ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಸ್ಫೋಟಕ ಆರೋಪಗಳನ್ನು ಹೊರಿಸಿದ್ದಾರೆ. ಒತ್ತಡದಿಂದ ಪ್ರಧಾನಿ ಮೋದಿ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಆದರೆ, ಈಗ ಅದು ಅವರ ಇಮೇಜ್‌ಗೆ ಹಾನಿ ಉಂಟುಮಾಡಬಹುದು ಎಂದು ಭಯಪಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ. ಲೋಕಸಭಾ ಅಧಿವೇಶನದಲ್ಲಿ ಮಾತನಾಡಲು ಎದ್ದು ನಿಂತಾಗ ಆಡಳಿತ ಪಕ್ಷದವರು ವಿರೋಧಿಸಿದರು. ಇದರಿಂದ ಕೆಲಕಾಲ ಸದನದಲ್ಲಿ ಮಾತಿನ ಚಕಮಕಿ ಏರ್ಪಟ್ಟು, ಕಲಾಪವನ್ನು ಮುಂದೂಡಲಾಯಿತು.

ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ
Rahul Gandhi In Parliament Session
Image Credit source: PTI

Updated on: Feb 03, 2026 | 5:25 PM

ನವದೆಹಲಿ, ಫೆಬ್ರವರಿ 3: ಇಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ತಿನಲ್ಲಿ ಭಾಷಣ ಮಾಡುತ್ತಿದ್ದಾಗ ಭಾರಿ ಗದ್ದಲ ಭುಗಿಲೆದ್ದಿತು. ಚೀನಾದ ವಿಷಯದ ಕುರಿತು ರಾಹುಲ್ ಗಾಂಧಿಯವರ ಭಾಷಣವನ್ನು ವಿರೋಧಿಸಿದ್ದರಿಂದ ಎರಡೂ ಕಡೆಯವರು ಗದ್ದಲ ಮಾಡುತ್ತಲೇ ಇದ್ದರು. ತನಗೆ ಮಾತನಾಡಲು ಬಿಡದಿದ್ದಕ್ಕೆ ಆಕ್ರೋಶಗೊಂಡ ರಾಹುಲ್ ಗಾಂಧಿ, “ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಾನು ವಿರೋಧ ಪಕ್ಷದ ನಾಯಕ. ಸದನದಲ್ಲಿ ಮಾತನಾಡುವುದು ನನ್ನ ಹಕ್ಕಾಗಿದ್ದರೂ ನನಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ” ಎಂದು ಹೇಳಿದ್ದಾರೆ. ಅಮೆರಿಕದೊಂದಿಗಿನ ಒಪ್ಪಂದದ ಕುರಿತು ಪ್ರಧಾನಿ ಮೋದಿ ಒತ್ತಡದಲ್ಲಿ ರಾಜಿ ಮಾಡಿಕೊಳ್ಳಬೇಕಾಯಿತು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಪ್ರಧಾನಿ ಮೋದಿಯವರು ಗೊಂದಲಕ್ಕೊಳಗಾಗಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಯುಎಸ್-ಭಾರತ ವ್ಯಾಪಾರ ಒಪ್ಪಂದಕ್ಕೆ ನಿನ್ನೆ ರಾತ್ರಿ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಅವರ ಮೇಲೆ ತೀವ್ರ ಒತ್ತಡವಿದೆ. ಇದು ನರೇಂದ್ರ ಮೋದಿಯವರ ಇಮೇಜ್‌ಗೆ ಹಾನಿಯಾಗಬಹುದು ಎಂದು ಅವರು ಆತಂಕಗೊಂಡಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇದನ್ನೂ ಓದಿ: ಲೋಕಸಭೆ ಅಧಿವೇಶನದಲ್ಲಿ ಸ್ಪೀಕರ್ ಮೇಲೆ ಪೇಪರ್ ಎಸೆದಿದ್ದ 8 ಸಂಸದರ ಅಮಾನತು

ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳುವ ಸಮಯದಲ್ಲಿ ಸತತ ಎರಡನೇ ದಿನವೂ ಚೀನಾ ವಿಷಯವನ್ನು ಪದೇ ಪದೇ ಪ್ರಸ್ತಾಪಿಸಿದ್ದರಿಂದ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ಸಿಗದ ಕಾರಣ ರಾಹುಲ್ ಗಾಂಧಿ ಕೋಪಗೊಂಡರು. ಭಾರತ-ಚೀನಾದ ಸಂಬಂಧಗಳ ಕುರಿತಾದ ಲೇಖನವನ್ನು ಉಲ್ಲೇಖಿಸಿ, ಹಿಂದಿನ ತೀರ್ಪು ಮತ್ತು ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿದ್ದಕ್ಕೆ ರಾಹುಲ್ ಗಾಂಧಿಯವರಿಗೆ ಅವಕಾಶ ನೀಡಲು ನಿರಾಕರಿಸಲಾಯಿತು.


“ನಮ್ಮ ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ. ಸಾರ್ವಜನಿಕರು ಇದರ ಬಗ್ಗೆ ಯೋಚಿಸಬೇಕು. ಮೊದಲ ಬಾರಿಗೆ, ವಿರೋಧ ಪಕ್ಷದ ನಾಯಕನಿಗೆ ಈ ಸದನದಲ್ಲಿ ರಾಷ್ಟ್ರಪತಿಗಳ ಭಾಷಣದ ಬಗ್ಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ. ನರೇಂದ್ರ ಮೋದಿ ಅವರು ರಾಜಿ ಮಾಡಿಕೊಂಡ ಕಾರಣದಿಂದ ಈ ವ್ಯಾಪಾರ ಒಪ್ಪಂದದಲ್ಲಿ ನಿಮ್ಮ ಕಠಿಣ ಪರಿಶ್ರಮವನ್ನು ಮಾರಾಟ ಮಾಡಿದ್ದಾರೆ. ಅವರು ದೇಶವನ್ನೇ ಮಾರಿದ್ದಾರೆ” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ನಾವು ರಾಹುಲ್ ಗಾಂಧಿಯವರ ಮಾತು ಕೇಳಲು ಬಯಸಿದ್ದೆವು. ಆದರೆ ಅವರು ಒಂದೇ ಮಾತನ್ನು ಪದೇ ಪದೇ ಪುನರಾವರ್ತಿಸುತ್ತಿದ್ದಾರೆ. ಅವರು ನಿಯಮಗಳನ್ನು ಪಾಲಿಸಬೇಕು. ಅವರು ಒಂದೇ ಮಾತನ್ನು ಪದೇ ಪದೇ ಪುನರಾವರ್ತಿಸುವಂತಿಲ್ಲ” ಎಂದು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ