
ನವದೆಹಲಿ, ಜುಲೈ 29: ಪಾಕಿಸ್ತಾನ(Pakistan) ಕೇಳುವ ಪ್ರಶ್ನೆಯನ್ನೇ ಕಾಂಗ್ರೆಸ್(Congress) ಕೇಳುತ್ತಿದೆ. ಕಾಂಗ್ರೆಸ್ನ ರಿಮೋಟ್ ಕಂಟ್ರೋಲ್ ಪಾಕಿಸ್ತಾನದಲ್ಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಆರೋಪಿಸಿದ್ದಾರೆ. ಇಂದು ಲೋಕಸಭೆಯಲ್ಲಿ ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂಧೂರ್ ಕುರಿತಾದ ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ಚಾಟಿ ಬೀಸಿದರು. ಕಾಂಗ್ರೆಸ್ಗೆ ಭಾರತೀಯ ಸೈನಿಕರ ಬಲದ ಮೇಲೆ ನಂಬಿಕೆ ಇದ್ದಂತೆ ಕಾಣುತ್ತಿಲ್ಲ. ಅಂದು ಸರ್ಜಿಕಲ್ ಸ್ಟ್ರೈಕ್ ಸಮಯದಲ್ಲಿ ಕೂಡ ಭಾರತೀಯ ಸೇನೆಯ ಬಳಿ ಕಾಂಗ್ರೆಸ್ ಸಬೂತು ಕೇಳಿತ್ತು. ಬಳಿಕ ಸಾಕ್ಷ್ಯ ಸಿಕ್ಕ ಮೇಲೆ ಈ ಸರ್ಜಿಕಲ್ ಸ್ಟ್ರೈಕ್ ನಮಗೆ ದೊಡ್ಡದೇನೂ ಅಲ್ಲ, ನಾವು ಕೂಡ ಮಾಡಿದ್ದೆವು ಎಂದು ಹೇಳಿಕೊಂಡು ಓಡಾಡಿತ್ತು.
ಇನ್ನು ಬಾಲಾಕೋಟ್ ಏರ್ ಸ್ಟ್ರೈಕ್ ಆದಾಗ ಕೂಡ ಫೋಟೊ ತೋರಿಸಿ, ಎಲ್ಲಿ, ಯಾವ ಜಾಗದಲ್ಲಿ ಯಾವ ಸಮಯದಲ್ಲಿ ದಾಳಿ ಮಾಡಿದಿರಿ ಎಂದು ಕಾಂಗ್ರೆಸ್ ಕೇಳಿತ್ತು. ಪಾಕಿಸ್ತಾನವು ಕೂಡ ಇದನ್ನೇ ಕೇಳುತ್ತಿತ್ತು.
ಅಭಿನಂದನ್ ಪಾಕ್ನವರ ಕೈಯಲ್ಲಿ ಸಿಕ್ಕಿದಾಗ ಅವರ ಬಗ್ಗೆ ಆಲೋಚನೆ ಮಾಡುವ ಬದಲು ಅವರನ್ನು ಅಸ್ತ್ರದಂತೆ ಬಳಸಿ ನನ್ನ ಮೇಲೆ ದಾಳಿ ಮಾಡಲಾಯಿತು.
ಆದರೆ ಅಂದು ಅಭಿನಂದನ್ ಸುರಕ್ಷಿತವಾಗಿ ವಾಪಸಾದರು. ಆಗಲೂ ಕಾಂಗ್ರೆಸ್ಗೆ ಖುಷಿ ಇರಲಿಲ್ಲ. ಈಗ ಆಪರೇಷನ್ ಸಿಂಧೂರ್ ಸಮಯದಲ್ಲಿ ನಮ್ಮ ಸೈನಿಕರೊಬ್ಬರು ಪಾಕಿಸ್ತಾನದವರ ಕೈಯಲ್ಲಿ ಸಿಕ್ಕಾಗ ಕೂಡ ಇದೇ ರೀತಿ ಕೊಂಕು ಮಾತುಗಳನ್ನು ಕಾಂಗ್ರೆಸ್ ಆಡಿತ್ತು.
ಮತ್ತಷ್ಟು ಓದಿ: ಜಗತ್ತಿನ ಯಾವುದೇ ದೇಶದ ನಾಯಕರು ಆಪರೇಷನ್ ಸಿಂಧೂರ್ ತಡೆಯುವ ಪ್ರಯತ್ನ ಮಾಡಿಲ್ಲ: ಮೋದಿ
ಆದರೆ ಸೈನಿಕರಿಗೆ ಏನೂ ಆಗದಂತೆ ವಾಪಸ್ ಕರೆದುಕೊಂಡು ಬಂದಿದ್ದೇವೆ. ಈ ಕಾಂಗ್ರೆಸ್ ಪಾಕಿಸ್ತಾನ ಆಡಿಸಿದಂತೆ ಆಡುತ್ತಿದೆ. ಅದರ ರಿಮೋಟ್ ಕಂಟ್ರೋಲ್ ಪಾಕ್ ಕೈಯಲ್ಲಿದೆ ಎಂದರು. ಆಪರೇಷನ್ ಸಿಂಧೂರ್ನಂತಹ ಘಟನೆಗಳು ನಡೆದಾಗ ದೇಶದ ತಾಕತ್ತಿನ ಪರಿಚಯವಾಗುತ್ತದೆ.
ಪಾಕ್ 1 ಸಾವಿರ ಮಿಸೈಲ್ ಮೂಲಕ ದಾಳಿ ನಡೆಸಲು ಮುಂದಾಗಿತ್ತು?
ಪಾಕಿಸ್ತಾನವು ಒಂದು ಸಾವಿರ ಮಿಸೈಲ್ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಒಂದೊಮ್ಮೆ ಅದು ಭಾರತದ ಮೇಲೆ ಬಿದ್ದಿದ್ದರೆ ಇಲ್ಲಿಯ ಪರಿಸ್ಥಿತಿ ಏನಾಗಿರುತ್ತಿತ್ತು ಎಂದು ಒಮ್ಮೆ ಆಲೋಚಿಸಲೇಬೇಕು. ಆದರೆ ಭಾರತೀಯ ಸೈನಿಕರು ಅದನ್ನು ಆಕಾಶದಲ್ಲಿಯೇ ಚೂರು ಚೂರು ಮಾಡಿದ್ದಾರೆ.
ಕಾಂಗ್ರೆಸ್ ಮೀಡಿಯಾದಲ್ಲಿ ಹೆಡ್ಲೈನ್ ಆಗಬಹುದು ಆದರೆ ದೇಶದ ಜನರ ಹೃದಯದಲ್ಲಿ ಸ್ಥಾನ ಪಡೆದುಕೊಳ್ಳಲು ಸಾಧ್ಯವಿಲ್ಲ. ಇತ್ತೀಚೆಗಷ್ಟೇ ಭಾರತದಲ್ಲಿ ಕಾರ್ಗಿಲ್ ವಿಜಯ ದಿವಸ್ ಆಚರಿಸಲಾಯಿತು. ಆದರೆ ಕಾಂಗ್ರೆಸ್ ಇಲ್ಲಿಯವರೆಗೂ ಆಚರಿಸಿಲ್ಲ. ಇದು ಸೇನೆ ಬಗ್ಗೆ ಇರುವ ನೆಗೆಟಿವಿಟಿಯನ್ನು ತೋರಿಸುತ್ತದೆ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:11 pm, Tue, 29 July 25