ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ; ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಚರ್ಚೆ

|

Updated on: Jan 27, 2025 | 8:28 PM

ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ತಮ್ಮ ಗೆಳೆಯ ಡೊನಾಲ್ಡ್ ಟ್ರಂಪ್ ಜೊತೆ ಇಂದು ದೂರವಾಣಿಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ಈ ವೇಳೆ ದ್ವಿಪಕ್ಷೀಯ ಸಂಬಂಧಗಳ ಕುರಿತು ಚರ್ಚಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಪದಗ್ರಹಣದ ನಂತರ ಪ್ರಧಾನಿ ಮೋದಿ ಇದೇ ಮೊದಲ ಬಾರಿಗೆ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದಾರೆ. ಟ್ರಂಪ್ ಪ್ರಮಾಣವಚನದಲ್ಲಿ ಮೋದಿ ಭಾಗಿಯಾಗದಿದ್ದರೂ ವಿದೇಶಾಂಗ ಸಚಿವ ಜೈಶಂಕರ್ ಬಳಿ ಟ್ರಂಪ್​ಗೆ ಬರೆದ ಪತ್ರವೊಂದನ್ನು ಮೋದಿ ಕಳುಹಿಸಿದ್ದರು.

ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ; ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಪ್ರಧಾನಿ ಮೋದಿ ಚರ್ಚೆ
Pm Modi Donald Trump
Follow us on

ನವದೆಹಲಿ: ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ವಹಿಸಿಕೊಂಡ ಒಂದು ವಾರದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಡೊನಾಲ್ಡ್ ಟ್ರಂಪ್ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಜನವರಿ 20ರಂದು ಟ್ರಂಪ್ ಅಮೆರಿಕ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಇಂದು ಫೋನ್ ಮೂಲಕ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿದ್ದು, ದ್ವಿಪಕ್ಷೀಯ ಸಂಬಂಧಗಳ ಬಗ್ಗೆ ಚರ್ಚಿಸಿದ್ದಾರೆ. ಜಾಗತಿಕ ಶಾಂತಿಗಾಗಿ ಅಮೆರಿಕ ಮತ್ತು ಭಾರತ ಎರಡೂ ಒಟ್ಟಾಗಿ ಕೆಲಸ ಮಾಡೋಣ ಎಂದು ಟ್ರಂಪ್​ಗೆ ಮೋದಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಭಾರತದ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ. ಈ ಹಿಂದೆ ಅಮೆರಿಕದ ಭಾರತೀಯ ಅನಿವಾಸಿಗಳಿಗೆ ಟ್ರಂಪ್ ಪರವಾದ ಚುನಾವಣಾ ಪ್ರಚಾರದಲ್ಲೂ ಮೋದಿ ಭಾಗಿಯಾಗಿದ್ದರು. ಕಳೆದ ವಾರ ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಭಿನಂದಿಸಿದ್ದರು. “ಅಮೆರಿಕದ 47ನೇ ಅಧ್ಯಕ್ಷರಾಗಿ ಐತಿಹಾಸಿಕ ಪ್ರಮಾಣವಚನ ಸ್ವೀಕರಿಸಿದ ನನ್ನ ಆತ್ಮೀಯ ಗೆಳೆಯ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಭಿನಂದನೆಗಳು! ನಮ್ಮ ಎರಡೂ ದೇಶಗಳಿಗೆ ಪ್ರಯೋಜನವಾಗುವಂತೆ ಮತ್ತು ಜಗತ್ತಿಗೆ ಉತ್ತಮ ಭವಿಷ್ಯವನ್ನು ರೂಪಿಸಲು ಮತ್ತೊಮ್ಮೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ!” ಎಂದು ಎಕ್ಸ್​ನಲ್ಲಿ ಮೋದಿ ಪೋಸ್ಟ್ ಮಾಡಿದ್ದರು.

ಇದನ್ನೂ ಓದಿ: ಎನ್‌ಸಿಸಿ ವಿಶ್ವದ ಅತಿದೊಡ್ಡ ಸಮವಸ್ತ್ರಧಾರಿ ಯುವ ಸಂಘಟನೆಯಾಗಿದೆ; ಪ್ರಧಾನಿ ಮೋದಿ

ಇಂದು ಎಕ್ಸ್​ನಲ್ಲಿ ಟ್ರಂಪ್ ಜೊತೆಗಿನ ಮಾತುಕತೆಯ ಬಗ್ಗೆ ಪೋಸ್ಟ್ ಮಾಡಿರುವ ಮೋದಿ, ನನ್ನ ಆತ್ಮೀಯ ಸ್ನೇಹಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತನಾಡಿ ಸಂತೋಷವಾಯಿತು. ಅವರ ಐತಿಹಾಸಿಕ ಎರಡನೇ ಅವಧಿಗೆ ನಾನು ಅಭಿನಂದಿಸಿದೆ. ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ನಾವು ಬದ್ಧರಾಗಿದ್ದೇವೆ. ನಮ್ಮ ಜನರ ಕಲ್ಯಾಣಕ್ಕಾಗಿ ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಳೆದ ಸೋಮವಾರ, ಟ್ರಂಪ್ ತಮ್ಮ ಎರಡನೇ ಅವಧಿಯನ್ನು ಅಮೆರಿಕದ ವಲಸೆ ಸುಧಾರಣೆಗಳನ್ನು ಗುರಿಯಾಗಿಸಿಕೊಂಡು ಹಲವು ಆದೇಶಗಳಿಗೆ ಸಹಿ ಹಾಕುವ ಮೂಲಕ ಪ್ರಾರಂಭಿಸಿದರು. ಇದರಲ್ಲಿ H1-B ವೀಸಾಗಳಿಗೆ ಬದಲಾವಣೆಗಳು ಸೇರಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ