ಸರ್ವರಿಗೂ ಶೌಚಾಲಯ -ವಿಶ್ವ ಶೌಚಾಲಯ ದಿನದಂದು ಪ್ರಧಾನಿ ಮೋದಿ ಘೋಷವಾಕ್ಯ

  • Publish Date - 7:27 pm, Thu, 19 November 20
ಸರ್ವರಿಗೂ ಶೌಚಾಲಯ -ವಿಶ್ವ ಶೌಚಾಲಯ ದಿನದಂದು ಪ್ರಧಾನಿ ಮೋದಿ ಘೋಷವಾಕ್ಯ
ಪ್ರಧಾನಿ ನರೇಂದ್ರ ಮೋದಿ

ದೆಹಲಿ: ಶೌಚಾಲಯ ಬಳಸಿ ಆರೋಗ್ಯ ಉಳಿಸಿ. ಸ್ವಚ್ಛತೆ ಕಾಪಾಡಿ ರೋಗ ಮುಕ್ತರಾಗಿ ಮುಂತಾದ ಸಾಲುಗಳನ್ನು ನೀವು ನೋಡಿಯೇ ಇರುತ್ತೀರಿ. ಹೀಗೆ, ಶೌಚಾಲಯ ಬಳಸುವುದನ್ನು ಪ್ರೋತ್ಸಾಹಿಸಲು ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನವಂಬರ್ 19ನ್ನು ವಿಶ್ವ ಶೌಚಾಲಯ ದಿನವೆಂದು ಆಚರಿಸಲಾಗುತ್ತದೆ.

ಮುಂದಿನ ಹತ್ತು ವರ್ಷಗಳಲ್ಲಿ ಪ್ರಪಂಚದ ಎಲ್ಲಾ ಜನರೂ ಶೌಚಾಲಯ ಬಳಸುವಂತಾಗಬೇಕು ಎಂಬ ಆಶಯದಲ್ಲಿ ಈ ದಿನಾಚರಣೆ ಆಚರಿಸಲಾಗುತ್ತದೆ. ಜನಸಮೂಹವು ಆರೋಗ್ಯದಿಂದ ಇರಲು, ಹವಾಮಾನ ಬದಲಾವಣೆಯಲ್ಲಿ ಸುಸ್ಥಿರತೆ ತರುವ ಆಶಯವನ್ನು ವಿಶ್ವ ಶೌಚಾಲಯ ದಿನ 2020 ಹೊಂದಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಟಾಯ್ಲೆಟ್ ಫಾರ್ ಆಲ್ ಎಂಬ ಹ್ಯಾಶ್​ಟ್ಯಾಗ್ ಬಳಸಿದ್ದಾರೆ. ಕಳೆದ ಕೆಲವು ವರ್ಷಗಳಲ್ಲಿ ಭಾರತವು ಕೋಟ್ಯಾಂತರ ಜನರಿಗೆ ಶೌಚಾಲಯ ಮತ್ತು ನೈರ್ಮಲ್ಯದ ಸವಲತ್ತನ್ನು ಒದಗಿಸಿದೆ. ಇದು ವಿಶೇಷವಾಗಿ ದೇಶದ ನಾರಿ ಶಕ್ತಿಗೆ ಘನತೆ ಮತ್ತು ಆರೋಗ್ಯವನ್ನು ತಂದುಕೊಟ್ಟಿದೆ ಎಂದು ಹೇಳಿದ್ದಾರೆ.

ಜೊತೆಗೆ, ಈ ಕುರಿತು ಇಂದು ಟ್ವೀಟ್ ಮಾಡಿರುವ ವಿಶ್ವ ಆರೋಗ್ಯ ಸಂಸ್ಥೆ (WHO), ಪ್ರಪಂಚದ ನಾಲ್ಕರಲ್ಲಿ ಒಂದಕ್ಕಿಂತ ಹೆಚ್ಚು ಮಂದಿ ಶೌಚಾಲಯದ ಸೌಲಭ್ಯವನ್ನು ಪಡೆದಿಲ್ಲ ಎಂದು ಹೇಳಿದೆ. ನೈರ್ಮಲ್ಯವು ಪ್ರತಿಯೊಬ್ಬನ ಹಕ್ಕು ಎಂದು ಸಹ ಹೇಳಿದೆ.

Click on your DTH Provider to Add TV9 Kannada