ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ (UNSC) ರಷ್ಯಾವು ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ನಿರ್ಣಯವನ್ನು (Russia Ukraine War) ಬಲವಾಗಿ ಖಂಡಿಸಲಾಯಿತು. ಹಾಗೆಯೇ ರಷ್ಯಾವು ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು. ಆದರೆ ಭದ್ರತಾ ಮಂಡಳಿಯ ಖಾಯಂ ಸದಸ್ಯ ರಾಷ್ಟ್ರವಾಗಿರುವ ರಷ್ಯಾ, ತನ್ನ ವೀಟೋ ಅಧಿಕಾರದಿಂದ ನಿರ್ಣಯವನ್ನು ಸಹಜವಾಗಿಯೇ ತಿರಸ್ಕರಿಸಿದೆ. (ವೀಟೋ ಅಧಿಕಾರ ಎಂದರೆ- ಭದ್ರತಾ ಮಂಡಳಿಯ 5 ಖಾಯಂ ಸದಸ್ಯ ರಾಷ್ಟ್ರಗಳಿಗೆ ನಿರ್ಣಯಗಳನ್ನು ತಿರಸ್ಕರಿಸಲು ಇರುವ ಅಧಿಕಾರ; ಒಂದು ರಾಷ್ಟ್ರ ನಿರ್ಣಯಗಳನ್ನು ತಿರಸ್ಕರಿಸಿದರೂ ನಿರ್ಣಯಗಳು ವಿಫಲಗೊಳ್ಳುತ್ತವೆ) ರಷ್ಯಾ ನಿರ್ಣಯ ತಿರಸ್ಕರಿಸಿದ್ದರಿಂದ ಭದ್ರತಾ ಮಂಡಳಿಯ ರಷ್ಯಾ ವಿರುದ್ಧದ ನಿರ್ಣಯ ವಿಫಲಗೊಂಡಂತಾಗಿದೆ. ಆದರೆ ಈ ಬೆಳವಣಿಗೆಯಲ್ಲಿ ರಷ್ಯಾದ ಮುಂಬರುವ ಯೋಜನೆಗಳು, ಕಾರ್ಯತಂತ್ರಗಳು ಮತ್ತು ಪಾಲುದಾರರನ್ನು ಗುರುತಿಸಲು ಸಹಾಯಕವಾಯಿತು ಎಂದು ವರದಿಗಳು ಹೇಳಿವೆ.
ಮತದಾನದ ನಂತರ ಮಾತನಾಡಿದ ಅಮೇರಿಕಾ ರಾಯಭಾರಿ ಲಿಂಡಾ ಥಾಮಸ್-ಗ್ರೀನ್‌ಫೀಲ್ಡ್, ‘‘ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇವೆ. ರಷ್ಯಾ, ನೀವು ಈ ನಿರ್ಣಯವನ್ನು ವೀಟೋ ಮಾಡಬಹುದು. ಆದರೆ ನೀವು ನಮ್ಮ ಧ್ವನಿಗಳನ್ನು ವೀಟೋ ಮಾಡಲಾಗುವುದಿಲ್ಲ. ನೀವು ಸತ್ಯವನ್ನು ವೀಟೋ ಮಾಡಲಾಗುವುದಿಲ್ಲ. ನಮ್ಮ ತತ್ವಗಳನ್ನು ನೀವು ವೀಟೋ ಮಾಡಲಾಗುವುದಿಲ್ಲ. ನೀವು ಉಕ್ರೇನಿಯನ್ ಜನರನ್ನು ವಿಟೋ ಮಾಡಲಾಗುವುದಿಲ್ಲ’’ ಎಂದು ಪ್ರತಿಕ್ರಿಯಿಸಿದ್ದಾರೆ.
ಅಮೇರಿಕಾ ಮತ್ತು ಅಲ್ಬೇನಿಯಾ ಸಹ-ಬರೆದ ನಿರ್ಣಯಕ್ಕೆ 15 ಖಾಯಂ ಮತ್ತು ತಾತ್ಕಾಲಿಕ ಸದಸ್ಯರಲ್ಲಿ ಹನ್ನೊಂದು ಮಂದಿ ಮತ ಹಾಕಿದರು. ಆದರೆ ಮೂರು ದೇಶಗಳು ಮತದಾನದಿಂದ ದೂರ ಉಳಿದವು. ನಿರ್ಣಯದಲ್ಲಿ ಅಂತರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಗಡಿಯೊಳಗೆ ಉಕ್ರೇನ್‌ನ ಸಾರ್ವಭೌಮತ್ವ, ಸ್ವಾತಂತ್ರ್ಯ, ಏಕತೆ ಮತ್ತು ಪ್ರಾದೇಶಿಕ ಸಮಗ್ರತೆಗೆ ಸದಸ್ಯರ ಬದ್ಧತೆಯನ್ನು ಪುನರುಚ್ಚರಿಸಲಾಗಿತ್ತು ಮತ್ತು ಮಿನ್ಸ್ಕ್ ಒಪ್ಪಂದಗಳಿಗೆ ಬದ್ಧವಾಗಿರಲು ಪಕ್ಷಗಳಿಗೆ ಕರೆ ನೀಡಲಾಗಿತ್ತು.
ನಿರ್ಣಯದ ಪರ ಮತ ಹಾಕಿದ ದೇಶಗಳು: ಫ್ರಾನ್ಸ್, ಬ್ರಿಟನ್, ಅಮೇರಿಕಾ, ಅಲ್ಬೇನಿಯಾ, ಬ್ರೆಜಿಲ್, ಗ್ಯಾಬೊನ್, ಘಾನಾ, ಐರ್ಲೆಂಡ್, ಕೀನ್ಯಾ, ಮೆಕ್ಸಿಕೋ ಮತ್ತು ನಾರ್ವೆ ಈ ನಿರ್ಣಯವನ್ನು ಅಂಗೀಕರಿಸಲು ಮತ ಹಾಕಿದ ದೇಶಗಳಾಗಿವೆ.
ಮತದಾನದಿಂದ ದೂರ ಉಳಿದ ದೇಶಗಳು: ಚೀನಾ, ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಮತದಾನದಿಂದ ದೂರವುಳಿದವು. ವಿಶ್ವಸಂಸ್ಥೆಯ ಚೀನಾದ ಖಾಯಂ ಪ್ರತಿನಿಧಿ ಜಾಂಗ್ ಜುನ್ ಅವರು ಕೌನ್ಸಿಲ್‌ಗೆ ತಿಳಿಸುತ್ತಾ, ‘‘ಎಲ್ಲಾ ರಾಜ್ಯಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು. ಮತ್ತು ವಿಶ್ವಸಂಸ್ಥೆಯ ಚಾರ್ಟರ್‌ನ ಉದ್ದೇಶಗಳು ಮತ್ತು ತತ್ವಗಳನ್ನು ಎತ್ತಿಹಿಡಿಯಬೇಕು’’ ಎಂದು ಹೇಳಿದರು.
‘ಒಂದು ದೇಶದ ಭದ್ರತೆಯು ಇತರ ರಾಷ್ಟ್ರಗಳ ಭದ್ರತೆಯನ್ನು ದುರ್ಬಲಗೊಳಿಸುವ ಮೂಲಕ ಬರಲು ಸಾಧ್ಯವಿಲ್ಲ. ಉಕ್ರೇನ್ ಪೂರ್ವ ಮತ್ತು ಪಶ್ಚಿಮದ ನಡುವೆ ಸೇತುವೆಯಾಗಬೇಕು’ ಎಂದು ಜಾಂಗ್ ಹೇಳಿದರು.
ಭದ್ರತಾ ಮಂಡಳಿಯಲ್ಲಿ ಭಾರತದ ನಿಲುವು ಏನಾಗಿತ್ತು? ಪ್ರತಿನಿಧಿ ಹೇಳಿದ್ದೇನು?
ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹಿಂಸಾಚಾರ ಮತ್ತು ಹಗೆತನವನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದರು. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯ ಅಗತ್ಯವನ್ನು ಅವರು ಒತ್ತಿ ಹೇಳಿದರು. ರಾಜತಾಂತ್ರಿಕತೆಯ ಹಾದಿ ಕೈಬಿಟ್ಟು ಯುದ್ಧದ ಮಾರ್ಗ ಹಿಡಿದಿರುವುದು ವಿಷಾದದ ಸಂಗತಿ. ನಾವು ಮಾತುಕತೆಗೆ ಹಿಂತಿರುಗಬೇಕು. ಈ ಎಲ್ಲಾ ಕಾರಣಗಳಿಗಾಗಿ, ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ’ ಎಂದು ತಿರುಮೂರ್ತಿ ಕೌನ್ಸಿಲ್‌ನಲ್ಲಿ ಭಾರತದ ಮತದ ವಿವರಣೆಯಲ್ಲಿ ಹೇಳಿದರು.
ಚೀನಾ ಹಾಗೂ ಭಾರತ ಮತದಾನದಿಂದ ದೂರ ಉಳಿಯಲು ಕಾರಣಗಳು ಬೇರೆ ಬೇರೆ; ಹೇಗೆ?
ಭಾರತ ಹಾಗೂ ಚೀನಾ ಮತದಾನದಿಂದ ದೂರ ಉಳಿದು, ಉಕ್ರೇನ್‌ನ ಸಾರ್ವಭೌಮತ್ವದ ಪರ ತಮ್ಮ ಅಭಿಪ್ರಾಯ ಹಂಚಿಕೊಂಡಿವೆ. ಆದರೆ ಚೀನಾ ಪರೋಕ್ಷವಾಗಿ ರಷ್ಯಾದ ನಡೆಯನ್ನೂ ಬೆಂಬಲಿಸಿದೆ. ಚೀನಾದ ರಾಯಭಾರಿ ಈ ಕುರಿತು ಹೇಳಿಕೆ ನೀಡುತ್ತಾ, ‘‘ಯಾವುದೇ ದೇಶದ ಭದ್ರತೆಯು ಮತ್ತೊಂದು ದೇಶದ ಮತ್ತೊಂದರ ದುರ್ಬಲತೆಯ ಮೂಲಕ ಬರಬಾರದು. ಎಲ್ಲಾ ದೇಶಗಳ ಕಾನೂನುಗಳನ್ನು ನಾವು ಗೌರವಿಸಬೇಕು. ಪೂರ್ವದಲ್ಲಿ ನ್ಯಾಟೋದ ಐದು ಸುತ್ತಿನ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು, ರಷ್ಯಾದ ನಡೆಯನ್ನು ನಾವು ಅರ್ಥ ಮಾಡಿಕೊಳ್ಳಬೇಕು ಹಾಗೂ ಅದಕ್ಕೆ ಪ್ರತಿಕ್ರಿಯೆ ನೀಡಬೇಕು’ ಎಂದಿದ್ದಾರೆ.
ಚೀನಾದ ಹೇಳಿಕೆಗೆ ಪ್ರತಿಕ್ರಿಯಿಸಿದ ಭಾರತದ ರಾಜತಾಂತ್ರಿಕ ಅಧಿಕಾರಿಯೊಬ್ಬರು, ‘‘ಚೀನಾವು ಪರೋಕ್ಷವಾಗಿ ರಷ್ಯಾವನ್ನು ಬೆಂಬಲಿಸಿದಂತೆ ತೋರುತ್ತದೆ. ಆದರೆ ನಮ್ಮ ವಿವರಣೆಯು ವಸ್ತುನಿಷ್ಠವಾಗಿದ್ದು, ಅಂತಾರಾಷ್ಟ್ರೀಯ ಕಾನೂನುಗಳಿಗೆ ಸಮರ್ಪಕವಾಗಿದೆ. ಭಾರತ ಯಾವಾಗಲೂ ಮಾತುಕತೆಗೆ ಪ್ರೋತ್ಸಾಹಿಸುತ್ತದೆ’’ ಎಂದಿದ್ದಾರೆ.
ಭಾರತವು ಮುಂದಿನ ದಿನಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ. ರಷ್ಯಾ ಅಧ್ಯಕ್ಷ ಪುಟಿನ್ ಜತೆ ದೂರವಾಣಿಯಲ್ಲಿ ಪ್ರಧಾನಿ ಮೋದಿ ಮಾತನಾಡುತ್ತಾ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇದನ್ನೂ ಓದಿ:
Published On - 9:47 am, Sat, 26 February 22