ಇರಾನ್ ಮೇಲೆ ಅತಿ ದೊಡ್ಡ ದಾಳಿ ನಡೆಯುತ್ತಾ? ಜನರಿಗೆ ಟೆಹ್ರಾನ್ ತೊರೆಯುವಂತೆ ಟ್ರಂಪ್ ಹೇಳಿದ್ದೇಕೆ?
ಇಸ್ರೇಲ್ ಮತ್ತು ಇರಾನ್ ಪರಸ್ಪರ ಐದನೇ ದಿನವೂ ದಾಳಿ ನಡೆಸಿವೆ.ಇರಾನ್‌ನ ರಾಜಧಾನಿ ಟೆಹ್ರಾನ್ ತೊರೆಯುವಂತೆ ಅಲ್ಲಿನ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಇರಾನ್ ಜನ ತಮ್ಮ ಮೇಲೆ ದೊಡ್ಡ ದಾಳಿ ನಡೆಯುವ ಸಾಧ್ಯತೆ ಇರಬಹುದು ಎಂದು ಆತಂಕಗೊಂಡಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ ತಕ್ಷಣ ಟೆಹ್ರಾನ್ ತೊರೆಯಬೇಕೆಂದು ಪೋಸ್ಟ್ ಮಾಡಿದ್ದಾರೆ.

ವಾಷಿಂಗ್ಟನ್, ಜೂನ್ 17: ಇರಾನ್‌ನ ರಾಜಧಾನಿ ಟೆಹ್ರಾನ್(Tehran) ತೊರೆಯುವಂತೆ ಅಲ್ಲಿನ ಜನರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಎಚ್ಚರಿಕೆ ನೀಡಿದ್ದಾರೆ. ಈ ಹೇಳಿಕೆಯಿಂದಾಗಿ ಇರಾನ್ ಜನ ತಮ್ಮ ಮೇಲೆ ದೊಡ್ಡ ದಾಳಿ ನಡೆಯುವ ಸಾಧ್ಯತೆ ಇರಬಹುದು ಎಂದು ಆತಂಕಗೊಂಡಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ ತಕ್ಷಣ ಟೆಹ್ರಾನ್ ತೊರೆಯಬೇಕೆಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಮೂಲಕ ಅಮೆರಿಕ ಅಧ್ಯಕ್ಷ ಇರಾನ್‌ಗೆ ಬೆದರಿಕೆ ಹಾಕಿದ್ದಾರೆ ಮತ್ತು ಇರಾನ್ ತಾನು ಹೇಳಿದ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾನು ಸಹಿ ಹಾಕಲು ಹೇಳಿದ ಒಪ್ಪಂದಕ್ಕೆ ಇರಾನ್ ಸಹಿ ಹಾಕಬೇಕಿತ್ತು. ಇರಾನ್ ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಸಾಧ್ಯವಿಲ್ಲ, ಎಲ್ಲರೂ ತಕ್ಷಣ ಟೆಹ್ರಾನ್‌ನಿಂದ ಸ್ಥಳಾಂತರಗೊಳ್ಳಬೇಕು ಎಂದು ಹೇಳಿದ್ದಾರೆ. ಡೊನಾಲ್ಡ್ ಟ್ರಂಪ್ ಕೆನಡಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಭಾಗವಹಿಸುತ್ತಿರುವ ಹೊತ್ತಲ್ಲಿ ಈ ಪೋಸ್ಟ್ ಮಾಡಿದ್ದಾರೆ.
ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿ ಸುಮಾರು 9.5 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಸೋಮವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗೆ ಮೊದಲು, ಇಸ್ರೇಲ್ ಮಿಲಿಟರಿ ಕೂಡ ಮಧ್ಯ ಟೆಹ್ರಾನ್‌ನ ಒಂದು ಭಾಗವನ್ನು ಸ್ಥಳಾಂತರಿಸುವಂತೆ ಎಚ್ಚರಿಕೆ ನೀಡಿತ್ತು. ಇದು 330,000 ಜನರ ಮೇಲೆ ಪರಿಣಾಮ ಬೀರುತ್ತದೆ.
ಮತ್ತಷ್ಟು ಓದಿ: ಕರ್ನಾಟಕಕ್ಕೂ ತಟ್ಟಲಿದೆಯಾ ಇರಾನ್, ಇಸ್ರೇಲ್ ಸಂಘರ್ಷದ ಪರಿಣಾಮ? ಆತಂಕಕ್ಕೆ ಕಾರಣ ಇಲ್ಲಿದೆ
ಇಸ್ರೇಲ್ ಸ್ಥಳಾಂತರಿಸುವಂತೆ ಎಚ್ಚರಿಕೆ ನೀಡಿರುವ ಟೆಹ್ರಾನ್‌ನ ಭಾಗದಲ್ಲಿ ಇರಾನ್‌ನ ಸರ್ಕಾರಿ ಟಿವಿ ಮತ್ತು ಪೊಲೀಸ್ ಪ್ರಧಾನ ಕಚೇರಿ ಹಾಗೂ ಮೂರು ದೊಡ್ಡ ಆಸ್ಪತ್ರೆಗಳು ಸೇರಿವೆ. ಇರಾನ್ ಸರ್ಕಾರವು ತುಂಬಾ ದುರ್ಬಲವಾಗಿದೆ ಎಂದು ಅವರು ಹೇಳಿದ್ದಾರೆ ಅಷ್ಟೇ ಅಲ್ಲದೆ ತಾವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇಸ್ರೇಲ್ ಈಗಾಗಲೇ ಟೆಹ್ರಾನ್‌ನಲ್ಲಿ ಹಲವಾರು ಪ್ರಮುಖ ದಾಳಿಗಳನ್ನು ನಡೆಸಿದೆ, ಇದರಲ್ಲಿ ಮಿಲಿಟರಿ ನೆಲೆಗಳು ಮತ್ತು ನಾಗರಿಕ ಕಟ್ಟಡಗಳನ್ನು ಗುರಿಯಾಗಿರಿಸಿಕೊಂಡಿದೆ. ಇಸ್ರೇಲಿ ದಾಳಿಗಳು ನಡೆಯುತ್ತಿರುವುದರಿಂದ, ಜನರು ಟೆಹ್ರಾನ್ ತೊರೆದು ಇತರ ನಗರಗಳಿಗೆ ತೆರಳುತ್ತಿದ್ದಾರೆ, ಇದರಿಂದಾಗಿ ಭಾನುವಾರ ರಸ್ತೆಗಳಲ್ಲಿ ಸಂಚಾರ ದಟ್ಟಣೆಯಂತಹ ಪರಿಸ್ಥಿತಿ ಉಂಟಾಗಿತ್ತು. ಟ್ರಂಪ್ ಹೇಳಿಕೆಯ ನಂತರ ಈ ವಲಸೆ ಮತ್ತಷ್ಟು ಹೆಚ್ಚಾಗಿದೆ.
ಇರಾನ್ ಮೇಲಿನ ಇಸ್ರೇಲ್ ದಾಳಿಯಲ್ಲಿ ತಾವು ಭಾಗಿಯಾಗಿಲ್ಲ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಷ್ಟ್ರೀಯ ಭದ್ರತಾ ಮಂಡಳಿಗೆ ಸಭೆ ಕರೆಯುವಂತೆ ಸೂಚನೆ ನೀಡಿದ್ದರೂ, ವಾಷಿಂಗ್ಟನ್ ದಾಳಿಯಲ್ಲಿ ಭಾಗಿಯಾಗುತ್ತದೆ ಎಂದು ಅರ್ಥವಲ್ಲ.
ಜೂನ್ 13, ಶುಕ್ರವಾರ ಇಸ್ರೇಲ್ ಇರಾನ್‌ನ ಪರಮಾಣು ತಾಣ ಮತ್ತು ಸೇನಾ ನೆಲೆಗಳ ಮೇಲೆ ದಾಳಿ ಮಾಡಿದಾಗಿನಿಂದ ಎರಡೂ ದೇಶಗಳು ಪರಸ್ಪರ ದಾಳಿ ಮಾಡುತ್ತಿವೆ. ಐದನೇ ದಿನಕ್ಕೆ ಕಾಲಿಟ್ಟಿರುವ ಈ ಯುದ್ಧದಲ್ಲಿ, ಸುಮಾರು 30 ಇರಾನಿನ ಮಿಲಿಟರಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸೇರಿದಂತೆ ಸುಮಾರು 230 ಜನರು ಸಾವನ್ನಪ್ಪಿದ್ದಾರೆ ಮತ್ತು 1200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇಸ್ರೇಲ್‌ನಲ್ಲಿ, 24 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 250 ಜನರು ಗಾಯಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




