ಪ್ರಧಾನಿ ಮೋದಿ ಜೊತೆ ಟ್ರಂಪ್ ಭೇಟಿಯ ಮಾಹಿತಿ ಹಂಚಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾದ ರಷ್ಯಾ ಅಧ್ಯಕ್ಷ ಪುಟಿನ್ ಭಾರತದ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿದ್ದಾರೆ. ರಷ್ಯಾದಿಂದ ತೈಲ ಖರೀದಿಸಿದ ಭಾರತದ ಮೇಲಿನ ಅಮೆರಿಕದ ಸುಂಕದ ಹೆಚ್ಚಳದ ಬಳಿಕ ಟ್ರಂಪ್ ಭೇಟಿಯ ಕುರಿತು ಪ್ರಧಾನಿ ಮೋದಿ ಅವರಿಗೆ ಪುಟಿನ್ ವಿವರಿಸಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಭೇಟಿಯ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌ನಲ್ಲಿ ಪುಟಿನ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.

ಪ್ರಧಾನಿ ಮೋದಿ ಜೊತೆ ಟ್ರಂಪ್ ಭೇಟಿಯ ಮಾಹಿತಿ ಹಂಚಿಕೊಂಡ ರಷ್ಯಾ ಅಧ್ಯಕ್ಷ ಪುಟಿನ್
Putin- Modi

Updated on: Aug 18, 2025 | 6:32 PM

ನವದೆಹಲಿ, ಆಗಸ್ಟ್ 18: ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರೊಂದಿಗಿನ ತಮ್ಮ ಭೇಟಿಯ ಕುರಿತು ತಮಗೆ ಕರೆ ಮಾಡಿ ಆ ಭೇಟಿಯ ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Putin) ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಆಗಸ್ಟ್ 15ರಂದು ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಮತ್ತು ರಷ್ಯಾ ಅಧ್ಯಕ್ಷ ಇಬ್ಬರೂ ನಾಯಕರು ಭೇಟಿಯಾಗಿದ್ದರು.

“ನನ್ನ ಸ್ನೇಹಿತರಾದ ರಷ್ಯಾ ಅಧ್ಯಕ್ಷ ಪುಟಿನ್ ಅವರು ಫೋನ್ ಮಾಡಿ ಅಲಾಸ್ಕಾದಲ್ಲಿ ಅಮೆರಿಕದ ಅಧ್ಯಕ್ಷ ಟ್ರಂಪ್ ಅವರೊಂದಿಗಿನ ಇತ್ತೀಚಿನ ಭೇಟಿಯ ಕುರಿತು ಒಳನೋಟಗಳನ್ನು ಹಂಚಿಕೊಂಡಿದ್ದಕ್ಕಾಗಿ ಅವರಿಗೆ ಧನ್ಯವಾದಗಳು. ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತ ನಿರಂತರವಾಗಿ ಕರೆ ನೀಡಿದೆ. ಈ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಬೆಂಬಲಿಸುತ್ತದೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್ ಅವರಿಗೆ ಧನ್ಯವಾದ ಹೇಳಿರುವ ಪ್ರಧಾನಿ ಮೋದಿ, ರಾಜತಾಂತ್ರಿಕತೆ ಮತ್ತು ಮಾತುಕತೆಯ ಮೂಲಕ ಉಕ್ರೇನ್ ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತದ ಸ್ಥಿರ ನಿಲುವನ್ನು ಒತ್ತಿ ಹೇಳಿದರು. ಕದನ ವಿರಾಮ ಒಪ್ಪಂದವಿಲ್ಲದೆ ಕೊನೆಗೊಂಡ ಅಲಾಸ್ಕಾದಲ್ಲಿ ನಡೆದ ಉನ್ನತ ಮಟ್ಟದ ಶೃಂಗಸಭೆಯ 3 ದಿನಗಳ ನಂತರ ರಷ್ಯಾ ಅಧ್ಯಕ್ಷ ಪುಟಿನ್ ಅವರು ಪ್ರಧಾನಿ ಮೋದಿ ಅವರೊಂದಿಗೆ ಫೋನ್​ನಲ್ಲಿ ಮಾತನಾಡಿದರು.

ಇದನ್ನೂ ಓದಿ: ರಷ್ಯಾ ಅಧ್ಯಕ್ಷ ಪುಟಿನ್​​ಗೆ ಪತ್ರ ಬರೆದ ಅಮೆರಿಕ ಅಧ್ಯಕ್ಷ ಟ್ರಂಪ್ ಪತ್ನಿ ಮೆಲಾನಿಯಾ

ಅಲಾಸ್ಕಾದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಇತ್ತೀಚಿನ ಸಭೆಯ ಮಾಹಿತಿಯನ್ನು ಹಂಚಿಕೊಂಡಿದ್ದಕ್ಕಾಗಿ ಮತ್ತು ದೂರವಾಣಿ ಮೂಲಕ ತಮ್ಮನ್ನು ಸಂಪರ್ಕಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.


ಕಳೆದ 2 ವಾರಗಳಲ್ಲಿ ಇದು ಇಬ್ಬರು ನಾಯಕರ ನಡುವಿನ ಎರಡನೇ ದೂರವಾಣಿ ಸಂಭಾಷಣೆಯಾಗಿದೆ. ಆಗಸ್ಟ್ 8ರಂದು ನಡೆದ ಈ ಹಿಂದಿನ ದೂರವಾಣಿ ಕರೆಯಲ್ಲಿ ಉಕ್ರೇನ್‌ಗೆ ಸಂಬಂಧಿಸಿದ ಬೆಳವಣಿಗೆಗಳ ಕುರಿತು ರಷ್ಯಾ ಅಧ್ಯಕ್ಷ ಪುಟಿನ್ ಭಾರತದ ಪ್ರಧಾನಿ ಮೋದಿಗೆ ವಿವರಿಸಿದ್ದರು. ಪ್ರಧಾನಿ ಮೋದಿ ಅವರೊಂದಿಗೆ ಪುಟಿನ್ ಮಾತನಾಡುವ ಮೊದಲು ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದ್ದು, ಅಲಾಸ್ಕಾದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಶೃಂಗಸಭೆಯ ಸಭೆಯನ್ನು ಭಾರತ ಸ್ವಾಗತಿಸುತ್ತದೆ ಎಂದು ಹೇಳಿತ್ತು.

ಇದನ್ನೂ ಓದಿ: ಸದಾ ನಮ್ಮ ಜನರು ಟ್ರಂಪ್​ಗೆ ಕೃತಜ್ಞರಾಗಿರಬೇಕು: ಅಮೆರಿಕ ಅಧ್ಯಕ್ಷರ ಭೇಟಿಗೂ ಮುನ್ನ ಝೆಲೆನ್ಸ್ಕಿ ಹೇಳಿದ್ದೇನು?

ಶುಕ್ರವಾರ ಅಲಾಸ್ಕಾದಲ್ಲಿ ಪುಟಿನ್ ಡೊನಾಲ್ಡ್ ಟ್ರಂಪ್ ಅವರೊಂದಿಗೆ 3 ಗಂಟೆಗಳ ಕಾಲ ಮಾತುಕತೆ ನಡೆಸಿದರು. ಆದರೆ, ಹತ್ತಾರು ಸಾವಿರ ಜನರನ್ನು ಬಲಿತೆಗೆದುಕೊಂಡ ಮತ್ತು ಉಕ್ರೇನ್‌ನಲ್ಲಿ ಅಪಾರ ಸಾವು ನೋವಿಗೆ ಕಾರಣವಾದ ಸಂಘರ್ಷದಲ್ಲಿ ಕದನ ವಿರಾಮದ ಕುರಿತು ಶೃಂಗಸಭೆಯಲ್ಲಿ ಯಾವುದೇ ಮಾತುಕತೆ ನಡೆಯಲಿಲ್ಲ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಆಯ್ದ ಸರಕುಗಳ ಮೇಲೆ ಶೇ.25ರಷ್ಟು ಸುಂಕ ಮತ್ತು ರಷ್ಯಾದ ತೈಲ ಖರೀದಿಗೆ ಶೇ.25ರಷ್ಟು ದಂಡ ವಿಧಿಸಿದ ನಂತರ ಈ ಸಭೆ ನಡೆದಿರುವುದರಿಂದ ಈ ಸಭೆ ಮಹತ್ವದ್ದಾಗಿದೆ. ಅಗ್ಗದ ರಷ್ಯಾದ ತೈಲವನ್ನು ಖರೀದಿಸುವ ಮೂಲಕ ಭಾರತವು ಉಕ್ರೇನ್ ಜೊತೆಗಿನ ರಷ್ಯಾದ ಯುದ್ಧಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಟ್ರಂಪ್ ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Mon, 18 August 25