ಇಂದು ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ‘ಮನ್ ಕಿ ಬಾತ್’ನ 83ನೇ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ದೇಶದ ಭದ್ರತಾ ಪಡೆಗಳು ಹಾಗೂ ಹುತಾತ್ಮ ಯೋಧರನ್ನು ಸ್ಮರಿಸಿ ಮಾತನಾಡಿದ ಪ್ರಧಾನಿ, ‘‘ಇನ್ನೆರಡು ದಿನಗಳಲ್ಲಿ ಡಿಸೆಂಬರ್ ತಿಂಗಳು ಆರಂಭವಾಗಲಿದೆ. ದೇಶವು ನೌಕಾಪಡೆಯ ದಿನ ಮತ್ತು ಸಶಸ್ತ್ರ ಪಡೆಗಳ ಧ್ವಜ ದಿನವನ್ನು ಆಚರಿಸುತ್ತದೆ. ಡಿಸೆಂಬರ್ 16 ರಂದು ದೇಶವು 1971 ರ ಯುದ್ಧದ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಈ ಎಲ್ಲಾ ಸಂದರ್ಭಗಳಲ್ಲಿ, ನಾನು ದೇಶದ ಭದ್ರತಾ ಪಡೆಗಳನ್ನು ನೆನಪಿಸಿಕೊಳ್ಳುತ್ತೇನೆ, ನಮ್ಮ ವೀರರನ್ನು ನೆನಪಿಸಿಕೊಳ್ಳುತ್ತೇನೆ’’ ಎಂದು ಪ್ರಧಾನಿ ನುಡಿದಿದ್ದಾರೆ.
ಅಧಿಕಾರದ ಕುರಿತು ಪ್ರಧಾನಿ ಮನದ ಮಾತು:
ಕಾರ್ಯಕ್ರಮದಲ್ಲಿ ಪ್ರಧಾನಿ ಹೃದಯದ ಸಮಸ್ಯೆಯಿಂದ ಬಳಲುತ್ತಿರುವ ರಾಜೇಶ್ ಪ್ರಜಾಪತಿ ಎಂಬುವವರೊಂದಿಗೆ ಮಾತನಾಡಿದರು. ಆಯುಷ್ಮಾನ್ ಕಾರ್ಡ್ ಯೋಜನೆಯ ಫಲಾನುಭವಿಯಾದ ರಾಜೇಶ್, ಅದರಿಂದಾದ ಪ್ರಯೋಜನಗಳನ್ನು ತಿಳಿಸಿದರು. ನಂತರ ಮಾತನಾಡಿದ ರಾಜೇಶ್, ‘‘ಯೋಜನೆಯಿಂದ ಬಹಳ ಉಪಕಾರವಾಗಿದೆ. ನಾನು ಹಾಗೂ ನಮ್ಮ ಮನೆಯವರು ನಿಮ್ಮನ್ನು ಸದಾಕಾಲ ಅಧಿಕಾರದಲ್ಲಿ ನೋಡಲು ಬಯಸುತ್ತೇನೆ’’ ಎಂದರು.
ಅದಕ್ಕೆ ಉತ್ತರಿಸಿದ ಪ್ರಧಾನಿ, ‘‘ರಾಜೇಶ್ ನಾನು ಅಧಿಕಾರದಲ್ಲಿರಲು ಬಯಸುವುದಿಲ್ಲ. ಭವಿಷ್ಯದಲ್ಲೂ ನಾನು ಅಧಿಕಾರದಲ್ಲಿರುವುದಿಲ್ಲ. ಈಗಿರುವುದೂ ಅಧಿಕಾರವಲ್ಲ. ನಾನು ಸೇವೆಯಲ್ಲಿದ್ದೇನೆ. ಪ್ರಧಾನಿ ಹುದ್ದೆಯು ಅಧಿಕಾರವಲ್ಲ, ಇದು ಸೇವೆ’’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಜೇಶ್, ಸೇವೆಯ ಸ್ಥಾನದಲ್ಲಿಯೇ ನೀವು ಮುಂದುವರೆಯಿರಿ ಎಂದರು. ನಂತರ ಪ್ರಧಾನಿ ರಾಜೇಶ್ ಅವರಿಗೆ ನೆರೆಹೊರೆಯವರಿಗೆ ಆಯುಷ್ಮಾನ್ ಯೋಜನೆಯ ಪ್ರಯೋಜನೆಗಳನ್ನು ತಿಳಿಸುವಂತೆ ವಿವರಿಸಿದರು.
ಇದೇ ವೇಳೆ ಪ್ರಧಾನಿ‘‘ಸರ್ಕಾರದ ಪ್ರಯತ್ನದಿಂದ, ಸರ್ಕಾರದ ಯೋಜನೆಗಳಿಂದ ಜನರ ಜೀವನ ಹೇಗೆ ಬದಲಾಯಿತು, ಆ ಬದಲಾದ ಜೀವನದ ಅನುಭವವೇನು? ಇವುಗಳನ್ನು ಕೇಳಿದಾಗ ಮನಸ್ಸಿಗೆ ತೃಪ್ತಿಯಾಗುತ್ತದೆ. ಮತ್ತು ಆ ಯೋಜನೆಯನ್ನು ಮತ್ತಷ್ಟು ಜನರ ಬಳಿಗೆ ಕೊಂಡೊಯ್ಯಲು ಸ್ಫೂರ್ತಿ ನೀಡುತ್ತದೆ. ಇದನ್ನೇ ನಾನು ಜೀವನದಿಂದ ಹುಡುಕುತ್ತೇನೆ. ಅಧಿಕಾರದಲ್ಲಿರಲು ಬಯಸುವುದಿಲ್ಲ, ಜನರ ಸೇವೆಯೇ ನನ್ನ ಗುರಿ’’ ಎಂದು ಹೇಳಿದರು.
ಸ್ಟಾರ್ಟಪ್ ಕುರಿತು ಮೋದಿ ಮಾತು:
ಹೆಚ್ಚಿನ ಯುವ ಜನಸಂಖ್ಯೆಯನ್ನು ಹೊಂದಿರುವ ಪ್ರತಿ ದೇಶದಲ್ಲಿ ಮೂರು ಅಂಶಗಳು ಬಹಳ ಮುಖ್ಯ. ಕೆಲವೊಮ್ಮೆ, ಇದು ಯುವಕರ ನೈಜ ಗುರುತಾಗುತ್ತದೆ. ಮೊದಲ ಅಂಶವೆಂದರೆ – ನೂತನ ಪರಿಕಲ್ಪನೆಗಳು ಮತ್ತು ನಾವೀನ್ಯತೆ. ಎರಡನೆಯದು ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಮತ್ತು ಮೂರನೆಯದು ‘ಏನನ್ನೇ ಆದರೂ ಮಾಡಬಹುದು’ ಮನೋಭಾವ. ಇದು ಸ್ಟಾರ್ಟ್‌ಅಪ್‌ಗಳ ಯುಗ ಮತ್ತು ಇಂದು ಭಾರತವು ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಮುಂಚೂಣಿಯಲ್ಲಿದೆ ಎಂಬುದಂತೂ ನಿಜ. ಇಂದು, ಭಾರತದಲ್ಲಿ 70 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು 1 ಬಿಲಿಯನ್‌ಗಿಂತಲೂ ಹೆಚ್ಚು ಮೌಲ್ಯವನ್ನು ದಾಟಿವೆ. ಅನೇಕ ಭಾರತೀಯರು ತಮ್ಮ ಸ್ಟಾರ್ಟಪ್‌ಗಳ ಮೂಲಕ ಜಾಗತಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸುತ್ತಿದ್ದಾರೆ ಎಂದು ಪ್ರಧಾನಿ ಶ್ಲಾಘಿಸಿದ್ದಾರೆ.
ಪ್ರಕೃತಿಯ ಕುರಿತು ಮಾತನಾಡಿದ ಪ್ರಧಾನಿ:
ಪ್ರಕೃತಿಯ ಕುರಿತು ಪ್ರಧಾನಿ ಮಾತನಾಡಿದ್ದು, ಪ್ರಕೃತಿ ನಮ್ಮ ತಾಯಿಯಂತೆ. ಅದು ನಮ್ಮನ್ನು ಸಂರಕ್ಷಿಸುತ್ತದೆ ಎಂದು ನುಡಿದಿದ್ದಾರೆ.
ಅಮೃತ ಮಹೋತ್ಸವದ ಕುರಿತು ಪ್ರಧಾನಿ ಮಾತು:
ಅಮೃತ ಮಹೋತ್ಸವವು ಕಲಿಯುವುದರ ಜತೆಗೆ ದೇಶಕ್ಕಾಗಿ ಏನಾದ್ರೂ ಮಾಡುವುದನ್ನೂ ಪ್ರೇರೇಪಿಸುತ್ತದೆ. ಒನ್ಜಿಸಿ(ONGC-Oil and Natural Gas Corporation)ಯಿಂದ ತನ್ನ ವಿದ್ಯಾರ್ಥಿಗಳಿಗೆ ಸ್ಟಡಿ ಟೂರ್ ಏರ್ಪಡಿಸಲಾಗಿದೆ. ಈ ಮೂಲಕ ONGC ಕೂಡ ಸಾರ್ಥಕ ಅಮೃತ ಮಹೋತ್ಸವ ಆಚರಿಸುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.
‘ಸಬ್ ಕಾ ಸಾಥ್’ ಯಶಸ್ಸಿನ ಉದಾಹರಣೆ ನೀಡಿದ ಪ್ರಧಾನಿ:
‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ಗೆ ಉದಾಹರಣೆಯನ್ನು ನೀಡಿದ ಪ್ರಧಾನಿ, ‘‘ಜಲೌನ್‌ನಲ್ಲಿ ನೂನ್ ನದಿ ಎಂಬ ನದಿ ಇತ್ತು. ಕ್ರಮೇಣ, ನದಿಯು ಅಳಿವಿನ ಅಂಚಿಗೆ ಬಂದಿತ್ತು. ಇದು ಈ ಪ್ರದೇಶದ ರೈತರಿಗೆ ಬಿಕ್ಕಟ್ಟನ್ನು ಹೆಚ್ಚಿಸಿತು. ಜಲೌನ್‌ನ ಜನರು ಈ ವರ್ಷ ಸಮಿತಿಯನ್ನು ರಚಿಸಿದರು ಮತ್ತು ನದಿಯನ್ನು ಪುನರುಜ್ಜೀವನಗೊಳಿಸಿದರು. ಇದು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್ಗೆ ಉದಾಹರಣೆಯಾಗಿದೆ’’ ಎಂದು ಹೇಳಿದ್ದಾರೆ.
ಕೊರೊನಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ: ಪ್ರಧಾನಿ ಸಲಹೆ
“ಕೊರೋನಾ ಇನ್ನೂ ಹೋಗಿಲ್ಲ ಎಂಬುದನ್ನು ಎಂದಿಗೂ ಮರೆಯಬೇಡಿ. ಮುನ್ನೆಚ್ಚರಿಕೆ ವಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ’’ ಎಂದು ಪ್ರಧಾನಿ ನುಡಿದಿದ್ದಾರೆ.
83ನೇ ಮನ್ ಕಿ ಬಾತ್ ಇಲ್ಲಿ ಆಲಿಸಬಹುದು:
Tune in to #MannKiBaat November 2021. https://t.co/2qQ3sjgLSa
— Narendra Modi (@narendramodi) November 28, 2021
ಇದನ್ನೂ ಓದಿ:
ಒಮಿಕ್ರಾನ್ ಭೀತಿ; ಅಂತಾರಾಷ್ಟ್ರೀಯ ವಿಮಾನ ಪ್ರಯಾಣದ ನಿಯಮ ಸಡಿಲಿಕೆ ನಿರ್ಧಾರದ ಬಗ್ಗೆ ಪರಿಶೀಲಿಸಲು ಮೋದಿ ಸೂಚನೆ
Published On - 11:24 am, Sun, 28 November 21