
ನವದೆಹಲಿ, ಸೆಪ್ಟೆಂಬರ್ 26: ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು ಬಿಹಾರದ ಮುಖ್ಯಮಂತ್ರಿ ಮಹಿಳಾ ರೋಜಗಾರ್ ಯೋಜನೆಗೆ (Mukhya mantri Rozgar Yojana) ಚಾಲನೆ ನೀಡಿದ್ದಾರೆ. ದೆಹಲಿಯಿದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಬಹುನಿರೀಕ್ಷಿತ ಯೋಜನೆಯ ಉದ್ಘಾಟನೆ ಮಾಡಿದ್ದಾರೆ. ಯೋಜನೆಯ ಮೊದಲ ಹಂತದಲ್ಲಿ ಬಿಹಾರದ 75 ಲಕ್ಷ ಮಹಿಳೆಯರಿಗೆ 7,500 ಕೋಟಿ ರೂ ಹಣವನ್ನು ಒದಗಿಸಿದ್ದಾರೆ. ಈ ಪ್ರತಿಯೊಬ್ಬ ಫಲಾನುಭವಿ ಮಹಿಳೆಯ ಬ್ಯಾಂಕ್ ಖಾತೆಗೆ 10,000 ರೂ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಗಿದೆ.
ಈ ವೇಳೆ ಪ್ರಧಾನಿಗಳು ಕೆಲ ಫಲಾನುಭವಿ ಮಹಿಳೆಯರ ಜೊತೆ ಮಾತನಾಡಿದರು. ಖುದ್ದು ಪ್ರಧಾನಿಯೇ ಮಾತನಾಡಿದ್ದು ಕಂಡು ಈ ಮಹಿಳೆಯರು ಭಾವ ಪರವಶರಾದರು. ನರೇಂದ್ರ ಮೋದಿ ಅವರನ್ನು ಪ್ರೀತಿಯಿಂದ ‘ಭಯ್ಯಾ’ (ಅಣ್ಣಾ) ಎಂದು ಈ ಬಿಹಾರಿ ಮಹಿಳೆಯರು ಸಂಬೋಧಿಸಿ ಮಾತನಾಡಿದರು.
ಈ ಮುಖ್ಯಮಂತ್ರಿ ರೋಜಗಾರ್ ಯೋಜನೆಯ ಹಣದಿಂದ ತಾವೇನು ಮಾಡಲಿದ್ದೇವೆ, ಕೇಂದ್ರ ಸರ್ಕಾರದ ಬೇರೆ ಬೇರೆ ಯೋಜನೆಗಳು ತಮ್ಮ ಜೀವನದ ಮೇಲೆ ಯಾವ ರೀತಿಯ ಪರಿವರ್ತನೆ ತಂದಿವೆ ಎಂಬುದನ್ನು ಕೆಲ ಮಹಿಳೆಯರು ಬಿಡಿಸಿಟ್ಟರು.
ಇದನ್ನೂ ಓದಿ: ಈ ಯುದ್ಧದಲ್ಲಿ ಗೆದ್ದವರಿಂದ ಜಗತ್ತಿನ ಮುಂದಿನ ಅಧಿಪತ್ಯ: ರೇ ಡಾಲಿಯೋ
‘ನನ್ನ ಜೀವನ ಬದಲಾಗಿದೆ. ಈಗ ನನಗೆ 10,000 ರೂ ಸಿಕ್ಕಿದರೆ ಇನ್ನೂ ನೂರು ಕೋಳಿಗಳನ್ನು ಖರೀದಿಸುತ್ತೇನೆ. ಚಳಿಗಾಲದಲ್ಲಿ ಮೊಟ್ಟೆಗಳಿಗೆ ಬೇಡಿಕೆ ಹೆಚ್ಚುತ್ತದೆ. ನನಗೆ ಆದಾಯ ಕೂಡ ಹೆಚ್ಚುತ್ತದೆ’ ಎಂದು 2015ರಿಂದ ಸಣ್ಣ ಕೋಳಿಫಾರ್ಮ್ ನಡೆಸುತ್ತಿರುವ ಭೋಜಪುರ್ನ ರೀತಾ ದೇವಿ ಹೇಳಿಕೊಂಡರು.
ಈ ಯೋಜನೆ ಮಾತ್ರವಲ್ಲ, ಕೇಂದ್ರ ಸರ್ಕಾರದ ವಿವಿಧ ಯೋಜನೆಗಳಿಂದ ತಮ್ಮ ಜೀವನ ಹೇಗೆ ಉಜ್ವಲಗೊಂಡಿದೆ ಎಂಬುದನ್ನೂ ಈ ಮಹಿಳೆ ತಿಳಿಸಿದರು.
‘ಮುಂಚೆ ನಮ್ಮ ಮನೆ ಹಾಳಾದ ಸ್ಥಿತಿಯಲ್ಲಿತ್ತು. ಪಿಎಂ ಆವಾಸ್ ಯೋಜನೆಯಿಂದಾಗಿ ಉತ್ತಮ ಮನೆ ಮತ್ತು ಶೌಚಾಲಯ ಕಟ್ಟಿಕೊಳ್ಳಲು ಸಾಧ್ಯವಾಯಿತು. ಈಗ ಕುಡಿಯಲು ಸ್ವಚ್ಛ ನೀರು ಸಿಗುತ್ತಿದೆ. ಸೌದೆ ಒಲೆ ಬದಲು ಉಜ್ವಲ ಗ್ಯಾಸ್ (PM Ujjwala Gas Yojana) ಬಳಸುತ್ತಿದ್ದೇವೆ. ಆಯುಷ್ಮಾನ್ ಕಾರ್ಡ್ ಬಳಸಿ ಉಚಿತವಾಗಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದೇವೆ. 125 ಯೂನಿಟ್ಗಳಷ್ಟು ಉಚಿತ ವಿದ್ಯುತ್ ಸಿಗುತ್ತಿದೆ. ಉಳಿತಾಯವಾದ ಹಣವು ಮಕ್ಕಳ ಭವಿಷ್ಯ ಕಟ್ಟಲು ಸಾಕಾಗುತ್ತದೆ. ನಮಗಂತೂ ಹೊಸ ಜೀವನ ಸಿಕ್ಕಂತಾಗಿದೆ’ ಎಂದು ರೀತಾ ದೇವಿ ಹೆಮ್ಮೆಯಿಂದ ಹೇಳಿಕೊಂಡರು.
ಇದನ್ನೂ ಓದಿ: Narendra Modi: ಅನಿಶ್ಚಿತತೆಯ ಸಂದರ್ಭದಲ್ಲೂ ಪ್ರಗತಿಯಲ್ಲಿ ಭಾರತ ಹೆಜ್ಜೆ: ಪ್ರಧಾನಿ ಮೋದಿ
ಮುಖ್ಯಮಂತ್ರಿ ರೋಜಗಾರ್ ಯೋಜನೆಯಲ್ಲಿ ಸ್ವಂತ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ಮೊದಲಿಗೆ 10,000 ರೂ ಕೊಡಲಾಗುತ್ತಿದೆ. ಬ್ಯುಸಿನೆಸ್ ಯಶಸ್ವಿಯಾಗಿ ಅದು ವಿಸ್ತರಣೆ ಮಾಡಲು 2 ಲಕ್ಷ ರೂವರೆಗೂ ಧನಸಹಾಯ ಕೊಡಲಾಗುತ್ತದೆ. ಈ ಯೋಜನೆಯು ಹಲವು ಮಹಿಳೆಯರಿಗೆ ಹೊಸ ಭರವಸೆ ಮೂಡಿಸಿದೆ. ಅಂತೆಯೇ ಕೆಲವರು ತಮ್ಮ ಮನಸ್ಸಿನ ಮಾತುಗಳನ್ನು ಹೇಳಿಕೊಂಡರು.
‘ನನಗೆ ಎರಡು ಲಕ್ಷ ರೂ ಸಿಕ್ಕಾಗ ನನ್ನ ಬ್ಯುಸಿನೆಸ್ ಅನ್ನು ವಿಸ್ತರಿಸುತ್ತೇನೆ. ಪ್ರಧಾನಿಗಳ ಸ್ವದೇಶೀ ಕನಸ್ಸನ್ನು ಸಾಕಾರಗೊಳಿಸುತ್ತೇನೆ. ಜನರು ನನ್ನನ್ನು ನೋಡಿ ನಗುತ್ತಿದ್ದರು. ಆದರೆ, ಜೀವಿಕಾ ಸೇರಿದ ಬಳಿಕ ಎಲ್ಲವೂ ಬದಲಾಗಿದೆ. ನನಗೆ 125 ಯೂನಿಟ್ನಷ್ಟು ಉಚಿತ ವಿದ್ಯುತ್ ಸಿಗುತ್ತಿದೆ. ಉಳಿಸಿದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಉಪಯೋಗಿಸುತ್ತಿದ್ದೇನೆ’ ಎಂದು ಪೂರ್ನಿಯಾದ ಪುತುಲ್ ದೇವಿ ಹೇಳಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ