
ದೆಹಲಿ ಜುಲೈ 29: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಶನಿವಾರ) ದೆಹಲಿಯ ಪ್ರಗತಿ ಮೈದಾನದ ಭಾರತ ಮಂಟಪದಲ್ಲಿ ಅಖಿಲ ಭಾರತೀಯ ಶಿಕ್ಷಾ ಸಮಾಗಮ್ (Akhil Bharatiya Shiksha Samagam) ಉದ್ಘಾಟಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿಯ (National Education Policy) ಮೂರನೇ ವಾರ್ಷಿಕೋತ್ಸವದ ಆಚರಣೆಯ ಸಲುವಾಗಿ ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಮೋದಿ, 12 ಭಾಷೆಗಳಲ್ಲಿ 100 ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ, ‘ದೇಶದ ಭವಿಷ್ಯವನ್ನು ಬದಲಾಯಿಸುವ ಶಕ್ತಿ ಶಿಕ್ಷಣಕ್ಕೆ ಇದೆ. ದೇಶವು ಯಾವ ಗುರಿಯೊಂದಿಗೆ ಮುನ್ನಡೆಯುತ್ತಿದೆಯೋ ಅದನ್ನು ಸಾಧಿಸುವಲ್ಲಿ ಶಿಕ್ಷಣವು ಪ್ರಮುಖ ಪಾತ್ರವನ್ನು ಹೊಂದಿದೆ. ನೀವು ಇದರ ಪ್ರತಿನಿಧಿಗಳು. ಅಖಿಲ ಭಾರತೀಯ ಶಿಕ್ಷಾ ಸಮಾಗಮ್ನ ಭಾಗವಾಗಲು ನನಗೂ ಇದು ಒಂದು ಅವಕಾಶ ಎಂದು ಹೇಳಿದ್ದಾರೆ.
ಭಾರತವನ್ನು ಸಂಶೋಧನೆ ಮತ್ತು ಆವಿಷ್ಕಾರದ ಕೇಂದ್ರವನ್ನಾಗಿ ಮಾಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ. NCERT ಎಲ್ಲಾ 22 ಭಾರತೀಯ ಭಾಷೆಗಳೊಂದಿಗೆ ಸುಮಾರು 130 ವಿಷಯಗಳಲ್ಲಿ ಶಿಕ್ಷಣಕ್ಕಾಗಿ ಹೊಸ ಪುಸ್ತಕಗಳನ್ನು ಸಿದ್ಧಪಡಿಸುತ್ತಿದೆ. ಸಮಾಜ ವಿಜ್ಞಾನದಿಂದ ಇಂಜಿನಿಯರಿಂಗ್ ವರೆಗೆ ಶಿಕ್ಷಣ ಈಗ ಭಾರತೀಯ ಭಾಷೆಗಳಲ್ಲಿ ಇರಲಿದೆ. ಇದು ಎನ್ಇಪಿಯಿಂದ ಸಾಧ್ಯವಾಗಿದ್ದು, ಎಲ್ಲಾ ಭಾಷೆಗಳಿಗೆ ಯೋಗ್ಯ ಗೌರವ ಸಿಗುತ್ತದೆ. ಅದೇ ವೇಳೆ ಪ್ರತಿಭೆಗಿಂತ ಮಾತೃಭಾಷೆಯ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ನಿರ್ಣಯಿಸುವುದು ಅವರಿಗೆ ಮಾಡುವ ಘೋರ ಅನ್ಯಾಯ ಎಂದು ಮೋದಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಮೋದಿಯವರು ಪ್ರಧಾನ ಮಂತ್ರಿ ಶ್ರೀ ಯೋಜನೆಯಡಿ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದರು. ಅಖಿಲ ಭಾರತೀಯ ಶಿಕ್ಷಾ ಸಮಾಗಮ್ 2023, ಜುಲೈ 29 ಮತ್ತು 30 ವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹದಿನಾರು ಗೋಷ್ಠಿಗಳು ಇರಲಿದೆ.
ಇದರಲ್ಲಿ ಗುಣಮಟ್ಟದ ಶಿಕ್ಷಣ ಮತ್ತು ಆಡಳಿತದ ಪ್ರವೇಶ, ಸಮಾನ ಮತ್ತು ಅಂತರ್ಗತ ಶಿಕ್ಷಣ, ಭಾರತೀಯ ಜ್ಞಾನ ವ್ಯವಸ್ಥೆ, ಶಿಕ್ಷಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವುದು, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ ಗುಂಪಿನ ಸಮಸ್ಯೆಗಳು, ರಾಷ್ಟ್ರೀಯ ಸಂಸ್ಥೆಗಳ ಶ್ರೇಯಾಂಕ ಚೌಕಟ್ಟು ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚೆಗಳು ನಡೆಯಲಿವೆ.
ಇದನ್ನೂ ಓದಿ: Maharashtra Bus Accident: ಮಹಾರಾಷ್ಟ್ರದ ಬುಲ್ದಾನಾದಲ್ಲಿ ಬಸ್ ಅಪಘಾತ; 6 ಮಂದಿ ಸಾವು
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:46 pm, Sat, 29 July 23