ನರೇಂದ್ರ ಮೋದಿ (Narendra Modi) ದೇಶದ ಪ್ರಧಾನಿಯಾಗಿದ್ದರೂ ಅವರ ಅಮ್ಮ ಹೀರಾಬೆನ್ (Heeraben Modi) ಸರಳ ಜೀವನವನ್ನೇ ನಡೆಸಿದ್ದರು. 1923 ಜೂನ್ 18ರಂದು ಜನಿಸಿದ್ದ ಹೀರಾಬೆನ್ ಈ ವರ್ಷ 100ನೇ ಹುಟ್ಟುಹಬ್ಬ ಆಚರಿಸಿದ್ದರು. ಹೀರಾಬೆನ್ ಗಾಂಧಿನಗರದ (Gandhi Nagar) ಗ್ರಾಮೀಣ ಪ್ರದೇಶವಾದ ರಾಯಸನ್ ಗ್ರಾಮದಲ್ಲಿ ನರೇಂದ್ರ ಮೋದಿಯವರ ಕಿರಿಯ ಸಹೋದರ ಪಂಕಜ್ ಮೋದಿ ಜತೆ ವಾಸವಾಗಿದ್ದರು. ಸದಾ ಸರಳತೆಯನ್ನು ಬಯಸುತ್ತಿದ್ದ ಹೀರಾಬೆನ್, ಗ್ರಾಮದಲ್ಲಿಯೇ ಇರಲು ಇಷ್ಟಪಡುತ್ತಿದ್ದರು. 2014 ಸೆಪ್ಟೆಂಬರ್ 17ರಂದು ದೇಶದ ಪ್ರಧಾನಿಯಾಗಿದ್ದರೂ ಯಾವುದೇ ಭದ್ರತೆ ಇಲ್ಲದೆ ಮೋದಿ ಅಮ್ಮನ ಹುಟ್ಟುಹಬ್ಬಕ್ಕೆ ಆಗಮಿಸಿದ್ದರು. ಹೀರಾಬೆನ್ ಹುಟ್ಟುಹಬ್ಬಕ್ಕೆ ಮೋದಿ ಆಗಮಿಸಿ, ಅಮ್ಮ ಮಾಡಿದ ಆಹಾರ ಸವಿಯುವುದು ಅವರ ಆಶೀರ್ವಾದ ಪಡೆದು ಅವರ ಜತೆ ಕೆಲಕಾಲ ಕಳೆಯುವುದನ್ನು ನಾವು ಫೋಟೊಗಳಲ್ಲಿ ನೋಡಿದ್ದೇವೆ. ಈ ಫೋಟೊಗಳನ್ನು ಗಮನಿಸಿದರೆ ಗೊತ್ತಾಗುತ್ತದೆ ಹೀರಾಬೆನ್ ಸರಳತೆಯನ್ನು ಮೈಗೂಡಿಸಿಕೊಂಡವರು ಎಂದು. ಮಗ ದೇಶದ ಪ್ರಧಾನಿಯಾಗಿದ್ದರೂ ಹಮ್ಮು ಬಿಮ್ಮುಗಳಿಲ್ಲದೆ ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುತ್ತಾರೆ ಹೀರಾಬೆನ್. ಅವರು ಸಾರ್ವಜನಿಕ ಸಾರಿಗೆಯನ್ನೇ ಓಡಾಟಕ್ಕೆ ಬಳಸುತ್ತಾರೆ. ಇವರು ಯಾವುದೇ ವಿಶೇಷವಾದ ಆಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ಅವರೇ ಅಡುಗೆ ಮಾಡಿಕೊಳ್ಳುತ್ತಾರೆ. ಹೆಚ್ಚು ಎಣ್ಣೆ ಮತ್ತು ಸಾಂಬಾರ ಪದಾರ್ಥಗಳನ್ನು ಹೊಂದಿರುವ ಆಹಾರ ಇವರಿಗೆ ಇಷ್ಟವಿಲ್ಲ. ತನ್ನ ದೈನಂದಿನ ಆಹಾರದಲ್ಲಿ ಬೇಳೆ, ಅನ್ನ, ಖಿಚಡಿ ಮತ್ತು ಚಪಾತಿ ಹೀರಾಬೆನ್ ಅವರಿಗೆ ಇಷ್ಟ.
2016 ಮೇ 16ರಂದು ಹೀರಾಬೆನ್ ದೆಹಲಿಯ ರೇಸ್ ಕೋರ್ಸ್ ನಲ್ಲಿರುವ ಮೋದಿಯವರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದ್ದರು. ಗುಜರಾತಿನ ರಾಯ್ಸನ್ ಪ್ರದೇಶದಲ್ಲಿನ 80 ಮೀಟರ್ ರಸ್ತೆಗೆ ಪೂಜ್ಯ ಹೀರಾಬಾ ಮಾರ್ಗ್ ಎಂದು ಹೆಸರಿಡಲಾಗಿದೆ. ಮುಂದಿನ ಯುವಜನಾಂಗ ಅವರ ಬದುಕಿನಿಂದ ಸ್ಫೂರ್ತಿ ಪಡೆಯಬೇಕು ಎಂದು ರಸ್ತೆಗೆ ಹೆಸರಿಟ್ಟ ಕಾರ್ಯಕ್ರಮಗಲ್ಲಿ ಗಾಂಧಿನಗರ ಮೇಯರ್ ಹಿತೇಶ್ ಮಕ್ವಾನಾ ಹೇಳಿದ್ದರು.
ಇದನ್ನೂ ಓದಿ: Prahlad Modi: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ, ಇತರರು ನಾಳೆ ಆಸ್ಪತ್ರೆಯಿಂದ ಬಿಡುಗಡೆ
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:25 am, Fri, 30 December 22