Ugadi 2026: ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ; ಹೊಸ ವರ್ಷಕ್ಕೆ ನಮೋ ಹಾರೈಕೆ!

ಯುಗಾದಿ ಹಬ್ಬದಂದು ಪ್ರಧಾನಿ ಮೋದಿ ಅವರು 'X' ಮೂಲಕ ಕರ್ನಾಟಕದ ಜನತೆಗೆ ಕನ್ನಡದಲ್ಲಿ ಹೃತ್ಪೂರ್ವಕ ಶುಭಾಶಯ ಕೋರಿದ್ದಾರೆ. ಕನ್ನಡಿಗರ ಸಂಸ್ಕೃತಿ ಮತ್ತು ಹೊಸ ಆರಂಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕನ್ನಡದಲ್ಲಿ ಸಂದೇಶ ನೀಡಿ ಕನ್ನಡಿಗರ ಮನ ಗೆದ್ದ ಪ್ರಧಾನಿಯವರು, ಮುಂಬರುವ ವರ್ಷವು ಎಲ್ಲರ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿ ತರಲಿ ಎಂದು ಹಾರೈಸಿದ್ದಾರೆ. ಇದು ಹೊಸ ಭರವಸೆಯ ಹಬ್ಬವಾಗಿದೆ.

Ugadi 2026: ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ; ಹೊಸ ವರ್ಷಕ್ಕೆ ನಮೋ ಹಾರೈಕೆ!
ಸಾಂದರ್ಭಿಕ ಚಿತ್ರ

Updated on: Mar 19, 2026 | 9:46 AM

ದೆಹಲಿ, ಮಾ.19: ಚಾಂದ್ರಮಾನ ಯುಗಾದಿ ಮತ್ತು ಹೊಸ ವರ್ಷದ ಈ ಶುಭ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ವಸಂತ ಋತುವಿನ ಆಗಮನವು ಹೊಸ ಚೈತನ್ಯ ಮತ್ತು ಸಾಧ್ಯತೆಗಳನ್ನು ಹೊತ್ತು ತರಲಿ ಎಂದು ಅವರು ಹಾರೈಸಿದ್ದಾರೆ. “ಪವಿತ್ರ ಯುಗಾದಿಯ ಸಂದರ್ಭದಲ್ಲಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸುಖಮಯ ಹೊಸ ವರ್ಷದ ಶುಭಾಶಯಗಳು” ಎಂದು ಪ್ರಧಾನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಸಂತ ಕಾಲದ ಹಸಿರು, ಹೂವುಗಳ ಸುಗಂಧ ಮತ್ತು ಹಣ್ಣುಗಳ ಆಗಮನವು ಹೊಸ ಶಕ್ತಿಯ ಸಂಕೇತವಾಗಿದೆ ಎಂದು ಅವರು ಬಣ್ಣಿಸಿದ್ದಾರೆ. ಯುಗಾದಿಯು ಹೊಸ ಕೃಷಿ ಚಟುವಟಿಕೆಗಳ ಆರಂಭದ ಕಾಲ. ಈ ಸಮಯದಲ್ಲಿ ನಮ್ಮ ದೇಶದ ಕಷ್ಟಜೀವಿ ರೈತರು ಹೊಸ ಆಶಾವಾದದೊಂದಿಗೆ ಮುಂದಿನ ಕೃಷಿ ಚಕ್ರಕ್ಕೆ ಸಜ್ಜಾಗುತ್ತಿರುವುದನ್ನು ಪ್ರಧಾನಿ ಶ್ಲಾಘಿಸಿದ್ದಾರೆ.

ಜೀವನದ ಸಿಹಿ-ಕಹಿಗಳನ್ನು ಸಮಾನವಾಗಿ ಸ್ವೀಕರಿಸಬೇಕು ಎಂಬ ಯುಗಾದಿಯ ಸಾಂಪ್ರದಾಯಿಕ ಸಂದೇಶವನ್ನು ಪ್ರಧಾನಿ ನೆನಪಿಸಿದ್ದಾರೆ. ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಯಶಸ್ಸನ್ನು ಕೃತಜ್ಞತೆಯಿಂದ ಸ್ವೀಕರಿಸಲು ಈ ಹಬ್ಬ ಪ್ರೇರಣೆ ನೀಡುತ್ತದೆ ಎಂದಿದ್ದಾರೆ. ಮುಂಬರುವ ವರ್ಷವು ಎಲ್ಲರ ಜೀವನದಲ್ಲಿ ಉತ್ತಮ ಆರೋಗ್ಯ, ಸುಖ ಮತ್ತು ಶಾಂತಿಯನ್ನು ತರಲಿ ಎಂದು ಮೋದಿ ಅವರು ಪ್ರಾರ್ಥಿಸಿದ್ದಾರೆ.

ಇಲ್ಲಿದೆ ನೋಡಿ ಪ್ರಧಾನಿ ಮೋದಿ ಪೋಸ್ಟ್​:

ಕರ್ನಾಟಕದ ಜನತೆಗೆ ಕನ್ನಡದಲ್ಲೇ ಶುಭ ಕೋರಿದ ಪ್ರಧಾನಿ ಮೋದಿ

ಯುಗಾದಿ ಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಜನತೆಗೆ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸಿದ್ದಾರೆ. ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ಮೂಲಕ ಅವರು ಹಂಚಿಕೊಂಡಿರುವ ಸಂದೇಶದಲ್ಲಿ ಕನ್ನಡಿಗರ ಸಂಸ್ಕೃತಿ ಮತ್ತು ಹೊಸ ಆರಂಭದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. “ಕರ್ನಾಟಕದ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು” ಎಂದು ಪ್ರಧಾನಿ ಮೋದಿಯವರು ಕನ್ನಡ ಭಾಷೆಯಲ್ಲೇ ಸಂದೇಶ ನೀಡುವ ಮೂಲಕ ಕನ್ನಡಿಗರ ಮನ ಗೆದ್ದಿದ್ದಾರೆ. ಯುಗಾದಿಯು ಹೊಸ ಭರವಸೆ ಮತ್ತು ಚೈತನ್ಯದ ಹಬ್ಬವಾಗಿದ್ದು, ಇದು ಪ್ರತಿಯೊಬ್ಬರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲಿ ಎಂದು ಅವರು ಹಾರೈಸಿದ್ದಾರೆ.ಮುಂಬರುವ ವರ್ಷವು ಕರ್ನಾಟಕದ ಮನೆಮನಗಳಲ್ಲಿ ಸುಖ, ಶಾಂತಿ, ಆರೋಗ್ಯ ಮತ್ತು ಐಶ್ವರ್ಯವನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: ಯುಗಾದಿ ಹಬ್ಬದ ಸಂಭ್ರಮ; ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶ

ಉತ್ತರ ಭಾರತದ ರಾಜ್ಯಗಳಿಗೆ ಪ್ರಧಾನಿ ಮೋದಿ ವಿಶೇಷ ಪತ್ರ

ವಿಕ್ರಮ ಸಂವತ್ 2083 ಮತ್ತು ಚೈತ್ರ ನವರಾತ್ರಿಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ, ಬಿಹಾರ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ದೆಹಲಿಯ ಜನತೆಗೆ ವೈಯಕ್ತಿಕ ಪತ್ರಗಳನ್ನು ಬರೆದಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಈ ದಿನಕ್ಕೆ ಇರುವ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಪ್ರಾಮುಖ್ಯತೆಯನ್ನು ಅವರು ಶ್ಲಾಘಿಸಿದ್ದಾರೆ.ಭಾರತೀಯ ಕಾಲಗಣನೆಯ ಸಂಕೇತವಾದ ವಿಕ್ರಮ ಸಂವತ್ 2083ರ ಆರಂಭವು ದೇಶದಾದ್ಯಂತ ಹೊಸ ಭರವಸೆ ಮತ್ತು ಸಮೃದ್ಧಿಯನ್ನು ತರಲಿ ಎಂದು ಪ್ರಧಾನಿ ಹಾರೈಸಿದ್ದಾರೆ.

ಕಲಿಯುಗದ ಕಾಲಗಣನೆಯಾದ ಯುಗಾಬ್ದ 5128ನೇ ವರ್ಷಕ್ಕೆ ನಾವು ಕಾಲಿಡುತ್ತಿರುವುದು ನಮ್ಮ ಪುರಾತನ ನಾಗರಿಕತೆಯ ಜೀವಂತಿಕೆಗೆ ಸಾಕ್ಷಿ ಎಂದು ಅವರು ಉಲ್ಲೇಖಿಸಿದ್ದಾರೆ. ಶಕ್ತಿ ದೇವತೆಯ ಆರಾಧನೆಯಾದ ಚೈತ್ರ ನವರಾತ್ರಿಯು ದೇಶದ ಜನರಲ್ಲಿ ಆತ್ಮವಿಶ್ವಾಸ ಮತ್ತು ದೃಢತೆಯನ್ನು ತುಂಬಲಿ ಎಂದು ಅವರು ಪ್ರಾರ್ಥಿಸಿದ್ದಾರೆ. ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಈ ದಿನವನ್ನು ‘ನವ ವರ್ಷ’ವನ್ನಾಗಿ ಆಚರಿಸುವ ಪರಂಪರೆಯನ್ನು ಸ್ಮರಿಸಿರುವ ಅವರು, ಇದು ಭಾರತದ ಸಾಂಸ್ಕೃತಿಕ ಏಕತೆಯ ಪ್ರತಿಬಿಂಬ ಎಂದಿದ್ದಾರೆ.ಹೊಸ ವರ್ಷವು ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸಲು ಎಲ್ಲರಿಗೂ ಶಕ್ತಿ ನೀಡಲಿ ಎಂದು ಮೋದಿ ಅವರು ತಮ್ಮ ಪತ್ರದಲ್ಲಿ ಆಶಿಸಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us