Mann Ki Baat: ಮನ್​ ಕಿ ಬಾತ್​ ಮಾತಿಗೆ ಸಲಹೆ ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 08, 2022 | 9:45 AM

ಏಪ್ರಿಲ್ 24ರಂದು ಪ್ರಸಾರವಾಗಲಿರುವ ಮನ್​ ಕಿ ಬಾತ್​ನಲ್ಲಿ ಮಾತನಾಡಬಹುದಾದ ವಿಷಯಗಳ ಬಗ್ಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ

Mann Ki Baat: ಮನ್​ ಕಿ ಬಾತ್​ ಮಾತಿಗೆ ಸಲಹೆ ಆಹ್ವಾನಿಸಿದ ಪ್ರಧಾನಿ ನರೇಂದ್ರ ಮೋದಿ
ನರೇಂದ್ರ ಮೋದಿ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ತಮ್ಮ ಜನಪ್ರಿಯ ರೇಡಿಯೊ ಕಾರ್ಯಕ್ರಮ ಮನ್​ ಕಿ ಬಾತ್​ಗಾಗಿ (Mann Ki Baat) ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಿದ್ದಾರೆ. ಏಪ್ರಿಲ್ 24ರಂದು ಪ್ರಸಾರವಾಗಲಿರುವ ಮನ್​ ಕಿ ಬಾತ್​ನಲ್ಲಿ ಮಾತನಾಡಬಹುದಾದ ವಿಷಯಗಳ ಬಗ್ಗೆ ಜನರು ಸಲಹೆಗಳನ್ನು ನೀಡಬಹುದಾಗಿದೆ. ತಿಂಗಳಿಗೆ ಒಮ್ಮೆ ಪ್ರಸಾರವಾಗುವ ಮನ್ ಕಿ ಬಾತ್ ಕಾರ್ಯಕ್ರಮದ 88ನೇ ಸಂಚಿಕೆ ಏಪ್ರಿಲ್ 24ರಂದು ಮೂಡಿಬರಲಿದೆ. ಈ ಬಾರಿಯ ಕಾರ್ಯಕ್ರಮಕ್ಕೆ ವಿಶೇಷ ವಿಷಯವೊಂದನ್ನು ಮೋದಿ ಆರಿಸಿಕೊಂಡಿದ್ದಾರೆ. ತಳಮಟ್ಟದಲ್ಲಿ ಬದಲಾವಣೆಗೆ ದುಡಿಯುತ್ತಿರುವವರು ಹಾಗೂ ಅವಿಶ್ರಾಂತ ಶ್ರಮಿಸುತ್ತಿರುವವರ ಬಗ್ಗೆ ಮೋದಿ ಮಾತನಾಡಿದ್ದಾರೆ.

‘ನಿಮಗೂ ಅಂಥ ಸ್ಫೂರ್ತಿದಾಯಕ ಚೇತನಗಳ ವಿವರ ತಿಳಿದಿದ್ದರೆ ನನ್ನ ಗಮನಕ್ಕೆ ತನ್ನಿ’ ಎಂದು ಮೋದಿ ಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್​ಗಾಗಿ ಮಾಹಿತಿ ನೀಡಲು ಇಚ್ಛಿಸುವವರು ನಮೋ ಆ್ಯಪ್ ಅಥವಾ MyGov ಆ್ಯಪ್​ಗಲ (ವೆಬ್​ಸೈಟ್) ಮೂಲಕ ತಮ್ಮ ಅನಿಸಿಕೆ ಹಂಚಿಕೊಳ್ಳಬಹುದು. 1800-11-7800 ಟೋಲ್​ಫ್ರೀ ಸಂಖ್ಯೆಗೆ ಕರೆ ಮಾಡಿ ಮೆಸೇಜ್ ರೆಕಾರ್ಡ್ ಮಾಡಬಹುದು.


ವೈವಿಧ್ಯತೆ ನಮ್ಮನ್ನು ಒಂದುಗೂಡಿಸುತ್ತದೆ: ನರೇಂದ್ರ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕಿ ಬಾತ್​ ಮಾಸಿಕ ಕಾರ್ಯಕ್ರಮದ 87ನೇ ಸಂಚಿಕೆಯು ಮಾರ್ಚ್ 27ರ ಭಾನುವಾರ ಪ್ರಸಾರವಾಗಿತ್ತು. ಭಾರತದ ರಫ್ತು, ‘ಮೇಕ್ ಇನ್ ಇಂಡಿಯಾ’ ಮೊದಲಾದವುಗಳ ಬಗ್ಗೆ ಪ್ರಧಾನಿ ಮಾತನಾಡಿದ್ದರು. ಭಾರತವು 400 ಬಿಲಿಯನ್ ಡಾಲರ್ ರಫ್ತು ಗುರಿಯನ್ನು ಸಾಧಿಸಿದೆ ಎಂದಿರುವ ಮೋದಿ, ಇದು ಭಾರತದ ಸಾಮರ್ಥ್ಯ ಸೂಚಿಸುತ್ತದೆ. ವಿಶ್ವದಲ್ಲಿ ಭಾರತೀಯ ವಸ್ತುಗಳಿಗೆ ಬೇಡಿಕೆ ಹೆಚ್ಚುತ್ತಿದೆ ಎನ್ನುವುದು ಇದರ ಅರ್ಥವಾಗಿದೆ ಎಂದು ವ್ಯಾಖ್ಯಾನಿಸಿದ್ದಾರೆ. ಗವರ್ನಮೆಂಟ್ ಇ-ಮಾರ್ಕೆಟ್​ಪ್ಲೇಸ್​ನ ಪ್ರಯೋಜನ ಉಲ್ಲೇಖಿಸಿದ ಪ್ರಧಾನಿ, ‘ಈ ಹಿಂದೆ, ದೊಡ್ಡ ಉದ್ದಿಮೆದಾರರು ಮಾತ್ರ ಸರ್ಕಾರಕ್ಕೆ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂದು ನಂಬಲಾಗಿತ್ತು. ಆದರೆ ಗವರ್ನ್​ಮೆಂಟ್ ಇ-ಮಾರ್ಕೆಟ್‌ಪ್ಲೇಸ್ ಪೋರ್ಟಲ್ ಇದನ್ನು ಬದಲಾಯಿಸಿದೆ. ಇದು ನವ ಭಾರತದ ಆತ್ಮವನ್ನು ತೋರಿಸುತ್ತದೆ’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಭಾರತ ಆರ್ಥಿಕ ಪ್ರಗತಿಯತ್ತ ದೃಢವಾದ ಹೆಜ್ಜೆ ಇಡುತ್ತಿದ್ದು, ಅದನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ನುಡಿದಿದ್ದಾರೆ. ಇದೇ ವೇಳೆ ಅವರು ಆಯುಷ್​ ವಲಯದಲ್ಲಿ ಸ್ಟಾರ್ಟ್​​ಅಪ್​ಗಳ ಬೆಳವಣಿಗೆಯನ್ನು ಶ್ಲಾಘಿಸಿದ್ದಾರೆ. ಹಾಗೆಯೇ ಭಾರತವು ಅನೇಕ ಸಂಸ್ಕೃತಿಗಳು, ಭಾಷೆಗಳು ಮತ್ತು ಆಹಾರಗಳಿಂದ ಪುನೀತವಾಗಿದೆ. ನಮ್ಮ ಹಬ್ಬಗಳನ್ನು ಒಟ್ಟಾಗಿ ಆಚರಿಸೋಣ. ವೈವಿಧ್ಯತೆಯು ನಮ್ಮನ್ನು ಒಂದುಗೂಡಿಸುವ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದ್ದರು.

ಇದನ್ನೂ ಓದಿ: ಮೈಸೂರಿನ ಶಿಲ್ಪಿ ಅರುಣ್ ಕೆತ್ತನೆಯ ನೇತಾಜಿ ಪ್ರತಿಮೆ ಕಂಡು ಅತೀವ ಸಂತಸವಾಯ್ತು -ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

ಇದನ್ನೂ ಓದಿ: World Health Day 2022: ನಿಮ್ಮಿಂದಾಗಿ ನಾವೆಲ್ಲ ಸುರಕ್ಷಿತ; ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಶುಭಾಶಯ ತಿಳಿಸಿದ ಪ್ರಧಾನಿ ಮೋದಿ