ಕೈಗೆಟುಕುವ ಗೃಹಸಾಲ: ಆರ್ಬಿಐನಿಂದ ಸಾಲಕ್ಕೆ ತಕ್ಕ ಆಸ್ತಿಮೌಲ್ಯ ನಿಯಮಗಳ ರಿಯಾಯ್ತಿ ವಿಸ್ತರಣೆ
ಆಸ್ತಿ ಮೌಲ್ಯ ಮತ್ತು ಸಾಲದ (Loan To Value - LTV) ಅನುಪಾತದ ನಡುವೆ ಇದ್ದ ರಿಯಾಯ್ತಿಯನ್ನು ಮಾರ್ಚ್ 31, 2023ರವರೆಗೆ ಮುಂದುವರಿಸುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು.
ಮುಂಬೈ: ಗೃಹಸಾಲಗಳ ಸಮಾನ ಮಾಸಿಕ ಕಂತು (Equated Monthly Installment – EMI) ಗ್ರಾಹಕರಿಗೆ ಹೊರೆಯಾಗಬಾರದು ಎನ್ನುವ ಕಾಳಜಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India – RBI) ಮುಂದುವರಿಸಿದೆ. ಆಸ್ತಿ ಮೌಲ್ಯ ಮತ್ತು ಸಾಲದ (Loan To Value – LTV) ಅನುಪಾತದ ನಡುವೆ ಇದ್ದ ರಿಯಾಯ್ತಿಯನ್ನು ಮಾರ್ಚ್ 31, 2023ರವರೆಗೆ ಮುಂದುವರಿಸುವುದಾಗಿ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು. ಸಾಲ ನೀಡುವಾಗ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗಳು ಪರಿಗಣಿಸುವ ಅಪಾಯಗಳ (ರಿಸ್ಕ್) ಬಗ್ಗೆ ಏಕರೂಪ ನಿಯಮಗಳನ್ನು ರೂಪಿಸಲಾಗುವುದು ಎಂದು ಅವರು ತಿಳಿಸಿದರು.
ದೇಶದ ಆರ್ಥಿಕತೆಯ ಚೇತರಿಕೆಯಲ್ಲಿ ರಿಯಲ್ ಎಸ್ಟೇಟ್ ವಲಯವು ಬಹುಮುಖ್ಯ ಪಾತ್ರ ನಿರ್ವಹಿಸಲಿದೆ. ಇತರ ಹಲವು ಕ್ಷೇತ್ರಗಳು ಸಹ ರಿಯಲ್ ಎಸ್ಟೇಟ್ನೊಂದಿಗೆ ಬೆಸೆದುಕೊಂಡಿವೆ. ಮತ್ತಷ್ಟು ಕುಸಿತ ತಡೆಗಟ್ಟಲು ಮತ್ತು ಆರ್ಥಿಕತೆಯ ಚೇತರಿಕೆ ಕಾರ್ಯಸಾಧುವಾಗಿಸಲು ಗೃಹಸಾಲಕ್ಕೆ ಸಿಗುತ್ತಿರುವ ರಿಯಾಯ್ತಿಗಳನ್ನು ಮುಂದುವರಿಸಲು ನಿರ್ಧರಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಹಲವು ಅನುಕೂಲಗಳು ಆಗುತ್ತವೆ ಎಂದು ಅವರು ಹೇಳಿದರು.
Monetary Policy statement by Shri Shaktikanta Das, Governor, Reserve Bank of India https://t.co/8w892tXAnX
— ReserveBankOfIndia (@RBI) April 8, 2022
ಭಾರತದ ಎಲ್ಲ ಎಟಿಎಂಗಳಲ್ಲಿ ಕಾರ್ಡ್ರಹಿತ ಹಣ ಹಿಂಪಡೆಯುವ ಸೌಲಭ್ಯ (Cardless Cash Withdrawal) ಸೌಲಭ್ಯ ಕಲ್ಪಿಸುವ ಸಾಧ್ಯತೆಯನ್ನು ಆರ್ಬಿಐ ಈ ಬಾರಿ ಎಂಪಿಸಿಯಲ್ಲಿ ಪ್ರಸ್ತಾಪಿಸಿದೆ. ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (Unified Payments Interface – UPI) ಮೂಲಕ ಈ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ದಾಸ್ ಅಭಿಪ್ರಾಯಪಟ್ಟರು. ‘ಪ್ರಸ್ತುತ ಕಾರ್ಡ್ರಹಿತ ಹಣ ಹಿಂಪಡೆಯುವ ಸೌಲಭ್ಯವು ಕೆಲವೇ ಬ್ಯಾಂಕ್ಗಳಿಗೆ ಸೀಮಿತವಾಗಿದೆ. ಇದನ್ನು ಎಲ್ಲ ಬ್ಯಾಂಕ್ಗಳು ಮತ್ತು ಎಟಿಎಂ ಜಾಲಗಳಿಗೆ ವಿಸ್ತರಿಸಲಾಗುವುದು’ ಎಂದು ದಾಸ್ ಹೇಳಿದರು. ಕಾರ್ಡ್ರಹಿತ ಪಾವತಿ ವಿಧಾನಗಳ ಅಳವಡಿಕೆಯಿಂದ ಸ್ಕಿಮಿಂಗ್ ಮತ್ತು ಕಾರ್ಡ್ ಕ್ಲೋನಿಂಗ್ನಂಥ ಅಕ್ರಮಗಳನ್ನೂ ತಡೆಗಟ್ಟಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಆರ್ಬಿಐ ನಿಯಂತ್ರಣದಲ್ಲಿರುವ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಒದಗಿಸುತ್ತಿರುವ ಸೇವೆಯ ಗುಣಮಟ್ಟದ ಬಗ್ಗೆ ಸಹ ನಾವು ನಿಗಾ ಇರಿಸುತ್ತೇವೆ. ಹೊಸಹೊಸ ಆವಿಷ್ಕಾರಗಳು, ಉತ್ಪನ್ನಗಳು ಮತ್ತು ಸೇವೆಗಳು ಬಳಕೆಗೆ ಬರುತ್ತಿವೆ. ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಬಳಕೆದಾರರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಗ್ರಾಹಕ ಸೇವೆಗಳ ಸ್ಥಿತಿಗತಿ ಪರಿಶೀಲನೆಗೆ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಅವರು ತಿಳಿಸಿದರು.
ಇದನ್ನೂ ಓದಿ: UPI For Feature Phones: ಫೀಚರ್ ಫೋನ್ ಯುಪಿಐಗೆ ಚಾಲನೆ ನೀಡಿದ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್
ಇದನ್ನೂ ಓದಿ: RBI Monetary Policy: ರೆಪೊ ದರ ಯಥಾಸ್ಥಿತಿ; ಎಲ್ಲ ಎಟಿಎಂಗಳಲ್ಲಿ ಕಾರ್ಡ್ಲೆಸ್ ಕ್ಯಾಶ್ ಸವಲತ್ತು
Published On - 11:22 am, Fri, 8 April 22