
ನವದೆಹಲಿ, ಜೂನ್ 18: ‘‘ಭಾರತ ಎಂದೂ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆ ಬಯಸಿಲ್ಲ’’ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಗೆ ಹೇಳಿದ್ದಾರೆ. ಕೆನಡಾದಲ್ಲಿ ನಡೆದ ಜಿ7 ಶೃಂಗಸಭೆ ಬಳಿಕ ಟ್ರಂಪ್ ಆತುರಾತುರವಾಗಿ ದೇಶಕ್ಕೆ ಹಿಂದಿರುಗಿದ ಕಾರಣ ಪ್ರಧಾನಿ ಮೋದಿಗೆ ಮಾತನಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ದೂರವಾಣಿ ಕರೆ ಮಾಡಿ ಮಾತುಕತೆ ನಡೆಸಿದ್ದಾರೆ.
ಕಳೆದ ತಿಂಗಳು ಭಾರತ ಹಾಗೂ ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಯಾವುದೇ ಮಧ್ಯಸ್ಥಿಕೆ ಅಥವಾ ವ್ಯಾಪಾರ ಒಪ್ಪಂದ ಕಾರಣವಾಗಲಿಲ್ಲ ಎಂದು ಮೋದಿ ಸ್ಪಷ್ಟಪಡಿಸಿದ್ದಾರೆ. ಭಾರತ ತನ್ನ ಆಂತರಿಕ ವಿಷಯಗಳಲ್ಲಿ ಮೂರನೇ ವ್ಯಕ್ತಿಯ ಮಧ್ಯಸ್ಥಿಕೆಗಾಗಿ ಎಂದೂ ಎದುರು ನೋಡಿಲ್ಲ ಇದು ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದ್ದಾರೆ.
ಕೆನಡಾದಲ್ಲಿ ನಡೆಯಲಿರುವ ಜಿ7 ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ಮೋದಿ ಮತ್ತು ಅಮೆರಿಕ ಅಧ್ಯಕ್ಷರು ಭೇಟಿಯಾಗಬೇಕಿತ್ತು. ದರೆ, ಟ್ರಂಪ್ ಅವರು ಅಮೆರಿಕಕ್ಕೆ ಬೇಗನೆ ಮರಳಬೇಕಾಗಿದ್ದರಿಂದ ಸಭೆ ನಡೆಯಲು ಸಾಧ್ಯವಾಗಲಿಲ್ಲ. ಇದರ ನಂತರ, ಟ್ರಂಪ್ ಅವರ ಕೋರಿಕೆಯ ಮೇರೆಗೆ, ಇಬ್ಬರು ನಾಯಕರು ಇಂದು ದೂರವಾಣಿ ಸಂಭಾಷಣೆ ನಡೆಸಿದರು.
35 ನಿಮಿಷಗಳ ಮಾತುಕತೆ
ಸುಮಾರು 35 ನಿಮಿಷಗಳ ಕಾಲ ದೂರವಾಣಿ ಸಂಭಾಷಣೆ ನಡೆಯಿತು. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಇದಾದ ಬಳಿಕ ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಸಂಘರ್ಷವು ಅಪಾಯಕಾರಿಯಾಗಿ ಉಲ್ಬಣಗೊಂಡಿತು. ಎರಡೂ ದೇಶಗಳು ಮೇ 10 ರಂದು ಪೂರ್ಣ ಮತ್ತು ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡವು, ಇದು ಅಮೆರಿಕ ಮಧ್ಯಸ್ಥಿಕೆಯ ಮಾತುಕತೆಯ ಫಲಿತಾಂಶ ಎಂದು ಟ್ರಂಪ್ ಹೇಳಿಕೊಂಡಿದ್ದರು.
ಮತ್ತಷ್ಟು ಓದಿ: ಇರಾನ್ ಮೇಲೆ ಅತಿ ದೊಡ್ಡ ದಾಳಿ ನಡೆಯುತ್ತಾ? ಜನರಿಗೆ ಟೆಹ್ರಾನ್ ತೊರೆಯುವಂತೆ ಟ್ರಂಪ್ ಹೇಳಿದ್ದೇಕೆ?
ಪಹಲ್ಗಾಮ್ ದಾಳಿ
ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ನಾಯಕರ ನಡುವಿನ ಮೊದಲ ಸಂಭಾಷಣೆ ಇದಾಗಿದ್ದು, ಡೊನಾಲ್ಡ್ ಟ್ರಂಪ್ ಸಂತಾಪ ಸೂಚಿಸಿದರು.ಆಪರೇಷನ್ ಸಿಂಧೂರ್ ಬಗ್ಗೆ ಪ್ರಧಾನಿ ಮೋದಿ ಡೊನಾಲ್ಡ್ ಟ್ರಂಪ್ ಅವರಿಗೆ ವಿವರಿಸಿದರು ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಹೇಳಿದ್ದಾರೆ.
ಮಿಲಿಟರಿ ಕ್ರಮವನ್ನು ನಿಲ್ಲಿಸುವ ಕುರಿತು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ, ಎರಡೂ ಸೇನೆಗಳ ಅಸ್ತಿತ್ವದಲ್ಲಿರುವ ಮಾರ್ಗಗಳ ಮೂಲಕ ಮತ್ತು ಪಾಕಿಸ್ತಾನದ ಕೋರಿಕೆಯ ಮೇರೆಗೆ ಮಾತುಕತೆ ನಡೆಸಲಾಗಿದೆ ಎಂದು ಪ್ರಧಾನಿ ಹೇಳಿದರು.
ಭಯೋತ್ಪಾದನಾ ಕೃತ್ಯ
ಭಾರತವು ಈಗ ಭಯೋತ್ಪಾದನಾ ಕೃತ್ಯಗಳನ್ನು ಪ್ರಾಕ್ಸಿ ಕ್ರಮಗಳಾಗಿ ಪರಿಗಣಿಸದೆ ಯುದ್ಧಕ್ಕೆ ಪ್ರಚೋದನೆ ನೀಡುವ ಕೃತ್ಯವಾಗಿ ಪರಿಗಣಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಮೇ 6 ಮತ್ತು 7 ರ ಮಧ್ಯರಾತ್ರಿ ಭಾರತ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಯೋತ್ಪಾದಕ ಅಡಗುತಾಣಗಳನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಮೇ 9 ರ ರಾತ್ರಿ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಪಾಕಿಸ್ತಾನ ಭಾರತದ ಮೇಲೆ ದೊಡ್ಡ ದಾಳಿ ನಡೆಸಬಹುದು ಎಂದು ಹೇಳಿದ್ದರು ಎಂದು ಮಿಶ್ರಿ ಹೇಳಿದರು. ಹಾಗೇನಾದರೂ ನಡೆದರೆ ಭಾರತ ಪಾಕಿಸ್ತಾನಕ್ಕೆ ಇನ್ನೂ ದೊಡ್ಡದಾಗಿಯೇ ಉತ್ತರ ಕೊಡುತ್ತದೆ ಎಂದು ಎಂದು ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದರು.
ಪ್ರಧಾನಿ ಮೋದಿ ಕ್ವಾಡ್ ಶೃಂಗಸಭೆಗೆ ಟ್ರಂಪ್ ಅವರನ್ನು ಭಾರತಕ್ಕೆ ಆಹ್ವಾನಿಸಿದರು. ಅಮೆರಿಕ ಅಧ್ಯಕ್ಷರು ಆಹ್ವಾನವನ್ನು ಸ್ವೀಕರಿಸಿದ್ದಾರೆ. ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆಯೂ ಉಭಯ ನಾಯಕರು ಚರ್ಚಿಸಿದರು. ರಷ್ಯಾ ಮತ್ತು ಉಕ್ರೇನ್ ಯುದ್ಧದ ಬಗ್ಗೆಯೂ ಇಬ್ಬರ ನಡುವೆ ಚರ್ಚೆ ನಡೆಯಿತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:56 am, Wed, 18 June 25