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೊಂದಿದ್ದಾರೆ. ಮಧ್ಯಾಹ್ನ ಎರಡು ಗಂಟೆಗೆ ಆಯೋಜನೆಯಾಗಿರುವ ವರ್ಚುವಲ್ ಸಂವಾದದಲ್ಲಿ ಸುಮಾರು 20 ಸಾವಿರ ಜನರ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಮಧ್ಯ ಪ್ರದೇಶ ಸರ್ಕಾರ ತಿಳಿಸಿದೆ.
ರೈತ ಸಮುದಾಯದಲ್ಲಿ ನೂತನ ಕೃಷಿ ಕಾಯ್ದೆಗಳ ಪರ ಅಭಿಪ್ರಾಯ ಮೂಡಿಸುವಲ್ಲಿ ಈ ವರ್ಚುವಲ್ ಸಂವಾದ ಬಿಜೆಪಿಗೆ ನೆರವಾಗುವ ನಿರೀಕ್ಷೆಯಿದೆ. ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಕೃಷಿ ಕಾಯ್ದೆಗಳ ಪರ ರಾಜ್ಯಾದ್ಯಂತ ಸರಣಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ.
ಇತ್ತ, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ದೆಹಲಿ ಚಲೋ ನಿರತರರಿಗೆ ಬರೆದ ಪತ್ರವನ್ನು ಪ್ರಧಾನಿ ಮೋದಿ ರಿಟ್ವೀಟ್ ಮಾಡಿದ್ದಾರೆ. ನರೇಂದ್ರ ತೋಮರ್ ಪತ್ರದಲ್ಲಿ, ‘ಕೃಷಿ ಸಮುದಾಯದ ಸಹೋದರ, ಸಹೋದರಿಯರೇ.. ನಿಮ್ಮ ಜೊತೆ ಅತ್ಯಂತ ಪ್ರಾಮಾಣಿಕ ಮತ್ತು ಶಿಷ್ಟಾಚಾರದೊಂದಿಗೆ ಸಂವಾದ ನಡೆಸಲು ಬಯಸುತ್ತೇನೆ’ ಎಂದು ಸೂಚ್ಯವಾಗಿ ಹೇಳಿದ್ದಾರೆ. ಅಲ್ಲದೇ, ದೇಶದ ಎಲ್ಲಾ ಸಾರ್ವಜನಿಕರು ಸಹ ಈ ಪತ್ರವನ್ನು ಓದಬಯಸುವೆ ಎಂದು ಸಹ ಅವರು ಹೇಳಿದ್ದಾರೆ.