ಸಂಘರ್ಷ ಪೀಡಿತ ಸುಡಾನ್​​ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗೆ ಸಿದ್ಧತೆ ನಡೆಸಿ: ಮೋದಿ

|

Updated on: Apr 21, 2023 | 5:09 PM

Sudan Crisis: ಜಾಗರೂಕರಾಗಿರಲು, ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಸುಡಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಪ್ರಧಾನಿ ಮೋದಿ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ

ಸಂಘರ್ಷ ಪೀಡಿತ ಸುಡಾನ್​​ನಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಯೋಜನೆಗೆ ಸಿದ್ಧತೆ ನಡೆಸಿ: ಮೋದಿ
ಸಭೆಯಲ್ಲಿ ನರೇಂದ್ರ ಮೋದಿ
Follow us on

ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸಂಘರ್ಷ ಪೀಡಿತ ಸುಡಾನ್​​ನಲ್ಲಿ (Sudan) ಸಿಲುಕಿರುವ ಭಾರತೀಯರ ಪರಿಸ್ಥಿತಿ ಬಗ್ಗೆ ಚರ್ಚಿಸುವುದಕ್ಕಾಗಿ ಶುಕ್ರವಾರ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಸರ್ಕಾರಿ ಅಧಿಕಾರಿಗಳೊಂದಿಗಿನ ಸಭೆಯ ಅಧ್ಯಕ್ಷತೆಯನ್ನು ಮೋದಿ ವಹಿಸಿದ್ದರು. ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಸುಡಾನ್​​ಗಿರುವ ಭಾರತದ ರಾಯಭಾರಿ ಸೇರಿದಂತೆ ಹಲವಾರು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು. ಸಭೆಯಲ್ಲಿ ಮೋದಿಯವರು (PM Modi) ಸುಡಾನ್​​ನಲ್ಲಿನ ಇತ್ತೀಚಿನ ವಿದ್ಯಮಾನಗಳ ಬಗ್ಗೆ ವರದಿಯನ್ನು ಕೇಳಿದ್ದು, ಅಲ್ಲಿರುವ 3,000ಕ್ಕಿಂತಲೂ ಹೆಚ್ಚು ಭಾರತೀಯರ ಸುರಕ್ಷೆ ಬಗ್ಗೆ ಗಮನ ಹರಿಸುವಂತೆ ಹೇಳಿದ್ದಾರೆ. ಕಳೆದ ವಾರ ಸುಡಾನ್​​ನಲ್ಲಿ ಗುಂಡಿನ ದಾಳಿಗೆ ಬಲಿಯಾದ ಭಾರತೀಯರ ಸಾವಿಗೆ ಮೋದಿ ಸಂತಾಪ ಸೂಚಿಸಿದ್ದಾರೆ.

ಜಾಗರೂಕರಾಗಿರಲು, ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಮತ್ತು ಸುಡಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಪ್ರಧಾನಿ ಮೋದಿ ಎಲ್ಲಾ ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕ್ಷಿಪ್ರವಾಗಿ ಬದಲಾಗುತ್ತಿರುವ ಭದ್ರತಾ ಭೂದೃಶ್ಯ ಮತ್ತು ವಿವಿಧ ಆಯ್ಕೆಗಳ ಕಾರ್ಯಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಆಕಸ್ಮಿಕ ಸ್ಥಳಾಂತರಿಸುವ ಯೋಜನೆಗಳನ್ನು ಸಿದ್ಧಪಡಿಸಲು ಪ್ರಧಾನಮಂತ್ರಿಯವರು  ನಿರ್ದೇಶನ ನೀಡಿದ್ದಾರೆ. ಈ ಪ್ರದೇಶದಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಮತ್ತು ಸುಡಾನ್‌ನಲ್ಲಿ ಗಮನಾರ್ಹ ಸಂಖ್ಯೆಯ ನಾಗರಿಕರನ್ನು ಹೊಂದಿರುವವರೊಂದಿಗೆ ನಿಕಟ ಸಂವಹನವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಪ್ರಧಾನಿ ಒತ್ತಿ ಹೇಳಿದರು.

ಗುರುವಾರ ವಿದೇಶಾಂಗ ಸಚಿವ ಎಸ್ ಜೈಶಂಕರ್ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗಿಯಾಗಿ ಸುಡಾನ್​​ನಲ್ಲಿರುವ ಭಾರತೀಯ ಸಮುದಾಯದ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ. ತಾವು ಈಜಿಪ್ಟ್, ಅಮೆರಿಕ ಸೇರಿದಂತೆ ಇತರ ರಾಷ್ಟ್ರಗಳ ಜತೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲಿ ಫಲಿತಾಂಶ ನೀಡಲಿದೆ ಎಂದಿದ್ದಾರೆ.

ಸುಡಾನ್ ಸೇನೆ ಮತ್ತು ಅಲ್ಲಿನ ಪ್ಯಾರಾಮಿಲಿರಿ ರ್ಯಾಪಿಡ್ ಸಪೋರ್ಟ್ ಫೋರ್ಸ್ ನಡುವೆ ಜಗಳ ನಡೆಯುತ್ತಿದ್ದು ಭಾರತವು ಆಕಸ್ಮಿಕ ಯೋಜನೆಗಳು ಮತ್ತು ಸಂಭವನೀಯ ಸ್ಥಳಾಂತರಿಸುವಿಕೆಗಾಗಿ ಕೆಲಸ ಮಾಡುತ್ತಿದೆ ಎಂದು ಅವರು ಭರವಸೆ ನೀಡಿದರು. ಶೀಘ್ರದಲ್ಲೇ ಈ ಪ್ರಯತ್ನಗಳು ಫಲಕಾಣಲಿವೆ ಎಂದು ಜೈಶಂಕರ್ ಟ್ವೀಟ್ ಮಾಡಿದ್ದಾರೆ.

ಖಾರ್ಟೋಮ್​​ನಲ್ಲಿರುವ ಭಾರತೀಯರು ತಾಳ್ಮೆ ಕಳೆದುಕೊಳ್ಳಬೇಡಿ. ಅನಗತ್ಯ ಸಾಹಸಗಳಿಗೆ ಮುಂದಾಗಬೇಡಿ. ಸಮುದಾಯದವರ ಸುರಕ್ಷೆ ಖಾತರಿಪಡಿಸಿಕೊಳ್ಳಿ ಎಂದು ವಿದೇಶಾಂಗ ಸಚಿವರು ಸುಡಾನ್ ನಲ್ಲಿರುವ ಭಾರತೀಯರಿಗೆ ಸಲಹೆ ನೀಡಿದ್ದಾರೆ.

 

ಅಧಿಕೃತ ಮಾಹಿತಿ ಪ್ರಕಾರ ಸುಡಾನ್ ನಲ್ಲಿ 330 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 3,300 ಜನರು ಗಾಯಗೊಂಡಿದ್ದಾರೆ.
ಏತನ್ಮಧ್ಯೆ, ಶುಕ್ರವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಸುಡಾನ್ ಪರಿಸ್ಥಿತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಸುಡಾನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತ ಮತ್ತು ಸುರಕ್ಷಿತ ಸ್ಥಳಾಂತರಿಸುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Godhra Violence: ಗೋಧ್ರಾ ಗಲಭೆಯಲ್ಲಿ ರೈಲಿಗೆ ಬೆಂಕಿ ಹಚ್ಚಿದ 8 ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂ

ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸ್ಥಾಪಿಸಿರುವ ನಿಯಂತ್ರಣ ಕೊಠಡಿಯು ಭಾರತೀಯ ಪ್ರಜೆಗಳಿಗೆ ಅಗತ್ಯವಿರುವ ಪ್ರಮುಖ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು ಉತ್ತಮ ಸಹಾಯಕವಾಗಿದೆ ಎಂದು ಅವರು ಹೇಳಿದರು. ಸಂಘರ್ಷ ಪ್ರಾರಂಭವಾದಾಗಿನಿಂದ ನಮ್ಮ ಹಲವಾರು ಜನರು ಕುಡಿಯುವ ನೀರು, ವಿದ್ಯುತ್, ಆಹಾರ ಮತ್ತು ಔಷಧಿಗಳಂತಹ ಮೂಲಭೂತ ಸೌಕರ್ಯಗಳಿಗೆ ಪ್ರವೇಶವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ಹೇಳುವ ಮನವಿಗಳು ಮತ್ತು ಕರೆಗಳನ್ನು ಕೇರಳ ಸರ್ಕಾರವು ಸ್ವೀಕರಿಸಿದೆಎಂದು ಪತ್ರದಲ್ಲಿ ಬರೆಯಲಾಗಿದೆ.

ರಾಜ್ಯಕ್ಕೆ ಸೇರಿದ ಹೆಚ್ಚಿನ ಸಂಖ್ಯೆಯ ಜನರು ಸುಡಾನ್‌ನಲ್ಲಿ ಆರೋಗ್ಯ ವೃತ್ತಿಪರರಾಗಿ ಅಥವಾ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯನ್ ಹೇಳಿದ್ದು ಈ ವಿಷಯದಲ್ಲಿ ಪ್ರಧಾನಿ ಮೋದಿಯವರ ಮಧ್ಯಸ್ಥಿಕೆಗೆ ವಿನಂತಿಸಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published On - 5:05 pm, Fri, 21 April 23