ಯುರೋಪ್ನಲ್ಲೀಗ ಯುದ್ಧದ ಕಾರ್ಮೋಡ. ಉಕ್ರೇನ್ ಮೇಲೆ ರಷ್ಯಾ ಸಮರ ಸಾರಿ ಎರಡು ದಿನವೇ ಕಳೆದು ಹೋಯಿತು. ಉಕ್ರೇನ್ನಲ್ಲಿ ಎಲ್ಲಿ ನೋಡಿದರೂ ಸ್ಫೋಟದ ಶಬ್ದ, ಸಾವು-ನೋವು. ಈ ಮಧ್ಯೆ ತಮ್ಮ ರಕ್ಷಣೆಗಾಗಿ ಕಷ್ಟಪಡುತ್ತಿರುವ ನಾಗರಿಕರು. ಉಕ್ರೇನ್ನ ಸುಮಾರು 211 ಸೇನಾ ಸೌಲಭ್ಯ ವ್ಯವಸ್ಥೆಯನ್ನು ನಾಶ ಮಾಡಿದ್ದಾಗಿ ರಷ್ಯ ಹೇಳಿಕೊಂಡಿದ್ದರೆ, ರಷ್ಯಾದ 1000ಕ್ಕೂ ಹೆಚ್ಚು ಸೈನಿಕರನ್ನು ಹೊಡೆದುರುಳಿಸಿದ್ದಾಗಿ ಉಕ್ರೇನ್ ಮಿಲಿಟರಿ ಹೇಳಿಕೊಂಡಿದೆ. ಉಕ್ರೇನ್ನಲ್ಲಂತೂ ಕೇವಲ ಸೈನಿಕರಷ್ಟೇ ಅಲ್ಲ, ಅಲ್ಲಿನ ನಾಗರಿಕರೂ ಶಸ್ತ್ರಾಸ್ತ್ರ ಹಿಡಿದಿದ್ದಾರೆ. ದೇಶರಕ್ಷಣೆಗಾಗಿ ಧಾವಿಸುತ್ತಿದ್ದಾರೆ. ಇಂದು ರಷ್ಯಾ ಸೇನೆ ಉಕ್ರೇನ್ ರಾಜಧಾನಿ ಕೈವ್ನಲ್ಲಿ ತಮ್ಮ ದಾಳಿಯ ತೀವ್ರತೆ ಹೆಚ್ಚಿಸಿವೆ.
ಉಕ್ರೇನ್ನಲ್ಲಿ ಸಿಲುಕಿ ಕನ್ನಡಿಗ ವಿದ್ಯಾರ್ಥಿಗಳು ಪರದಾಡುತ್ತಿದ್ದಾರೆ. ಚಿಕ್ಕಮಗಳೂರು, ಬಾಗಲಕೋಟೆ, ಚಿತ್ರದುರ್ಗದ ವಿದ್ಯಾರ್ಥಿಳು ಸಿಲುಕಿಕೊಂಡಿದ್ದು, ಆದಷ್ಟು ಬೇಗ ನಮ್ಮನ್ನ ಇಲ್ಲಿಂದ ಕರೆದುಕೊಂಡು ಹೋಗಿ ಪ್ಲೀಸ್ ಎಂದು ಮನವಿ ಮಾಡಿಕೊಂಡಿದ್ದಾರೆ. ರಷ್ಯಾ ನಿರಂತರವಾಗಿ ಯುದ್ಧ ಮುಂದುವರೆಸಿದೆ, ಹಾಗಾಗಿ ನಮಗೆ ಬಹಳ ಕಷ್ಟವಾಗುತ್ತಿದೆ. 3 ದಿನಗಳಿಂದ ಬಂಕರ್ಗಳಲ್ಲಿ ರಕ್ಷಣೆ ಪಡೆದುಕೊಂಡಿದ್ದೇವೆ. ಎಂಬೆಸಿ ನಮ್ಮನ್ನ ಕರೆದುಕೊಂಡು ಹೋಗಲು ಪ್ರಯತ್ನ ಮಾಡ್ತಿರುವ ಮಾಹಿತಿ ಸಿಕ್ಕಿದೆ. ಹಾಗಾಗಿ ನಾವು ಮೂರು ದಿನಗಳಿಂದ ಕಾಯುತ್ತಲೇ ಇದ್ದೇವೆ. ಆದಷ್ಟು ಬೇಗ ಕರೆದೊಯ್ಯುವಂತೆ ಮೆಡಿಕಲ್ ವಿದ್ಯಾರ್ಥಿಗಳು ಇಂಡಿಯನ್ ಎಂಬಸಿಗೆ ಮನವಿ ಮಾಡಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಭಾರತೀಯರನ್ನು ಕರೆತರಲಾಗುತ್ತಿದ್ದು, ಮೊದಲನೇ ಬ್ಯಾಚ್ ಮುಂಬೈಗೆ ಬಂದಿಳಿದಿದೆ. ಸದ್ಯ ರೊಮೇನಿಯಾದ ಬುಕಾರೆಸ್ಟ್ನಿಂದ 2ನೇ ವಿಮಾನ ಹೊರಟಿದೆ. 250 ವಿದ್ಯಾರ್ಥಿಗಳನ್ನ ಹೊತ್ತು ಏರ್ಇಂಡಿಯಾ ವಿಮಾನ ದೆಹಲಿಯತ್ತ ಹೊರಟಿದ್ದು, ನಾಳೆ ದೆಹಲಿಗೆ ಬಂದಿಳಿಯಲಿದೆ.
ಉಕ್ರೇನ್‌ನಿಂದ 219 ವಿದ್ಯಾರ್ಥಿಗಳನ್ನ ಏರ್ಇಂಡಿಯಾ ವಿಮಾನದಲ್ಲಿ ಮುಂಬೈಗೆ ಕರೆತರಲಾಗಿದೆ. ರೊಮೇನಿಯಾದ ಬುಕಾರೆಸ್ಟ್ನಿಂದ ಮುಂಬೈಗೆ ಆಗಮಿಸಿರುವ ವಿದ್ಯಾರ್ಥಿಗಳನ್ನ ಕೇಂದ್ರ ಸಚಿವ ಗೋಯಲ್ ಸ್ವಾಗತಿಸಿದ್ದಾರೆ. ಉಕ್ರೇನ್ನಲ್ಲಿನ ಎಲ್ಲಾ ಭಾರತೀಯರನ್ನೂ ಕರೆತರುತ್ತೇವೆ. ಇಂದು ಉಕ್ರೇನ್‌ನಿಂದ ಬಂದಿರುವುದು ಮೊದಲ ಬ್ಯಾಚ್. ಶೀಘ್ರದಲ್ಲೇ ದೆಹಲಿಗೆ ಎರಡನೇ ಬ್ಯಾಚ್ ಆಗಮಿಸಲಿದ್ದು, ಎಲ್ಲ ಭಾರತೀಯರನ್ನ ಕರೆತರುವವರೆಗೂ ನಿಲ್ಲಿಸುವುದಿಲ್ಲ ಎಂದು ಏರ್ಪೋರ್ಟ್ ಬಳಿ ಕೇಂದ್ರ ಸಚಿವ ಗೋಯಲ್ ಹೇಳಿಕೆ ನೀಡಿದ್ದಾರೆ.
ಉಕ್ರೇನ್‌ನಿಂದ 219 ವಿದ್ಯಾರ್ಥಿಗಳನ್ನು ಕರೆತಂದಿರುವ ವಿಮಾನ ಮುಂಬೈ ತಲುಪಿದೆ. ರೊಮೇನಿಯಾದ ಬುಕಾರೆಸ್ಟ್ನಿಂದ ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಲಾಗಿದ್ದು, ಏರ್ ಇಂಡಿಯಾ ವಿಮಾನದಲ್ಲಿ ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ. ನಾಳೆ ದೆಹಲಿಗೆ ಎರಡನೇ ವಿಮಾನ ಬರಲಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ಉಕ್ರೇನ್ ಮುಖ್ಯ ರಸ್ತೆಗಳಲ್ಲಿ ರಷ್ಯಾ ಟ್ಯಾಂಕರ್ಗಳು ಓಡಾಟ ನಡೆಸಿವೆ. ಕಾರ್ಖೀವ್ ಮುಖ್ಯ ರಸ್ತೆಗಳಲ್ಲಿ ಟ್ಯಾಂಕರ್‌ಗಳ ಆರ್ಭಟ ಜೋರಾಗಿದ್ದು, ಅಪಾರ್ಟ್ಮೆಂಟ್ ಬಳಿಯೇ ಬಾಂಬ್ ಸ್ಫೋಟಗೊಳ್ಳುತ್ತಿವೆ. ಬಾಂಬ್ ಸ್ಫೋಟದಿಂದಾಗಿ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಕಾರ್‌ಕೀವ್‌ನಲ್ಲಿ ಯುದ್ದ ನಡೆಯುತ್ತಿದ್ದು, ರಷ್ಯಾ ಸೇನೆ ಮುಗಿಬಿದ್ದಿದೆ. ಆದ್ರೆ ಸರ್ಕಾರ ಕೀವ್‌ನಲ್ಲಿ ಇರುವವರ ರಕ್ಷಣೆ ಮಾತ್ರ ಮಾಡುತ್ತಿದೆ. ದಯವಿಟ್ಟು ಕಾರ್‌ಕಿವ್‌ನಲ್ಲಿನ ವಿದ್ಯಾರ್ಥಿಗಳ ರಕ್ಷಣೆ ಮಾಡಿ ಎಂದು ನೆಲಮಂಗಲ ಮೂಲದ ನವ್ಯಶ್ರೀ ಮನವಿ ಮಾಡಿಕೊಂಡಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ಯುದ್ಧದಿಂದ ಉಕ್ರೇನ್ನಲ್ಲಿ ಊಟಕ್ಕಾಗಿ ಜನರು ಪರದಾಡುವಂತ್ತಾಗಿದೆ. ಉಕ್ರೇನ್ ಸೂಪರ್ ಮಾರ್ಕೆಟ್‌ಗಳಲ್ಲಿ ಆಹಾರ ಸಾಮಗ್ರಿಗಳು ಖಾಲಿಯಾಗಿದ್ದು, ಆಹಾರ ಸಾಮಾಗ್ರಿಗಳನ್ನ ಖರೀದಿಸಲು ಹೋದವರು ಬರಿಗೈಯಲ್ಲಿ ವಾಪಸ್ಸಾಗಿದ್ದಾರೆ. ವಾರ್ ಪ್ರಾರಂಭವಾದಾಗ ಸೂಪರ್ ಮಾರ್ಕೆಟ್‌ನಲ್ಲಿ ಎಲ್ಲಾ ವಸ್ತುಗಳನ್ನ ನಾಗರೀಕರು ಖರೀದಿಸಿದ್ದರು. ಆದರೆ ಈಗ ಆಹಾರ ಸಿಗದೆ ಮಾರ್‌ಕೀವ್ ನಿವಾಸಿಗಳ ಪರದಾಡುವಂತ್ತಾಗಿದೆ.
ಉಕ್ರೇನ್ನಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಸಿಲುಕಿದ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ಈಗಾಗಲೇ ಕ್ರಮ ತೆಗೆದುಕೊಂಡಿದೆ. ಪೂರ್ವ ಭಾಗದಲ್ಲಿ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಯುದ್ಧದ ತೀರ್ವತೆ ಕಡಿಮೆ ಆದ ತಕ್ಷಣ ಪುಟಿನ್ ಜೊತೆ ಮೋದಿ ಮಾತನಾಡಲಿದ್ದಾರೆ. ಈಗಾಗಲೇ ಕೇಂದ್ರ ವಿದೇಶಾಂಗ ಸಚಿವರು ಸಂಪರ್ಕದಲ್ಲಿದ್ದಾರೆ ಎಂದು ಹೇಳಿದರು.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ದೇಶದ ದೊಡ್ಡಣ್ಣ ಅಮೆರಿಕ ಉಕ್ರೇನ್ ದೇಶದ ನೆರವಿಗೆ ಧಾವಿಸಿದೆ. ₹350 ಮಿಲಿಯನ್ ಹೆಚ್ಚುವರಿ ಮಿಲಿಟರಿ ನೆರವು ನೀಡಿದ್ದು, ರಷ್ಯಾ ವಿರುದ್ಧ ರಕ್ಷಿಸಿಕೊಳ್ಳಲು ಉಕ್ರೇನ್ಗೆ ಯುಎಸ್ ನೆರವಾಗಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾಹಿತಿ ನೀಡಿದೆ.
ಉಕ್ರೇನ್ ಅಧ್ಯಕ್ಷ ಪ್ರಧಾನಿ ಮೋದಿಗೆ ಕರೆ ಮಾಡಿ ಮಾಡಿ ಮಾತನಾಡಿದ್ದಾರೆ. ರಷ್ಯಾ ಉಕ್ರೇನ್ ಆಕ್ರಮಿಸಿಕೊಳ್ಳುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರಮೋದಿಯವರಿಗೆ ಮಾಹಿತಿ ನೀಡಿದ್ದಾರೆ. ಒಂದು ಲಕ್ಷ ರಷ್ಯಾ ಸೈನಿಕರು ಉಕ್ರೇನ್ ನೆಲದಲ್ಲಿದ್ದಾರೆ ಎಂಬ ಮಾಹಿತಿ ನೀಡಿದ್ದು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ರಷ್ಯಾ ವಿರುದ್ಧ ಮಾತನಾಡುವಂತೆ ಉಕ್ರೇನ್ ಅಧ್ಯಕ್ಷ ಬೆಂಬಲ ಕೋರಿದ್ದಾರೆ.
ಕಾರವಾರ: ನಿನ್ನೆ ನಾವು ಇದ್ದ ಜಾಗದಲ್ಲಿ ಅಲ್ಲಿಲ್ಲಿ ಬಾಂಬ್ ಸ್ಫೋಟಿಸಲಾಗ್ತಿತ್ತು. ಇವತ್ತು ಅಷ್ಟೊಂದು ಬಾಂಬ್ ಸದ್ದುಗಳು ಕೇಳಿಸುತ್ತಿಲ್ಲ. ಸೇಪ್ ಜಾಗದಲ್ಲಿ ಇದ್ದೆವೆ. ಸದ್ಯ ಇಲ್ಲಿ ಕಪ್ಯೂ೯ ಜಾರಿಮಾಡಿದ್ದಾರೆ ಎಂದು ಉಕ್ರೇನ್ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿನಿ ಸ್ನೇಹಾ ಹೇಳಿದ್ದಾಳೆ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡದ ವಿದ್ಯಾರ್ಥಿನಿಯಾದ ಸ್ನೇಹಾ ಹೊಸಮನಿ, ಉಕ್ರೇನ್ ಖಾರ್ಕಿವ್ ಯುನಿವರ್ಸಿಟಿಯಲ್ಲಿ ಮೆಡಿಕಲ್ ನಾಲ್ಕನೆ ವರ್ಷ ಓದುತ್ತಿದ್ದಾರೆ. ಕರೆಂಟ್ ಬಹಳ ಹೊತ್ತು ಇರಲ್ಲ. ನಾವೀಗ ಮೆಟ್ರೋದಲ್ಲಿ ಇದ್ದು, ನಮ್ಮ ಸುತ್ತಮುತ್ತಲಿನ ಏರಿಯಾದಲ್ಲಿ ಬಾಂಬ್ ಸ್ಫೋಟವಾಗುತ್ತಿವೆ. ನಮ್ಮನ್ನ ಆದಷ್ಟು ಬೇಗ ಭಾರತಕ್ಕೆ ಕರೆಸಿಕೊಳ್ಳಿ ಎಂದು ವಿದ್ಯಾರ್ಥಿ ಸ್ನೇಹ ಮನವಿ ಮಾಡಿದ್ದಾಳೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದೆ. ಪ್ರಧಾನಿ ಮೋದಿ ಜತೆ ಉಕ್ರೇನ್ ಅಧ್ಯಕ್ಷರ ಮಾತುಕತೆ ಮಾಡಿದ್ದು, ರಷ್ಯಾ ದಾಳಿಯ ಬಗ್ಗೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಪ್ರಧಾನಿಗೆ ವಿವರಿಸಿದ್ದಾರೆ. ಯುಎನ್ಎಸ್ಸಿಯಲ್ಲಿ ಉಕ್ರೇನ್ಗೆ ಬೆಂಬಲಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರು ಉಕ್ರೇನ್‌ನಲ್ಲಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ಯುರೋಪ್ ಒಕ್ಕೂಟ ಉಕ್ರೇನ್ ಬೆಂಬಲಕ್ಕೆ ನಿಂತುಕೊಂಡಿದೆ. ಶಸ್ತ್ರಾಸ್ತ್ರ ಸೇರಿ ಇತರೆ ಸಹಾಯ ಮಾಡುವುದಾಗಿ ಘೋಷಣೆ ಮಾಡಿದ್ದು, ಈ ಕುರಿತು ಪೋಲೆಂಡ್ ರಾಯಭಾರ ಕಚೇರಿ ಮಾಹಿತಿ ನೀಡಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, ಸಾಕಷ್ಟು ಸಾವು ನೋವುಗಳು ಸಂಭವಿಸಿವೆ. ಕೀವ್‌ನಲ್ಲಿ ಕಠಿಣ ಕರ್ಫ್ಯೂ ಜಾರಿ ಮಾಡಿ ಮೇಯರ್ ಆದೇಶ ಹೊರಡಿಸಿದ್ದು, ಸಂಜೆ 5 ಗಂಟೆಯಿಂದ ಬೆಳಗ್ಗೆ 8 ಗಂಟೆವರೆಗೆ ಕಠಿಣ ಕರ್ಫ್ಯೂ ಜಾರಿಯಲ್ಲಿರಲಿದೆ. ಮನೆಯಿಂದ ಹೊರಬಂದವರನ್ನು ದೇಶದ್ರೋಹಿಗಳೆಂದು ಪರಿಗಣಿಸಲಾಗುತ್ತೆ ಎಂದು ಕೀವ್ ಮೇಯರ್ ಆದೇಶಿಸಿದ್ದಾರೆ.
ಕೊಪ್ಪಳ: ಜಿಲ್ಲೆ ಯಲಬುರ್ಗಾ ತಾಲೂಕಿನ ಯರೇಹಂಚಿನಾಳ ನಿವಾಸಿ ಚಂದನ್ ಸಾದರ್ ಎನ್ನುವ ಮತ್ತೋರ್ವ ವಿದ್ಯಾರ್ಥಿ ಉಕ್ರೇನ್ನಲ್ಲಿ ಸಿಲುಕಿಕೊಂಡಿದ್ದಾನೆ. ಕಳೆದ ಮೂರು ತಿಂಗಳ ಹಿಂದೆ ಉಕ್ರೇನ್ಗೆ ಹೋಗಿರೋ ಚಂದನ್, ವೈದ್ಯಕೀಯ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸದ್ಯ ನಿನ್ನೆ ತಂದೆಯೊಂದಿಗೆ ಮಾತನಾಡಿರೋ ಚಂದನ್, ಯಾವುದೇ ಭಯವಿಲ್ಲ ಎಂದು ಹೇಳಿದ್ದಾನೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಸಾರಿದ್ದು, 1 ಲಕ್ಷ 20 ಸಾವಿರ ಜನರು ಉಕ್ರೇನ್ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಿಂದ ಮಾಹಿತಿ ನೀಡಲಾಗಿದೆ. ಇನ್ನೂ ಜೀವ ಉಳಿಸಿಕೊಳ್ಳಲು ಉಕ್ರೇನ್ ಜನರು ಪರದಾಡುತ್ತಿದ್ದಾರೆ. ಪೋಲೆಂಡ್ ಗಡಿ ಬಳಿ ಸಾವಿರಾರು ಉಕ್ರೇನಿಗರು ಬೀಡುಬಿಟ್ಟಿದ್ದಾರೆ.
ರಷ್ಯಾ ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ನಲ್ಲಿ (Russia-Ukraine War) ನಾಗರಿಕರೂ ಕೂಡ ಕೈಯಲ್ಲಿ ಎಕೆ 47, ರೈಫಲ್ಗಳನ್ನು ಹಿಡಿಯುತ್ತಿದ್ದಾರೆ. ಸ್ವತಃ ಉಕ್ರೇನ್ ಅಧ್ಯಕ್ಷರೇ ಸೇನಾ ಸಮವಸ್ತ್ರ ಧರಿಸಿ, ಕೈಯಲ್ಲಿ ಬಂದೂಕು ಹಿಡಿದಿದ್ದು, ವೃದ್ಧರೂ ಸೇನೆಯನ್ನು ಸೇರಿ ದೇಶ ರಕ್ಷಿಸಲು ಮುಂದಡಿ ಇಡುತ್ತಿದ್ದಾರೆ. ಇದೇ ಹೊತ್ತಲ್ಲಿ ಉಕ್ರೇನ್ ಮಾಜಿ ಅಧ್ಯಕ್ಷ ಪೆಟ್ರೋ ಪೊರೊಶೆಂಕೊ ಅವರೂ ಸಹ ಕೈಯಲ್ಲಿ ಕಲಾಶ್ನಿಕೋವ್ ಹಿಡಿದು ಕೈವ್ನ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಇದೇ ವೇಳೆ ಸಿಎನ್ಎನ್ ಸುದ್ದಿ ಮಾಧ್ಯಮ ಅವರನ್ನು ಸಂದರ್ಶಿಸಿದಾಗ ರಷ್ಯಾ ವಿರುದ್ಧ ಕಿಡಿಕಾರಿದ್ದಲ್ಲದೆ, ಅಧ್ಯಕ್ಷ ಪುಟಿನ್ ಒಬ್ಬ ಹುಚ್ಚ ಎಂದು ಹೇಳಿದ್ದಾರೆ.
ನನ್ನ ಕೈಯಲ್ಲಿ ಇರುವುದು ಕಲಾಶ್ನಿಕೋವ್. ನಾವು ಪ್ರಾದೇಶಿಕ ರಕ್ಷಣಾ ಬೆಟಾಲಿಯನ್‌ನಲ್ಲಿ 300 ಸದಸ್ಯರನ್ನು ಹೊಂದಿದ್ದೇವೆ. ನಮ್ಮ ಬಳಿ ಎರಡು ಮಶಿನ್ ಗನ್ಗಳಿವೆ. ಭಾರಿ ಪ್ರಮಾಣದ ಫಿರಂಗಿಗಳಾಗಲಿ, ಯುದ್ಧಟ್ಯಾಂಕ್ಗಳಾಗಲೀ ಇಲ್ಲ. ನಮಗೆ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳು ಅಗತ್ಯ ಇವೆ ಎಂದು ತಿಳಿಸಿದ್ದಾರೆ. ಅಷ್ಟೇ ಅಲ್ಲ, ಪುಟಿನ್ ಯುದ್ಧ ಮಾಡುತ್ತಿರುವುದು ಬರೀ ಉಕ್ರೇನ್ಗಾಗಿ ಅಲ್ಲ, ಅವರು ಇಡೀ ವಿಶ್ವಕ್ಕಾಗಿ ಯುದ್ಧ ಮಾಡುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಪೊರೊಶೆಂಕೋ ಹೇಳಿದ್ದಾರೆ.
ಇಂದು 219 ಭಾರತೀಯರು ಸುರಕ್ಷಿತವಾಗಿ ವಾಪಸ್ ದೇಶಕ್ಕೆ ಬರುತ್ತಿದ್ದಾರೆ. ಈ ಮಧ್ಯೆ ಕಾರ್ಖಿವ್ ಮೆಟ್ರೋ ಸ್ಟೇಶನ್ನಲ್ಲಿ ಭಾರತದ 160 ವಿದ್ಯಾರ್ಥಿಗಳು ಸಿಲುಕಿದ್ದಾಗಿ ವರದಿಯಾಗಿದೆ. ಇನ್ನು ಮಹಾರಾಷ್ಟ್ರದ ಪಾಲ್ಗಾರ್ ಮತ್ತು ಥಾಣೆಯ ಸುಮಾರು 28 ವಿದ್ಯಾರ್ಥಿಗಳು ಉಕ್ರೇನ್ನಲ್ಲಿ ಸಿಲುಕಿ ಕಷ್ಟಪಡುತ್ತಿದ್ದಾರೆ ಎಂದೂ ವರದಿಯಾಗಿದೆ.
ಆಕ್ರಮಣಕ್ಕೆ ಒಳಗಾಗಿರುವ ಉಕ್ರೇನ್ ಅಧ್ಯಕ್ಷರಿಗೆ ಸ್ವಿಟ್ಜರ್ಲ್ಯಾಂಡ್ ಮತ್ತು ಗ್ರೀಸ್ ಅಧ್ಯಕ್ಷರು ಕರೆ ಮಾಡಿ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಉಕ್ರೇನ್ ಅಧ್ಯಕ್ಷ, ಸ್ವಿಟ್ಜರ್’ಲ್ಯಾಂಡ್ ಅಧ್ಯಕ್ಷ ಇಗ್ನಾಜಿಯೊ ಕ್ಯಾಸಿಸ್ ಮತ್ತು ಗ್ರೀಸ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೋಟಾಕಿಸ್ರೊಟ್ಟಿಗೆ ಮಾತನಾಡಿದ್ದೇನೆ. ಅವರಿಬ್ಬರೂ ಉಕ್ರೇನ್ಗೆ ಬೆಂಬಲ ಸೂಚಿಸಿದ್ದು ಸಮಾಧಾನ ತಂದಿದ್ದು, ಅವರಿಗೆ ಕೃತಜ್ಞತೆಗಳು ಎಂದು ಹೇಳಿದ್ದಾರೆ.
I’m getting support calls. Spoke with President of Switzerland @ignaziocassis and Prime Minister of Greece @kmitsotakis. Thank you for the decisions on concrete assistance to ??!
— Володимир Зеленський (@ZelenskyyUa) February 26, 2022
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ತರಾತುರಿಯಲ್ಲಿ ಕೈವ್ನ್ನು ತೊರೆದಿದ್ದಾರೆ. ಅವರು ಲ್ವಿವ್ನಲ್ಲಿ ತಮ್ಮ ಪರಿವಾರದೊಂದಿಗೆ ನೆಲೆಸಿದ್ದಾರೆ ಎಂದು ರಷ್ಯಾ ಫೆಡರಲ್ ಅಸ್ಸೆಂಬ್ಲಿಯ ಕೆಳಮನೆ ಸ್ಪೀಕರ್ ವ್ಯಾಚೆಸ್ಲಾವ್ ವೊಲೊಡಿನ್ ಟೀಕಿಸಿದ್ದಾರೆ.
ಉಕ್ರೇನ್ನ ಆಗ್ನೇಯ ಝಪೊರಿಜ್ಜಿಯಾ ಪ್ರದೇಶದಲ್ಲಿರುವ ಮೆಲಿಟೊಪೋಲ್ ನಗರವನ್ನು ರಷ್ಯಾ ಸೇನೆ ವಶಪಡಿಸಿಕೊಂಡಿದೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ತಿಳಿಸಿದೆ. ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ಮಾಡಿದಾಗಿನಿಂದಲೂ ಇಲ್ಲಿಯವರೆಗೆ ವಶಪಡಿಸಿಕೊಂಡ ಅತ್ಯಂತ ಮಹತ್ವದ, ಜನಸಂಖ್ಯಾ ನಿಬಿಡ ಪ್ರದೇಶ ಈ ಮೆಲಿಟೊಪೋಲ್. ಇಲ್ಲಿನ ಪೊಲೀಸ್ ಠಾಣೆಯ ಮೇಲೆ ರಷ್ಯಾ ಸೇನೆ ತಮ್ಮ ರಾಷ್ಟ್ರದ ಧ್ವಜ ಹಾರಿಸಿದೆ. ಅಷ್ಟೇ ಅಲ್ಲ, ಉಕ್ರೇನ್ನ ನೂರಾರು ಮಿಲಿಟರಿ ಉಪಕರಣಗಳ ವ್ಯವಸ್ಥೆಯನ್ನು ನಾಶ ಪಡಿಸಿದ್ದೇವೆ, ಸೇನಾ ವಿಮಾನಗಳು, ಫಿರಂಗಿಗಳನ್ನು ನಾಶ ಮಾಡಿದ್ದಾಗಿಯೂ ಹೇಳಿದೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ಬೆನ್ನಲ್ಲೇ ಹಲವು ದೇಶಗಳು ವಿವಿಧ ನಿರ್ಬಂಧಗಳನ್ನು ಅದರ ಮೇಲೆ ಹೇರಿವೆ. ಈ ಮಧ್ಯೆ ಲಾಟ್ವಿಯಾ ರಷ್ಯಾದ ವಿಮಾನ ಸಂಚಾರಕ್ಕೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ ಎಂದು ವರದಿಯಾಗಿದೆ.
ಉಕ್ರೇನ್ನಲ್ಲಿರುವ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ. ವಿಶೇಷ ವಿಮಾನಗಳು ದೆಹಲಿ ಮತ್ತು ಮುಂಬೈನಿಂದ ಸಂಚರಿಸುತ್ತಿವೆ. ಅದಾಗಲೇ ರೊಮೇನಿಯಾದಿಂದ ಒಂದು ವಿಶೇಷ ವಿಮಾನದಲ್ಲಿ 219 ಭಾರತೀಯರು ಮುಂಬೈನತ್ತ ಹೊರಟಿದ್ದಾರೆ. ಈ ಮಧ್ಯೆ ಕೇರಳ ಸರ್ಕಾರ ಒಂದು ಘೋಷಣೆ ಮಾಡಿದೆ. ಮುಂಬೈ ಮತ್ತು ದೆಹಲಿಗೆ ಬಂದು ಇಳಿದು, ಅಲ್ಲಿಂದ ಕೇರಳಕ್ಕೆ ಬರುವ ಇಲ್ಲಿನ ಪ್ರಜೆಗಳಿಗೆ ನಮ್ಮ ಸರ್ಕಾರದಿಂದಲೇ ಉಚಿತ ಟಿಕೆಟ್ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ನಾವು ಶತ್ರುಗಳೊಂದಿಗೆ ಯಶಸ್ವಿಯಾಗಿ, ಧೈರ್ಯದಿಂದ ಹೋರಾಡುತ್ತಿದ್ದೇವೆ ಎಂದು ಹೇಳಿಕೊಂಡಿರುವ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ದೇಶವನ್ನು ರಕ್ಷಿಸಲು ಯಾರೇ ಮುಂದೆ ಬಂದರೂ ಅವರಿಗೆ ಶಸ್ತ್ರಾಸ್ತ್ರ ನೀಡುವುದಾಗಿ ಪುನರುಚ್ಚರಿಸಿದ್ದಾರೆ. ಸ್ವಿಫ್ಟ್ನಿಂದ ರಷ್ಯಾವನ್ನು ನಿರ್ಬಂಧಿಸಲು ಜರ್ಮನಿ ಮತ್ತು ಪೋಲ್ಯಾಂಡ್ಗಳೂ ಬೆಂಬಲ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ. ಕೈವ್ನಲ್ಲಿ ರಷ್ಯಾ ದಾಳಿ ಮುಂದುವರಿದಿದ್ದರೂ, ಅದಿನ್ನೂ ನಮ್ಮ ಕೈವಶದಲ್ಲೇ ಇರುವುದಾಗಿ ಉಕ್ರೇನ್ ಹೇಳಿಕೊಂಡಿದೆ.
ಸ್ವಿಫ್ಟ್ ಬ್ಯಾಂಕಿಂಗ್ ವ್ಯವಸ್ಥೆಯಿಂದ ರಷ್ಯಾವನ್ನು ಹೊರಗಿಡಬೇಕು ಎಂದು ಫ್ರಾನ್ಸ್ ಹೇಳಿದೆ. ಉಕ್ರೇನ್ ಮೇಲೆ ಆಕ್ರಮಣ ಮಾಡಿರುವ ರಷ್ಯಾದ ಮೇಲಿನ ನಿರ್ಬಂಧವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿರುವ ಆ ದೇಶ, ಉಕ್ರೇನ್ಗೆ ಅಗತ್ಯ ಶಸ್ತ್ರಾಸ್ತ್ರ ಮತ್ತು ಮಿಲಿಟರಿ ಉಪಕರಣಗಳ ಪೂರೈಸಲು ಸಿದ್ಧವಿರುವಾಗಿ ತಿಳಿಸಿದೆ.
ಜೆಕ್ ರಿಪಬ್ಲಿಕ್ ನ ರಾಜಧಾನಿ ಪ್ರೇಗ್ನಿಂದ ಶೀಘ್ರದಲ್ಲೇ ಮಶಿನ್ಗನ್ಗಳು, ಅಟೋಮ್ಯಾಟಿಕ್ ಮತ್ತು ಸ್ನಿಪರ್ ರೈಫಲ್ಗಳು ಪೂರೈಕೆ ಆಗಲಿವೆ. ಸುಮಾರು 8.6 ಮಿಲಿಯನ್ ಡಾಲರ್ಗಳಷ್ಟು ಮೌಲ್ಯದ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ನೀಡುವುದಾಗಿ ಅಲ್ಲಿನ ರಕ್ಷಣಾ ಸಚಿವರು ತಿಳಿಸಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ, ಮಾಸ್ಕೋದಲ್ಲಿ ಮಾರ್ಚ್ 24ರಂದು ನಡೆಯಲಿರುವ 2022ರ ವರ್ಲ್ಡ್ಕಪ್ ಪ್ಲೇ ಆಫ್ನಲ್ಲಿ ರಷ್ಯಾದೊಂದಿಗೆ ಆಟವಾಡುವುದಿಲ್ಲ ಎಂದು ಪೋಲಿಶ್ ಫೂಟ್ಬಾಲ್ ಫೆಡರೇಶನ್ ಹೇಳಿದೆ.
ರಷ್ಯಾ ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಯನ್ನು assault, invasion ಅಥವಾ declaration of war ಎಂಬ ಶಬ್ದಗಳಿಂದ ವಿವರಿಸಬಾರದು. ಹಾಗೊಮ್ಮೆ ಇಂಥ ಶಬ್ದಗಳನ್ನು ಬಳಸಿ ವರದಿ ಮಾಡಿದ್ದರೆ ಅದನ್ನು ಕೂಡಲೇ ತೆಗೆದು ಹಾಕಿ ಎಂದು ರಷ್ಯಾ ಮಾಧ್ಯಮಗಳಿಗೆ ಅಲ್ಲಿನ ಸಂಪರ್ಕ-ಸಂವಹನ ನಿಯಂತ್ರಕ ಸಂಸ್ಥೆ ಆದೇಶ ನೀಡಿದೆ. ಈ ನಿರ್ಬಂಧ ಉಲ್ಲಂಘಿಸಿದರೆ ದಂಡ ವಿಧಿಸುವುದಾಗಿಯೂ ಹೇಳಿದೆ.
ರಷ್ಯಾ ಆಕ್ರಮಣಕ್ಕೆ ತುತ್ತಾಗಿರುವ ಉಕ್ರೇನ್ಗೆ ನೆದರ್ಲ್ಯಾಂಡ್ ಶೀಘ್ರದಲ್ಲೇ 200 ಏರ್ ಡಿಫೆನ್ಸ್ ರಾಕೆಟ್ಗಳನ್ನು ಪೂರೈಸಲಿದೆ. ಈ ಬಗ್ಗೆ ಡಚ್ ಸರ್ಕಾರ ತನ್ನ ಸಂಸತ್ತಿನಲ್ಲಿ ಲಿಖಿತವಾಗಿ ಪ್ರಕಟಣೆ ಹೊರಡಿಸಿದೆ. ಹಾಗೇ, ಭದ್ರತೆಯ ದೃಷ್ಟಿಯಿಂದ, ಉಕ್ರೇನ್ನ ಪಶ್ಚಿಮ ನಗರದಲ್ಲಿರುವ ಡಚ್ ರಾಯಭಾರಿ ಕಚೇರಿ ಸಿಬ್ಬಂದಿಯನ್ನು ತಕ್ಷಣವೇ ಲ್ವಿವ್ನಿಂದ ಪೋಲ್ಯಾಂಡ್ ಗಡಿಯಲ್ಲಿರುವ ಜರೋಸ್ಲಾವ್ಗೆ ಸ್ಥಳಾಂತರ ಮಾಡುವುದಾಗಿಯೂ ತಿಳಿಸಿದೆ.
ರಷ್ಯಾದ ದಾಳಿಗೆ ಉಕ್ರೇನ್ನಲ್ಲಿ 3 ಮಕ್ಕಳು ಸೇರಿ 198 ಜನರು ಮೃತಪಟ್ಟಿದ್ದಾರೆ. 33 ಮಕ್ಕಳು ಸೇರಿ 1115 ಮಂದಿ ಗಾಯಗೊಂಡಿದ್ದಾರೆ ಎಂದು ಇಂದು ಉಕ್ರೇನ್ ಆರೋಗ್ಯ ಸಚಿವ ವಿಕ್ಟೋರ್ ಲ್ಯಾಶ್ಕೋ ತಿಳಿಸಿದ್ದಾರೆ. ಆದರೆ ಈ ಸಂಖ್ಯೆ ಕೇವಲ ನಾಗರಿಕರಿಗೆ ಸಂಬಂಧಪಟ್ಟಿದ್ದೋ, ಸೈನಿಕರನ್ನೂ ಸೇರಿಸಿ ನೀಡಿದ ಲೆಕ್ಕವೋ ಎಂಬುದಿನ್ನೂ ಪಕ್ಕಾ ಆಗಿಲ್ಲ.
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿರುವ ಬೆನ್ನಲ್ಲೇ, ಅಲ್ಲಿರುವ ಭಾರತೀಯ ಸುರಕ್ಷತೆಯನ್ನು ಭಾರತ ಸರ್ಕಾರ ಆದ್ಯತೆಯನ್ನಾಗಿ ಪರಿಗಣಿಸಿದೆ. ಉಕ್ರೇನ್ನಲ್ಲಿರುವ ಭಾರತೀಯರನ್ನು ವಾಪಸ್ ಕರೆತರಲು ನಮ್ಮ ತಂಡ 24ಗಂಟೆಯೂ ಕಾರ್ಯಾಚರಣೆ ನಡೆಸುತ್ತಿದೆ. ವೈಯಕ್ತಿಕವಾಗಿ ನಾನೂ ಸಹ ಪರಿಶೀಲನೆ ನಡೆಸುತ್ತಿದ್ದೇನೆ ಎಂದು ಕೇಂದ್ರ ಸಚಿವ ಎಸ್.ಜೈಶಂಕರ್ ಮಾಹಿತಿ ನೀಡಿದ್ದಾರೆ.
ಯುದ್ಧ ಪೀಡಿತ ಉಕ್ರೇನ್ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳು ಸೇರಿ ಭಾರತದ ಹಲವರು ಸಿಲುಕಿದ್ದಾರೆ. ಅಲ್ಲಿರುವ ಕರ್ನಾಟಕದ ವಿದ್ಯಾರ್ಥಿಗಳ ಜತೆ ಮಾತನಾಡಲಾಗಿದೆ. ಒಂದು ಲಿಸ್ಟ್ ಮಾಡಿ ಭಾರತದ ವಿದೇಶಾಂಗ ಸಚಿವಾಲಯಕ್ಕೆ ಕಳಿಸಿದ್ದೇವೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ತಾನು ಜನವಸತಿ ಪ್ರದೇಶಗಳ ಮೇಲೆ ದಾಳಿ ನಡೆಸುತ್ತಿಲ್ಲ ಎಂದು ಹೇಳಿಕೊಂಡಿದೆ. ಇದುವರೆಗೆ ಉಕ್ರೇನ್ನ 821 ಸೇನಾ ಯುನಿಟ್ಗಳನ್ನು ಧ್ವಂಸಗೊಳಿಸಿದ್ದೇವೆ. 24 ಏರ್ ಡಿಫೆನ್ಸ್ ಕ್ಷಿಪಣಿಗಳನ್ನು ಮತ್ತು 48 ರಾಡಾರ್ ಕೇಂದ್ರಗಳನ್ನು ಧ್ವಂಸಗೊಳಿಸಿದ್ದಾಗಿ ರಷ್ಯಾ ತಿಳಿಸಿದೆ.
ಉಕ್ರೇನ್‌ನಲ್ಲಿದ್ದ 240 ಭಾರತೀಯರು ಇದೀಗ ರೊಮಾನಿಯಾದಲ್ಲಿ ಸುರಕ್ಷಿತವಾಗಿ ವಿಮಾನ ಹತ್ತಿದ್ದು, ಕೆಲವೇ ತಾಸುಗಳಲ್ಲಿ ಭಾರತಕ್ಕೆ ಬರಲಿದ್ದಾರೆ. ಇದರಲ್ಲಿ ಕನ್ನಡಿಗರೂ ಸೇರಿದ್ದಾರೆ. ಉಕ್ರೇನ್ನಲ್ಲಿರುವ ಭಾರತೀಯರನ್ನು ರಕ್ಷಿಸಲು ದೆಹಲಿ ಮತ್ತು ಮುಂಬೈನಿಂದ ಎರಡು ವಿಶೇಷ ವಿಮಾನಗಳು ಹೊರಟಿದ್ದವು. ಆದರೆ ದೆಹಲಿಯಿಂದ ಹೊರಟ ವಿಮಾನಕ್ಕೆ ಅನುಮತಿ ಸಿಕ್ಕಿರಲಿಲ್ಲ. ಹೀಗೆ 240 ಜನರು ವಿಮಾನ ಹತ್ತಿದ ಬಗ್ಗೆ ಬೆಂಗಳೂರು ಮೂಲದ ವಿದ್ಯಾರ್ಥಿನಿ ಇಂಚರಾ ಎಂಬುವಳು ಟಿವಿ9ಗೆ ಮಾಹಿತಿ ನೀಡಿದ್ದಾಳೆ.
ರಷ್ಯಾ ಸೇನೆಯ ದಾಳಿಗೆ ಉಕ್ರೇನ್ ತತ್ತರಿಸಿದೆ. ಇಂದು ಕೈವ್ನಲ್ಲಿರುವ ಅತ್ಯಂತ ಎತ್ತರದ ಅಪಾರ್ಟ್ಮೆಂಟ್ವೊಂದರ ಮೇಲೆ ಕ್ಷಿಪಣಿ ದಾಳಿ ನಡೆದದ್ದು, ವಿಡಿಯೋ ವೈರಲ್ ಆಗಿದೆ.
WATCH: Video shows the moment a high-rise building in Kyiv is hit by a missile pic.twitter.com/adrd6LSfIL
— BNO News (@BNONews) February 26, 2022
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಶನಿವಾರ (ಇಂದು) ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನಮ್ಮ ಕೆಲವು ಸಹಭಾಗಿ ದೇಶಗಳು ಕೈವ್ಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಮೂಲಕ ರಷ್ಯಾ ವಿರುದ್ಧ ಹೋರಾಡಲು ಸಹಾಯ ಮಾಡುತ್ತಿವೆ ಎಂದು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ಈಗ ಸುಮಾರು ಬೆಳಗ್ಗೆ 10.30. ಇಲ್ಲಿವರೆಗೆ ಏನಾಯಿತೆಂದು ಕೈವ್ನ ಮೇಯರ್ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿಯಿಡೀ ರಷ್ಯಾ ಕೈವ್ನಲ್ಲಿ ದಾಳಿ ನಡೆಸಿದ್ದು, ಇದರಲ್ಲಿ ಮಕ್ಕಳೂ ಸೇರಿ ಸುಮಾರು 35 ಮಂದಿ ಮೃತಪಟ್ಟಿದ್ದಾರೆ ಎಂದು ಕೈವ್ ಮೇಯರ್ ತಿಳಿಸಿದ್ದಾಗಿ ಗಾರ್ಡಿಯನ್ ವರದಿ ಮಾಡಿದೆ. ಅಪಾರ್ಟ್ಮೆಂಟ್ವೊಂದರ ಮೇಲೆ ರಷ್ಯಾದ ಕ್ಷಿಪಣಿ ದಾಳಿ ನಡೆಸಿದೆ. ಹಾಗಿದ್ದಾಗ್ಯೂ ಅದೃಷ್ಟವಶಾತ್ ಯಾರ ಪ್ರಾಣವೂ ಹೋಗಿಲ್ಲ ಎಂದೂ ತಿಳಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೈವ್ನಲ್ಲಿ ನಿರಂತರ ದಾಳಿ ನಡೆಸುತ್ತಿರುವ ರಷ್ಯಾ ಸೇನಾ ಪಡೆಗಳು ಇದೀಗ ಅಲ್ಲಿನ ಜಲವಿದ್ಯುತ್ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡಿವೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಈ ಜಲವಿದ್ಯುತ್ ಸ್ಥಾವರ ಕೈವ್ನ ಉತ್ತರದಲ್ಲಿದ್ದು, ರಷ್ಯಾ ಅದನ್ನು ಅತಿಕ್ರಮಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದಾಗಿ ರಾಯಿಟರ್ಸ್ ಹೇಳಿದೆ.
ರಷ್ಯಾ ನಮ್ಮ ಸ್ನೇಹಿತ. ಆದರೆ ಸ್ನೇಹಿತರು ತಪ್ಪು ಮಾಡಿದಾಗ ಅದನ್ನು ತಿದ್ದಬೇಕಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ. ನಮ್ಮ ಕಷ್ಟದ ಸಂದರ್ಭದಲ್ಲಿ ರಷ್ಯಾ ಬೆಂಬಲಕ್ಕೆ ನಿಂತಿತ್ತು. ರಷ್ಯಾಕ್ಕೆ ಸಂಬಂಧಪಟ್ಟಂತೆ ಒಂದಷ್ಟು ದೇಶಗಳು ಈಗ ಪ್ರಜಾಪ್ರಭುತ್ವ ಬೆಂಬಲಿಸುತ್ತಿದ್ದರೆ, ಇನ್ನೊಂದಷ್ಟು ರಾಷ್ಟ್ರಗಳು ನಿರಂಕುಶ ಪ್ರಭುತ್ವವನ್ನು ಎತ್ತಿ ಹಿಡಿಯುತ್ತಿದ್ದಾರೆ. ಭಾರತ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ರಷ್ಯಾ ದಾಳಿ ಬೆನ್ನಲ್ಲೇ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಒಂದರ ಮೇಲೊಂದರಂತೆ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಜನರಿಗೆ ಧೈರ್ಯವನ್ನೂ ಹೇಳುತ್ತಿದ್ದಾರೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ನಾನು ನನ್ನ ಸೇನೆಗೆ ಶಸ್ತ್ರಗಳನ್ನು ತ್ಯಜಿಸಿ, ರಷ್ಯಾಕ್ಕೆ ಶರಣಾಗುವಂತೆ ಆದೇಶ ನೀಡಿದ್ದೇನೆ ಎಂಬ ಸುಳ್ಳು ಮಾಹಿತಿ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಇಂಥ ಆದೇಶವನ್ನು ನಾನು ಸೇನೆಗೆ ನೀಡಿಲ್ಲ ಮತ್ತು ನೀಡೋದೂ ಇಲ್ಲ. ನಾವೆಲ್ಲರೂ ದೇಶವನ್ನು ರಕ್ಷಿಸಲಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ.
Не вірте фейкам. pic.twitter.com/wiLqmCuz1p
— Володимир Зеленський (@ZelenskyyUa) February 26, 2022
ಉಕ್ರೇನ್ನ ದಕ್ಷಿಣ ನಗರಗಳಾದ ಮಾರಿಯುಪೋಲ್, ಖೆರ್ಸನ್, ಮೈಕೋಲೈವ್, ಒಡೆಸ್ಸಾಗಳಲ್ಲಿ ಇಂದು ರಷ್ಯಾ ದಾಳಿ ಮತ್ತು ಉಕ್ರೇನ್ ಪ್ರತಿದಾಳಿಗಳು ನಡೆಯುತ್ತಿವೆ. ಅದರಲ್ಲೂ ಮಾರಿಯುಪೋಲ್ನಲ್ಲಿ ದಾಳಿ ಪ್ರಾಂನ ಅತ್ಯಧಿಕವಾಗಿದೆ. ಆದರೆ ಮಾರಿಯುಪೋಲ್ನ್ನು ರಷ್ಯಾ ಅತಿಕ್ರಮಣ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದು ಉಕ್ರೇನಿಯನ್ ಅಧ್ಯಕ್ಷೀಯ ಕಚೇರಿ ತಿಳಿಸಿದೆ.
ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್ಗೆ 600 ಮಿಲಿಯನ್ ಡಾಲರ್ಗಳಷ್ಟು ಆರ್ಥಿಕ ನೆರವು ನೀಡಲು ಯುಎಸ್ ಅಧ್ಯಕ್ಷ ಜೋ ಬೈಡನ್ ನಿರ್ದರಿಸಿದ್ದಾರೆ. ಅದರಲ್ಲಿ 350 ಮಿಲಿಯನ್ ಡಾಲರ್ ತಕ್ಷಣ ಮಂಜೂರು ಮಾಡಲು ಶುಕ್ರವಾರ ಅನುಮೋದನೆ ನೀಡಿದ್ದಾರೆ.
ರಷ್ಯಾ ಸೇನೆ ಉಕ್ರೇನ್ ಮೇಲೆ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ಸಂಬಂಧಿಸಿದಂತೆ ರಷ್ಯಾದ ಮಾಧ್ಯಮ ಸಂಸ್ಥೆಗಳು ಫೇಸ್ಬುಕ್ನಲ್ಲಿ ಜಾಹೀರಾತುಗಳನ್ನು ಹಾಕುವುದು, ಈ ಮೂಲಕ ಹಣ ಗಳಿಕೆ ಮಾಡುವುದನ್ನು ಫೇಸ್ಬುಕ್ ನಿಷೇಧಿಸಿದೆ ಎಂದು ಅದರ ಭದ್ರತಾ ನೀತಿಯ ಮುಖ್ಯಸ್ಥ ನಥಾನಿಯಲ್ ಗ್ಲೀಚರ್ ತಿಳಿಸಿದ್ದಾರೆ.
ಉಕ್ರೇನ್ನಲ್ಲಿರುವ ಭಾರತೀಯರ ರಕ್ಷಣೆಗೆ ತೊಡಕಾಗಿದೆ. ದೆಹಲಿಯಿಂದ ಉಕ್ರೇನ್ಗೆ ಹೋಗಬೇಕಾಗಿದ್ದ ವಿಮಾನಕ್ಕೆ ಅನುಮತಿ ಸಿಗದ ಕಾರಣ ಸಮಸ್ಯೆಯಾಗಿದೆ. ನಿನ್ನೆ ದೆಹಲಿ ಹಾಗೂ ಮುಂಬೈನಿಂದ ಎರಡು ವಿಶೇಷ ವಿಮಾನಗಳು ಹೋಗುವುದಿತ್ತು. ಮುಂಬೈನಿಂದ ಹೋಗಬೇಕಾಗಿದ್ದ ವಿಮಾನ ಹೋಗಿದೆ ಆದರೆ ದೆಹಲಿಯಿಂದ ಹೊರಡಬೇಕಾಗಿದ್ದ ಫ್ಲೈಟ್ಗೆ ಅನುಮತಿ ಸಿಕ್ಕಿಲ್ಲ. ಈ ಮಧ್ಯೆ ಅಲ್ಲಿರುವ ಭಾರತೀಯರು ಧೈರ್ಯದಿಂದ ಇರಬೇಕು. ಯಾವ ಕಾರಣಕ್ಕೂ ನಡೆದುಕೊಂಡು ಗಡಿ ಭಾಗಕ್ಕೆ ಬರುವ ಸಾಹಸ ಮಾಡಬಾರದು ಎಂದು ಕೇಂದ್ರ ವಿದೇಶಾಂಗ ಇಲಾಖೆ ತಿಳಿಸಿದೆ.
ಉಕ್ರೇನ್ ರಾಜಧಾನಿ ಕೈವ್ನಲ್ಲಿ ಶನಿವಾರ ಮುಂಜಾನೆಯಿಂದ ರಷ್ಯಾದ ದಾಳಿ ತೀವ್ರಗೊಂಡಿದೆ. ಇಲ್ಲಿನ ಸರ್ಕಾರಿ ಕ್ವಾರ್ಟರ್ಸ್ ಸಮೀಪವೇ ಗುಂಡಿನ ಶಬ್ದ ಒಂದೇ ಸಮನೆ ಕೇಳಿಬರುತ್ತಿದೆ. ಹಾಗೇ, ಸಿಟಿ ಸೆಂಟರ್ ಸಮೀಪ ಇರುವ ಸೇನಾ ನೆಲೆ ಮೇಲೆ ದಾಳಿ ಮಾಡುವ ರಷ್ಯಾದ ಪ್ರಯತ್ನ ವಿಫಲಗೊಳಿಸಿದ್ದಾಗಿ ಉಕ್ರೇನ್ ಹೇಳಿಕೊಂಡಿದೆ.
ಉಕ್ರೇನ್ ರಾಜಧಾನಿ ಕೈವ್ನಲ್ಲಿ ತೀವ್ರಗೊಂಡ ರಷ್ಯಾ ದಾಳಿ. ಎಲ್ಲೆಲ್ಲೂ ಬೆಂಕಿಯ ಜ್ವಾಲೆ, ಹೊಗೆ ಏಳುತ್ತಿರುವ ವಿಡಿಯೋ ವೈರಲ್. ಇದೇ ವೇಳೆ ದೇಶವನ್ನುದ್ದೇಶಿಸಿ ಮಾತನಾಡಿದ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಪಡೆಗಳು ಕೈವ್ನಲ್ಲಿ ಭೀಕರ ದಾಳಿ ನಡೆಸಲು ಯತ್ನಿಸುತ್ತಿವೆ. ಇನ್ನೂ ಮುಕ್ತವಾಗಿ ಹೇಳಬೇಕು ಎಂದರೆ, ಈ ರಾತ್ರಿ ಕೈವ್ ಪಾಲಿಗೆ ಕಷ್ಟಕರವಾಗಲಿದೆ. ಈಗಾಗಲೇ ಉಕ್ರೇನ್ನ ಅನೇಕ ನಗರಗಳಲ್ಲಿ ದಾಳಿಯಾಗುತ್ತಿದೆ ಎಂದು ಹೇಳಿದ್ದಾರೆ.
WATCH: Heavy fighting in Kyiv pic.twitter.com/j5a9dnmXpD
— BNO News (@BNONews) February 26, 2022
Published On - 11:02 am, Sat, 26 February 22