ಮದ್ಯ ಹಗರಣ: ಆಂಧ್ರದ ವೈಎಸ್ಆರ್ಪಿ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಬೆಂಗಳೂರಿನಲ್ಲಿ ಬಂಧನ
ವೈಎಸ್‌ಆರ್‌ಸಿಪಿ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರನ್ನು ಮಂಗಳವಾರ (ಜೂನ್ 17) ಮಧ್ಯರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ಆಂಧ್ರ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ನಂತರ ಎಸ್‌ಐಟಿ ಅವರನ್ನು ಬಂಧಿಸಿದೆ. ಮದ್ಯ ಹಗರಣದಲ್ಲಿ ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಆರೋಪಿಯಾಗಿದ್ದಾರೆ. ಲುಕ್ಔಟ್ ನೋಟಿಸ್ ಇದ್ದರೂ ಅವರು ಶ್ರೀಲಂಕಾಕ್ಕೆ ಪರಾರಿಯಾಗಲು ಯತ್ನಿಸಿದ್ದರು.

ಬೆಂಗಳೂರು, ಜೂನ್ 18: ಮದ್ಯ ಹಗರಣ (Liquor scam) ಸಂಬಂಧ ಆಂಧ್ರ ಪ್ರದೇಶದ ವೈಎಸ್ಆರ್ಪಿ ಮಾಜಿ ಶಾಸಕ ಚೆವಿರೆಡ್ಡಿ ಭಾಸ್ಕರ್ ರೆಡ್ಡಿಯನ್ನು (Chevireddy Bhaskar Reddy) ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಂಗಳವಾರ ತಡರಾತ್ರಿ ಬಂಧಿಸಲಾಗಿದೆ. ಜಗನ್ ರೆಡ್ಡಿ ಆಂಧ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದಿದ್ದ ಹಗರಣದಲ್ಲಿ ಚವಿರೆಡ್ಡಿ ಕೂಡ ಆರೋಪಿಯಾಗಿದ್ದಾರೆ. ಇವರ ವಿರುದ್ಧ ಲುಕ್ಔಟ್ ನೋಟಿಸ್ ಸಹ ಜಾರಿಯಾಗಿದೆ. ಆದಾಗ್ಯೂ, ಚವಿರೆಡ್ಡಿ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಅಕ್ರಮವಾಗಿ ವಿದೇಶಕ್ಕೆ ತೆರಳಲು ಮುಂದಾಗಿದ್ದರು.
ವಿದೇಶಕ್ಕೆ ಅಕ್ರಮವಾಗಿ ತೆರಳಲು ಯತ್ನಿಸುತ್ತಿದ್ದ ವೇಳೆ ಅವರನ್ನು ಬಂಧಿಸಿರುವ ಬೆಂಗಳೂರು ಪೊಲೀಸರು, ಮಧ್ಯರಾತ್ರಿಯೇ ಆಂಧ್ರದ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಆಂಧ್ರದ ಎಎಸ್ಪಿ ಮಹೇಶ್ ವಶಕ್ಕೆ ಚವಿರೆಡ್ಡಿಯನ್ನು ಒಪ್ಪಿಸಲಾಗಿದೆ. ನಂತರ ಚವಿರೆಡ್ಡಿಯನ್ನು ಆಂಧ್ರ ಪೊಲೀಸರು ಕರೆದೊಯ್ದಿದ್ದಾರೆ.
ಬೆಂಗಳೂರಿನಿಂದ ಶ್ರೀಲಂಕಾದ ಕೊಲಂಬೊಗೆ ತೆರಳಲು ಮುಂದಾಗಿದ್ದ ಭಾಸ್ಕರ್ ರೆಡ್ಡಿ ಅವರನ್ನು ಮೊದಲಿಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ತಡೆದರು. ನಂತರ, ಅವರನ್ನು ಬಂಧಿಸಿ ವಿಮಾನ ನಿಲ್ದಾಣ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಆಂಧ್ರ ಪ್ರದೇಶದಲ್ಲಿ ನಡೆದ ಮದ್ಯ ಹಗರಣ ಪ್ರಕರಣದ ತನಿಖೆಯ ಭಾಗವಾಗಿ ಎಸ್‌ಐಟಿ ಇದುವರೆಗೆ 200 ಕ್ಕೂ ಹೆಚ್ಚು ಜನರನ್ನು ವಿಚಾರಣೆಗೆ ಒಳಪಡಿಸಿತ್ತು.
ಮದ್ಯ ಹಗರಣ ಪ್ರಕರಣದಲ್ಲಿ, ಭಾಸ್ಕರ್ ರೆಡ್ಡಿಯನ್ನು ಎಸ್‌ಐಟಿ ಅಧಿಕಾರಿಗಳು ಎ-38 ಎಂದು ಗುರುತಿಸಿದ್ದಾರೆ. ಚೆವಿರೆಡ್ಡಿ ಭಾಸ್ಕರ್ ರೆಡ್ಡಿ ಅವರ ಬಾಲ್ಯದ ಸ್ನೇಹಿತ ಮತ್ತು ಆಪ್ತ ಸಹಚರ ವೆಂಕಟೇಶ್ ನಾಯ್ಡು ಅವರನ್ನು ಸಹ ಎಸ್‌ಐಟಿ ಬಂಧಿಸಿದೆ. ಈ ಪ್ರಕರಣದಲ್ಲಿ ವೆಂಟೇಶ್ ನಾಯ್ಡು ಅವರನ್ನು ಎ-34 ಎಂದು ಎಸ್‌ಐಟಿ ಸೇರಿಸಿದೆ. ಚೆವಿರೆಡ್ಡಿ ಮತ್ತು ವೆಂಕಟೇಶ್ ನಾಯ್ಡು ವಿರುದ್ಧ ಲುಕೌಟ್ ನೋಟಿಸ್ ಇದ್ದ ಕಾರಣ, ಬೆಂಗಳೂರು ವಿಮಾನ ನಿಲ್ದಾಣದ ಸಿಬ್ಬಂದಿ ಇಬ್ಬರನ್ನೂ ವಶಕ್ಕೆ ಪಡೆದು ಎಸ್‌ಐಟಿ ಅಧಿಕಾರಿಗಳಿಗೆ ಈ ಮಾಹಿತಿಯನ್ನು ತಿಳಿಸಿದ್ದಾರೆ. ಎಸ್‌ಐಟಿ ತಂಡಗಳು ಬೆಂಗಳೂರಿಗೆ ಹೋಗಿ ಬುಧವಾರ ಮುಂಜಾನೆ ಇಬ್ಬರನ್ನೂ ಬಂಧಿಸಿವೆ.
ಇದನ್ನೂ ಓದಿ: ಸಾಲು ಸಾಲು ಏರ್ ಇಂಡಿಯಾ ವಿಮಾನಗಳ ಸೇವೆ ರದ್ದು, ಮುಖ್ಯ ಇಂಜಿನೀಯರ್ಗೆ ಡಿಜಿಸಿಎ ಸಮನ್ಸ್
ಚೆವಿರೆಡ್ಡಿ ಮತ್ತು ವೆಂಕಟೇಶ್ ನಾಯ್ಡು ಬಂಧನದೊಂದಿಗೆ, ಮದ್ಯ ಹಗರಣದಲ್ಲಿ ಬಂಧಿಸಲ್ಪಟ್ಟ ಜನರ ಸಂಖ್ಯೆ 9ಕ್ಕೆ ತಲುಪಿದೆ. ಬುಧವಾರ ಬೆಳಗ್ಗೆ, ಚೆವಿರೆಡ್ಡಿ ಮತ್ತು ವೆಂಕಟೇಶ್ ನಾಯ್ಡು ಅವರನ್ನು ವಿಜಯವಾಡ ಎಸ್‌ಐಟಿ ಕಚೇರಿಗೆ ಕರೆದೊಯ್ಯಲಾಗಿದೆ. ನಂತರ ಎಸ್‌ಐಟಿ ಅಧಿಕಾರಿಗಳು ಆರೋಪಿಗಳನ್ನು ಎಸಿಬಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








