ಪುಟಿನ್ ನಿವಾಸದ ಮೇಲಿನ ಉಕ್ರೇನ್ ದಾಳಿಗೆ ಪ್ರಧಾನಿ ಮೋದಿ ಖಂಡನೆ

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ದಾಳಿ ನಡೆಸಿದೆ ಎಂಬ ವರದಿಗಳ ಬಗ್ಗೆ ಇಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದಾರೆ. ಪುಟಿನ್ ನಿವಾಸದ ಮೇಲೆ ಉಕ್ರೇನ್ ದಾಳಿ ನಡೆಸಿದ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಮೋದಿ, ಎರಡೂ ದೇಶಗಳ ನಡುವೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದಾದ ಈ ಬೆಳವಣಿಗೆಗಳ ಬಗ್ಗೆ ತೀವ್ರ ಕಳವಳಗೊಂಡಿರುವುದಾಗಿ ಹೇಳಿದ್ದಾರೆ.

ಪುಟಿನ್ ನಿವಾಸದ ಮೇಲಿನ ಉಕ್ರೇನ್ ದಾಳಿಗೆ ಪ್ರಧಾನಿ ಮೋದಿ ಖಂಡನೆ
Putin With Pm Modi

Updated on: Dec 30, 2025 | 3:39 PM

ನವದೆಹಲಿ, ಡಿಸೆಂಬರ್ 30: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ಉಕ್ರೇನ್ ದಾಳಿ ಮಾಡಿದೆ ಎಂಬ ವರದಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಎರಡೂ ದೇಶಗಳು ರಾಜತಾಂತ್ರಿಕ ಪ್ರಯತ್ನಗಳತ್ತ ಗಮನಹರಿಸುವಂತೆ ಅವರು ಒತ್ತಾಯಿಸಿದ್ದಾರೆ.

“ರಷ್ಯಾದ ಅಧ್ಯಕ್ಷರ ನಿವಾಸದ ಮೇಲೆ ದಾಳಿ ನಡೆದಿದೆ ಎಂಬ ವರದಿಗಳಿಂದ ತೀವ್ರ ಕಳವಳಗೊಂಡಿದ್ದೇನೆ. ಎರಡೂ ದೇಶಗಳ ನಡುವೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಸಾಧಿಸಲು ಮಾಡಲಾಗಿರುವ ರಾಜತಾಂತ್ರಿಕ ಪ್ರಯತ್ನಗಳು ಇಂತಹ ದಾಳಿಗಳಿಂದ ವ್ಯರ್ಥವಾಗುತ್ತವೆ. ಆದಷ್ಟೂ ಶಾಂತಿಯುತವಾಗಿ ಸಮಸ್ಯೆ ಬಗೆಹರಿಸುವ ಪ್ರಯತ್ನಗಳ ಮೇಲೆ ಗಮನಹರಿಸಲು ನಾವು ಎರಡೂ ದೇಶಗಳಿಗೆ ಮನವಿ ಮಾಡುತ್ತೇವೆ” ಎಂದು ಪ್ರಧಾನಿ ಮೋದಿ ಎಕ್ಸ್​​ನ ಪೋಸ್ಟ್‌ನಲ್ಲಿ ಬರೆದಿದ್ದಾರೆ.


ಫೆಬ್ರವರಿ 2022ರಲ್ಲಿ ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದಾಗಿನಿಂದ ಪ್ರಧಾನಿ ಮೋದಿ ಎರಡೂ ದೇಶಗಳ ನಡುವೆ ಸಂವಾದ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತಿದ್ದಾರೆ.

ಇದನ್ನೂ ಓದಿ: ಝೆಲೆನ್ಸ್ಕಿ- ಟ್ರಂಪ್ ಶಾಂತಿ ಮಾತುಕತೆಗೂ ಮುನ್ನ ಉಕ್ರೇನ್ ಮೇಲೆ ರಷ್ಯಾ ದಾಳಿ

ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ನಿನ್ನೆ ಮಾಸ್ಕೋ ಮತ್ತು ಸೇಂಟ್ ಪೀಟರ್ಸ್ಬರ್ಗ್ ನಡುವಿನ ಪುಟಿನ್ ನಿವಾಸದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂದು ಆರೋಪಿಸಿದ್ದರು. ಅವರ ಪ್ರಕಾರ, ನವ್ಗೊರೊಡ್ ಪ್ರದೇಶದಲ್ಲಿ ಪುಟಿನ್ ಅವರ ಅಧಿಕೃತ ನಿವಾಸದಲ್ಲಿ 91 ಡ್ರೋನ್‌ಗಳನ್ನು ತಡೆಹಿಡಿದು ಹೊಡೆದುರುಳಿಸಲಾಯಿತು. ಈ ಘಟನೆಯಿಂದ ಯಾವುದೇ ಹಾನಿ ಅಥವಾ ಸಾವುನೋವುಗಳು ಸಂಭವಿಸಿಲ್ಲ. ಆದರೆ, ಉಕ್ರೇನ್​ನ ಈ ದಾಳಿಯಿಂದಾಗಿ ರಷ್ಯಾ ಶಾಂತಿ ಮಾತುಕತೆಗೆ ಒಪ್ಪಬೇಕೇ ಬೇಡವೇ ಎಂಬುದನ್ನು ಮರುಪರಿಶೀಲಿಸಲಾಗುವುದು” ಎಂದು ಲಾವ್ರೊವ್ ಹೇಳಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ