I20 ಕಾರಿನಲ್ಲಿ ಸ್ಫೋಟ: ದಿಲ್ಲಿ ಘಟನೆ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಫಸ್ಟ್ ರಿಯಾಕ್ಷನ್
ನವದೆಹಲಿಯ ಕೆಂಪುಕೋಟೆ ಮೆಟ್ರೋ ಸ್ಟೇಷನ್ ಗೇಟ್-1 ಬಳಿ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತ ಬೆನ್ನಲ್ಲೇ ದೇಶಾದ್ಯಂತ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಘಟನಾ ಸ್ಥಳಕ್ಕೆ ಕೇಂದ್ರ ತನಿಖಾ ಸಂಸ್ಥೆಗಳು ದೌಡಾಯಿಸಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಿದ್ದು, ಘಟನೆ ಸಂಬಂಧ ಓರ್ವನನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗ ಮೊದಲ ಪ್ರತಿಕ್ರಿಯೆ ನೀಡಿದ್ದು, ಸ್ಫೋಟದ ಬಗ್ಗೆ ವಿವರಿಸಿದ್ದಾರೆ.

ನವದೆಹಲಿ, (ನವೆಂಬರ್ 10) : ರಾಷ್ಟ್ರರಾಜಧಾನಿಯ ಹೃದಯಭಾಗದಲ್ಲಿಂದು ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಸ್ಫೋಟ (Delhi Explosion) ಪ್ರಕರಣವನ್ನು ಕೇಂದ್ರ ತನಿಖೆ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದ್ದು, ಈ ಸಂಬಂಧ ಪೊಲೀಸರು, ಎನ್ಐಎ, ಎನ್‌ಎಸ್‌ಜಿ ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಿವೆ. ದೆಹಲಿ ನಗರ ಪೊಲೀಸ್ ಆಯುಕ್ತರ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಚರ್ಚೆ ನಡೆಸಿದ್ದು, ಸ್ಫೋಟದ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಈ ಮಾಹಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ದುರಂತದ ಬಗ್ಗೆ ತ್ವರಿತಗತಿಯಲ್ಲಿ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಶಾ ಸೂಚನೆ ನೀಡಿದ್ದಾರೆ.
ಹುಂಡೈ ಐ20 ಕಾರಿನಲ್ಲಿ ಸ್ಫೋಟ
ಇನ್ನು ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಕ್ರಿಯಿಸಿದ್ದು, ಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್‌ನಲ್ಲಿ ಹುಂಡೈ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ಅಲ್ಲದೇ ಈ ಸ್ಫೋಟದಲ್ಲಿ ಕೆಲವು ಪಾದಚಾರಿಗಳು ಗಾಯಗೊಂಡಿದ್ದಾರೆ, ಕೆಲ ವಾಹನಗಳು ಹಾನಿಗೊಳಗಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
#WATCH | Delhi: Blast near Red Fort Metro Station | Union Home Minister Amit Shah says “This evening, around 7 pm, a blast occurred in a Hyundai i20 car at the Subhash Marg traffic signal near the Red Fort in Delhi. The blast injured some pedestrians and damaged some vehicles.… pic.twitter.com/BfRei3r3tx
— ANI (@ANI) November 10, 2025
ಸ್ಫೋಟದ ಮಾಹಿತಿ ಬಂದ ಹತ್ತೇ ನಿಮಿಷಗಳಲ್ಲಿ ದೆಹಲಿ ಕ್ರೈಂ ಬ್ರ್ಯಾಂಚ್ ಮತ್ತು ದೆಹಲಿ ಸ್ಪೆಷಲ್ ಸೆಲ್‌ನ ತಂಡಗಳು ಸ್ಥಳಕ್ಕೆ ಭೇಟಿ ನೀಡಿವೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡದೊಂದಿಗೆ ಎನ್‌ಎಸ್‌ಜಿ ಮತ್ತು ಎನ್‌ಐಎ ತಂಡಗಳೂ ಸ್ಥಳಕ್ಕೆ ಆಗಮಿಸಿದ್ದು, ಎಲ್ಲಾ ಆಯಾಮಗಳಲ್ಲೂ ತನಿಖೆ ಪ್ರಾರಂಭಿಸಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Delhi Car Blast: ದೆಹಲಿಯ ಕೆಂಪು ಕೋಟೆ ಬಳಿ ಇಂದು ಸಂಜೆ ನಡೆದಿದ್ದೇನು? ಸ್ಫೋಟಕ್ಕೆ ಕಾರಣವೇನು?
ಸುತ್ತಮುತ್ತ ಪ್ರದೇಶಗಳಲ್ಲಿರುವ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನ ಪರಿಶೀಲಿಸಲು ಆದೇಶಿಸಲಾಗಿದೆ. ಅಲ್ಲದೇ ನಾನು ದೆಹಲಿ ನಗರ ಪೊಲೀಸ್ ಮತ್ತು ವಿಶೇಷ ಸೆಲ್ ಮುಖ್ಯಸ್ಥರೊಂದಿಗೆ ಮಾತನಾಡಿದ್ದೇನೆ. ದೆಹಲಿ ಸಿಪಿ ಮತ್ತು ವಿಶೇಷ ಶಾಖೆಯ ಉಸ್ತುವಾರಿ ಸ್ಥಳದಲ್ಲಿದ್ದಾರೆ. ಎಲ್ಲಾ ಸಾಧ್ಯತೆಗಳನ್ನ ಪರಿಗಣಿಸಿ ಸಂಪೂರ್ಣ ತನಿಖೆ ನಡೆಸುತ್ತೇವೆ. ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ಸಾರ್ವಜನಿಕರ ಮುಂದಿಡುತ್ತೇವೆ ಎಂದು ಹೇಳಿದ್ದಾರೆ.
ಲೋಕ್‌ನಾಯಕ್ ಆಸ್ಪತ್ರೆಗೆ ಭೇಟಿ
ಇನ್ನು ಘಟನಾ ಸ್ಥಳದ ಬಗ್ಗೆ ದೆಹಲಿ ಪೊಲೀಸ್ ಇಲಾಖೆ ಹಾಗೂ ವಿಶೇಷ ಘಟಕದಿಂದ ಮಾಹಿತಿ ಪಡೆದ ಅಮಿತ್ ಶಾ, ಕೆಲವೇ ಕ್ಷಣಗಳಲ್ಲಿ ಲೋಕನಾಯಕ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಕಾರು ಸ್ಫೋಟದ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರ ಆರೋಗ್ಯ ವಿಚಾರಿಸಿದ್ದು, ವೈದ್ಯರಿಂದಲೂ ಮಾಹಿತಿ ಪಡೆದುಕೊಂಡಿದ್ದಾರೆ.
ಘಟನೆ ಬಗ್ಗೆ ಮೋದಿ ಹೇಳಿದ್ದೇನು?
ಇನ್ನು ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಟ್ವಿಟ್ಟರ್ ಎಕ್ಸ್ ಮೂಲಕ ಪ್ರತಿಕ್ರಿಯಿಸಿದ್ದು, ಇಂದು ಸಂಜೆ ದೆಹಲಿಯಲ್ಲಿ ನಡೆದ ಸ್ಫೋಟದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದು, ಅವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ. ಸಂತ್ರಸ್ತರಿಗೆ ಅಧಿಕಾರಿಗಳು ಸಹಾಯ ಮಾಡುತ್ತಿದ್ದಾರೆ. ಗೃಹ ಸಚಿವ ಅಮಿತ್ ಶಾ ಮತ್ತು ಇತರ ಅಧಿಕಾರಿಗಳೊಂದಿಗೆ ಪರಿಸ್ಥಿತಿ ಅವಲೋಕಿಸಿದ್ದೇನೆ ಎಂದು ತಿಳಿಸಿದ್ದಾರೆ.




