ICRISAT ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿ; ಸಣ್ಣ ರೈತರತ್ತ ಹೆಚ್ಚು ಗಮನ ಎಂದ ಪ್ರಧಾನಿ

ಐಸಿಆರ್​ಐಎಸ್​ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.

ICRISAT ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ ನರೇಂದ್ರ ಮೋದಿ; ಸಣ್ಣ ರೈತರತ್ತ ಹೆಚ್ಚು ಗಮನ ಎಂದ ಪ್ರಧಾನಿ
ಪ್ರಧಾನಿ ಮೋದಿ
Edited By:

Updated on: Feb 05, 2022 | 6:43 PM

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಹೈದರಾಬಾದ್​ನ ಪತಂಚೆರುವಿನಲ್ಲಿ ಅರೆ-ಶುಷ್ಕ ಉಷ್ಣವಲಯದ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (International Crops Research Institute for Semi-Arid Tropics (ICRISAT)ಯ ಸುವರ್ಣಮಹೋತ್ಸವ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಿದರು. ಇದೇ ವೇಳೆ ಪ್ರಧಾನಿ ಮೋದಿ, ಬೆಳೆಗಳ ಸಂಶೋಧನಾ ಸಂಸ್ಥೆಯ ಹೊಸ ಹವಾಮಾನ ಬದಲಾವಣೆ ಸೌಲಭ್ಯವನ್ನು ಅನಾವರಣಗೊಳಿಸಿದರು. ಅಷ್ಟೇ ಅಲ್ಲ, ಸುವರ್ಣ ಮಹೋತ್ಸವ ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಹವಾಮಾನ ಬದಲಾವಣೆಯೆಂಬುದು ನಮ್ಮ ರೈತರಿಗೆ ಅತ್ಯಂತ ದೊಡ್ಡ ಸವಾಲಾಗಿದೆ. ಕೃಷಿಯಲ್ಲಿ ಮೂಲಭೂತ ವಿಷಯಗಳಿಗೆ ಉತ್ತೇಜನ ನೀಡುವ ಜತೆ, ಭವಿಷ್ಯದೆಡೆಗೆ ಧಾವಿಸುವುದರತ್ತ ನಾವು ಗಮನ ನೆಟ್ಟಿದ್ದೇವೆ. ನಮ್ಮ ಅಗತ್ಯವನ್ನು ದೊಡ್ಡ ಮಟ್ಟದಲ್ಲಿ ಪೂರೈಸುವ ಈ ದೇಶದ ಶೇ.80ರಷ್ಟು ಸಣ್ಣ ರೈತರತ್ತ ನಾವು ಗಮನ ಕೇಂದ್ರೀಕರಿಸಿದ್ದೇವೆ. ಅದರ ಭಾಗವಾಗಿಯೇ ನಮ್ಮ ಕೇಂದ್ರ ಸರ್ಕಾರದ 2022-23ರ ಬಜೆಟ್​ನಲ್ಲಿ ನೈಸರ್ಗಿಕ ಬೇಸಾಯ ಮತ್ತು ಡಿಜಿಟಲ್​ ಕೃಷಿಗೆ ಒತ್ತು ನೀಡಲಾಗಿದೆ ಎಂದು ಹೇಳಿದರು.
ಐಸಿಆರ್​ಐಎಸ್​ಎಟಿ ಸಂಸ್ಥೆಯು ಕಳೆದ 5 ದಶಕಗಳಿಂದಲೂ ಕೂಡ ಕೃಷಿಯನ್ನು ಸುಲಭ ಮತ್ತು ಸುಸ್ಥಿರಗೊಳಿಸಲು ಇತರ ದೇಶಗಳಿಗೆ ಸಹಾಯ ಮಾಡುತ್ತಿದೆ. ಹಾಗೇ, ಈ ಸಂಸ್ಥೆ ಭಾರತದ ಕೃಷಿ ವಲಯ ಬಲಪಡಿಸುವ ನಿಟ್ಟಿನಲ್ಲಿ ತಮ್ಮ ಸೇವೆಯನ್ನು ಮುಂದುವರಿಸುತ್ತದೆ ಎಂಬ ಭರವಸೆ ನನಗೆ ಇದೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.

ಇಂದು ಹೈದರಾಬಾದ್​ನ ಮುಂಚಿತ್ತಾಲ್​​ನಲ್ಲಿ ನಡೆಯಲಿರುವ ಶ್ರೀರಾಮಾನುಜಾಚಾರ್ಯರ ಸಮಾನತೆ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲೂ ಸಹ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಹೈದರಾಬಾದ್ ಏರ್​ಪೋರ್ಟ್​​ನಲ್ಲಿ ಇಳಿದ ಪ್ರಧಾನಿಯವರನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್​ ರಾವ್ ಸ್ವಾಗತಿಸಲು ಹೋಗದೆ ವಿವಾದ ಸೃಷ್ಟಿಸಿದ್ದಾರೆ. ಕೆಸಿಆರ್ ಅಸಾಂವಿಧಾನಿಕ ನಡೆ ತೋರಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದರೆ, ಮುಖ್ಯಮಂತ್ರಿಗೆ ಆರೋಗ್ಯ ಸರಿಯಿಲ್ಲ ಎಂದು ಅವರ ಅಧಿಕೃತ ನಿವಾಸ ಪ್ರಗತಿ ಭವನ ಪ್ರಕಟಣೆ ಹೊರಡಿಸಿದೆ.

ಇದನ್ನೂ ಓದಿ: ಹಿಜಾಬ್ ವಿವಾದ; ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯಗೊಳಿಸಿ ಸರ್ಕಾರದಿಂದ ಆದೇಶ