ಹೊಸದಿಲ್ಲಿ: ಬಜೆಟ್‌ನಲ್ಲಿ ಘೋಷಿಸಲಾದ ಯೋಜನೆಗಳನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನ ಮಾಡುವ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು (Union health and family welfare ministry) ಆಯೋಜಿಸಿರುವ ವೆಬಿನಾರ್ಅನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಶನಿವಾರ (ಫೆ.26) ಉದ್ಘಾಟಿಸಿದ್ದಾರೆ. ನಂತರ ಮಾತನಾಡಿದ ಪ್ರಧಾನಿ, ‘‘ಆರೋಗ್ಯದ ಜೊತೆಗೆ ಪ್ರತಿಯೊಬ್ಬರ ಕ್ಷೇಮದ ಕುರಿತೂ ನಾವು ಗಮನ ಹರಿಸಿದ್ದೇವೆ. ಬಜೆಟ್‌ನಲ್ಲಿ ಮೂರು ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ- ಆಧುನಿಕ ಮೂಲಸೌಕರ್ಯ ಮತ್ತು ಮಾನವ ಸಂಪನ್ಮೂಲ ವಿಸ್ತರಣೆ, ಸಂಶೋಧನೆಗೆ ಉತ್ತೇಜನ ನೀಡುವುದು ಹಾಗೂ ಆಧುನಿಕ ಮತ್ತು ಭವಿಷ್ಯದ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು’ ಎಂದು ಪ್ರಧಾನಿ ಹೇಳಿದ್ದಾರೆ. ದೊಡ್ಡ ನಗರಗಳನ್ನೂ ಮೀರಿ ಆರೋಗ್ಯ ಮೂಲಸೌರ್ಕಯವನ್ನು ವೃದ್ಧಿಸಲು ನಾವು ಬಯಸುತ್ತೇವೆ ಎಂದಿರುವ ಪ್ರಧಾನಿ, ‘ಒಂದು ಭಾರತ, ಒಂದು ಆರೋಗ್ಯ’ ಎಂಬ ಮನೋಭಾವದೊಂದಿಗೆ ಬ್ಲಾಕ್, ಜಿಲ್ಲಾ ಮಟ್ಟದಲ್ಲಿ, ಗ್ರಾಮಗಳಲ್ಲಿ ಅಗತ್ಯ ಆರೋಗ್ಯ ಸೌಲಭ್ಯಗಳನ್ನು ತರಬೇಕು. ಖಾಸಗಿ ವಲಯವು ಅವುಗಳ ನಿರ್ವಹಣೆ ಮತ್ತು ಉನ್ನತೀಕರಣಕ್ಕೆ ಪ್ರಮುಖ ಪಾತ್ರ ವಹಿಸುತ್ತದೆ’ ಎಂದು ಹೇಳಿದ್ದಾರೆ.
ಪ್ರಾಥಮಿಕ ಆರೋಗ್ಯ ರಕ್ಷಣೆ ಜಾಲವನ್ನು ಬಲಪಡಿಸಲು, 1.5 ಲಕ್ಷ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ನಿರ್ಮಾಣದ ಕೆಲಸವು ಪ್ರಗತಿಯಲ್ಲಿದೆ ಎಂದಿರುವ ಪ್ರಧಾನಿ, ಇಲ್ಲಿಯವರೆಗೆ 85,000 ಕ್ಕೂ ಹೆಚ್ಚು ಕೇಂದ್ರಗಳು ಸಾಮಾನ್ಯ ತಪಾಸಣೆ, ಲಸಿಕೆ ಮತ್ತು ಪರೀಕ್ಷೆಗಳ ಸೌಲಭ್ಯವನ್ನು ಒದಗಿಸುತ್ತಿವೆ. ಈ ಬಜೆಟ್‌ನಲ್ಲಿ ಮಾನಸಿಕ ಆರೋಗ್ಯ ಸೌಲಭ್ಯವನ್ನೂ ಸೇರಿಸಲಾಗಿದೆ ಎಂದು ಹೇಳಿದ್ದಾರೆ.
ಆರೋಗ್ಯ ಸೇವೆಗಳ ಬೇಡಿಕೆ ಹೆಚ್ಚುತ್ತಿರುವ ಕಾರಣ, ನಾವು ಅದಕ್ಕೆ ಅನುಗುಣವಾಗಿ ನುರಿತ ಆರೋಗ್ಯ ವೃತ್ತಿಪರರನ್ನು ರಚಿಸಲು ಪ್ರಯತ್ನಿಸುತ್ತಿದ್ದೇವೆ. ಆದ್ದರಿಂದ, ಕಳೆದ ವರ್ಷಕ್ಕೆ ಹೋಲಿಸಿದರೆ ಆರೋಗ್ಯ ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಮಾನವ ಸಂಪನ್ಮೂಲ ಅಭಿವೃದ್ಧಿಗಾಗಿ ಬಜೆಟ್‌ನಲ್ಲಿ ದೊಡ್ಡ ಹೆಚ್ಚಳ ಮಾಡಲಾಗಿದೆ ಎಂದು ಪ್ರಧಾನಿ ಮೋದಿ ನುಡಿದಿದ್ದಾರೆ. ಇದೇ ವೇಳೆ ಪ್ರಧಾನಿ ವೈದ್ಯಕೀಯ ಶಿಕ್ಷಣವನ್ನು ವಿದೇಶಗಳಲ್ಲಿ ಅಭ್ಯಾಸ ಮಾಡದೇ ಇಲ್ಲಿಯೇ ಮಾಡುವಂತೆ ಮನವಿ ಮಾಡಿದರು.
ಪ್ರಧಾನಿ ಮೋದಿ ಭಾಷಣದ ಕುರಿತು ಎಎನ್ಐ ಟ್ವೀಟ್:
We want to build a health infrastructure in India which is beyond the big cities. With a spirit of ‘One India, One Health’ essential health facilities to be brought in villages at block, district level. Pvt sector to play a key role for their maintenance & up-gradation: PM Modi pic.twitter.com/kHYRUHs4M5
— ANI (@ANI) February 26, 2022
ವೆಬಿನಾರ್ನಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ?
ಬಜೆಟ್ ನಂತರದ ಘೋಷಣೆಗಳನ್ನು ನಿರ್ದಿಷ್ಟ ಅವಧಿಯೊಳಗೆ ಅನುಷ್ಠಾನಗೊಳಿಸುವ ವಿಧಾನವನ್ನು ಚರ್ಚಿಸುವ ದೃಷ್ಟಿಯಿಂದ ವೆಬಿನಾರ್ ನಡೆಸಲಾಗುತ್ತಿದೆ. ಕೇಂದ್ರ ಆರೋಗ್ಯ ಮತ್ತು ಆಯುಷ್ ಸಚಿವರಾದ ಮನ್ಸುಖ್ ಮಾಂಡವಿಯಾ ಮತ್ತು ಸರ್ಬಾನಂದ ಸೋನೋವಾಲ್ ಅವರು ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಹೆಚ್ಚುವರಿ ಸಿಇಒ ಆಗಿರುವ ಪ್ರವೀಣ್ ಗೆಡಮ್ ಅವರ ಪ್ರಸ್ತುತಿಯ ನಂತರ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ವಿಕೆ ಪೌಲ್ ಅವರು ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ ಕುರಿತು ಅಧಿವೇಶನವನ್ನು ನಡೆಸಲಿದ್ದಾರೆ.
ನಾರಾಯಣ ಆರೋಗ್ಯಾಲಯದ ಅಧ್ಯಕ್ಷರಾದ ದೇವಿ ಶೆಟ್ಟಿ, ಯಶೋದಾ ಆಸ್ಪತ್ರೆಯ ಉಪಾಸನಾ ಅರೋರಾ, ಮೆಟ್ರೋಪೊಲಿಸ್ ಲ್ಯಾಬ್ನ ನಿರ್ದೇಶಕರಾಗಿರುವ ಅಮೀರ ಶಾ, ಹರ್ಷ್ ಮಹಾಜನ್, ಅಧ್ಯಕ್ಷರು, ನ್ಯಾಟ್ಹೆಲ್ತ್ ಮತ್ತು ಆಯುರ್ವೈಡ್ ಆಸ್ಪತ್ರೆಗಳ ರಾಜೀವ್ ವಾಸುದೇವನ್ ಮೊದಲಾದವರು ವೆಬಿನಾರ್ನಲ್ಲಿ ಮಾತನಾಡಲಿದ್ದಾರೆ. ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷ ಕೆ ಶ್ರೀನಾಥ್ ರೆಡ್ಡಿ ರಾಷ್ಟ್ರೀಯ ಟೆಲಿ-ಮೆಡಿಸಿನ್ ಉಪಕ್ರಮಗಳು ಮತ್ತು ಇ-ಸಂಜೀವನಿ ಕುರಿತ ಅಧಿವೇಶನವನ್ನು ನಡೆಸಲಿದ್ದಾರೆ. ಇದರ ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಮಾತನಾಡಲಿದ್ದಾರೆ.
ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸಸ್ನ ನಿರ್ದೇಶಕಿ ಪ್ರತಿಮಾ ಮೂರ್ತಿ ಅವರು ಈ ವರ್ಷದ ಬಜೆಟ್ನ ಪ್ರಮುಖ ಕೇಂದ್ರವಾಗಿರುವ ಟೆಲಿ-ಮೆಂಟಲ್ ಹೆಲ್ತ್ ಪ್ರೋಗ್ರಾಂ ಕುರಿತು ಅಧಿವೇಶನವನ್ನು ನಡೆಸಲಿದ್ದಾರೆ. ನಂತರ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ವಿಕಾಸ್ ಶೀಲ್ ಅವರು ಟೆಲಿ-ಮೆಡಿಸಿನ್ ಸೇವೆಗಳಿಗಾಗಿ ಸಚಿವಾಲಯದ ಪ್ರಯತ್ನಗಳ ಕುರಿತು ವಿಚಾರಗಳನ್ನು ಪ್ರಸ್ತುಪಡಿಸಲಿದ್ದಾರೆ.
ಇದನ್ನೂ ಓದಿ:
ಖೆಜುರಿ ಬಾಂಬ್ ಸ್ಫೋಟ ಪ್ರಕರಣ; ಪಶ್ಚಿಮ ಬಂಗಾಳದ ಐದು ಪ್ರದೇಶಗಳಲ್ಲಿ ಎನ್ಐಎ ರೇಡ್ !
Published On - 10:34 am, Sat, 26 February 22